Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಸ್ತೆ ಸುರಕ್ಷತಾ ಜಾಗೃತಿಗೆ ಮಾದರಿಯಾದ ಶಾಲಾ ಮಕ್ಕಳು !

ಬದಿಯಡ್ಕ(ಕಾಸರಗೋಡು): ಸರಕಾರಕ್ಕೆ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ಗೋಗರೆದು, ಅದು ಸಾಕಾರಗೊಂಡ ಬಳಿಕ ಅದನ್ನು ಪಾಲಿಸುವಲ್ಲಿ ಎಡವುವವರೇ ಇಂದು ಹೆಚ್ಚು. ಸುರಕ್ಷ ಪಾಲನೆಗಾಗಿ ಸರಕಾರ ಅನೇಕ ರೀತಿಯ ಯೋಜನೆಗಳನ್ನು, ಕೆಲಸಗಳನ್ನು ಮಾಡುತ್ತಿದೆ. ಅದು ಶಾಲಾ ಮಟ್ಟದಿಂದಲೇ ಆರಂಭವಾಗುವುದು. ಅಂತಹ ಶಿಸ್ತಿನ ಮಾದರಿಯಾಗಿ ಇಂದು ರಸ್ತೆ ಬದಿಯಲ್ಲಿರುವ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಕಾರ್ಯಕರ್ತರಾಗಿ ತಮ್ಮ ಅಳಿಲ ಸೇವೆಯನ್ನು ಮಾಡುತ್ತಿದ್ದಾರೆ. ಈ ಮೂಲಕ ಎಳೆ ಪ್ರಾಯದಲ್ಲಿಯೇ ಸೇವಾ ಮನೋಭಾವನೆಯನ್ನು ಮೂಡಿಸುವ ಕೆಲಸದಲ್ಲಿ ಮಕ್ಕಳನ್ನು ಶಾಲಾ ಶಿಕ್ಷಕರೂ ತೊಡಗಿಸಿಕೊಂಡಿದ್ದಾರೆ. ಅಜಾಗರೂಕತೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಅಪಘಾತಕ್ಕೆ ಮುಖ್ಯ ಕಾರಣವಾಗುತ್ತಿದ್ದು, ಇದರ ಕುರಿತು ಜಾಗೃತಿಯನ್ನುಂಟು ಮಾಡಲು ದೇಶದಲ್ಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಆದರೆ ಇದರ ಪರಿಣಾಮ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮಾತ್ರವಲ್ಲದೆ ಪ್ರತಿ ಗ್ರಾ.ಪಂ.ಗಳಲ್ಲಿಯೂ ಆಯಾಯ ಶಾಲೆಗಳನ್ನು ಕೇಂದ್ರಿಕರಿಸಿ ಪ್ರತಿ ಬಾರಿಯೂ ರೋಡ್ ಸೇಪ್ಟಿ ಕ್ಲಬ್ ಗಳನ್ನು ರೂಪೀಕರಿಸಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ ಭವಿಷ್ಯಕ್ಕೆ ಸಾಮಾಜಿಕ ಜಾಗೃತಿ ಮೂಡಿಸಲು ಯತ್ನಿಸಲಾಗುತ್ತದೆ. ಆದರೆ ಇದೆಲ್ಲವೂ ಕೇವಲ ತೋರಿಕೆಯಾಗಿ ಮಾತ್ರ ಪರಿಣಾಮಿಸಿರುವುದು ದುರಂತ. ಇದು ಅಲ್ಲಲ್ಲಿ ಸಂಭವಿಸುತ್ತಿರುವ ಅಪಘಾತ ಹಾಗೂ ಆನಾಹುತಗಳಿಂದ ಸ್ಪಷ್ಟಯಾಗಿ ತಿಳಿದು ಬರುತ್ತಿದೆ. ಆದರೆ ಇದಕ್ಕೊಂದು ಅಪವಾದ ಎಂಬಂತೆ ಬೇಳದ ಸಂತ ಬಾರ್ತಲೋಮ ಎಯುಪಿ ಶಾಲೆಯಲ್ಲಿ ರೂಪೀಕರಿಸಲಾದ ಸುಮಾರು 8 ಮಂದಿಯ ತಂಡವನ್ನೊಳಗೊಂಡ ರಸ್ತೆ ಸುರಕ್ಷತಾ ಕ್ಲಬ್ ಯಥಾವತ್ ಚಟುವಟಿಕೆಗಳನ್ನು ಪ್ರತಿದಿನ ಶಿಸ್ತಿನಿಂದ ಯಾವುದೇ ಕುಂದು ಬಾರದಂತೆ ಕಳೆದ ಮೂರು ವರ್ಷದಿಂದ ನಿರ್ವಹಿಸಿಕೊಂಡು ಮಾದರಿಯೆನಿಸಿದೆ.

