Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪಾಳುಬಿದ್ದ ಚಂದ್ರಗಿರಿ ಕೋಟೆ: ಸರಕಾರದ ನಿರ್ಲಕ್ಷ್ಯ !

ವಿಶೇಷ ವರದಿ

ಕಾಸರಗೋಡು: ಕೋಟೆಗಳ ನಾಡು ಎಂದೇ ಖ್ಯಾತಿಯಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಬೇಕಲಕೋಟೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಇದೊಂದು ಆರ್ಕರ್ಷಣೀಯ ತಾಣವಾಗಿ ಪ್ರವಾಸೀ ಕೇಂದ್ರವಾಗಿದ್ದರೆ, ಉಳಿದಂತೆ ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕುಂಬಳೆಯ ಆರಿಕ್ಕಾಡಿ ಕೋಟೆ, ಕುಡಂಗುಯಿ ಕೋಟೆ, ಪೊವ್ವಲ್ ಕೋಟೆ, ಚಂದ್ರಗಿರಿ ಕೋಟೆ, ಕಾಸರಗೋಡು ಕೋಟೆ, ಬಂದಡ್ಕ ಕೋಟೆ, ಹೊಸದುರ್ಗ ಕೋಟೆಗಳು ದಿವ್ಯ ನಿರ್ಲಕ್ಷ್ಯಕ್ಕೀಡಾಗಿವೆ.

ಇವುಗಳಲ್ಲಿ ಬೇಕಲ ಮತ್ತು ಚಂದ್ರಗಿರಿ ಕೋಟೆ ಹೊರತುಪಡಿಸಿ ಉಳಿದವು ಕೇವಲ ಹೆಸರು ಮಾತ್ರವಲ್ಲದೇ ಯಾವುದೇ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿಲ್ಲ. ದೊಡ್ಡದಾದ ಬಂದಡ್ಕ ಕೋಟೆ ಹಾಗೂ ಕಾಸರಗೋಡು ಕೋಟೆಗಳ ಅವಶೇಷಗಳು ಮಾತ್ರ ಇದೀಗ ಕೇವಲ ಕುರುಹುಗಳಾಗಿ ಉಳಿದುಕೊಂಡಿದೆ. ಇವುಗಳ ಬಗ್ಗೆ ಕಂದಾಯ ಇಲಾಖೆಯಲ್ಲಿ ಯಾವುದೇ ಉಲ್ಲೇಖಗಳು ಇಲ್ಲದಿರುವುದು ತಿವ್ರ ಆತಂಕಕಾರಿಯಾಗಿದೆ. ಇದಕ್ಕೆ ಪ್ರಧಾನವಾದ ಕಾರಣ, ಹಿಂದೆ ಕೋಟೆಗಳಲ್ಲಿ ಕಾವಲುಗಾರರಾಗಿದ್ದವರು ಈ ಕೋಟೆಯ ಭೂಮಿಯನ್ನು ಕೈವಶದಲ್ಲಿರಿಸಿಕೊಂಡಿದ್ದರಿಂದ ಸ್ವಾತಂತ್ರ್ಯದ ಬಳಿಕ ಅವುಗಳ ದಾಖಲೀಕರಣದಲ್ಲಿ ನಿರ್ಲಕ್ಷ್ಯಗೊಂಡು ಹಿನ್ನೆಲೆಗೆ ಸರಿಯುವಂತಾಯಿತು. ಇಂದು ಅವುಗಳೆಲ್ಲ ಅವಶೇಷ ಮಾತ್ರ.

ಪ್ರತೀ ಕೋಟೆಗಳಲ್ಲಿ ಆಂಜನೇಯನ ದೇವಸ್ಥಾನಗಳನ್ನು ಕಾಣಬಹುದು. ಕುಂಬಳೆ, ಬೇಕಲ ಕೋಟೆಗಳಲ್ಲಿ ಪ್ರಸಿದ್ಧವಾದ ಆಂಜನೇಯ ದೇವಸ್ಥಾನಗಳಿವೆ. ಹಿಂದಿನ ಕಾಲದಲ್ಲಿ ರಾಜರುಗಳು ಕೋಟೆಗಳ ರಕ್ಷಣೆಗಾಗಿ ಆಂಜನೇಯ ದೇವರನ್ನು ನೆಲೆಗೊಳಿಸಿ ನಂಬಿಕೊಂಡಿರುವುದು ಇದರಿಂದ ವೇದ್ಯಗೊಳ್ಳುತ್ತದೆ.

