Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಡ್ಡದಾರಿಯಲ್ಲಿ ವಿಜ್ಞಾನ !

# ಸಿಡಿಲು          # ಶ್ರೀಕಾಂತ್ ಶೆಟ್ಟಿ

shrikanth shetty-2 copy

@ ಮುಂದಿನ ಪೀಳಿಗೆಯನ್ನು ನೆನೆದು ದಿಗ್ಬ್ರಾಂತಿಯಾಗುತ್ತಿದೆ. ಸ್ಪೋಟಕ್ಕೆ ಸಿದ್ದವಾದ ಪಟಾಕಿಯೊಂದರ ಬತ್ತಿ ಹೇಗೆ ಎಲ್ಲವನ್ನೂ ಆಪೋಷನ ತೆಗೆದುಕೊಳ್ಳುವ ಧಾವಂತದಲ್ಲಿ ಸುಡುತ್ತಾ ಸಾಗುತ್ತದೋ, ಅದೇ ರೀತಿ ನಮ್ಮ ಈ ದೈನಂದಿನ ಬದುಕು ಕೂಡ ಯಾವುದೋ ಗುರಿ ಇಲ್ಲದ ದಿಕ್ಕಿನತ್ತ ದೌಡಾಯಿಸುತ್ತಿದೆ. ಇದರ ಅಂತ್ಯ ಹೇಗೆ, ಎಲ್ಲಿ ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.

ಅಷ್ಟಕ್ಕೂ ವಿಜ್ಞಾನ ವಿನಾಶದತ್ತ ಮುನ್ನುಗ್ಗುತ್ತಿದೆಯೇ..? ಹೌದೆಂದು ಕಾಣುತ್ತದೆ ಮೇಲ್ನೋಟಕ್ಕೆ. ವಿಜ್ಞಾನದ ಇಷ್ಟೆಲ್ಲಾ ಸಾಧನೆಗಳು ನಿಂತಿರುವುದು ಕೇವಲ ಎರಡು ವಿಚಾರಗಳ ಮೇಲೆ. ಒಂದು ಕುತೂಹಲ, ಮತ್ತೊಂದು ಸೋಮಾರಿತನ. ಇದೆರಡು ಕೂಡ ಮಾನವನಿಗೆ ದೇವರು ವಿಶೇಷವಾಗಿ ದಯಪಾಲಿಸಿದ ಲಕ್ಷಣಗಳು. ಕುತೂಹಲ, ಹೊಸ ಹೊಸ ಪ್ರಯೋಗಗಳಿಗೆ ಪ್ರೇರೇಪಿಸುತ್ತದೆ. ಸೋಮಾರಿತನ ಅದರ ಫಲಿತಾಂಶದ ಲಾಭ ಪಡೆದುಕೊಳ್ಳುತ್ತದೆ.

ಬದುಕನ್ನು ಸರಳಗೊಳಿಸಿಕೊಳ್ಳುವ ಧಾವಂತದಲ್ಲಿ ವಿಜ್ಞಾನ ಕೆಲವೊಂದು ಕಡೆಗಳಲ್ಲಿ ಎಡವಿರುವುದು ಸ್ಪಷ್ಟವಾಗಿದೆ. ಮಾನವನಲ್ಲಿ ಒಂದು ಅಪರಿಮಿತವಾದ ಕುತೂಹಲವಿದೆ. ಇದು ಬೇರೆ ಯಾವ ಪ್ರಾಣಿಗಳಿಗೂ ಇಲ್ಲ. ತನ್ನ ಬಾಲವನ್ನು ತಾನೇ ಹಿಡಿಯಬೇಕು ಎಂದು ನಾಯಿಯೊಂದು ಬಾಲ್ಯದಲ್ಲಿ ಗಿರಕಿ ಹೊಡೆಯುತ್ತದೆ. ಮನೆಯ ಮೂಲೆಯಲ್ಲಿ ಬಿದ್ದುಕೊಂಡ ಪೊರಕೆಗೆ ಹೊಡೆದು ಬೆಕ್ಕಿನ ಮರಿಯೊಂದು ಓಡಿಬಂದು ದೂರ ನಿಂತುಕೊಳ್ಳುತ್ತದೆ. ಈ ಕುತೂಹಲ ಪ್ರಾಣಿಗಳಲ್ಲಿ ದಿನಕಳೆದಂತೆ ಕಡಿಮೆಯಾಗುತ್ತಾ ಸಾಗುತ್ತದೆ. ಆದರೆ ಮಾನವನಲ್ಲಿ ಈ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತದೆ.

dog

ಭೂಮಿಯಿಂದ ಅಂತರಿಕ್ಷಕ್ಕೆ ಜಿಗಿದು ಸಾಗರದ ತಳವನ್ನು ಸ್ಪರ್ಷಿಸಿ, ಪರಮಾಣುವನ್ನು ದಿಟ್ಟಿಸಿ, ಗಾಳಿಯಲ್ಲಿ ಮಾತು ರವಾನಿಸಿ, ಲಕ್ಷಗಾವುದ ದೂರವನ್ನು ಬೆಳಕಿನ ವೇಗದಲ್ಲಿ ಕ್ರಮಿಸಿ, ಕೊನೆಗೊಮ್ಮೆ ಭೂಮಿಯನ್ನೇ 20 ಬಾರಿ ಚಿಂದಿ ಚಿತ್ರಾನ್ನ ಮಾಡಬಲ್ಲ ಬ್ರಹ್ಮಾಸ್ತ್ರವನ್ನು ತನ್ನ ಬತ್ತಳಿಕೆಗೆ ಇಳಿಸಿಕೊಳ್ಳುವ ವರೆಗೆ ಮಾನವನ ಕುತೂಹಲ ಮುಂದುವರೆಯುತ್ತದೆ.

