Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹೊಣೆಗೇಡಿ ಡಿಜಿಪಿ, ಸುಧಾರಣೆ ಕಾಣಬೇಕಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಬೇಜವಾಬ್ದಾರಿ ಮುಖ್ಯಮಂತ್ರಿಗಳ ಸಚಿವಾಲಯ !

* ಶ್ರೀರಾಮ ದಿವಾಣ

ಉಡುಪಿ: ‘ಕರ್ನಾಟಕ ಸರಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜನಸ್ಪಂದನ ಕೋಶ)’. ಇದು ಘನ ಕರ್ನಾಟಕ ಸರಕಾರದ ಬಹಳ ಮಹತ್ವದ ಒಂದು ಇಲಾಖೆ. ರಾಜ್ಯ ಸರಕಾರದ ಆಡಳಿತವನ್ನು ಸುಧಾರಣೆಗೊಳಪಡಿಸುವ ಮಹತ್ತರವಾದ ಜವಾಬ್ದಾರಿ ಈ ಇಲಾಖೆಯ ಮೇಲಿದೆ. ಸರಕಾರದ ಅಧೀನದಲ್ಲಿರುವ ಎಲ್ಲಾ ಇಲಾಖೆಗಳಲ್ಲಿರುವ ಸಿಬ್ಬಂದಿಗಳನ್ನು ಸುಧಾರಣೆಗೆ ಗುರಿಪಡಿಸುವ ಹೊಣೆಗಾರಿಕೆಯೂ ಇದೇ ಇಲಾಖೆಯದ್ದೇ ಆಗಿದೆ. ಮುಖ್ಯಮಂತ್ರಿಗಳ ನೇರ ಉಸ್ತುವಾರಿಯಲ್ಲಿರುವ ಇಲಾಖೆ ಎಂಬ ಹೆಗ್ಗಳಿಕೆಯೂ ಈ ಇಲಾಖೆಗಿದೆ.

ಆದರೆ…, ಇಂಥ ಮಹತ್ತರವಾದ ಇಲಾಖೆಯ ಅಧಿಕಾರಿಗಳೇ ಅತ್ಯಂತ ಬೇಜವಾಬ್ದಾರಿ ಮತ್ತು ಹೊಣೆಗೇಡಿಗಳಾಗಿದ್ದಾರೆ ಎನ್ನುವುದು, ಸರಕಾರ ಎಂಬ ವ್ಯವಸ್ಥೆ ಎಷ್ಟೊಂದು ಕೆಟ್ಟುಹೋಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸರಕಾರದ ಸಿಬ್ಬಂದಿಗಳನ್ನು ಹಾಗೂ ಆಡಳಿತ ವ್ಯವಸ್ಥೆಯನ್ನು ಸುಧಾರಣೆಗೆ ಒಳಪಡಿಸಬೇಕಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೇ, ಇದೀಗ ಪ್ರಪ್ರಥಮ ಬಾರಿಗೆ ಸುಧಾರಣೆಗೆ ಒಳಪಡಬೇಕಾದ ಶೋಚನೀಯ ಪರಿಸ್ಥಿತಿಗೆ ಬಂದು ತಲುಪಿದೆ.

ಇದರ ಜೊತೆ ಜೊತೆಗೆ ಮುಖ್ಯಮಂತ್ರಿಯವರ ಸಚಿವಾಲಯದ ಅಧಿಕಾರಿಗಳು ಹಾಗೂ ಮಹಾನಿದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು (ಡಿಜಿಪಿ) ಹಾಗೂ ಇವರ ಕಚೇರಿಯಲ್ಲಿರುವ ಅಧಿಕಾರಿಗಳು ಸಹ ಹೊಣೆಗೇಡಿಗಳು ಎನ್ನೋದು ಕೂಡಾ ಸ್ಪಷ್ಟವಾಗುತ್ತದೆ.

ಒಂದು ಮನವಿಯ ಒಂದು ವರ್ಷದ ಕಥೆ !

2013ರ ಡಿಸೆಂಬರ್ 3ರಂದು ಪ್ರಮುಖ ಏಳು ಬೇಡಿಕೆಗಳಿರುವ ಮನವಿಯೊಂದನ್ನು ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿಗಳಾದ ಎಲಿಷ ಆಂಡ್ರೂಸ್ ಎಂಬವರ ಕೈ ಸೇರುತ್ತದೆ ಈ ಮನವಿ. ಇದನ್ನು ಎಲಿಷ ಆಂಡ್ರೂಸ್ ಅವರು ಡಿಸೆಂಬರ್ 27ರಂದು ‘ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿ’ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ (cm/87873/rep-gen/2013, dated: 27.12.2013) ಕಳುಹಿಸಿಕೊಡುತ್ತಾರೆ.