ಮುಖ್ಯಪ್ರಾಣನಾದ ಆತ ಅರಸರ, ಸಾಮ್ರಾಜ್ಯದ ಪ್ರಜೆಗಳ ಪ್ರಾಣ ಕಾಯುವವನೆಂಬ ಪೂರ್ವಜರ ನಂಬಿಕೆ ಅಂದಿನ ಸಾಮಾಜಿಕ ಸ್ವಾಸ್ಥ್ಯದ ಪ್ರತಿರೂಪಕಗಳು. ಇದೀಗ ಪ್ರಧಾನವಾಗಿ ಕುಂಬಳೆ ಹಾಗೂ ಬೇಕಲಗಳಲ್ಲಿರುವ ಕೋಟೆಗಳ ಬಳಿ ಮಾತ್ರ ದೇವಸ್ಥಾನಳಿದ್ದು ನಿತ್ಯ ಪೂಜೆ ನಡೆಯುತ್ತಿದೆ. ಭಾರೀ ಸಂಖ್ಯೆಯ ಭಕ್ತರನ್ನು ಆಕರ್ಷಿಸುವ ಕೇಂದ್ರವೂ ಆಗಿದೆ.

ಚಂದ್ರಗಿರಿ ಕೋಟೆ

ಸುಮಾರು ಒಂಭತ್ತು ಎಕ್ರೆ ವಿಸ್ತೀರ್ಣದಲ್ಲಿರುವ ಚಂದ್ರಗಿರಿ ಕೋಟೆ 17ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದ್ದು ಎನ್ನಲಾಗಿದೆ. ದೊಡ್ಡ ಚೌಕಾಕರದ ಈ ಕೋಟೆ ಸಮುದ್ರ ಮಟ್ಟದಿಂದ 150 ಅಡಿ ಎತ್ತರದಲ್ಲಿದ್ದು, ಪಯಸ್ವಿನಿ ನದಿ ತೀರದಲ್ಲಿ ವಿಸ್ತಾರವಾಗಿದೆ.

ಚಂದ್ರಗಿರಿ ಕೋಟೆ ಮಹತ್ವದ ಇತಿಹಾಸವನ್ನು ಹೊಂದಿದೆ. ಹಿಂದೆ ರಾಜರ ಆಳ್ವಿಕೆಯಲ್ಲಿ ಚಂದ್ರಗಿರಿ ನದಿಯು ಎರಡು ಪ್ರಬಲ ಸಾಮಾಗ್ರಿಜ್ಯಗಳಾದ ಕೋಳತ್ತುನಾಡು ಹಾಗೂ ತುಳುನಾಡುಗಳ ಗಡಿಯೆಂದು ಪರಿಗಣಿಸಲ್ಪಟ್ಟಿತ್ತು. ಯಾವಾಗ ತುಳುನಾಡನ್ನು ವಿಜಯನಗರ ಸಾಮ್ರಾಜ್ಯ ವಶಪಡಿಸಿಕೊಂಡಿತೋ, ಅಂದಿನಿಂದ ಕೊಳತ್ತುನಾಡು ರಾಜ ಚಂದ್ರಗಿರಿ ವಲಯವನ್ನು ಕಳಕೊಂಡಿದ್ದ. ನಂತರ ವಿಜಯನಗರ ಸಾಮ್ರಾಜ್ಯ ಅವನತಿಯ ಸಂದರ್ಭದಲ್ಲಿ ಈ ಪ್ರದೇಶವು ಇಕ್ಕೇರಿಯ ಕೆಳದಿ ನಾಯಕರ ಆಡಳಿತ ಕೇಂದ್ರವಾಗಿದ್ದು, 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಪೂರ್ಣವಾಗಿ ಅವನತಿಯಾದಾಗ ಅವರ ಮಾಂಡಳಿಕನಾಗಿದ್ದ ವೆಂಗಪ್ಪ ನಾಯಕ ಪ್ರಬಲರಾಗಿ ಸ್ವಾತಂತ್ರ್ಯಘೋಷಿಸಿದನು. ಆ ಬಳಿಕ ಶಿವಪ್ಪ ನಾಯಕ ಈ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಈ ಭಾಗದಲ್ಲಿ ಸರಣಿಯಂತೆ ಹಲವು ಕೋಟೆಗಳನ್ನು ನಿರ್ಮಿಸಿದರು.

