Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಆಸ್ಪತ್ರೆ ಇಲ್ಲ, ಪಶು ಆಸ್ಪತ್ರೆ ಕಟ್ಟಡ ಬಳಕೆಯಲ್ಲಿಲ್ಲ, ಪಂಚಾಯತ್ ಜಾಗ ಸುಜ್ಲಾನ್ ವಶದಲ್ಲಿ, 3 ವರ್ಷವಾದರೂ ಬಾವಿ ಕೆಲಸ ಮುಗಿದಿಲ್ಲ ! ಟೆಂಡರ್ ನೋಡದೆ ಕಾಮಗಾರಿ ಮಾಡಬೇಕೆಂಬ ಜನಪ್ರತಿನಿಧಿಗಳ ಮನವಿಗೆ, ‘ಅಸಾಧ್ಯ’ವೆಂದ ಅಧಿಕಾರಿ !

ಉಡುಪಿ: ಪಾರದರ್ಶಕ ನಿಯಮವನ್ನು ಮೀರಿ ಯಾವುದೇ ಕಾಮಗಾರಿಯನ್ನು ನಿರ್ವಹಿಸಲು ತಾನು ಸಿದ್ದನಿಲ್ಲ. 60 ಲಕ್ಕ ರು. ಗೆ ಮೀರಿದ ಮೊತ್ತದ ಕಾಮಗಾರಿಯಾದರೆ ಅಂಥ ಕಾಮಗಾರಿಗಳ ಟೆಂಡರ್ ಕರೆದು ಕಾಮಗಾರಿ ನಡೆಸಬೇಕೆಂಬ ನಿಯಮವಿದ್ದು, ಅದನ್ನು ತಾನು ಪಾಲನೆ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಸೋಲಾರ್ ಟೆಂಡರ್ ಕರೆಯಲಾಗಿದೆ. ಜನವರಿ 30ಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಬಳಿಕ ದಾರಿದೀಪ ಸೋಲಾರ್ ಅಳವಡಿಸುವ ಕಾಮಗಾರಿ ನಡೆಯಲಿದೆ ಎಂದು ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್ ಅವರು ತಾ.ಪಂ.ಸದಸ್ಯರಿಗೆ ಸ್ಪಷ್ಟಪಡಿಸಿದ ವಿದ್ಯಾಮಾನ ಇಂದು ತಾ.ಪಂ.ಸಭಾಂಗಣದಲ್ಲಿ ನಡೆಯಿತು.

ಉಡುಪಿ ತಾ.ಪಂ. ಸಭಾಂಗಣದಲ್ಲಿ ಇಂದು ನಡೆದ ತಾ.ಪಂ.ನ 24ನೇ ತಿಂಗಳ ಸಾಮಾನ್ಯಸಭೆಯಲ್ಲಿ ಕೆಲವು ಮಂದಿ ತಾ.ಪಂ.ಸದಸ್ಯರು, ಕೂಡಲೇ ಸೋಲಾರ್ ಅಳವಡಿಸುವ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿದರು. ಟೆಂಡರ್ ವರೆಗೆ ಕಾಯಬಾರದು. ಈ ಹಿಂದೆಯೂ ಟೆಂಡರ್ ಗೆ ಕಾಯದೆ ಕಾಮಗಾರಿ ನಡೆಸಲಾಗುತ್ತಿತ್ತು ಎಂದು ಸದಸ್ಯರು ಸಭೆಯ ಮುಂದಿಟ್ಟರು.

ಸದಸ್ಯರ ಮನವಿಗೆ ಉತ್ತರಿಸಿದ ಇಓ ಬೇಕಲ್ ಅವರು, ಸದಸ್ಯರ ಮನವಿಯನ್ನು ಸಾರಾಸಗಟು ತಳ್ಳಿಹಾಕಿದರು. ಹಿಂದಿನ ವಿಷಯ ಬಿಡಿ, ಹಿಂದಿನದನ್ನು ತಾನೀಗ ಸರಿಪಡಿಸುತ್ತಿದ್ದೇನೆ ಎಂದು ಮಾರ್ಮೀಕವಾಗಿ ಸ್ಪಷ್ಟಪಡಿಸಿದರು.

