Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಕಾಸರಗೋಡು ಕನ್ನಡಿಗರು ದ್ವಿತೀಯ ದರ್ಜೆ ಪ್ರಜೆಗಳಲ್ಲ: ಡಾ.ಎಲ್.ಹನುಮಂತಯ್ಯ

ಬದಿಯಡ್ಕ(ಕಾಸರಗೋಡು): ಸಂಸ್ಕೃತಿಯ ತಳಹದಿಯ ಬೇರುಗಳಾದ ಜಾನಪದವನ್ನು ಮುಂದಿನ ತಲೆಮಾರಿಗೆ ದಾಟಿಸಿ ಪುನರುಜ್ಜೀವನಗೊಳಿಸುವ ತುರ್ತು ನಮ್ಮ ಮುಂದಿದೆ. ನಗರ ಪ್ರದೇಶಗಳು ಹಾಗೂ ಕರ್ನಾಟಕದೊಳಗಿನ ಜಾನಪದ, ಸಂಸ್ಕೃತಿ, ಸಾಹಿತ್ಯ ಚಟುವಟಿಕೆಗಳಿಗಿಂತ ಗಡಿನಾಡಿನ ಹಾಗೂ ಹೊರನಾಡಿನ ಕನ್ನಡಿಗರ ಸೇವೆ ಸ್ತುತ್ಯರ್ಹವಾಗಿದೆ ಎಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕವು ನಾಡೋಜ ಡಾ.ಎಚ್.ಎಲ್.ನಾಗೇಗೌಡರ ಜನ್ಮ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಕರ್ನಾಟಕ ಸರಕಾರದ ಮಡಿಕೇರಿಯ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಬಾಸೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಸಹಕಾರದೊಂದಿಗೆ ಆಯೋಜಿಸಿರುವ ಜಾನಪದ ಸಂಚಾರ ಮತ್ತು ರಾಷ್ಟ್ರಕವಿ ಕುವೆಂಪು ಸಂಸ್ಮರಣಾ ಕಾರ್ಯಕ್ರಮಗಳನ್ನು ಡಿ.15ರಂದು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

janapada udgatane

ರಾಷ್ಟ್ರದ ಜೀವನಾಡಿಯಾದ ಹಳ್ಳಿ, ಗ್ರಾಮಗಳ ಜನರಲ್ಲಿ ಹಾಸು ಹೊಕ್ಕಾಗಿರುವ ಜಾನಪದೀಯ ಸಾಂಸ್ಕೃತಿಕ ಪರಂಪರೆಯಿಂದ ನಮ್ಮ ಸಂಸ್ಕೃತಿ ಶ್ರೀಮಂತವಾಗಿದೆ. ಯಾವುದೇ ಆಕರಗಳಾಗಲಿ, ಕಲಿಕಾ ಮಾಧ್ಯಮವಾಗಲಿ ಇಲ್ಲದೆ ಜನರೊಡನೆ ತಲೆಮಾರುಗಳಿಂದ ಹಂಚಲ್ಪಡುತ್ತಾ ಬಂದ ಜಾನಪದ ಕಲೆಗಳು ಆಧುನಿಕತೆಯ ಸುಂಟರಗಾಳಿಗೆ ಆರುವಂತೆ ಕಂಡರೂ ಅದಕ್ಕೆ ಅಳಿವಿಲ್ಲ ಎಂದವರು ತಿಳಿಸಿದರು.