ಕುಂಬಳೆ- ಸೀತಾಂಗೋಳಿ- ಬದಿಯಡ್ಕ ರಸ್ತೆ ಮಧ್ಯೆ ಸಿಗುವ ಬೇಳ ಸಂತ ಬಾರ್ತಲೋಮಿಯೋ ಶಾಲೆ ಪರಿಸರದಲ್ಲಿ ಈ ಹಿಂದೆ ಆಗಾಗ ಅಪಘಾತ ಸಂಭವಿಸುತ್ತಿತು. ರಸ್ತೆ ಅಸುರಕ್ಷತೆಯಾಗಿದ್ದು, ಕೆಲವು ವರ್ಷಗಳ ಹಿಂದೆ ಇಬ್ಬರು ವಿದ್ಯಾರ್ಥಿಗಳು ಅಪಘಾತದಿಂದ ಆಸ್ಪತ್ರೆ ಸೇರಿದ್ದರು. ಈ ಬಗ್ಗೆ ಪರಿಹಾರ ಕಾಣಲು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟು ಮನವಿ ಸಲ್ಲಿಸಿದರೂ ಅದೊಂದೂ ಪ್ರಯೋಜನವಾಗಿರಲಿಲ್ಲ. ಇಲ್ಲಿನ ಪೋಲಿಸ್ ಅಧಿಕಾರಿಗಳಾಗಲಿ, ಸಾರಿಗೆ ಇಲಾಖೆಯವರಾಗಲಿ ಇತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ.

ಅದೇ ಸಂದರ್ಭದಲ್ಲಿ ಕೇರಳ ಸರಕಾರವು ರಸ್ತೆ ಸುರಕ್ಷಾ ಕ್ರಮವಾಗಿ ಪ್ರತಿ ಶಾಲೆಯಿಂದ ಒಬ್ಬರು ಶಿಕ್ಷಕರನ್ನು ತರಬೇತಿಗಾಗಿ ಆಯ್ಕೆ ಮಾಡಿತ್ತು. ತರಬೇತಿ ಪಡೆದ ಶಿಕ್ಷಕ ತಮ್ಮ ಶಾಲೆಗಳಲ್ಲಿ ನೇತೃತ್ವ ವಹಿಸಿಕೊಂಡು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಆದರೆ ಇನ್ನೂ ಅನೇಕ ಶಾಲೆಗಳಲ್ಲಿ ಈ ಕೆಲಸವನ್ನು ಶಿಕ್ಷಕರು ಸರಿಯಾಗಿ ನಿರ್ವಹಿಸದೆ ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಬೇಳ ಬಾರ್ತಲೋಮಿಯೋ ಶಾಲೆಯ 5, 6, 7 ನೇ ತರಗತಿಯ ವಿದ್ಯಾರ್ಥಿಗಳು ರಸ್ತೆ ದಾಟುವಲ್ಲಿ ಅತಿ ಜಾಗರೂಕತೆ ಪಾಲಿಸಬೇಕಾದ ಅನಿವಾರ್ಯತೆಯಲ್ಲಿದ್ದು, ಸಣ್ಣ ಮಕ್ಕಳಿಗೆ ಈ ರೀತಿಯ ಕ್ರಮ ತುಂಬಾ ಅಗತ್ಯವಾಗಿ ಬೇಕಾಗುತ್ತದೆ. ಅದಕ್ಕಾಗಿ ಬೇಳ ಎಯುಪಿ ಶಾಲೆಯಲ್ಲಿ ರೋಡ್ ಸೇಪ್ಟಿ ಕ್ಲಬ್ಬೊಂದನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಗ್ರೇಸಿ ಅವರ ನೇತೃತ್ವದಲ್ಲಿ ರಚಿಸಲಾಯಿತು.