ಮೊದಲು ಸಾಮಾನ್ಯಸಭೆ ಸರಿಯಾದ ಸಮಯಕ್ಕೆ ಅಂದರೆ 11 ಗಂಟೆಗೆ ಆರಂಭವಾಗುತ್ತಿತ್ತು. ಈಗೀಗ ತಡವಾಗಿ ಆರಂಭವಾಗುತ್ತಿದೆ. ಇಂದಿನ ಸಭೆ 20 ನಿಮಿಷ ತಡವಾಗಿ ಆರಂಭವಾಗುತ್ತಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಅತ್ರಾಡಿ ಸತ್ಯಾನಂದ ನಾಯಕ್ ಸಭೆಯ ಗಮನಸೆಳೆದರು. ಆಗ ಇಓ ರಾಜೇಂದ್ರ ಬೇಕಲ್ ಅವರು, ‘ಕೋರಂ ಆಗದ ಕಾರಣ ಸಭೆ ಆರಂಭಗೊಂಡಿಲ್ಲ’ ಎಂದು ಸ್ಪಷ್ಟನೆ ನೀಡುವ ಮೂಲಕ ಸದಸ್ಯರು ಸಭೆಗೆ ಸರಿಯಾದ ಸಮಯಕ್ಕೆ ಸಭೆಗೆ ಬಾರದಿರುವುದೇ ಸಭೆಯ ವಿಳಂಬಕ್ಕೆ ಮೂಲ ಕಾರಣ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ಪಡುಬಿದ್ರೆ ಪೇಟೆಯಲ್ಲಿ ವಾಹನ ಮತ್ತು ಜನ ದಟ್ಟಣೆ ಹೆಚ್ಚಿದ್ದು, ಕೆಲವು ಕಟ್ಟಡಗಳಿಮದಾಗಿ ತೊಂದರೆಯಾಗಿದೆ. ಇವುಗಳನ್ನು ತೆರುವುಗೊಳಿಸುವ ಅಗತ್ಯವಿದೆ. ಪಡುಬಿದ್ರೆ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಇಲ್ಲ ಒಂದು ಆಸ್ಪತ್ರೆ ಇಲ್ಲದಿರುವುದು ಸಹ ಸಮಸ್ಯೆಯಾಗಿದೆ. ಅಪಘಾತ ಸಂಭವಿಸಿದರೆ ಗಾಯಾಳುಗಳನ್ನು ದಊರದ ಉಡುಪಿಗೆ ಸಾಗಿಸಬೇಕಾಗುತ್ತದೆ, ಉಡುಪಿಗೆ ತಲುಪುವಾಗ ಗಾಯಾಳು ಮೃತರಾಗುವ ಪರಿಸ್ಥಿತಿ ಇರುತ್ತದೆ. ಹಾಗಾಗಿ ಇಲ್ಲಿಗೊಂದು ಆಸ್ಪತ್ರೆಯ ಅಗತ್ಯವಿದೆ ಎಂದು ಭಾಸ್ಕರ ಪಡುಬಿದ್ರೆ ಸಭೆಯ ಗಮನಸೆಳೆದರು.

ಪಡುಬಿದ್ರೆಗೆ ಆಸ್ಪತ್ರೆಯ ಅವಶ್ಯಕತೆ ಇರುವುದನ್ನು ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಇಓ ಬೇಕಲ್ ಹೇಳಿದರು.

ಪಡುಬಿದ್ರೆ ಪಂಚಾಯತ್ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಭಾಸ್ಕರ ಪಡುಬಿದ್ರೆ, ಇಲ್ಲಿನ ಮದಗವೊಂದಕ್ಕೆ ಬಿದ್ದು ಎರಡು ಜನ ಮೃತಪಟ್ಟ ಉದಾಹರಣೆ ಇರುವಾಗ, ಇದರ ಪಕ್ಕವೇ 20 ಕುಟುಂಬಗಳಿಗೆ ಮನೆಗಳನ್ನು ಒದಗಿಸಲಾಗಿರುವುದು ಸರಿಯಲ್ಲ. ಪ್ರತೀ ಸಭೆಯಲ್ಲೂ ತಾನು ಅಂಗನವಾಡಿ ಕಟ್ಟಡದ ಬೇಡಿಕೆಯನ್ನು ಮುಂದಿಡುತ್ತಿದ್ದು, ಬೇಡಿಕೆ ಮಾತ್ರ ಈಡೇರುತ್ತಲೇ ಇಲ್ಲ. ಪಶು ಆಸ್ಪತ್ರೆಗಾಗಿ ಕಟ್ಟಡ ಕಟ್ಟಿ ಎರಡು ವರ್ಷಗಳೇ ಕಳೆದರೂ ಇನ್ನೂ ಸಹ ಅದನ್ನು ಉಪಯೋಗಿಸಲಾಗಿಲ್ಲ. ಪಶು ಆಸ್ಪತ್ರೆ ಕಟ್ಟಡವನ್ನು ಜನ ನೋಡಿಕೊಂಡಿರಲು ಕಟ್ಟಿಸಿದ್ದಾ ಎಂದು ನೊಂದು ಪ್ರಶ್ನಿಸಿದರು.