ಚಂದ್ರಗಿರಿ ನದಿಯು ಈ ಹಿಂದೆಯೇ ತುಳುನಾಡು ಮತ್ತು ಮಲಯಾಳ ವಲಯಗಳ ಸಾಂಪ್ರದಾಯಿಕ ಗಡಿಯಾಗಿ ಗುರುತಿಸಲ್ಪಟ್ಟಿತ್ತು. ಚಂದ್ರಿಗಿರಿ ಹೊಳೆಯು ಕರ್ನಾಟಕದ ಕೊಡುಗು ಜಿಲ್ಲೆಯ ಕೊನಾಡಿನಿಂದ ಉದ್ಭವಿಸಿ, ದ.ಕ. ಜಿಲ್ಲೆಯ ಸುಳ್ಯ ಮೂಲಕ ಹರಿದು ಕಾಸರಗೋಡು ಜಿಲ್ಲೆಯ ಮೂಲಕ ಅರಬೀ ಸಮುದ್ರವನ್ನು ಸೇರುತ್ತದೆ. (ನದಿಯೊಂದು ಎರಡು ಹೆಸರಿನಿಂದ ಕರೆಯಲ್ಪಡುವುದಿದ್ದರೆ, ಅದು ಪಯಸ್ವಿನಿ ಮಾತ್ರ.

chandragiri kote-2

ಕರ್ನಾಟಕದಲ್ಲಿ ಪಯಸ್ವಿನಿಯೆಂದಾದರೆ, ಕೇರಳಕ್ಕೆ ತಲಪಿದಾಗ ಈ ನದಿ ಚಂದ್ರಗಿರಿಯಾಗಿ ಕರೆಯಲ್ಪಡುತ್ತದೆ. (ಈ ಲೇಖನದ ಲೇಖಕ ಹಿಂದೆ ಮೈಸೂರು ವಿ.ವಿ ಯಲ್ಲಿ ಓದುತ್ತಿರುವಾಗ ಚಂದ್ರಗಿರಿಯ ಬಗ್ಗೆ ರಚಿಸಿ ಅಭಿನಯಿಸಿದ ‘ಒಂದು ಬಿಂಬದ ಎರಡು ಮುಖ’ ಎಂಬ ರಂಗನಾಟಕ ರಾಜ್ಯ ಮಟ್ಟದಲ್ಲಿ ಮೊದಲ ಬಹುಮಾನಪಡೆದಿತ್ತು. ಜೊತೆಗೆ ಇದರ ಡಾಕ್ಯುಮೆಂಟರಿಯನ್ನೂ ಮಾಡಲಾಗಿತ್ತು) ಪಯಸ್ವಿನಿ ನದಿಯು ಈ ಪ್ರದೇಶದ ಜನರ ಕುಡಿಯುವ ಹಾಗೂ ಕೃಷಿ ಉದ್ದೇಗಳಿಗಾಗಿ ಬಳಸುವ ನೀರಿನ ಪ್ರಮುಖ ಮೂಲವಾಗಿದೆ.

ಚಂದ್ರಗಿರಿ ಕೋಟೆಯು ಕಾಸರಗೋಡು ನಗರದಿಂದ ದಕ್ಷಿಣಕ್ಕೆ ಮೂರು ಕಿಲೋ ಮೀಟರ್ ದೂರದಲ್ಲಿದೆ. ಚಂದ್ರಗಿರಿ ಕೋಟೆಯು ಬೇಕಲ ಕೋಟೆಗಿಂತ ವಿಸ್ತಾರದಲ್ಲಿ ಕಿರಿದಾಗಿದ್ದು, ಇದೊಂದು ನೋಡುಗರಿಗೆ ಆಕರ್ಷಣಿಯವೂ, ಭವ್ಯವಾಗಿಯೂ ಕಾಣುತ್ತದೆ. ಈ ಕೋಟೆಯನ್ನು ಬೇಕಲಕೋಟೆಗಿಂತ ಹೆಚ್ಚಿನ ಕಲ್ಲುಗಳನ್ನು ಉಪಯೋಗಿಸಿ ನಿರ್ಮಿಸಿಲಾಗಿದೆ. ಚಂದ್ರಗಿರಿ ಕೋಟೆಯಲ್ಲಿ ಎರಡು ಗುಹೆಗಳಿದ್ದು, ಮೂರು ಪ್ರವೇಶ ದ್ವಾರಗಳನ್ನು ಹೊಂದಿದೆ. ಅಲ್ಲದೇ, ಒಂದು ಕೆರೆ ಮತ್ತು ಬಾವಿಯನ್ನು ಕಾಣಬಹುದು. ಅತೀ ಎತ್ತರದಲ್ಲಿರುವ ಕಲ್ಲಿನ ಕೋಟೆಯಲ್ಲಿ ಉತ್ತರ ಭಾಗದಲ್ಲಿ ಕೋಟೆಯ ಗೋಡೆ ಮೇಲೆ ಅನೇಕ ದೊಡ್ಡ ರಂಧ್ರಗಳನ್ನು ಕಾಣಬಹುದು. ಇದು ಫಿರಂಗಿಗಳನ್ನು ಇಟ್ಟು ಸುತ್ತಲೂ ವೀಕ್ಷಿಸಲು ಕೋಟೆಯ ರಕ್ಷಣೆಗಾಗಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಚಂದ್ರಗಿರಿಯ ಹೊಳೆಯು ಸಮೀಪದಲ್ಲಿಯೇ ಹರಿದು ಹೋಗುತ್ತದೆ.