ಆದರೆ, ಅದರ ಆಸೆ ಇನ್ನೂ ಈಡೇರಿಲ್ಲ. ಸಾಗಿ ಬಂದ ದಾರಿ ತುಂಬಾ ಕಡಿಮೆ ಎಂಬ ಕೀಳರಿಮೆ ಅದಕ್ಕಿದ್ದರೆ, ಮತ್ತೊಂದು ಕಡೆ; ನಾನು ಪ್ರಕೃತಿಯನ್ನೇ ಗೆದ್ದುಕೊಂಡೆ ಎಂಬ ಹಮ್ಮೂ ಕೂಡ ಇಲ್ಲದಿಲ್ಲ. ಆದರೆ ಪ್ರಾಣಿ ಜಗತ್ತು ಹಾಗಲ್ಲ. ಅದಕ್ಕೆ ಪ್ರಕೃತಿ ಹಲವು ವರ್ಷಗಳಿಂದ ವಹಿಸಿದ ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಅಥವಾ ಬದಲಾವಣೆ ಮಾಡಿಲ್ಲ.

ಜೇಡರ ಹುಳವೊಂದು ಸಾವಿರ ವರ್ಷದಿಂದ ಹೇಗೆ ಬಲೆ ನೇಯುತ್ತಿತ್ತೋ, ಇಂದು ಕೂಡ ಅದೇ ರೀತಿ ನೇಯುತ್ತದೆ. ನಮ್ಮಂತೆ ಅದು ಯಾವುದೇ ಹೊಸ ಪ್ರಯೋಗಕ್ಕೆ ಕೈ ಹಾಕಲಿಲ್ಲ. ಆದರೆ ಇಂದು ಕೂಡ ಅದಕ್ಕೆ ಅದೇ ಬಲೆಯಿಂದ ಆಹಾರ ದಕ್ಕುತ್ತಿದೆ. ಸಾವಿರ ವರ್ಷದಿಂದ ಯಾವ ಕೀಟ ಜಾತಿಗಳು ಜೇಡರ ಬಲೆಗೆ ಆಹುತಿಯಾಗುತ್ತಾ ಬಂದಿದ್ದವೋ, ಅದೇ ಕೀಟ ಜಾತಿ ಇಂದಿಗೂ ಬಲೆಗೆ ಬೀಳುತ್ತಿವೆ. ಶತಮಾನಗಳೇ ಸಂದು ಹೋದರೂ ಜೇಡರ ಬಲೆಯ ಮರ್ಮ ಅವುಗಳಿಗೇ ತಿಳಿಯಲೇ ಇಲ್ಲ.

ಗೆದ್ದಲು ಹುಳಗಳು ತನ್ನ ಸಾವಿರ ತಲೆಮಾರು ಹಿಂದಿನ ಪೂರ್ವಜರು ಬಳಸುತ್ತಿದ್ದ ತಂತ್ರಗಾರಿಕೆಯನ್ನು ಬಳಸಿಯೇ ಇಂದು ಕೂಡ ಹುತ್ತ ಕಟ್ಟುತ್ತದೆ. ಆದೇ ಹುತ್ತದಲ್ಲಿ ಮುಂದೊಂದು ದಿನ ಘಟ ಸರ್ಪವೊಂದು ಬಂದು ಸೇರಿಕೊಳ್ಳಲಿದೆ. ನಮ್ಮ ಶ್ರಮವೆಲ್ಲಾ ವ್ಯರ್ಥವಾಗುತ್ತವೆ. ನಾವೆಲ್ಲಾ ಮತ್ತೊಂದು ಹುತ್ತ ಕಟ್ಟ ಬೇಕಾದೀತು ಎಂಬ ಸಣ್ಣ ಸುಳಿವು ಅವುಗಳಿಗಿರುವುದಿಲ್ಲ.

geddalu-huttha

ಸಾವಿರಾರು ವರ್ಷಗಳಿಂದ ಕಾಗೆಯ ಗೂಡಲ್ಲಿ ಕೋಗಿಲೆಯ ಮೋಸ ನಡೆಯುತ್ತಿದೆ. ಅವುಗಳು ಎಲ್ಲಿಯೂ ಕೂಡ ತಮ್ಮ ಚಿಂತನೆಯಲ್ಲಿ ಹೊಸತನವನ್ನು ತಂದುಕೊಂಡಿಲ್ಲ. ಈ ಮಾತು ಒಂದೆರಡು ಜೀವಿಗಳಿಗೆ ಮಾತ್ರವಲ್ಲ ಮಾನವನನ್ನು ಹೊರತುಪಡಿಸಿ ಇಡೀ ಜೀವಜಗತ್ತಿಗೆ ಅನ್ವಯಿಸುತ್ತದೆ. ಇದಕ್ಕೆ ಅಪವಾದವೆಂದರೆ, ಮಾನವನ ಸಂಪರ್ಕಕ್ಕೆ ಬಂದಿರುವ ಬೆರಳೆಣಿಕೆಯಷ್ಟು ಪ್ರಾಣಿಗಳು. ಉದಾಹರಣೆಗೆ ನಾಯಿ.., ಇರುವೆ.., ಬೆಕ್ಕು.., ಇಲಿ.. ಇತ್ಯಾದಿಗಳು. ಇವುಗಳು ಮಾನವ ಸಮಾಜದೊಂದಿಗೆ ಬಿಡಿಸಲಾಗದ ನಂಟು ಹೊಂದಿವೆ. ಹಾಗಾಗಿ ಇವುಗಳೂ ನಮ್ಮೊಂದಿಗೆ ಕೆಲವು ವಿಚಾರದಲ್ಲಿ ಬದಲಾಗಿವೆ.