ಬಡಾ ಎರ್ಮಾಳ್ ನ ರುದ್ರಭೂಮಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ತಾ.ಪಂ.ನ ನಾಮನಿದರ್ೇಶಿತ ಸದಸ್ಯರಾದ ಬಡಾ ಎಮರ್ಾಳ್ ಗ್ರಾಮ ಪಂಚಾಯತ್ ಅಧ್ಯಕ್ಷರು ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ಗುರುಪ್ರಸಾದ್ ಅವರನ್ನು ಕೋರಿಕೊಂಡಾಗ, ಶೀಘ್ರವೇ ಸಮಸ್ಯೆ ಪರಿಹಾರ ಕಾಣಲಿದೆ. ಜಿಲ್ಲಾಧಿಕಾರಿಗಳು ಶೀಘ್ರವೇ ಕಡತಕ್ಕೆ ಸಹಿ ಹಾಕಲಿದ್ದಾರೆ ಎಂದು ಹೇಳಿದರು.

ಕೊರಂಗ್ರಪಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಬಾವಿ ಕೊರೆಯಲಾಗುತ್ತಿದೆ, ಇನ್ನೂ ಮುಕ್ತಾಯವಾಗಿಲ್ಲ ಎಂದು ಅಲೆವೂರು ತಾ.ಪಂ.ಸದಸ್ಯರು ಸಭೆಯ ಗಮನಸೆಳೆದರು. ಪಡುಬಿದ್ರೆಯಲ್ಲಿ ತ್ಯಾಜ್ಯ ಗುಂಡಿಗೆ ಎಂದು ಮೀಸಲಿರಿಸಿದ ಒಂದು ಎಕ್ರೆ ಸರಕಾರಿ ಜಾಗವನ್ನು 2007ರಲ್ಲಿ ಸುಜ್ಲಾನ್ ಕಂಪೆನಿ ನುಮಗಿಹಾಕಿದೆ. ಈ ಜಾಗವನ್ನು ಮರುವಶಪಡಿಸಿಕೊಳ್ಳಬೇಕು ಮತ್ತು ಅವರಿಂದ ದಂಡ ವಸೂಲಿ ಮಾಡಬೇಕು ಎಂದು ಭಾಸ್ಕರ ಪಡುಬಿದ್ರೆ ಮನವಿ ಮಾಡಿದರು.

ತಾಲೂಕು ಪಂಚಾಯತ್ ಗೆ ಸೇರಿದ ಜಾಗವನ್ನು ಅಸಿಸ್ಟೆಂಟ್ ಕಮಿಷನರ್ ಅವರು ತಾ.ಪಂ. ನ ಗಮನಕ್ಕೆ ತಾರದೆ ಪೊಲೀಸ್ ವಸತಿಗೃಹ ಮತ್ತು ಅರಣ್ಯ ಇಲಾಖೆಯ ಕಟ್ಟಡ ಕಟ್ಟಲು ನೀಡಿದ್ದಾರೆ. ಇದೀಗ ಜಿಲ್ಲಾ ಸಂಪನ್ಮೂಲ ಕೇಂದ್ರ ನಿರ್ಮಿಸಲು ಒಂದು ಕೋಟಿ ರು. ಬಂದಿದ್ದು, ಇದಕ್ಕೆ ಬೇಕಾದ ಕಟ್ಟಡ ಕಟ್ಟಲು ತಾ.ಪಂ., ಈ ಜಾಗವನ್ನು ನೀಡಬೇಕಾಗಿದೆ. ತಾ.ಪಂ.ನ ಇನ್ನಷ್ಟೂ ಜಾಗವನ್ನು ಮುಂದಿನ ದಿನಗಳಲ್ಲಿ ಹಂಚಿಕೆ ಮಾಡುವ ಮೊದಲು ತಹಶೀಲ್ದಾರರು ತಾ.ಪಂ.ಗೆ ಸೇರಿದ ಜಾಗದ ಆರ್ ಟಿ ಸಿಯಲ್ಲಿ ತಾ.ಪಂ. ಎಂದು ದಾಖಲಿಸಬೇಕು ಎಂದು ಇಓ ರಾಜೇಂದ್ರ ಬೇಕಲ್ ಅವರು ತಹಶೀಲ್ದಾರ್ ಗುರುಪ್ರಸಾದ್ ಅವರನ್ನು ವಿನಂತಿಸಿದರು.

