Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಂಗಳೂರು: ಎಸ್ ಪಿ ಹಾಗೂ ಸಹಾಯಕ ಆಡಳಿತಾಧಿಕಾರಿಗೆ ಆಯೋಗದ ನೋಟೀಸ್ !

ಉಡುಪಿ: ಮಾಹಿತಿ ಹಕ್ಕು ಕಾಯ್ದೆ- 2005ರಂತೆ ಕೋರಲಾದ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಅರ್ಜಿದಾರರಿಗೆ ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ ದ.ಕ. ಜಿಲ್ಲಾ ಪೊಲೀಸ್ ಅಧಿಕ್ಷಕರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರವೂ ಆಗಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರ್ನಾಟಕ ಮಾಹಿತಿ ಆಯೋಗವು ನೋಟೀಸ್ ಜ್ಯಾರಿಗೊಳಿಸಿದೆ.

2015ರ ಜನವರಿ 7ರಂದು ಮಾಹಿತಿ ಆಯೋಗದ ಮುಂದೆ ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟೀಸ್ ಜ್ಯಾರಿಗೊಳಿಸಿದ ಆಯೋಗದ ಅಧೀನ ಕಾರ್ಯದರ್ಶಿಗಳು ಸೂಚಿಸಿದ್ದಾರೆ.

1986ರ ಜನವರಿ ಒಂದರಿಂದ 2013ರ ಅಕ್ಟೋಬರ್ 17ರ ವರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ ನಡೆದ ಕೊಲೆ, ದರೋಡೆ, ಅಸ್ವಾಭಾವಿಕ ಮರಣ, ವ್ಯಕ್ತಿ/ಹುಡುಗಿ ಕಾಣೆ ಪ್ರಕರಣಗಳ ಸಹಿತ ವಿವಿಧ ಪ್ರಕರಣಗಳಡಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿರ್ಯಾದಿ, ಸಂತ್ರಸ್ತರು ಹಾಗೂ ಆರೋಪಿಗಳ ಹೆಸರು, ವಿಳಾಸ ಮತ್ತು ಪ್ರಕರಣದ ತನಿಖಾ ಪ್ರಗತಿಯ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಬೇಕೆಂದು ಕೋರಿ ಉಡುಪಿಯ ಶ್ರೀರಾಮ ದಿವಾಣ ಅವರು 2013ರ ಅಕ್ಟೋಬರ್ 18ರಂದು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳಾದ ಕೆ.ಸಂಜೀವ ಗೌಡ ಅವರು ಅಕ್ಟೋಬರ್ 25ರಂದು ನಿಯಮ 6(3)ರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾದ ಸಹಾಯಕ ಪೊಲೀಸ್ ಉಪ ನಿರೀಕ್ಷಕ (ಎ.ಎಸ್.ಐ) ರಿಗೆ ವರ್ಗಾಯಿಸಿ, ಅರ್ಜಿದಾರರು ಕೋರಿದ ಮಾಹಿತಿಗಳನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದರು.

ಸಂಬಂಧಿಸಿದ ಅಧಿಕಾರಿಗಳು ಕಾಯ್ದೆಯಂತೆ ನಿಗದಿತ ಅವಧಿಯಲ್ಲಿ ಅರ್ಜಿದಾರರಿಗೆ ಕೋರಲಾದ ಮಾಹಿತಿಗಳನ್ನು ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರಾದ ಶ್ರೀರಾಮ ದಿವಾಣ ಅವರು, ಡಿಸೆಂಬರ್ 6ರಂದು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಒಂದನೇ ಅಪೀಲ್ ಸಲ್ಲಿಸಿದ್ದರು. ಈ ಅರ್ಜಿಯನ್ನು ಜಿಲ್ಲಾ ಪೊಲೀಸ್ ಅಧಿಕ್ಷಕರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಸಹಾಯಕ ಆಡಳಿತಾಧಿಕಾರಿಯಾಗಿರುವ ಕೆ.ಸಂಜೀವ ಗೌಡ ಅವರು, ಡಿಸೆಂಬರ್ 26ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಮೇಲ್ಮನವಿ ಪ್ರಾಧಿಕಾರಿಯೂ ಆಗಿರುವ ಪೊಲೀಸ್ ಉಪ ನಿರೀಕ್ಷಕ (ಪಿ.ಎಸ್.ಐ)ರಿಗೆ ವರ್ಗಾಯಿಸಿ, ಅರ್ಜಿದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡುವಂತೆ ನಿರ್ದೇಶಿಸಿದ್ದರು.

ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸದೆ ಸಂಪೂರ್ಣವಾಗಿ ನಿರ್ಲಕ್ಷಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಯಾರನ್ನೋ ರಕ್ಷಿಸುವ ಸಲುವಾಗಿ ಉದ್ಧೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿಯನ್ನು ನೀಡದೆ ಕಾಯ್ದೆಯನ್ನು ಸಾರಾ ಸಗಟು ಉಲ್ಲಂಘನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಅರ್ಜಿದಾರರಾದ ಶ್ರೀರಾಮ ದಿವಾಣ ಅವರು, ಕಾಯ್ದೆಯಂತೆ 2014ರ ಫೆಬ್ರವರಿ 3ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ 2ನೇ ಅಪೀಲ್ ಸಲ್ಲಿಸಿದ್ದರು.

 

ಅರ್ಜಿದಾರರು ಎರಡನೇ ಅಪೀಲ್ ಸಲ್ಲಿಸಿದ 9 ತಿಂಗಳ ಸುಧೀರ್ಘ ಅವಧಿಯ ಬಳಿಕ 2014ರ ನವೆಂಬರ್ 21ರಂದು ಮಾಹಿತಿ ಆಯೋಗದ ಆಯುಕ್ತರು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಆಯೋಗದ ಅಧೀನ ಕಾರ್ಯದರ್ಶಿಗಳು ಪ್ರತಿವಾದಿಗಳಿಗೆ ನೋಟೀಸ್ ಜ್ಯಾರಿಗೊಳಿಸಿದ್ದಾರೆ.

Leave a Reply

Your email address will not be published. Required fields are marked *