ನಾಯಿಗಳು ರಸ್ತೆ ದಾಟಬೇಕಾದರೆ ಎಚ್ಚರಿಕೆಯಿಂದ ದಾಟುತ್ತವೆ. ನಾವು ತಿನ್ನುವ ಜಂಕ್ ಫೂಡ್ಗಳಿಗೆ ಅದು ಅಡ್ಜಸ್ಟ್ ಆಗುತ್ತೆ. ಹಿಂದೆ ಎಲ್ಲೆಂದರಲ್ಲಿ ಗಲೀಜು ಮಾಡುತ್ತಿದ್ದ ನಾಯಿಗಳು, ಈಗ ಶೌಚಾಲಯದಲ್ಲಿ ವಿಸರ್ಜನೆ ಮಾಡಿ ನೀರು ಹಾಕಿ ಬರುವಷ್ಟು ಮುಂದುವರಿದಿದ್ದಾವೆ. ಒಂದು ಕಾಲದಲ್ಲಿ ಎಳೆನೀರು ಕದಿಯುತ್ತಿದ್ದ ಮಂಗಗಳಿಗೆ ಈಗ ಕುರ್ಕುರೆ ಪ್ಯಾಕೇಟಿನ ರುಚಿ ಹಿಡಿದಿದೆ. ಹೀಗೆ ಬೆರಳೆಣಿಕೆಯಷ್ಟು ಅಪವಾದಗಳನ್ನು ಬಿಟ್ಟರೆ ಈ ಜೀವ ಜಗತ್ತು ಮಾನವನೊಂದಿಗೆ ಸಾಮೂಹಿಕವಾಗಿ ಹೆಜ್ಜೆ ಹಾಕುತ್ತಿರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಪ್ರಾಣಿಗಳಲ್ಲಿ ಇರುವ ಕುತೂಹಲ ಕೆಲವು ವಿಚಾರಗಳಿಗೆ ಮಾತ್ರ ಸೀಮಿತವಾಗಿ ಮಿತವಾಗಿರುತ್ತದೆ.

ಆದರೆ ಮಾನವ ಜೀವಿ ಮಾತ್ರ ತನ್ನ ಕಲ್ಪನೆಗಳನ್ನೆಲ್ಲಾ ಸಾಕಾರಗೊಳಿಸಲು ಹೊರಟು ನಿಲ್ಲುತ್ತಾನೆ. ಮೇಲಿಂದ ಬಿಟ್ಟು ಕೆಳಗೆ ಯಾಕೆ ಬೀಳುತ್ತದೆ ಎಂಬ ಒಂದು ಸಣ್ಣ ಕುತೂಹಲ ಭೂಮಿಯ ಗುರುತ್ವಾಕರ್ಷಣೆಯ ಶೋಧನೆಗೆ ನಾಂದಿ ಹಾಡಿತು. ಸಂಜೆಯಾಗುತ್ತಿದ್ದಂತೆ ಯಾಕೆ ಕತ್ತಲಾಗುತ್ತದೆ ಎಂಬ ಒಂದು ಸಹಜ ಜಿಜ್ಞಾಸೆ ನಮಗೆ ಸೌರವ್ಯೂಹದ ಪರಿಚಯ ಮಾಡಿಸಿಕೊಟ್ಟಿತು. ವಿಜ್ಞಾನವನ್ನು ಹುಟ್ಟಿಸಿದ್ದು ಕುತೂಹಲ, ಆದರೆ ಇದನ್ನು ಬೆಳೆಸಿದ್ದು ಮಾತ್ರ ಮಹತ್ವಾಕಾಂಕ್ಷೆ….

ಎಲ್ಲಾ ರಂಗದಲ್ಲೂ ಮಾನವ ವಿರಾಟನಾಗಿ ವ್ಯಾಪಿಸಿ ಎಲ್ಲವನ್ನೂ ತನ್ನ ಅಂಕೆಗೆ ಒಳಪಡಿಸಿಕೊಳ್ಳಲು ಮುನ್ನುಗ್ಗುತ್ತಿದ್ದಾನೆ. ಆದರೆ ಆತ ಎಷ್ಟು ಮುಂದುವರೆದರೂ ಪ್ರಕೃತಿ ಆತನನ್ನು ಅಷ್ಟೇ ಹಿಂದಕ್ಕೆ ಎಳೆದು ನಿಲ್ಲಿಸುತ್ತದೆ. ಕುತೂಹಲ ಮಹಾತ್ವಾಕಾಂಕ್ಷೆಯನ್ನು ಮಾನವನಲ್ಲಿ ಅಂಕುರಿಸಿದ ಪ್ರಕೃತಿ ಆತನಲ್ಲಿ ದ್ವೇಷ, ಸೋಮಾರಿತನ, ಸ್ವಾರ್ಥವನ್ನೂ ಬಿತ್ತಿದೆ. ಇದೊಂಥರಾ ಪ್ರಕೃತಿಯ ಸ್ವಯಂಸಂರಕ್ಷಣೆಯ ಉಪಾಯವೆಂದೇ ಪರಿಗಣಿಸಬಹುದು.

ಸ್ವಾರ್ಥ ರಹಿತವಾಗಿ, ದುರಾಸೆ ಬಿಟ್ಟು, ತನ್ನ ಜೀವನ ಸುಲಭಗೊಳಿಸಲಲ್ಲದೆ ಪ್ರಾಂಜಲ ಮನಸ್ಸಿನಿಂದ ಮಾನವ ಸಾಧನೆಯಲ್ಲಿ ತೊಡಗಿದರೆ ನಿಸ್ಸಂಶಯವಾಗಿ ಪ್ರಕೃತಿ ಆತನ ಮಾತು ಕೇಳುತ್ತದೆ. ಹಳ್ಳಿಯ ಮುಗ್ದ ರೈತನೊಬ್ಬ ಕೇವಲ ಮುಗಿಲಿನ ಬಣ್ಣ ನೋಡಿ ಯಾವಾಗ ಮಳೆ ಬರುತ್ತದೆ, ಯಾವಾಗ ಬಿತ್ತನೆ ಮಾಡಬಹುದು ಎಂದು ಕರಾರುವಕ್ಕಾಗಿ ಹೇಳುತ್ತಾನೆ. ಯಾಕೆಂದರೆ ಆತನಲ್ಲಿ, ಮಳೆ ನನ್ನ ಗದ್ದೆಗೆ ಮಾತ್ರ ಸುರಿಯಲಿ ಎಂಬ ಸ್ವಾರ್ಥವಿಲ್ಲ. ಸೋಮಾರಿತನ ಬಿಟ್ಟು ಮೈಮುರಿದು ದುಡಿಯಬಲ್ಲ ಆತನಲ್ಲಿ ಕೇವಲ ಜೀವನ ಶಾಲೆಯಿಂದ ಪಡೆದ ಅಗಾಧವಾದ ಅನುಭವಸಾರವಿರುತ್ತದೆ.

