Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮೂಲಭೂತ ಸೌಕರ್ಯ ವಂಚಿತ ಕೊರಗ ಕಾಲನಿ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ !

ಬದಿಯಡ್ಕ(ಕಾಸರಗೋಡು): ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡತ್ತಡ್ಕ ಪರಿಶಿಷ್ಟ ವರ್ಗ ಕಾಲನಿ ಮೂಲಭೂತ ಸೌಕರ್ಯ ವಂಚಿತವಾಗಿ ತೊಳಲಾಡುತ್ತಿರುವುದು ಅಧಿಕಾರಿ ವರ್ಗದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಮಾಡತ್ತಡ್ಕ ಪರಿಶಿಷ್ಟ ವರ್ಗ ಕಾಲನಿಯಲ್ಲಿ ಒಂದೊಮ್ಮೆ 25ರಷ್ಟು ಕೊರಗ ಕುಟುಂಬಗಳಿದ್ದವು. ಇದೀಗ ಕುಟುಂಬಗಳ ಸಂಖ್ಯೆ ಕೇವಲ 8 ಕ್ಕಿಳಿದಿದೆ. ಆಳುವವರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲವು ಕುಟುಂಬಗಳು ಸ್ಥಳಾಂತರಗೊಂಡಿದೆ. ಈ ಪೈಕಿ ಕೆಲವು ಕುಟುಂಬಗಳ ಆಸ್ಥಿಗಳನ್ನು ಸ್ಥಾಪಿತ ಹಿತಾಸಕ್ತಿಗಳು ಸಹಾಯದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅವರಿಗೆ ಅರಿವಾಗದಂತೆ ಮಾರಾಟಗೈದು ಕಡು ಬಡ ಕುಟುಂಬಗಳನ್ನು ದಿಕ್ಕು-ದೆಸೆ ಇಲ್ಲದಂತೆ ಮಾಡಿದೆ.

ಪ್ರಸ್ತುತ ಇರುವ 8 ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು, ಶೌಚಾಲಯ ಮತ್ತು ವಸತಿಗಳಿಗೆ ವ್ಯವಸ್ಥೆ ಕಲ್ಪಿಸುವ ದೆಸೆಯಲ್ಲಿ ಭಾರೀ ಮೌಲ್ಯದ ಯೋಜನೆಯಿರಿಸಿ ಬಳಿಕ ಅರ್ಧದಲ್ಲಿ ಕೈಬಿಟ್ಟು ಲಕ್ಷಾಂತರ ರು. ಗಳನ್ನು ಪೋಲು ಮಾಡಿರುವುದು ಬೆಳಕಿಗೆ ಬಂದಿದೆ.

koraga kalani-2

2009-10ರ ಆರ್ಥಿಕ ವರ್ಷದಲ್ಲಿ ಕೊರಗ ಕಾಲನಿಗೆ ಕುಡಿಯುವ ನೀರು ವ್ಯವಸ್ಥೆಗೆ ಬೃಹತ್ ಟ್ಯಾಂಕ್ ನ್ನು ನಿರ್ಮಿಸಿ, ಕೊಳವೆ ಬಾವಿ ಸಹಿತ ವಿದ್ಯುತ್ ಸಂಪರ್ಕ ನೀಡಿ ನೀರು ಸರಬರಾಜು ಮಾಡಿದ್ದರೂ, ಇದೀಗ ಈ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡು, ನೀರು ಪೂರೈಕೆ ಮೊಟಕುಗೊಂಡು ಕಾಲನಿ ನಿವಾಸಿಗಳು ನೀರಿಗಾಗಿ ಹಾತೊರೆಯುವಂತಾಗಿದೆ.

ಕಾಲನಿಯಲ್ಲಿರುವ ಏಕೈಕ ಬಾವಿಯೇ ಇದೀಗ 8 ಕುಟುಂಬಗಳಿಗೆ ಜೀವಜಲದ ಮೂಲವಾಗಿದೆ. ಡಿಸೆಂಬರ್ ಕಳೆಯುತ್ತಿರುವಂತೆ ಬತ್ತುವ ಈ ಬಾವಿಯಿಂದಾಗಿ, ನೀರರಸಿಕೊಂಡು ಬೇರೆಡೆಗೆ ತೆರಳುವ ಶೋಚನೀಯ ಪರಿಸ್ಥಿತಿ ಕಾಲನಿ ನಿವಾಸಿಗಳದು.

