Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಕಾಸರಗೋಡು: ಕನ್ನಡ ಪ್ರದೇಶದ ಪಂಚಾಯಿತಿಗಳಲ್ಲಿ ಬಲವಂತದ ಮಲೆಯಾಳ ಹೇರಿಕೆಗೆ ಹುನ್ನಾರ!

ಕಾಸರಗೋಡು: ಕೇರಳ-ಕರ್ನಾಟಕ ಗಡಿ ಪ್ರದೇಶಕ್ಕೆ ತಾಗಿಕೊಂಡಿರುವ ಎಣ್ಮಕಜೆ ಗ್ರಾಮ ಪಂಚಾಯಿತಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ದ ಹಕ್ಕುಗಳ ಉಲ್ಲಂಘನೆಯಾಗಿದೆ.

ಪಂಚಾಯಿತಿಯ ಮತದಾರರೊಬ್ಬರು ಮಾಹಿತಿ ಹಕ್ಕು ಕಾಯಿದೆಯನ್ವಯ ರಸ್ತೆ ವ್ಯಾಜ್ಯದ ಬಗ್ಗೆ ಕನ್ನಡದಲ್ಲಿ ಕೇಳಿರುವ ಮಾಹಿತಿಗೆ ಜಿಲ್ಲೆಯ ಅಚ್ಚ ಕನ್ನಡ ಪ್ರದೇಶದಲ್ಲಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಲೆಯಾಳದಲ್ಲಿ ಉತ್ತರ ನೀಡುವ ಮೂಲಕ ಬಲವಂತದ ಮಲೆಯಾಳ ಹೇರಿಕೆಗೆ ಮುಂದಾಗಿದ್ದಾರೆ.

ಕಾಟುಕುಕ್ಕೆ ಕೆಂಗಣಾಜೆ ನಿವಾಸಿ ಕುಞ ನಾಯ್ಕ ಎಂಬವರ ಮನೆಗೆ ತೆರಳುವ ರಸ್ತೆಗೆ ಕೆಲವರು ತಡೆಯೊಡ್ಡಿದ್ದು, ಈ ಬಗ್ಗೆ ಆರ್ ಡಿಓ ಕಚೇರಿಯಿಂದ ರಸ್ತೆ ತಡೆ ತೆರವುಗೊಳಿಸುವ ಬಗ್ಗೆ ಪಂಚಾಯಿತಿಗೆ ಆದೇಶ ನೀಡಲಾಗಿತ್ತು. ಆದರೆ, ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಕುಞ ನಾಯ್ಕ ಅವರು ಮಾಹಿತಿ ಹಕ್ಕು ಕಾಯಿದೆಯನ್ವಯ ಪಂಚಾಯಿತಿ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿ ಈ ಬಗ್ಗೆ ಮಾಹಿತಿ ಕೇಳಿದ್ದರು.