ಅದೇ ಹವಾಮಾನ ಇಲಾಖೆ ಎಷ್ಟೋ ಬಾರಿ ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನ, ಉಪಗ್ರಹ ಎಲ್ಲವನ್ನೂ ಬಳಸಿ ನಮಗೆ ನಿಖರವಾದ ಮಾಹಿತಿ ಕೊಡುವುದರಲ್ಲಿ ವಿಫಲವಾಗುತ್ತದೆ. ಮುಂದುವರೆದ ದೇಶಗಳೇ ಪ್ರಕೃತಿಯ ವಿಕೋಪವನ್ನು ಪತ್ತೆ ಹಚ್ಚಲು ವಿಫಲರಾಗಿ ಅಪಾರ ಪ್ರಾಣ ಹಾನಿಯನ್ನು ಕಂಡಿವೆ.

ಪ್ರಾಚೀನ ಕಾಲದಲ್ಲಿ ಆಂಧ್ರಪ್ರದೇಶದಲ್ಲೊಬ್ಬ ನಾಗಾರ್ಜುನನೆಂಬ ಸಾಧಕನಿದ್ದ. ಆತ ರಸವಿದ್ಯೆಯಲ್ಲಿ ಹಲವಾರು ಸಾಧನೆಯನ್ನು ಮಾಡಿದ್ದ. ಇಂದು ನಾವು ಕಾಣುತ್ತಿರುವ ಪ್ಲಾಟಿನಂ ಬಗ್ಗೆ ಆತ ಶತಮಾನಗಳ ಹಿಂದೆಯೇ ಪ್ರಸ್ತಾಪ ಮಾಡಿದ್ದಾನೆ. ಅದ್ಭುತವಾದ ಸ್ವರ್ಣಸ್ಪುಟ ವಿದ್ಯೆಯನ್ನು ಆತ ಕರಗತ ಮಾಡಿಕೊಂಡಿದ್ದ. ಕೃತಕ ಬಂಗಾರವನ್ನು ತಯಾರಿಸುವ ಕಾರ್ಯದಲ್ಲಿ ಆತ ಯಶಸ್ವಿಯಾಗಿದ್ದ. ವಜ್ರದಷ್ಟು ಕಠೋರವಾದ, ಹೂವಿನಷ್ಟು ಹಗುರವಾದ ಲೋಹಗಳನ್ನು ಹೇಗೆ ತಯಾರಿಸಬಹುದು ಎಂಬ ಬಗ್ಗೆ ಧೀರ್ಘ ಗ್ರಂಥವನ್ನೇ ರಚಿಸಿದ್ದಾನೆ. ಗಡ್ಡೆ ಗೆಣಸು ತಿಂದುಕೊಂಡು ಕೇವಲ ಲಂಗೋಟಿಯಲ್ಲಿ ತಿರುಗುತ್ತಿದ್ದ ಒಬ್ಬ ಬರಿಗೈ ಪಕೀರನಿಗೆ ಈ ಜ್ಞಾನ ಹೇಗೆ ಬಂತು..?

ಪ್ರಯೋಗಾಲದಿಂದ ಹೊರಗೂ ವಿಜ್ಞಾನವಿದೆ. ಆ ಪ್ರಕೃತಿ ಜ್ಞಾನ ಆತನ ಕೈ ಹಿಡಿಯಿತು. ಆತನಿಗೆ ಜಿಜ್ಞಾಸೆ ಇತ್ತು. ಆದರೆ ಸ್ವಾರ್ಥವಿರಲಿಲ್ಲ. 1903ರಲ್ಲಿ ಅಮೇರಿಕಾದ ನಾರ್ತ್ ಕೆರೋಲಿನಾ ಕಡಲ ದಂಡೆಯಲ್ಲಿ ಜಗತ್ತಿನ ಮೊತ್ತಮೊದಲ ವಿಮಾನ ಹಾರಾಡಿತು ಎನ್ನಲಾಗುತ್ತದೆ. ಆದರೆ ಅದಕ್ಕೂ 8 ವರ್ಷ ಮೊದಲು ಮುಂಬಯಿಯ ಗಿರ್ಗಾವ್ ಚೌಪಾಟಿಯಲ್ಲಿ ವಿಮಾನ ಹಾರಾಡಿತ್ತು. ಹಾರಿಸಿದವರು ಶಿವರಾವ್ ಬಾಪು ತಲ್ಪಾಡೆ… ಅವರಲ್ಲಿ ಕುತೂಹಲವಿತ್ತು. ಆದರೆ ವ್ಯಾಪಾರಿ ಮನೋಭಾವವಿರಲಿಲ್ಲ. ಹಾಗಾಗಿ ಅವರ ಹೆಸರು ಬೆಳಕಿಗೆ ಬರಲಿಲ್ಲ. ಥಾಮಸ್ ಅಲ್ವಾ ಎಡಿಸನ್ಗಿಂತಲೂ ವಿಜ್ಞಾನದಲ್ಲಿ ಅತ್ಯಧಿಕ ಸಂಶೋಧನೆ ನಡೆಸಿದವರು ನಿಕೋಲೋ ಟೆಸ್ಲಾ ಅವರು. ಆದರೆ ಎಡಿಸನ್ ಪಡೆದಷ್ಟು ಪ್ರಸಿದ್ಧಿ ಆ ಮನುಷ್ಯನಿಗೆ ಸಿಗಲಿಲ್ಲ.