ಹೆಚ್ಚಾಗಿ, ಜನ ಸಾಮಾನ್ಯರು ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮನವಿಗಳನ್ನು ಮುಖ್ಯಮಂತ್ರಿಗಳೇ ಖುದ್ದಾಗಿ ನೋಡುವುದಿಲ್ಲ, ನೋಡದ ಮೇಲೆ ಓದಲು ಸಾಧ್ಯವಿಲ್ಲವಲ್ಲ ? ಆರ್ಥಿಕವಾಗಿ ಲಾಭವಿರುವ ಮತ್ತು ಮತಬ್ಯಾಂಕ್ ಆಗಬಹುದಾದ ಮನವಿಗಳ ಮೇಲೆ ಮಾತ್ರ ಮುಖ್ಯಮಂತ್ರಿಗಳು ನೇರವಾಗಿ ಗಮನಹರಿಸುತ್ತಾರೆ. ಇಂಥ ಮನವಿಗಳನ್ನು (ಪ್ರಸ್ತಾವನೆ) ಹೆಚ್ಚಾಗಿ ಉನ್ನತ ಸರಕಾರಿ ಅಧಿಕಾರಿಗಳು ಹಾಗೂ ಇತರ ಸಚಿವರು ಮತ್ತು ಜನಪ್ರತಿನಿಧಿಗಳು ಸಲ್ಲಿಸುತ್ತಾರೆ.

ಡಿ.3ರಂದು ಸಲ್ಲಿಸಿದ ಮನವಿಯಲ್ಲಿನ ಏಳು ಬೇಡಿಕೆಗಳು ಗಂಭೀರವಾದವುಗಳೂ, ಜನಪರವಾಗಿರುವವೂ ಆಗಿದ್ದರೂ, ಈ ಮನವಿಯನ್ನು ಸಲ್ಲಿಸಿರುವುದು ಒಬ್ಬ ಜನಸಾಮಾನ್ಯನಾದುದರಿಂದ ಇದು ಮುಖ್ಯಮಂತ್ರಿಗಳವರೆಗೆ ಹೋಗಲು ಸಾಧ್ಯವಿಲ್ಲವಲ್ಲ ? ನಿಜ, ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿಗಳಾದ ಎಲಿಷ ಆಂಡ್ರೂಸ್ ಎಂಬವರು ಈ ಮನವಿಗೆ ಒಂದು ಗತಿ ಕಾಣಿಸುತ್ತಾರೆ.

ಈ ಎಲಿಷ ಆಂಡ್ರೂಸ್ ಅವರಿಗೆ ಇದೇ ಕೆಲಸವೆಂದು ಕಾಣುತ್ತದೆ. ಮುಖ್ಯಮಂತ್ರಿಗಳ ಹೆಸರಿಗೆ ಬರುವ ಮನವಿಗಳನ್ನು ಆ ಮನವಿಗಳಲ್ಲಿನ ವಿಷಯದ ಗಂಭೀರತೆ ಇತ್ಯಾದಿಗಳನ್ನೊಂದೂ ಗಮನಿಸದೆ ಯಾವುದಾದರೂ ಇನ್ನೊಂದು ಇಲಾಖೆಗೆ ಕಳುಹಿಸಿಕೊಡುವುದಷ್ಟೇ ಇವರ ಕೆಲಸವಿರಬೇಕು. ಮುಖ್ಯಮಂತ್ರಿಗಳ ಹೆಸರಿಗೆ ಕಳುಹಿಸಲಾದ ಅನೇಕ ಮನವಿಗಳನ್ನು ಇದೇ ಎಲಿಷ ಆಂಡ್ರೂಸ್ ಅವರು ಇತರ ಇಲಾಖೆಗಳಿಗೆ ಕಳುಹಿಸಿಕೊಟ್ಟು ಕೈತೊಳೆದುಕೊಂಡ ಅನೇ ದಾಖಲೆಗಳನ್ನು ಲಭ್ಯವಿದೆ.