ಪಂಚಾಯಿತಿಯಿಂದ ಮಲೆಯಾಳದಲ್ಲಿ ಬರೆಯಲಾದ ದೀರ್ಘ ಪತ್ರವನ್ನು ರವಾನಿಸಿರುವ ಅಧಿಕಾರಿಗಳು, ಕುಞ ನಾಯ್ಕ ಅವರು ಕೇಳಿರುವ ಮಾಹಿತಿಯನ್ನು ಪಂಚಾಯಿತಿಯಿಂದ ನೀಡಲು ಸಾಧ್ಯವಿಲ್ಲ. ಈ ಮಾಹಿತಿಗಾಗಿ ಸಂಬಂಧಪಟ್ಟ ಬೇರೆ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಅಲ್ಲದೆ, ಇದಕ್ಕೆ ಉದಾಹರಣೆಯಾಗಿ ದೂರದ ಮಲಪ್ಪುರಂ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದರಲ್ಲಿ ಮಾಹಿತಿ ಹಕ್ಕು ಕಾಯಿದೆಯನ್ವಯ ಅಲ್ಲಿನ ಮತದಾರರೊಬ್ಬರಿಗೆ ಮಾಹಿತಿ ನೀಡಲು ನಿರಾಕರಿಸಿದ ಮಲೆಯಾಳ ಪತ್ರದ ನಕಲನ್ನೂ ಲಗತ್ತಿಸಿ ನೀಡಲಾಗಿದೆ! ಮಲೆಯಾಳ ಅರಿಯದ ಕುಞ ನಾಯ್ಕ ಅವರು ಪಂಚಾಯಿತಿಯಿಂದ ಲಭಿಸಿದ ಪತ್ರವನ್ನು ಹಿಡಿದು ಮಲೆಯಾಳ ಬಲ್ಲವರಲ್ಲಿ ಆ ಪತ್ರವನ್ನು ಓದಿಸಲು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಧ್ಯಕ್ಷ, ಕಾರ್ಯದರ್ಶಿಗಳಿಬ್ಬರೂ ಕನ್ನಡಿಗರಾಗಿದ್ದರೂ, ಇಲ್ಲಿನ ಸಿಬ್ಬಂದಿಗಳೆಲ್ಲರೂ ಮಲೆಯಾಳಿಗರಾಗಿರುವುದರಿಂದ ಕೆಲವೊಂದು ಮಹತ್ವದ ಮಾಹಿತಿ ಕನ್ನಡದಲ್ಲಿ ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಜಿಲ್ಲೆಯ ದಕ್ಷಿಣದ ಗ್ರಾಮ ಪಂಚಾಯಿತಿಗಳಲ್ಲಿ ಕನ್ನಡಿಗರು ಅನುಭವಿಸುತ್ತಿದ್ದ ಭಾಷಾ ಸಮಸ್ಯೆ, ಮಲೆಯಾಳದ ಒತ್ತಡದ ಹೇರಿಕೆ ಇದೀಗ ಅಚ್ಚ ಕನ್ನಡ ಪ್ರದೇಶಕ್ಕೂ ವ್ಯಾಪಿಸಿದೆ. ಕನ್ನಡ ಪ್ರದೇಶದ ಕಚೇರಿಗಳಲ್ಲಿ ಮಲೆಯಾಳಿ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಅನಿವಾರ್ಯವಾಗಿ ಮಲೆಯಾಳ ಕಲಿಕೆಯತ್ತ ಅಥವಾ ಅಧಿಕಾರಿಗಳು ನೀಡುವ ಮಲೆಯಾಳದ ಆದೇಶಗಳನ್ನು ಸ್ವೀಕರಿಸಿ ಸುಮ್ಮನಾಗಬೇಕಾದ ಶೋಚನೀಯ ಪರಿಸ್ಥಿತಿ ಸೃಷ್ಟಿಯಾಗಿದೆ.

‘ಮಲೆಯಾಳಕ್ಕೆ ಆದ್ಯತೆ, ಕನ್ನಡದಲ್ಲೂ ನೀಡಲು ವ್ಯವಸ್ಥೆ ಮಾಡಲಾಗುವುದು’
ಕಚೇರಿಯಲ್ಲಿ ಬಹುತೇಕ ಎಲ್ಲ ಸಿಬ್ಬಂದಿಗಳೂ ಮಲೆಯಾಳದವರಾಗಿರುವುದರಿಂದ ಹಾಗೂ ಕೇರಳದಲ್ಲಿ ಮಲೆಯಾಳ ಆಡಳಿತ ಭಾಷೆಯಾಗಿ ಜಾರಿಗೊಳಿಸಿರುವುದರಿಂದ ಮಲೆಯಾಳಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತಿದೆ. ಕನ್ನಡದಲ್ಲಿ ಮಾಹಿತಿ ಅರಸಿ ಬಂದವರಿಗೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ.
ಕೆ.ಎಂ. ಶರ್ಮ
ಕಾರ್ಯದರ್ಶಿ, ಎಣ್ಮಕಜೆ ಗ್ರಾ.ಪಂ.

Leave a Reply

Your email address will not be published. Required fields are marked *