ತಂಡದ ಆಯ್ಕೆ- ರಸ್ತೆ ಸುರಕ್ಷತಾ ಜಾಗೃತಿಯ ಈ ಕಾಯಕವನ್ನು 8 ಮಂದಿಯನ್ನೊಳಗೊಂಡ 8 ತಂಡವಾಗಿ ಸುಮಾರು 64 ಮಂದಿ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಕಾರ್ಯವನ್ನು ಪ್ರತಿ ವರ್ಷ ಕೈಗೊಳ್ಳುತ್ತಾರೆ. 8 ಮಂದಿಯ ತಂಡದಲ್ಲಿ ನಾಲ್ಕು ವಿದ್ಯಾರ್ಥಿಗಳು ಹಾಗೂ 4 ವಿದ್ಯರ್ಥಿನಿಯರಿದ್ದಾರೆ. ಜೂನ್ ತಿಂಗಳ ಆರಂಭದಲ್ಲಿ ಕ್ವಿಝ್ ಸ್ಪರ್ಧೆಯನ್ನು ಏರ್ಪಡಿಸಿ ಅದರಲ್ಲಿ ಪಡೆದ ಮಾರ್ಕ್ ನ ಆಧಾರದಲ್ಲಿ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುತ್ತದೆ. ಶಾಲೆಗೆ ಮನೆಯಿಂದ ನಡೆದುಕೊಂಡು ಅಥವಾ ಸೈಕಲ್ ಏರಿ ಬರುವವರಿಗೆ ಒಂದು ಅಂಕವನ್ನು ಹೆಚ್ಚಿಗೆ ನೀಡಲಾಗುತ್ತದೆ. 8 ಮಂದಿಯ ತಂಡ ಬೆಳಗ್ಗೆ 8.30ರಿಂದ 9.20ರವರೆಗೆ ಬಸ್ಸಿಂದಿಳಿದ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸಿ ಸಂಜೆ 3.40ರಿಂದ 4.20 ರವರೆಗೆ ಶಾಲೆಯಿಂದ ರಸ್ತೆ ದಾಟಿಸಿ ಬಸ್ಸು ಹತ್ತಿಸುವ ಕೆಲಸವನ್ನು ಚಾಚೂ ತಪ್ಪದೆ ಶಿಸ್ತಿನಿಂದ ಮಾಡುತ್ತಿದ್ದಾರೆ.

bela shale-1

64 ಮಂದಿಗೆ ಒಬ್ಬ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ನೇಮಿಸುವುದಲ್ಲದೆ ಪ್ರತಿ 8 ಮಂದಿಯ ತಂಡಕ್ಕೆ ಒಬ್ಬ ನಾಯಕನಿರುತ್ತಾನೆ. ಅಲ್ಲದೆ ಶಾಲೆಯ ವತಿಯಿಂದ ನಾಯಕನಿಗೆ ಮೊಬೈಲ್ ಫೋನ್ ನೀಡಲಾಗುತ್ತಿದ್ದು, ಆತ ಕೆಲಸ ಶುರುವಾಗುವ ಮತ್ತು ಮುಕ್ತಾಗೊಳಿಸಯವ ಸಮಯವನ್ನು ತಮ್ಮ ಶಿಕ್ಷಕರಿಗೆ ಮಿಸ್ ಕಾಲ್ ಕೊಡುವ ಮೂಲಕ ಕೆಲಸದಲ್ಲಿ ಶಿಸ್ತನ್ನು ಮೂಡಿಸುವ ಪರಿಪಾಠವನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಓವರ್ ಸ್ಪೀಡ್ಲ್ಲಿ ಹೋಗುವ ವಾಹನಗಳ ನಂಬರ್ ನ್ನು ನೋಟ್ ಮಾಡಿಕೊಂಡು ಪೋಲಿಸ್ ಸ್ಟೇಶನ್ ಗೆ ದೂರು ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಪರಿಣಾಮವೆಂಬಂತೆ ಅನೇಕ ಬಾರಿ ಆರ್ ಟಿ ಒ ಅಧಿಕಾರಿಗಳು, ಬದಿಯಡ್ಕ ಪೊಲೀಸರೂ ಶಾಲಾ ವಠಾರಕ್ಕೆ ಭೇಟಿ ನೀಡಿದ್ದಾರೆ. ರೋಡ್ ಸೇಪ್ಟಿ ಕ್ಲಬ್ ಗೆ ಅಧ್ಯಾಪಕ ರಾಜು ಕಿದೂರು ಅವರು ನೇತೃತ್ವ ನೀಡಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ಆರಂಭವಾದ ಈ ಕೆಲಸ ಇದೀಗ ಪರಿಸರದ ಎಲ್ಲರಿಗೂ ಮೆಚ್ಚಿಗೆ ಎನಿಸಿದೆ. ಅಲ್ಲದೆ ಪುಟಾಣಿ ಮಕ್ಕಳ ಈ ಮಹತ್ಕಾರ್ಯಕ್ಕೆ ಬದಿಯಡ್ಕ ಪೊಲೀಸ್ ಠಾಣೆಯವರ ಹಾಗೂ ಆರ್ಟಿಒ ಅಧಿಕಾರಿಗಳ ಸಂಪೂರ್ಣ ಸಹಕಾರವೂ ದೊರಕಿದೆ. ಪರಿಸರದ ಎಲ್ಲಾ ಬಾಡಿಗೆ ವಾಹನ ಸವಾರರೂ ಸಹರಿಸುವುದಾಗಿಯೂ ಭರವಸೆಯನ್ನಿತ್ತಿದ್ದಾರೆ. ಮಳೆ, ಬಿಸಿಲೆನ್ನದೆ ತಮಗೊಪ್ಪಿಸಿದ ಕೆಲಸವನ್ನು ಮಕ್ಕಳು ನಿಸ್ವಾರ್ಥತೆಯಿಂದ ನಿರ್ವಹಿಸುವ ಪರಿಣಾಮ ಈ ಪ್ರದೇಶದಲ್ಲಿ ಆಗಾಗ ಸಂಭವಿಸುತ್ತಿರುವ ಅಪಘಾತಗಳಿಂದ ಹೆಚ್ಚಿನ ರೀತಿಯಲ್ಲಿ ಪ್ರಯೋಜನವುಂಟಾಗಿದೆ.

