Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ ಬಳಕೆದಾರರ ವೇದಿಕೆ ಸಂಚಾಲಕರಿಂದ 15 ದಿನಗಳೊಳಗೆ ದಂಡ ವಸೂಲಿ ಮಾಡಲು ಲೋಕಾಯುಕ್ತ ಆದೇಶ !

ವಿಶೇಷ ವರದಿ: ಶ್ರೀರಾಮ ದಿವಾಣ

ಉಡುಪಿ: ಮಾಹಿತಿ ಹಕ್ಕು ಕಾಯ್ದೆ-2005ರಂತೆ ಅರ್ಜಿದಾರರಿಗೆ ಮಾಹಿತಿ ಮತ್ತು ದಾಖಲಾತಿಗಳನ್ನು ನೀಡದ ಕಾರಣ, ಕರ್ನಾಟಕ ಮಾಹಿತಿ ಆಯೋಗವು ವಿಧಿಸಿದ ದಂಡವನ್ನೂ ಪಾವತಿಸದೆ ಕಾಯ್ದೆ ಮತ್ತು ಆಯೋಗವನ್ನು ಕಡೆಗಣಿಸಿದ ಉಡುಪಿ ಬಳಕೆದಾರರ ವೇದಿಕೆ ಮತ್ತು ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಕೆ.ದಾಮೋದರ ಐತಾಳ್ ಅವರಿಂದ ಕಂದಾಯ ವಸೂಲಿ ಮಾಡುವಂತೆ ದಂಡದ ಹಣವನ್ನು ಮುಂದಿನ 15 ದಿನಗಳ ಒಳಗೆ ವಸೂಲಿ ಮಾಡಿ ಪಾಲನಾ ವರದಿ ಸಲ್ಲಿಸುವಂತೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ ರಾವ್ ಅವರು ಉಡುಪಿ ತಹಶಿಲ್ದಾರರಿಗೆ ಲಿಖಿತ ಆದೇಶ ಹೊರಡಿಸಿದ್ದು, ಉಡುಪಿ ತಾಲೂಕು ಆಡಳಿತ ದಾಮೋದರ ಐತಾಳರಿಂದ ಕಂದಾಯ ವಸೂಲಿ ಮಾಡುವಂತೆ ದಂಡ ವಸೂಲಿ ಮಾಡುವ ಪ್ರಕ್ರಿಯೆಗೆ ಅಧಿಕೃತ ಚಾಲನೆ ಆರಂಭಿಸಿದೆ.

ಉಡುಪಿಯಲ್ಲಿ ನವೆಂಬರ 22 ರಂದು ನಡೆದ ಸಾರ್ವಜನಿಕ ದೂರುಗಳ ವಿಚಾರಣೆಯ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಡಾ.ಭಾಸ್ಕರ ರಾವ್ ಅವರು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಅರ್ಜಿದಾರರಾದ ಕೆ.ಎಸ್.ಉಪಾಧ್ಯ ಅವರು ನೀಡಿದ ದೂರನ್ನು ವಿಚಾರಣೆ ನಡೆಸಿದ್ದರು.

ಬಳಿಕ ಪ್ರಕರಣದ ಕಡತವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ಡಿ.5ರಂದು ಈ ಸಂಬಂಧ ಲಿಖಿತ ಆದೇಶವೊಂದನ್ನು ಹೊರಡಿಸಿ,  ಈ ಆದೇಶ ತಲುಪಿದ 15 ದಿನಗಳ ಒಳಗಡೆ; ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರೂ, ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಕಡಿಯಾಳಿ ದಾಮೋದರ ಐತಾಳ್ ಅವರಿಂದ ಕಂದಾಯ ವಸೂಲಿ ಮಾಡುವಂತೆ ದಂಡವನ್ನು ವಸೂಲಿ ಮಾಡಿ, ಪಾಲನಾ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.