ಇಂತಹದೊಂದು ಅತೀ ಸರಳ, ಸುಲಭ, ಸಾಮಾನ್ಯದಲ್ಲಿ ಸಾಮಾನ್ಯ ಕೆಲಸ ಮಾಡಲು ಉನ್ನತ ದರ್ಜಿಯ ಸರಕಾರಿ ಅಧಿಕಾರಿಯೇ ಆಗಿರಬೇಕಾ ಎನ್ನುವುದು ಒಂದು ಜನ ಸಾಮಾನ್ಯನ ಸಹಜವಾದ ಪ್ರಶ್ನೆ. ಈ ಪ್ರಶ್ನೆಗೆ ಗೌರವಾನ್ವಿತ ಮುಖ್ಯಮಂತ್ರಿಗಳು ಹಾಗೂ ಸರಕಾರದ ಗೌರವಾನ್ವಿತ ಮುಖ್ಯ ಕಾರ್ಯದರ್ಶಿಗಳೇ ಉತ್ತರಿಸಬೇಕಷ್ಟೆ.

2013ರ ಡಿಸೆಂಬರ್ 3ರಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯನ್ನು, ಮೂರು ವಾರಗಳ ಬಳಿಕ ಅಂದರೆ, ಡಿಸೆಂಬರ್ 27ರಂದು ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಜನಸ್ಪಂದನ, ಬೆಂಗಳೂರು ಇವರಿಗೆ ಕಳುಹಿಸಿಕೊಡಲಾಗುತ್ತದೆ. ಮನವಿಯೊಂದನ್ನು ಹೀಗೆ ಕಳುಹಿಸಿಕೊಟ್ಟ ಬಳಿಕ, ಈ ಮನವಿಗಳ ಸ್ಥಿತಿ ಗತಿ ಏನು ಎಂಬುದನ್ನು ತಿಳಿಯುವ ಕನಿಷ್ಟ ಕೆಲಸವನ್ನು ಸಹ ಮುಖ್ಯಮಂತ್ರಿಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಎಲಿಷ ಆಂಡ್ರೂಸ್ ಅವರಾಗಲೀ, ಇತರ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಮಾಡುವುದೇ ಇಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳುಹಿಸಿಕೊಟ್ಟರೆ ಇವರ ಕೆಲಸವಾಯಿತು.

ಆ ಮನವಿಯನ್ನು ಯಾವ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆಯೋ; ಆ ಇಲಾಖೆಯ ಅಧಿಕಾರಿಗಳು ಈ ಮನವಿಯನ್ನು ಕಸದ ಬುಟ್ಟಿಗೆ ಎಸೆದರೋ, ಕುಂಡೆಯ ಅಡಿಗೆ ಹಾಕಿ ಹೂಸು ಬಿಟ್ಟರೋ, ಬಿಸಿನೀರು ಮಾಡಲು ಮನೆಗೆ ಕೋಡೊಯ್ದು ಒಲೆಗೆ ಹಾಕಿದರೋ, ಅಲ್ಲಾ ಯಾವುದಾದರೊಂದು ಫೈಲಿನೊಳಗೆ ಸೇರಿಸಿ ಬದಿಗೆ ಇಟ್ಟುಬಿಟ್ಟರೋ ಎಂನ್ನುವುದನ್ನು ವಿಚಾರಿಸುವ ಕೆಲಸವನ್ನು ಮಾತ್ರ ಮುಖ್ಯಮಂತ್ರಿಗಳ ಸಚಿವಾಲಯದ ಯಾವನೇ ಒಬ್ಬ ಅಧಿಕಾರಿಯಾಗಲೀ, ಸಿಬ್ಬಂದಿಯಾಗಲೀ ಮಾಡುವುದೇ ಇಲ್ಲ. ಕಾರಣ, ಅತ್ಯಂತ ಬೇಜವಾಬ್ದಾರಿ ಮತ್ತು ಸಂಪೂರ್ಣ ಹೊಣೆಗೇಡಿತನವಲ್ಲದೇ ಬೇರೇನೂ ಅಲ್ಲವೇ ಅಲ್ಲ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜನಸ್ಪಂದನ ಕೋಶ)ಯ ಅಧೀನ ಕಾರ್ಯದರ್ಶಿಗಳು ಈ ಮನವಿಯನ್ನು ಮೂರು ವಾರಗಳ ಬಳಿಕ ಅಂದರೆ, 2014ರ ಜನವರಿ 24ರಂದು ‘ಮನವಿಯು ಸ್ವಯಂವೇದ್ಯವಾಗಿದ್ದು, ಅವರ ಬೇಡಿಕೆಗಳನ್ನು ಆದ್ಯತೆ ಮೇಲೆ ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಂಡು, ಈ ಬಗ್ಗೆ ಅರ್ಜಿದಾರರಿಗೆ ಕೂಡಲೇ ಸಮಂಜಸವಾದ ಹಿಂಬರಹ ನೀಡಿ ಅದರ ಪ್ರತಿಯನ್ನು 30 ದಿನಗಳ ಒಳಗಾಗಿ ಈ ವಿಭಾಗಕ್ಕೆ ಕಳುಹಿಸಿಕೊಡುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ’ ಎಂದು ಬರೆದು (ಸಿಅಸುಇ 05/udp/2014, ಅರ್ಜಿ ಸಂಖ್ಯೆ 189) ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು (ಡಿಜಿಪಿ) ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