vimaana

ಪ್ರಸಿದ್ಧಿ, ಪ್ರಚಾರಗಳನ್ನು ಪಕ್ಕಕ್ಕಿಟ್ಟು ಮುಖ್ಯ ವಿಚಾರಕ್ಕೆ ಬರೋಣ. ಜಗತ್ತಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿರೋದು ಪ್ರಕೃತಿಯಲ್ಲಿ. ಪ್ರಕೃತಿಯ ಸಂದೇಶಗಳನ್ನು ನಾವು ಪಡೆಯಬೇಕಾದರೆ ಮೊದಲು ನಾವು ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕು. ಆಗ ನಮ್ಮ ಮುಂದೆ ಈ ಸೃಷ್ಟಿಯ ಅಗಾಧತೆಯ ಅನಾವರಣವಾಗುತ್ತದೆ. ರೇಡಿಯೋವನ್ನು ಟ್ಯೂನ್ ಮಾಡಿದ ಹಾಗೆ ಮನಸ್ಸನ್ನೂ ಟ್ಯೂನ್ ಮಾಡಬೇಕು. ಇದನ್ನೇ ಅದ್ಯಾತ್ಮಿಕರು ಧ್ಯಾನವೆನ್ನುತ್ತಾರೆ. ವೈಜ್ಞಾನಿಕ ಜಗತ್ತು ಅದನ್ನು ಇನವೋಲ್ವ್ ಮೆಂಟ್ ಅನ್ನುತ್ತೆ. ಕವಿಗಳಿಗೆ ಅದು ಭಾವಲೋಕವಾಗಿ ಪರಿಣಮಿಸುತ್ತದೆ.

dhyaana

ವಿಜ್ಞಾನ ಎಷ್ಟೇ ಮುಂದುವರಿದರೂ, ಮಾನವನ ಊಹೆ ಮೀರಿ ಬೆಳೆದಿರಬಹುದಾದರೂ, ಕಲ್ಪನೆಯನ್ನು ಮೀರಿ ಬೆಳೆಯಲು ಅದಕ್ಕೆ ಸಾಧ್ಯವಾಗಿಲ್ಲ. ಪಾಶ್ಚಾತ್ಯ ಜಗತ್ತು ಎಷ್ಟೇ ಮುಂದುವರೆದ ಸೈನ್ಸ್ ಫಿಕ್ಷನ್ ಚಿತ್ರಗಳನ್ನು ತಂದರೂ ಅದೆಲ್ಲವೂ ನಮ್ಮ ದೈನಂದಿನ ಬದುಕಿನ ವಿಚಾರಗಳನ್ನೇ ಒಳಗೊಂಡಿರುತ್ತವೆ. ವಿಜ್ಞಾನ ಸಾವಿರ ವರ್ಷದ ಹಿಂದೆಯೂ ಅಸ್ತಿತ್ವದಲ್ಲಿತ್ತು. ಇಂದೂ ಇದೆ. ಆದರೆ ಅಂದಿನ ಮತ್ತು ಇಂದಿನ ವಿಜ್ಞಾನದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಅಂದು ಈ ವಿಶೇಷವಾದ ಜ್ಞಾನ ಕಂಡು ಹಿಡಿದವನಿಗೆ ಮಾತ್ರ ಬಳಸಲು ಸಿಗುತ್ತಿತ್ತು. ಆದರೆ, ಇಂದು ಮಾತ್ರ ಯಾರೋ ಒಬ್ಬ ಕಂಡು ಹಿಡಿದು ಅದನ್ನು ದುಡ್ಡಿಗಾಗಿ ಮಾರ್ಕೇಟಿಗೆ ಬಿಟ್ಟು ಬಿಡುತ್ತಾನೆ. ಪ್ರತಿಯೊಬ್ಬನೂ ಅದನ್ನು ಬಳಸುತ್ತಾನೆ. ವ್ಯಕ್ತಿಯೊಬ್ಬ ಬರೆಯುವ ಕಾರಣಕ್ಕೆ ಪೆನ್ನನ್ನು ಕಂಡು ಹಿಡಿಯುತ್ತಾನೆ. ಆತ ಅದನ್ನು ಬರೆಯಲು ಮಾತ್ರ ಬಳಸುತ್ತಾನೆ. ಆದರೆ ಅದು ಇನ್ನೊಬ್ಬನ ಕೈ ಸೇರಿದರೆ ಆತ ಅದನ್ನು ಕಿವಿಯ ಕಸ ತೆಗೆಯಲೋ, ಬೆನ್ನು ತೂರಿಸಿಕೊಳ್ಳಲೋ ಬಳಸುತ್ತಾನೆ. ಇಂದಿನ ವಿಜ್ಞಾನದ ಕತೆಯೂ ಹಾಗೇ ಆಗಿದೆ.