y.bhaskar rao karnataka lokayukta

* ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ ರಾವ್

ಲೋಕಾಯುಕ್ತರ ಆದೇಶ ಈಗಾಗಲೇ ಶಿವಳ್ಳಿ (ಉಡುಪಿ) ಕಂದಾಯ ನಿರೀಕ್ಷಕರಾದ ಶಿವರಾಮ್ ಅವರ ಕೈಸೇರಿದ್ದು, ಶಿವರಾಮ್ ಅವರು ಕಂದಾಯ ವಸೂಲಿಯಂತೆ ದಂಡವನ್ನು ವಸೂಲಿ ಮಾಡುವ ಪ್ರಕ್ರಿಯೆಯ ಭಾಗವಾಗಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯವರಿಗೆ ಪತ್ರ ಬರೆದು ಪೊಲೀಸ್ ರಕ್ಷಣೆಯನ್ನು ಕೇಳಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಕಂದಾಯ ನಿರೀಕ್ಷಕರಾದ ಶಿವರಾಮ್ ಹಾಗೂ ಸಿಬ್ಬಂದಿಗಳು ಪೊಲೀಸ್ ರಕ್ಷಣೆಯಲ್ಲಿ ಕೆ.ದಾಮೋದರ ಐತಾಳ್ ಅವರಿಗೆ ಸೇರಿದ ಯಾವುದೇ ಸೊತ್ತುಗಳನ್ನು ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ.

ಕೆ.ದಾಮೋದರ ಐತಾಳರಿಗೆ ಶಿವಳ್ಳಿ ಗ್ರಾಮದ ಸರ್ವೆ ನಂಬ್ರ 128/18ರಲ್ಲಿ 0.22 ಎಕ್ರೆ ಜಮೀನು ಇದ್ದು, ಬಾಕಿ ಹಣ 50 ಸಾವಿರ ರು.ಗಳನ್ನು ಪಾವತಿ ಮಾಡದೆ ಇದ್ದಲ್ಲಿ ಸದ್ರಿ ಮೊಬಲಗಿನ ಬಾಬ್ತು ಜಮೀನನ್ನು ಏಲಂ ಮಾಡುವ ಪ್ರಕ್ರಿಯೆಯನ್ನು ಕಾನೂನಿನಂತೆ ಕ್ರಮಕೈಗೊಂಡು ದಂಡ ವಸೂಲಾತಿಗೆ ಕ್ರಮ ಜರುಗಿಸಲಾಗುವುದೆಂದು ಉಡುಪಿ ತಹಶೀಲ್ದಾರರು 2013ರ ಡಿಸೆಂಬರ್ 13ರಂದು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲ, ಈ ಆದೇಶವನ್ನು ಜ್ಯಾರಿಗೊಳಿಸವಂತೆ ಕಂದಾಯ ನಿರೀಕ್ಷಕರಿಗೂ ನಿರ್ದೇಶನ ನೀಡಿದ್ದರು. ಡಿಸೆಂಬರ್ 13 ರಂದು ವರದಿ ಸಲ್ಲಿಸಿದ್ದಾರೆ. ತಹಶೀಲ್ದಾರರ ವರದಿಯನುಸಾರ, ಜಿಲ್ಲಾಧಿಕಾರಿಗಳು 2013ರ ಡಿ.16 ರಂದು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪೀಠಾಧಿಕಾರಿಯವರಿಗೆ ಈ ಬಗ್ಗೆ ವರದಿ ನೀಡಿದ್ದರು.

ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರ ತ್ರಿಸದಸ್ಯ ಪೀಠವು ಕೆ.ಎಸ್.ಉಪಾಧ್ಯ ಅವರ ಅಪೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಮಾರ್ಚ್ 12 ರಂದು ದಾಮೋದರ ಐತಾಳರಿಗೆ 50 ಸಾವಿರ ರು. ದಂಡ ವಿಧಿಸಿ ಆದೇಶ ನೀಡಿತ್ತು. ಪೀಠದ ಆದೇಶದ ಮೇಲೆ ಜಿಲ್ಲಾಧಿಕಾರಿಗಳು ಅಕ್ಟೋಬರ್ 23 ರಂದು 1964ರ ಭೂಕಂದಾಯ ಕಾಯ್ದೆಯ ಕಲಂ 160 ಮತ್ತು 190 ರನ್ವಯ ಕೆ.ದಾಮೋದರ ಐತಾಳ್ ಅವರಿಂದ ದಂಡ ವಸೂಲಿ ಮಾಡುವಂತೆ ತಹಶಿಲ್ದಾರ್ ಅವರಿಗೆ ಆದೇಶ ನೀಡಿದ್ದರು.