ಉಡುಪಿ ಜಿಲ್ಲೆಯಲ್ಲಿ 55 ಗ್ರಾಮ ಕರಣಿಕರನ್ನು ಹೊಸದಾಗಿ ನೇಮಕ ಮಾಡಲಾಗಿದೆ. ಇದರಲ್ಲಿ 18 ಮಂದಿ ಉಡುಪಿ ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ನಿಯುಕ್ತಿಗೊಂಡಿದ್ದಾರೆ. ಪ್ರಸ್ತುತ ಮಂಗಳೂರಲ್ಲಿ ನಡೆಯುತ್ತಿರುವ ತರಬೇತಿ ಶಿಬಿರವೊಂದರಲ್ಲಿ ಕೆಲವು ಮಂದಿ ವಿಎಗಳು ಭಾಗವಹಿಸುತ್ತಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದ್ದು, ಮಾರ್ಚ್ ನಲ್ಲಿ ಈ ಸಮಸ್ಯೆ ಪರಿಹಾರ ಕಾಣಲಿದೆ ಎಂದು ತಹಶೀಲ್ದಾರರು ತಿಳಿಸಿದರು.

ಫೆಬ್ರವರಿಯಲ್ಲಿ ಕಾಪು, ಉಡುಪಿ, ಬ್ರಹ್ಮಾವರ ಮತ್ತು ಕೋಟ ಹೋಬಳಿಗಳಲ್ಲಿ ಶಾಶ್ವತ ಆಧಾರ್ ಕೇಂದ್ರಗಳು ಆರಂಬವಾಗಲಿವೆ. ಈಗ ಇರುವ ಎರಡು ಹೊರಗುತ್ತಿಗೆ ಸಂಸ್ಥೆಗಳನ್ನೂ ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಆಧಾರ್ ನೋಂದಣಿ ಮಾಡಲು ಅಂಗವಿಕಲರ
ಮನೆಗಳಿಗೆ ಸಂಬಂಧಿಸಿದವರು ಭೇಟಿ ನೀಡಲಿರುವುದರಿಂದ ಅವರು ಆಧಾರ್ ಕೇಂದ್ರಕ್ಕೆ ಬರುವ ಅಗತ್ಯ ಇಲ್ಲ. ಈಗಾಗಲೇ ಎನ್.ಪಿ.ಆರ್. ಪಡೆದುಕೊಂಡವರು ಮತ್ತೆ ಆಧಾರ್ ಐಡಿ ಪಡೆದುಕೊಳ್ಳಬೇಕಾಗಿಲ್ಲ. ಪಿಂಚಣಿದಾರರ ಹಣ ಮುಂದಿನ ದಿನಗಳಲ್ಲಿ ಅವರವರ ಉಳಿತಾಯ ಖಾತೆಗೆ ಬರಲಿದೆ ಎಂದು ಸದಸ್ಯರ ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ ತಹಶೀಲ್ದಾರರು ಸ್ಪಷ್ಟಪಡಿಸಿದರು.

ತಾ.ಪಂ.ಅಧ್ಯಕ್ಷೆ ಶ್ರೀಮತಿ ಸುನೀತಾ ಎ.ನಾಯ್ಕ, ಉಪಾಧ್ಯಕ್ಷ ಗಣೇಶ್ ಕುಮಾರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಜಿ.ನಾಯಕ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ವೆರೋನಿಕಾ ಕರ್ನೇಲಿಯೋ, ಡಾ.ಸುನೀತಾ ಶೆಟ್ಟಿ, ಉಮೇಶ್ ನಾಯ್ಕ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ta.pam

Leave a Reply

Your email address will not be published. Required fields are marked *