ಸರಕಾರವು ಬಡತನ ನಿರ್ಮೂಲನೆ, ಒಂದು ಹೊತ್ತಿನ ಆಹಾರಕ್ಕಾಗಿ ಉದ್ಯೋಗ ಖಾತರೀ ಯೋಜನೆಯ ಮೂಲಕ ಪರಿಶಿಷ್ಟ ಜಾತಿ-ವರ್ಗಗಳಿಗೆ ಆದ್ಯತೆ ನೀಡಿ ಮಣ್ಣು-ಜಲ ಸಂರಕ್ಷಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವಾಗ, ಕಾಲನಿಯ ಬಡ ಕುಟುಂಬಗಳು ಈ ಯಾವ ಯೋಜನೆಯ ವ್ಯಾಪ್ತಿಗೂ ಒಳಪಡದೆ ಕಾಡು-ಬಲ್ಲೆಗಳು ಆವರಿಸಿದ ತಮ್ಮ ಹರಕು-ಮುರಕು ಗುಡಿಸಲಲ್ಲಿ ಭವಿಷ್ಯದ ಚಿಂತೆಗಳೊಡನೆ ಬಾನೆತ್ತರಕೆ ಕಣ್ಣಿಟ್ಟು ನಿಟ್ಟಿಸುತ್ತಿರುವುದು ಯಾವ ಅಧಿಕಾರಿಗಳ ಕಣ್ಣು ತೆರೆಸದಿರುವುದು ಆಶ್ಚರ್ಯ ಮೂಡಿಸಿದೆ.

koraga kalani-1

ಕಾಲನಿ ವ್ಯಾಪ್ತಿಯೊಳಗೆ 40 ಲಕ್ಷದ 250 ಸಾವಿರ ರು.ಗಳ ಮಣ್ಣು ಸಂರಕ್ಷಣಾ ಯೋಜನೆ 2013-14 ಹಾಗೂ 2014-15ರಲ್ಲಿ ಜ್ಯಾರಿಗೊಳಿಸಲಾಗಿದೆ ಎಂಬ ಫಲಕವಿದ್ದು, ಇದು ವ್ಯವಸ್ಥೆಯನ್ನು ಅಣಕಿಸುತ್ತಿದೆ. ಈ ಮಧ್ಯೆ, ಕುಡಿಯುವ ನೀರು ಯೋಜನೆಗೆ ಅಳವಡಿಸಿದ ಮೋಟಾರ್ ಶೆಡ್ನೊಳಗೆ ಅನಧಿಕೃತವಾಗಿ ಪೇರಿಸಿಟ್ಟ ಡಾಂಬರು ಡಬ್ಬಗಳು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಾಚೀನವಾದ ಭಾರತದ ಮೂಲಪರಂಪರೆಯ ಕಳಶಪ್ರಾಯರಾದ, ಜಾನಪದೀಯವಾಗಿ ವಿಶಿಷ್ಟ ಜೀವನ, ಆಚಾರ ವಿಚಾರಗಳ ಕೊರಗ ಸಮುದಾಯದ ಸಮಗ್ರ ಅಭಿವೃದ್ದಿಗೆ ಸರಕಾರಗಳು ಜಿದ್ದಿಗೆ ಬಿದ್ದವರಂತೆ ಯೋಜನೆಯ ಮೇಲೆ ಯೋಜನೆ ತಯಾರಿಸುತ್ತಿರುವ ನಡುವೆ ಈ ಕಾಲನಿ ಅಭಿವೃದ್ದಿಗೆ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳುವುದಿಲ್ಲವೆಂಬ ಆರೋಪಗಳು ಕೇಳಿಬರುತ್ತಿದೆ.

Leave a Reply

Your email address will not be published. Required fields are marked *