ಪ್ರಕರಣದ ಹಿನ್ನೆಲೆ

ಕಡಿಯಾಳಿಯ ಪ್ರೊ. ಕೆ.ಎಸ್.ಉಪಾಧ್ಯಾಯ ಹಾಗೂ ಲಕ್ಷ್ಮೀಂದ್ರನಗರದ ಕೆ.ಶ್ರೀಶ ಉಪಾಧ್ಯ ಇವರು 2010 ರಲ್ಲಿ ಕೆಲವೊಂದು ಅಗತ್ಯ ಮಾಹಿತಿಗಳನ್ನು ಕೋರಿ ಎರಡು ಪ್ರತ್ಯೇಕ ಅರ್ಜಿಗಳನ್ನು ಮಾಹಿತಿ ಹಕ್ಕು ಕಾಯಿದೆ-2005ರ ಪ್ರಕಾರ ಉಡುಪಿಯ ಬಳಕೆದಾರರ ವೇದಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಸಂಚಾಲಕ ದಾಮೋದರ ಐತಾಳ್ ಅವರಿಗೆ ಸಲ್ಲಿಸಿದ್ದರು.

ಕೆ.ಶ್ರೀಶ ಉಪಾಧ್ಯ

* ಕೆ.ಎಸ್.ಉಪಾಧ್ಯ, ಮಾಹಿತಿ ಹಕ್ಕು ಹೋರಾಟಗಾರರು.

ಬಳಕೆದಾರರ ವೇದಿಕೆಗೆ ವಿವಿಧ ಇಲಾಖೆಗಳಿಂದ ಮಂಜೂರಾದ ಹಣದ ವಿವರ, ಇವುಗಳನ್ನು ವಿನಿಯೋಗ ಮಾಡಿದ ಬಗ್ಗೆ ವಿವರಗಳು, ಇವುಗಳಿಗೆ ಸಂಬಂಧಿಸಿದ ದಾಖಲಾತಿಗಳು, ಹತ್ತು ಸಾವಿರ ರು. ಗೂ ಅಧಿಕ ಮೊತ್ತವನ್ನು ಕರ್ಚು ಮಾಡಿರುವುದಕ್ಕೆ ವೋಚರ್ ಪ್ರತಿ ಇತ್ಯಾದಿಗಳನ್ನು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ದಾಮೋದರ ಐತಾಳರು ಅರ್ಜಿದಾರರಿಗೆ ಮಾಹಿತಿಗಳನ್ನು ನೀಡದೆ ಮಾಹಿತಿ ಹಕ್ಕು ಕಾಯ್ದೆಯನ್ನು ಸಾರಾ ಸಗಟು ಉಲ್ಲಂಘಿಸಿದ್ದರು. ಬಳಿಕ ಸಂಬಂಧಿಸಿದ ಇಲಾಖೆಗೆ ಮೇಲ್ಮನವಿ
ಸಲ್ಲಿಸಿದ್ದರು. ಮೇಲ್ಮನವಿ ಪ್ರಾಧಿಕಾರವೂ ಆಗಿರುವ ಇಲಾಖಾಧಿಕಾರಿಗಳು, ಅರ್ಜಿದಾರರಿಗೆ ಅವರು ಕೋರಿರುವ ಮಾಹಿತಿ ಮತ್ತು ಕಡತಗಳನ್ನು ನೀಡುವಂತೆ ದಾಮೋದರ ಐತಾಳರಿಗೆ ಆದೇಶಿಸಿದ್ದರು. ಬಳಕೆದಾರರ ವೇದಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅರ್ಜಿದಾರರಿಗೆ ಮಾಹಿತಿ ಮತ್ತು ಕಡತಗಳನ್ನು ನೀಡದೆ ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ್ದೂ ಅಲ್ಲದೆ, ಮೇಲ್ಮನವಿ ಪ್ರಾಧಿಕಾರದ ಆದೇಶವನ್ನೂ ನಿರ್ಲಕ್ಷಿಸಿದ್ದರು.

damodar aithal-1

* ಕೆ.ದಾಮೋದರ ಐತಾಳ, ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘಿಸಿದವರು.

Leave a Reply

Your email address will not be published. Required fields are marked *