ಎಲ್ಲಾ ತಂತ್ರಜ್ಞಾನಗಳೂ ಅಡ್ಡದಾರಿ ಹಿಡಿಯುತ್ತಿವೆ. ಇದರ ತೀವ್ರತೆ ಯಾವ ಮಟ್ಟಕ್ಕೆ ಮಿತಿ ಮೀರಿದೆ ಎಂದರೆ, ವ್ಯಕ್ತಿಯ ಮನಸ್ಥಿತಿ ಮತ್ತು ಒಟ್ಟು ಸಮಾಜ ವ್ಯವಸ್ಥೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಸ್ಪೋಟಕ್ಕೆ ಸಿದ್ಧವಾದ ಬಾಂಬಿನಂತೆ ಕಾಣುತ್ತಿದೆ. ಕೇವಲ ಒಂದು ದಿನ ಆತ ಟೆಲಿವಿಝನ್, ಮೋಬೈಲುಗಳನ್ನು ಬಿಟ್ಟು ಇರಲಾರ. ಆತ ಅದರ ಅತಿ ದೊಡ್ಡ ವ್ಯಸನಿಯಾಗಿ ಬಿಟ್ಟಿದ್ದಾನೆ. ಹಿಂದಿನ ಕಾಲದಲ್ಲಿ ಮಹಾಭಾರತದ ಸಂಜಯನಿಗೂ ಟೆಲಿವಿಝನ್ ಟೆಕ್ನಾಲಜಿ ಗೊತ್ತಿತ್ತು. ಆದರೆ ಅದನ್ನು ಆತ ಮಾರ್ಕೆಟಿಂಗ್ ಮಾಡಿರಲಿಲ್ಲ. ಪರಿಣಾಮವಾಗಿ ಯಾವುದೇ ಅಪಾಯ ಸಂಭವಿಸಲಿಲ್ಲ.

television

ಇಂದಿನ ಅಣುಬಾಂಬಿಗೆ ಸರಿಯಾದ ಬ್ರಹ್ಮಾಸ್ತ್ರ ಹಲವಾರು ಮಹಾ ತಪಸ್ಸಾಧಕರ ಬೆನ್ನಲ್ಲಿತ್ತು. ಇದು ಎಲ್ಲರ ಕೈಗೆ ಸಿಕ್ಕ ಕಾರಣ ಮಹಾ ಭಾರತದ ಘನಘೊರ ಯುದ್ಧ ನಡೆಯಿತು. ಲಂಕೆಯ ರಾವಣನ ಬಳಿ ಪುಷ್ಪಕ ವಿಮಾನವಿತ್ತು. ಅದನ್ನು ಆತ ಸೌರಶಕ್ತಿ ಮತ್ತು ಪಾದರಸವನ್ನು ಬಳಸಿ ಹಾರಿಸುತ್ತಿದ್ದನಂತೆ. ಆತ ತಾನು ಕಂಡು ಹಿಡಿದ ವಿಮಾನವನ್ನು ಕಿಂಗ್ ಫಿಷರ್ನವರಂತೆ ಜನಸಾಮಾನ್ಯರ ಬಳಕೆಗೆ ನೀಡಲಿಲ್ಲ. ಹಾಗಾಗಿ ಅದೊಂದು ವ್ಯಾಪಾರವಾಗಲಿಲ್ಲ. ಪೈಪೋಟಿಗಿಳಿದು ಇನ್ನೂ ಒಂದಷ್ಟು ಜನರು ವಿಮಾನ ತಯಾರಿಸುವ ಕೆಲಸಕ್ಕೆ ಕೈ ಹಾಕಲಿಲ್ಲ.

ಈ ಎಲ್ಲಾ ಮಾತಿನ ಸಾರವಿಷ್ಟೆ. ಇತ್ತೀಚೆಗೆ ವಿಜ್ಞಾನದ ಸಾಧನೆಗಳನ್ನು ವ್ಯಾಪಾರೀಕರಣ ಹೈಜಾಕ್ ಮಾಡಿಕೊಂಡಿದೆ. ಟೆಕ್ನಾಲಜಿಗಳನ್ನು ಯೂನಿವರ್ಸಿಟಿಗಳ ಮೂಲಕ ಮಾರಲಾಗುತ್ತಿದೆ. ಇದು ಎಲ್ಲಾ ಸಮಸ್ಯೆಗಳ ಮೂಲವಾಗಿದೆ. ಹಿಂದೆ ಗುರು ಮಠದ ಮೂಲಕ ವಿದ್ಯಾಭ್ಯಾಸ ನಡೆಯುತ್ತಿತ್ತು. ಪ್ರತಿಯೊಂದನ್ನು ಆತ ತನ್ನ ಸ್ವಂತ ಅನ್ವೇಷಣೆಯಿಂದಲೇ ಕಂಡು ಹುಡುಕಬೇಕಿತ್ತು. ಇಂದಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ನೀಡಲಾಗುತ್ತದೆ. ಆದರೆ ಈ ಪ್ರಾಜೆಕ್ಟ್ ವರ್ಕನ್ನೂ ಮಾಡಿ ಕೊಡುವ ಕಂಪನಿಗಳಿವೆ. ಮಗು ಹುಟ್ಟುತ್ತಲೇ ತಂದೆ ತಾಯಿ ಅತನನ್ನು ಡಾಕ್ಟರ್ ಮಾಡಬೇಕೋ, ಇಂಜಿನೀಯರ್ ಮಾಡಬೇಕೋ ಎಂದು ಅವರೊಳಗೆ ಜಗಳವಾಡಲು ಶುರು ಮಾಡುತ್ತಾರೆ. ಫಾರ್ಮ್ ನ ಕೋಳಿಯಂತೆ ತಿಂಗಳಿಗೊಮ್ಮೆ ಲಸಿಕೆಕೊಟ್ಟು ಆ ಮಗುವನ್ನು ಬೆಳೆಸಲಾಗುತ್ತದೆ. ತಾಯಿಗೆ ತನ್ನ ಮಗುವಿನ ಬಾಯಿಗೆ ಮೊಲೆ ಇಡಲೂ ಹಿಂಜರಿಕೆ. ಆಕೆಗೆ ಫಿಗರ್ ಹಾಳಗಬಹುದು ಎಂಭ ಭಯ.. ಎದೆಯ ಹಾಲನ್ನು ಪ್ಲಾಸ್ಟಿಕಿನ ಬಾಟಲಿಗೆ ತುಂಬಿಸಿ ಕೆಲಸದವಳ ಕೈಗೆ ಆ ಬಾಟಲಿಯನ್ನೂ ಮಗುವನ್ನೂ ಕೊಟ್ಟು ಆಕೆ ಆಫೀಸಿಗೆ ಓಡುತ್ತಾಳೆ.