ಡಿಜಿಪಿಯವರು ಈ ಮನವಿಯನ್ನು ಸುಧೀರ್ಘ ಒಂಭತ್ತು ತಿಂಗಳ ಕಾಲ ವಿಲೇವಾರಿ ಮಾಡದೆ ಹಾಗೆಯೇ ಒಂದು ಮೂಲೆಯಲ್ಲಿ ಇಟ್ಟುಬಿಡುತ್ತಾರೆ. ಒಂಭತ್ತು ತಿಂಗಳ ಬಳಿಕವೂ ಈ ಮನವಿ ಎಲ್ಲಿತ್ತೋ ಅಲ್ಲಿಂದ ಅಲುಗಾಡುತ್ತಿರಲಿಲ್ಲ. ಒಂಭತ್ತು ತಿಂಗಳದರೂ ಮನವಿಗೆ ಸರಿಯಾದ ರೀತಿಯಲ್ಲಿ ಸ್ಪಂದನ ಲಭಿಸದ ಹಿನ್ನೆಲೆಯಲ್ಲಿ, ಮನವಿ ಸಲ್ಲಿಸಿದ ಜನ ಸಾಮಾನ್ಯ ಅಂತಿಮವಾಗಿ 2014 ನವೆಂಬರ್ ಒಂದರಂದು ಮಾಹಿತಿ ಹಕ್ಕು ಕಾಯ್ದೆ-2005ರಂತೆ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರವರ ಕಚೇರಿಗೆ ಅರ್ಜಿ ಸಲ್ಲಿಸಿ ಸಂಬಂಧಿಸಿದ ಮನವಿಯ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕಳುಹಿಸಿಕೊಟ್ಟ ಪತ್ರದ ಮೇಲೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೋರಿದರು.

ಮಾಹಿತಿ ಹಕ್ಕು ಕಾಯ್ದೆಯಂತೆ ಮಾಹಿತಿ ಕೋರಿದ ಮೇಲೆ, ಇದೀಗ ಎಚ್ಚೆತ್ತುಕೊಂಡಿರುವ ಡಿಜಿಪಿ ಕಚೇರಿಯ ಅಧಿಕಾರಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಬಂದ ಪತ್ರ ಮತ್ತು ಜನಸಾಮಾನ್ಯನೊಬ್ಬನ ಏಳು ಬೇಡಿಕೆಗಳ ಮನವಿ ಪತ್ರವನ್ನು ಎಲ್ಲಿಟ್ಟಿದ್ದೇವೆ, ಯಾವ ಫೈಲಿನಲ್ಲಿದೆ ಎಂದು ಹುಡುಕಾಡತೊಡಗಿದ್ದಾರೆ.

ಇದು ಒಂದು ಮನವಿಯ ಕಥೆಯೇನೂ ಅಲ್ಲ. ಜನಸಾಮಾನ್ಯನ ಬಹುತೇಕ ಮನವಿಗಳು, ದೂರುಗಳ ಕಥೆಯೂ ಇದುವೇ. ಮುಖ್ಯಮಂತ್ರಿಗಳಾದವರಿಗೆ ಕನಿಷ್ಟ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಮಾಡುವ ಆಸಕ್ತಿಯಾಗಲೀ, ಕಾಳಜಿಯಾಗಲೀ ಇಲ್ಲದಿದ್ದರೆ ಆಗುವುದು ಹೀಗೆಯೇ.

RTI

@ ಈ ವರದಿಯನ್ನು ಘನ ಕರ್ನಾಟಕ ಸರಕಾರದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿಕೊಡಲಾಗಿದೆ. – ಸಂಪಾದಕರು.

Leave a Reply

Your email address will not be published. Required fields are marked *