‘ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮಕ್ಕೆ ಮೆರುಗು’

ಜಿಲ್ಲೆಯ ಕೋಟೆಗಳ ವಿವರಗಳು ಕಂದಾಯ ದಾಖಲೆಗಳಲ್ಲಿರುವುದಲ್ಲದೇ ಬಂದಡ್ಕ, ಕಾಸರಗೋಡು ಕೋಟೆ, ಕುಡಂಗುಯಿ ಕೋಟೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಅದರ ಬಗ್ಗೆ ಸ್ಪಷ್ಟ ದಾಖಲೆ, ಕುರುಹುಗಳನ್ನು ಪತ್ತೆ ಹಚ್ಚಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಚಂದ್ರಗಿರಿ ಕೋಟೆಯನ್ನು ಪ್ರವಾಸದ್ಯೋಮ ತಾಣವನ್ನಾಗಿ ಮೇಲ್ದರ್ಜೇಗೇರಿಸುವ ಸಲುವಾಗಿ ಡಿಟಿಪಿಸಿಗೆ ಹಸ್ತಾಂತರಿಸಲಾಗಿತ್ತು. ಆದರೆ ನಂತರ ಯಾವುದೇ ಕೆಲಸಗಳು ನಡೆದಿಲ್ಲ. ಅತೀ ಎತ್ತರದ ಕೋಟೆಯಾದ ಇದನ್ನು ಅಭಿವೃದ್ಧಿಪಡಿಸಿದಲ್ಲಿ ಜಿಲ್ಲೆಯ ಪ್ರವಾಸದ್ಯೋಮಕ್ಕೆ ಇನ್ನೊಂದು ಮೆರಗು ನೀಡಬಲ್ಲದು.
ಹೇಮಚಂದ್ರನ್
ನಿವೃತ್ತ ಭೂವಿಜ್ಞಾನಿ

‘ಮಲೆಯಾಲದ ಕುಟುಕಿಗೆ ಬಲಿಯಾಗಿದೆ’

ವೈವಿದ್ಯಮಯ ಸಾಂಸ್ಕೃತಿಕ ಹಿನ್ನೆಲೆಯ, ಪ್ರಾಚೀನ ಇತಿಹಾಸವಿರುವ ಅಖಂಡ ಭಾರತದಲ್ಲಿ ನಮ್ಮ ಪೂರ್ವಿಕರ ವೈಶಿಷ್ಟ್ಯ ಬದುಕು, ಸಂಸ್ಕಾರ- ಸಂಸ್ಕೃತಿ, ಆಡಳಿತ, ಜ್ಞಾನ-ವಿಜ್ಞಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪಳೆಯುಳಿಕೆಗಳು, ಕೋಟೆ- ಕೊತ್ತಲಗಳು, ಶಾಸನಗಳು ಮಹತ್ವಪೂರ್ಣ ಸ್ಥಾನ ಪಡೆದಿವೆ. ಕೇರಳದಲ್ಲಿ ಕಾಸರಗೋಡಿನಲ್ಲಿರುವಷ್ಟು ಪ್ರಾಚೀನ ಕುರುಹುಗಳು ಬೇರೆಲ್ಲೂ ಇಲ್ಲ. ಭಾಷಾವಾರು ಪ್ರಾಂತ್ಯ ರಚನೆಯ ವೇಳೆ ಕೇರಳಕ್ಕೆ ಸೇರಿಹೋದ ಕನ್ನಡ ಭಾಷೆ, ಸಂಸ್ಕೃತಿಯ ತುಣುಕು ಮಲೆಯಾಳದ ಕುಟುಕಿಗೆ ಬಲಿಯಾಗಿದೆ. ಈ ಕಾರಣದಿಂದ ಚಂದ್ರಗಿರಿ ಕೋಟೆ ಸಹಿತ ಜಿಲ್ಲೆಯ ಇತರ ಕೋಟೆಗಳು ಅವಸಾನದ ಅಂಚಿನಲ್ಲಿದೆ. ಬೇಕಲಕೋಟೆ ಉದ್ಯಮ ರೂಪದಲ್ಲಿ ಪ್ರವಾಸೋದ್ಯಮ ಇಲಾಖೆಯ ಕೃಪೆಗೊಳಗಾಗಿದೆ.
ಪ್ರೋ.ಪಿ.ಎನ್ ಮೂಡಿತ್ತಾಯ
ಕಣ್ಣೂರು ಬ್ರಿನ್ನಿಯನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು.

Leave a Reply

Your email address will not be published. Required fields are marked *