ಅದು ಆಕೆಗೆ ಅನಿವಾರ್ಯ. ಗಂಡ ಹೆಂಡತಿ ಇಬ್ಬರೂ ದುಡಿಯದಿದ್ದರೆ ಅವಳ ಸಂಸಾರ ರೂಡಿಸಿಕೊಂಡು ಬಂದ ರಾಯಲ್ ಲೈಫ್ ಸ್ಟೈಲ್ ಮುಂದುವರೆಸಲು ಸಾಧ್ಯವಿಲ್ಲ. ಕೆಲಸದಾಕೆ ಆ ಮಗುವಿನ ಆರೈಕೆ ಮಾಡುತ್ತಾ ಅದರ ಡೈಫರ್ ಬದಲಾಯಿಸುತ್ತಾ ಅದರಲ್ಲೇ ಅನ್ನ ಕಂಡುಕೊಳ್ಳುತ್ತಾಳೆ. ರಾತ್ರಿ ಮಗು ಮಲಗಿದ ಮೇಲೆ ಮನೆಗೆ ಬರುವ ತಂದೆ ತಾಯಿ ಮುಂಜಾನೆ ಮಗು ಏಳುವ ಮೊದಲೇ ಆಫೀಸಿಗೆ ಓಡುತ್ತಾರೆ. ಆ ಮಗುವಿಗೆ ನನ್ನನ್ನು ಹೆತ್ತವರು ಯಾರು..? ಹುಟ್ಟಿಸಿದವರು ಯಾರು..? ಎಂಬ ಗೊಂದಲವೇ ಕೊನೆಯವರೆಗೂ ಕಾಡುತ್ತದೆ. ಇಲ್ಲಿ ಎಲ್ಲವೂ ವ್ಯಾಪಾರಿಕರಣ.. ಮಗುವನ್ನು ಸಾಕುವವಳೂ ದುಡ್ಡಿಗಾಗಿ ಸಾಕುತ್ತಾಳೆ. ಅವಳಿಂದ ಹೆತ್ತ ಕರುಳಿನ ಪ್ರೀತಿ ಹೇಗೆ ತಾನೆ ಸಿಗಲು ಸಾಧ್ಯ..? ತಾಯಿಯ ಬಿಗಿಯಪ್ಪುಗೆ ಏನು ಆ ಮಗುವಿಗೆ ಗೊತ್ತೇ ಇರಲ್ಲ. ಎರಡು ಮಗು ಹೆರುವ ಮಹಾ ಸಾಹಸಕ್ಕೆ ಯಾವ ತಾಯಿಯೂ ಈ ಕಾಲದಲ್ಲಿ ಮುಂದಾಗುತ್ತಿಲ್ಲ. ಹಾಗಾಗಿ ಆ ಮಗುವಿಗೆ ಅಕ್ಕ-ತಂಗಿ, ಅಣ್ಣ-ತಮ್ಮ, ಈ ಯಾವ ಸಂಬಂಧಗಳ ಬೆಲೆಯೂ ಗೊತ್ತಾಗುವುದಿಲ್ಲ. ಹಂಚಿ ತಿನ್ನುವ ಬುದ್ಧಿಯೇ ಆ ಮಗುವಿಗೆ ಇರುವುದಿಲ್ಲ. ಅದು ಕಿತ್ತು ತಿನ್ನಲು ಕಲಿಯುತ್ತದೆ. ಆ ಮಗು ಅಪ್ಪಟ ಸ್ವಾರ್ಥಿಯಾಗಿ ಬಿಡುತ್ತದೆ. ಮನೆಯಲ್ಲಿ ಆ ಮಗುವಿಗೆ ಯಾವುದೇ ವಿಚಾರದಲ್ಲಿ ಕೊರತೆ ಇರುವುದಿಲ್ಲ. ಕೇಳಿದ್ದೆಲ್ಲವೂ ಸಿಕ್ಕಿಬಿಡುತ್ತದೆ. ದುಡ್ಡಿನ ಬೆಲೆ, ದುಡಿಮೆಯ ಫಲ ಒಂದರ ಅರಿವೂ ಆ ಮಗುವಿಗೆ ಇರುವುದಿಲ್ಲ. ಅದು ಎಷ್ಟೊಂದು ಹಠಮಾರಿಯಾಗಿ ಬಿಡುತ್ತದೆ ಎಂದರೆ, ನೂರು ರೂಪಾಯಿ ಕೊಡಲು ನಿರಾಕರಿಸಿದರೂ ಹಗ್ಗ ಹಾಕಿಕೊಂಡು ಸಾಯಲು ಮುಂದಾಗುತ್ತದೆ.