‘ಎಲ್ಲಾ ಶಾಲೆಗಳಲ್ಲೂ ಇಂಥ ಕಾರ್ಯಕ್ರಮ ಜ್ಯಾರಿಯಾಗಬೇಕು’

ರಸ್ತೆ ಸಮೀಪವಿರುವ ಎಲ್ಲಾ ಶಾಲೆಗಳಲ್ಲಿಯೂ ಈ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಇದರಿಂದ ರಸ್ತೆ ಸುರಕ್ಷತೆಯ ಕುರಿತು ವಿದ್ಯಾಥರ್ಿ ಜೀವನದಿಂದಲೇ ಜಾಗೃತಿ ಸಿಗುವುದಲ್ಲದೆ ಮುಂದಿನ ಜೀವನದುದ್ದಕ್ಕೂ ಅದನ್ನು ಅನುಸರಿಸಿಕೊಂಡು ಹೋಗಲು ಸಹಕಾರಿಯಾಗುತ್ತದೆ. ದೊಡ್ಡ ಮಕ್ಕಳ ಈ ಕೆಲಸವನ್ನು ನೋಡಿ ಸಣ್ಣ ಪ್ರಾಯದ ವಿದ್ಯಾರ್ಥಿಗಳಲ್ಲಿ ಭಯ ಮೂಡುವುದಲ್ಲದೆ ಅವರನ್ನು ಅನುಸರಣೆ ಮಾಡುತ್ತಾರೆ. ಅಲ್ಲದೆ ಶಿಸ್ತನ್ನು ಕಲಿಯುತ್ತಾರೆ. ನಮ್ಮ ಶಾಲೆಯ ಸಮೀಪದ ಝೀಬ್ರಾ ಕ್ರಾಸಿಂಗ್ ಮಾಡಿಲ್ಲ. ಡಾಮರೀಕರಣ ಪೂರ್ತಿಗೊಳಿಸಿದ ಮೇಲೆ ಝೀಬ್ರಾ ಕ್ರಾಸಿಂಗ್ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ.
– ರಾಜು ಕಿದೂರು
ಶಿಕ್ಷಕರು, ಬಾರ್ತಲೋಮಿಯೋ ಶಾಲೆ, ಬೇಳ

ಜ.12-13: ವಿವಿಧೆಡೆ ಬೀದಿ ನಾಟಕ

ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಶಾಲೆಯ ರೋಡ್ ಸೇಪ್ಟೀ ಕ್ಲಬ್ ವತಿಯಿಂದ ಜ.12ರಂದು ಬೇಳ, ನೀರ್ಚಾಲು, ಬದಿಯಡ್ಕ ಹಾಗೂ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿ ಮತ್ತು ಜ.13ರಂದು ಕುಂಬಳೆ, ಉಪ್ಪಳ, ಪೆರ್ಮುದೆ ಹಾಗೂ ಸೀತಾಂಗೋಳಿಯಲ್ಲಿ ವಿಶೇಷ ಬೀದಿ ನಾಟಕವನ್ನು ಪ್ರದರ್ಶಿಸಲಿದ್ದಾರೆ.

Leave a Reply

Your email address will not be published. Required fields are marked *