ಗಡಿನಾಡು ಕಾಸರಗೋಡಿನ ಹಲವಾರು ಸವಾಲುಗಳ ನಡುವೆ ಕನ್ನಡತನವನ್ನು ಉಳಿಸಿ ಬೆಳೆಸಿದ ಇಲ್ಲಿನ ಕನ್ನಡ ಪ್ರೇಮಿ ಮನಸ್ಸುಗಳ ತೊಳಲಾಟವನ್ನು ಎರಡೂ ರಾಜ್ಯ ಸರಕಾರಗಳು ಸರಿಯಾಗಿ ಅರ್ಥೈಸುವಲ್ಲಿ ಸೋತಿದೆ. ಇನ್ನಾದರೂ ಗಡಿನಾಡು, ಹೊರನಾಡಿನ ಕನ್ನಡಿಗರಿಗೆ ಭಧ್ರತೆ, ಸಾಂಸ್ಕೃತಿಕ, ಸಾಹಿತ್ಯ ಸೇವೆಗಳಿಗೆ ಮೌಲ್ಯಯುತವಾದ ಮನ್ನಣೆ ನೀಡಲು ಮಾನವೀಯ ನೆಲೆಯಲ್ಲಿ ಪ್ರಯತ್ನಿಸಲಾಗುವುದೆಂದು ಹನುಮಂತಯ್ಯ ಭರವಸೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸುಚಿತ್ರ ಚಲನಚಿತ್ರ ಮತ್ತು ಸಂಸ್ಕೃತಿ ಪರಿಷತ್ತಿನ ಅಧ್ಯಕ್ಷರೂ, ಕರ್ನಾಟಕದ ಮಾಜಿ ಹೆಚ್ಚುವರಿ ಪೊಲಿಸ್ ಮಹಾನಿರ್ದೇಶಕರೂ ಆದ ಕೆ.ರವೀಂದ್ರನಾಥ ಠಾಗೂರ್ ಅವರು ರಾಷ್ಟ್ರಕವಿ ಕುಪೆಂಪು ಸಂಸ್ಮರಣಾ ಭಾಷಣ ಮಾಡಿದರು. ಮಾನವೀಯತೆ ಹಾಗೂ ನಗು ಜೀವನದ ಶ್ರದ್ದೆಯಾಗಿರಬೇಕು. ಆತ್ಮಾವಲೋಕನದೊಡನೆ ದೇಹ ಮತ್ತು ಮನಸ್ಸುಗಳನ್ನು ಹದದಲ್ಲಿರಿಸಿ ಅಭ್ಯಾಸದ ದೃಷ್ಟಿಕೋನದೊಡನೆ ಬದುಕನ್ನು ವಿಶಾಲಗೊಳಿಸಿದರೆ ಜೀವನ ಸಾರ್ಥಕವೆಂಬ ಕುವೆಂಪು ಸಂದೇಶ ಶತಮಾನ-ಶತಮಾನಗಳಿಗೂ ನಿತ್ಯಸತ್ಯವೆಂದು ಠಾಗೂರ್ ತಿಳಿಸಿದರು.

janapada kuvenpuge pushparchane

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಅರೆಬಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೇರಳ ಬ್ಯಾರಿ ಫೆಡರೇಶನ್ ಗೌರವಾಧ್ಯಕ್ಷ ಡಾ.ಮುನೀರ್ ಬಾವಾ ಹಾಜಿ, ಉದ್ಯಮಿ ಡಾ.ಶಾಫಿ ಹಾಜಿ, ಹೊರನಾಡ ಕನ್ನಡ ಸಾಹಿತ್ಯ ಪರಿಷತ್ತು ಮುಂಬೈ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಯಯ್ಯಾಡಿ, ಡಾ.ರವಿರಾಜ್ ಸುವರ್ಣ, ಸೋಶಿಯಲ್ ಎಚ್ಯೂವ್ ಮೆಂಟ್ ಮಂಗಳೂರಿನ ನಿಯಾಝ್ ಸಾಮನಗಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಂಕರ ಸಾರಡ್ಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲ್ಯಾನ್ ಕಾಸರಗೋಡು, ಭಾರತೀ ವಿದ್ಯಾಪೀಠದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಡಿನಾಡ ಘಟಕದ ಸದಸ್ಯ ಸಂಚಾಲಕ ಜಯಪ್ರಕಾಶ್ ಪಜಿಲ ಸ್ವಾಗತಿಸಿ, ಕಾರ್ಯದರ್ಶಿ ಕೇಳು ಮಾಸ್ಟರ್ ವಂದಿಸಿದರು. ಕೋಶಾಧಿಕಾರಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಜಾನಪದ ಪರಿಷತ್ತು ಪ್ರಕಟಿಸುವ ಕನ್ನಡ ಕೈರಳಿ ವಾರಪತ್ರಿಕೆಯ ಮೊದಲ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಡಾ.ಎಲ್. ಹನುಮಂತಯ್ಯ ಬಿಡುಗಡೆಗೊಳಿಸಿದರು.