ಸ್ನೇಹಾ ಉಪಾದ್ಯಾಯ ಎಂಬ ಮಂಗಳೂರಿನ ಹೆಣ್ಣು ಮಗಳು ತಾಯಿ ಡ್ರಗ್ ಸೇವಿಸಲು ಹಣ ನೀಡಲಿಲ್ಲ ಎಂದು ನೇಣು ಬಿಗಿದುಕೊಂಡಳು. ಶಾಲೆಯಲ್ಲಿ ಒಂದು ಮಾಕರ್ು ಕಡಿಮೆಯಾಯಿತು ಎಂಬ ಕಾರಣಕ್ಕೆ ಸಾವಿರಾರು ಮಕ್ಕಳು ಬಾವಿಗೆ ಹಾರಿ ಸತ್ತಿದ್ದಾರೆ. ಅವರಿಗೆ ಆ ಪರಿಸ್ಥಿತಿಯನ್ನು ತಂದವರು ಯಾರು..? ಮಗುವಿಗೆ ತಂದೆ ತಾಯಂದಿರು ಪ್ರತೀ ದಿನ ರ್ಯಾಂಕ್ ಪಡೆಯುವಂತೆ ಧಮಕಿ ಹಾಕುತ್ತಾರೆ. ಅಮೀಷ ಒಡ್ಡುತ್ತಾರೆ. ಒಂದು ವೇಳೆ ಆ ಮಗು ವಿಫಲಾವಾಯಿತೆಂದಾದರೆ ಆ ಮಗುವನ್ನು ಹೆತ್ತವರು ಅತ್ಯಾಚಾರದ ಆರೋಪಿಯನ್ನು ಕಂಡಂತೆ ಕಾಣುತ್ತಾರೆ. ಆ ಮಗುವಿನ ಬಗ್ಗೆ ಎಲ್ಲರಿಗಿಂತ ಹೆಚ್ಚು ಇವರಿಗೇ ಕೀಳರಿಮೆ ಹುಟ್ಟಿಕೊಳ್ಳುತ್ತದೆ. ಶಾಲೆಯ ಮೆಟ್ಟಿಲು ಹತ್ತದೆ ಇತಿಹಾಸದಲ್ಲಿ ಅಜರಾಮರರಾದ ಹಿರಿಯರ ಕತೆಯನ್ನು ನಾವು ನಮ್ಮ ಮಕ್ಕಳಿಗೆ ಹೇಳುವುದಿಲ್ಲ. ಓದದವ ಬದುಕಲು ನಾಲಾಯಕ್ಕು ಎಂಬ ವಾತಾವರಣವನ್ನು ಸೃಷ್ಟಿಸಿ ಮಕ್ಕಳನ್ನು ನಾವೇ ಬಾವಿಗೆ ದೂಡುತ್ತೇವೆ.. ನಮಗೆ ಮಗ ರ್ಯಾಂಕ್ ಪಡೆಯಬೇಕು, ಲಕ್ಷಗಟ್ಟಲೆ ಸಂಬಳ ದುಡಿಯಬೇಕು, ಮತ್ತು ನಾವು ಅವನನ್ನು ಕಲಿಸಲು ಮಾಡಿದ ಬ್ಯಾಂಕು ಸಾಲವನ್ನು ತೀರಿಸಬೇಕು ಇದೇ ನಮ್ಮ ಮುಖ್ಯ ಅಜೆಂಡಾ… ಮಗನೇನೋ ಕೆಲಸಕ್ಕೆ ಸೇರುತ್ತಾನೆ. ತನಗೆ ಒಪ್ಪುವ ಹೆಣ್ಣನ್ನು ಮದುವೆಯೂ ಆಗುತ್ತಾನೆ. ಆದರೆ ತನ್ನನ್ನು ಈ ಮಟ್ಟಕ್ಕೆ ಕುಕ್ಕರಿನಂತೆ ಒತ್ತಡದಲ್ಲಿಟ್ಟು ಬೆಳೆಸಿದ ತಂದೆ ತಾಯಂದಿರಿಗೆ ಮಾತ್ರ ವೃದ್ಧಾಶ್ರಮದ ದಾರಿ ತೋರಿಸುತ್ತಾನೆ. ಅವನನ್ನು ಪ್ರಶ್ನಿಸುವಂತಿಲ್ಲ. ಯಾಕೆಂದರೆ ನಾವು ಬಾಲ್ಯದಲ್ಲಿ ಅವನ ಆರೈಕೆ ಮಾಡಲು ಕೆಲಸದವಳನ್ನಲ್ಲವೇ ಇಟ್ಟಿದ್ದು..? ನಮ್ಮ ವೃದ್ದಾಪ್ಯದಲ್ಲಿ ನಮ್ಮ ಚಾಕರಿ ಅವನೇಕೆ ಮಾಡಬೇಕು, ವೃದ್ಧಾಶ್ರಮಕ್ಕೆ ದುಡ್ಡು ಕಟ್ಟಿದರೆ ಅವರು ನೋಡಿಕೊಳ್ತಾರೆ…ಅಲ್ವಾ..? ಇದೊಂದು ಸಣ್ಣ ಉದಾಹರಣೆಯಷ್ಟೇ.. ಇಂತಹ ನೂರಾರು ಉದಾಹರಣೆಗಳು ನಮ್ಮ ಇಂದಿನ ತಲೆಮಾರಿನ ಕುರುಡು ಓಟಕ್ಕೆ ಕನ್ನಡಿ ಹಿಡಿಯುತ್ತವೆ.

ನಾವು ವೈಜ್ಞಾನಿಕ ಯುಗದಲ್ಲಿದ್ದೇವೆ ಸತ್ಯ. ಆದರೆ ಇಂದು ನಾವು ಕಾಣುತ್ತಿರುವ ವಿಜ್ಞಾನ ಟೈಮ್ ಟೆಸ್ಟೆಡ್ ಅಲ್ಲ. ಇದನ್ನು ನಾವು ನೆನಪಿಟ್ಟುಕೊಳ್ಳಬೇಕು. ವ್ಯಾಪಾರೀಕರಣದ ಭರಾಟೆಯಿಂದಾಗಿ ವಿಜ್ಞಾನ ಅಡ್ಡದಾರಿಯನ್ನು ಹಿಡಿದಿದೆ. ಇದರ ಅಡ್ಡ ಪರಿಣಾಮವನ್ನು ನಾವು ಎದುರಿಸಲೇಬೇಕು. ಕೊನೆಗೆ ಒಂದು ಸಲಹೆ. ಬನ್ನಿ, ನಾವೆಲ್ಲಾ ಪ್ರಕೃತಿ ಸಹಜವಾಗಿ ಬದುಕೋಣ. ಅನಾವಶ್ಯಕ ಒತ್ತಡ, ಒಣ ಪ್ರತಿಷ್ಠೆಗಳಿಂದ ಮುಕ್ತರಾಗೋಣ. ಇದರಲ್ಲೇ ವಿಶ್ವದ ಹಿತವಿದೆ.

prakruthi jeevana

(ಚಿತ್ರಗಳು: ಅಂತಾರ್ಜಾಲದಿಂದ)

Leave a Reply

Your email address will not be published. Required fields are marked *