janapada nanittilu prastavane

ಸಮಾರಂಭದ ಬಳಿಕ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಡಿಕೇರಿ ಮಕ್ಕಂದೂರು ಕೊಡವ ಸಮಾಜದ ಸದಸ್ಯರು ಬೊಳ್ಳಾಟ, ಕೋಲಾಟ, ಕತ್ತಿಯಾಟ, ಪರೇಕಳಿ, ಅರೆಬಾಸೆ ಜಾನಪದ ಅಕಾಡೆಮಿಯ ಮಹಿಳಾ ಸದಸ್ಯೆಯರು ಹುತ್ತರಿ ಕೋಲಾಟ, ಹುತ್ತರಿ ಹಾಡು ಮತ್ತು ಗಡಿನಾಡ ಜಾನಪದ ಪರಿಷತ್ತಿನ ತಂಡದವರು ತೌಳನ ಜಾನಪದವನ್ನು ಬಿಂಬಿಸುವ ಕಂಗೀಲು ಸಹಿತ ವಿವಿಧ ಜಾನಪದ ಪ್ರಕಾರಗಳನ್ನು ಪ್ರದರ್ಶಿಸಿದರು.

ಹೊರನಾಡ ಕನ್ನಡಿಗ ಪ್ರಮಾಣ ಪತ್ರ ಬೇಕೆಂಬ ಕಾನೂನು ರದ್ದುಪಡಿಸಲು ಯತ್ನ

ಡಾ.ಎಲ್ ಹನುಮಂತಯ್ಯ ಮಾತನಾಡುತ್ತ ಗಡಿನಾಡು ಕಾಸರಗೋಡಿನಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವರು ಬಳಿಕ ಕರ್ನಾಟಕದ ಶಿಕ್ಷಣ, ಉದ್ಯೋಗಗಳಿಗೆ ಗಡಿನಾಡ ಕನ್ನಡಿಗನೆಂಬ ಸರ್ಟಿಫಿಕೇಟ್ ಮಾಡಿಸಬೇಕಾದ ಅನಿವಾರ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಹತ್ತನೇ ತರಗತಿಯವರೆಗೆ ಕನ್ನಡದಲ್ಲೇ ಕಲಿತವರಿಗೆ ಇಲ್ಲಿ ದುರ್ಗತಿಯ ಬಗ್ಗೆ ಶೀಘ್ರ ಕರ್ನಾಟಕದ ಮುಖ್ಯಮಂತ್ರಿಗಳೊಡನೆ ಸಮಾಲೋಚಿಸಿ ಈ ಕಾನೂನನ್ನು ರದ್ದುಗೊಳಿಸಲು ಸೂಚಿಸಲಾಗುವುದೆಂದು ತಿಳಿಸಿದರು. ಗಡಿನಾಡಿನ ಕನ್ನಡಿಗರು ಯಾವತ್ತೂ ದ್ವಿತೀಯ ದರ್ಜೆಯ ಕನ್ನಡಿಗರಲ್ಲವೆಂದು ಅವರು ತಿಳಿಸಿದರು.

ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಜಾನಪದ, ಸಂಸ್ಕೃತಿ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಕರ್ನಾಟಕ ಮತ್ತು ಕೇರಳ ಸರಕಾರಗಳೆರಡೂ ಅನುದಾನ ಕೊಡುವ ಮೂಲಕ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಾಡುವ ಕೈಂಕರ್ಯಕ್ಕೆ ಪ್ರೋತ್ಸಾಹಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಈರ್ವರೂ ಮುಖ್ಯಮಂತ್ರಿಗಳಿಗೆ ಸಂದೇಶ ನೀಡಲಾಗುವುದೆಂದು ಅವರು ಆಶ್ವಾಸನೆ ನೀಡಿದರು.

janapada kodava

 

Leave a Reply

Your email address will not be published. Required fields are marked *