Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರತ್ಯೇಕ ಸಾಂಸ್ಕೃತಿಕ ನೀತಿ ರೂಪಿಸಲು ಚಿಂತನೆ: ಸಚಿವೆ ಉಮಾಶ್ರೀ

ಉಡುಪಿ: ರಾಜ್ಯದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ನೀತಿ ರೂಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಉಮಾಶ್ರೀ ಅವರು ಹೇಳಿದ್ದಾರೆ.

ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಫೆ.26ರಂದು ನಡೆದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2012, 2013 ಮತ್ತು 2014 ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ ಮತ್ತು 2013 ಹಾಗೂ 2014 ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ರೂಪಿಸುವ ನಿಟ್ಟಿನಲ್ಲಿ ಪ್ರಸಕ್ತ ಬಜೆಟ್ ಪ್ರಸ್ತಾಪಿಸಲಾಗುವುದು, ರಾಜ್ಯದ ಅನೇಕ ಕಲಾ ಪ್ರಕಾರಗಳು ಪ್ರಚಾರದಲ್ಲಿ ಹಿಂದುಳಿದಿದ್ದು, ಅಕಾಡೆಮಿಯು ಅಂತಹ ಕಲಾ ಪ್ರಕಾರ ಮತ್ತು ಕಲಾವಿದರುಗಳನ್ನು ಗುರುತಿಸಿ, ಹೆಚ್ಚಿನ ಪ್ರಚಾರ ನೀಡಿ, ಪ್ರೋತ್ಸಾಹಿಸಬೇಕು. ಏಕಮುಖ ಚಿಂತನೆಯಿಂದ ಕೆಲವು ಕಲಾ ಪ್ರಕಾರಗಳನ್ನು ಮಾತ್ರ ಗುರುತಿಸದೇ, ಎಲ್ಲ ಪ್ರಕಾರಗಳನ್ನು ಗುರುತಿಸಿ, ಗೌರವಿಸಬೇಕು ಎಂದ ಸಚಿವರು, ಯಕ್ಷಗಾನ ಮತ್ತು ಬಯಲಾಟದ ಕಲಾವಿದರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರತ್ಯೇಕ ಅಕಾಡೆಮಿ ಪ್ರಾರಂಭಿಸುವ ಚಿಂತನೆ ಇದೆ ಎಂದು ಹೇಳಿದರು.

ಅಕಾಡೆಮಿಯು ಪ್ರತಿ ವರ್ಷ ಪ್ರಶಸ್ತಿಯನ್ನು ವಿತರಿಸುವಾಗ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಹೇಳಿದ ಸಚಿವೆ ಉಮಾಶ್ರೀ, ಈ ಬಾರಿಯ ಪ್ರಶಸ್ತಿ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗಿದ್ದು, ಅರ್ಹ ಕಲಾವಿದರಿಗೆ ಪ್ರಶಸ್ತಿಗಳನ್ನು ವಿತರಿಸಲಾಗಿದೆ. ಯಾವುದೇ ಅಪಸ್ವರ ಕೇಳಿಬರದಂತೆ ಅರ್ಹ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದರು.

ಅಕಾಡೆಮಿಗಳಿಗೆ ನೀಡುವ ಅನುದಾನವನ್ನು ರೂ 1 ಕೋಟಿಗೆ ಹೆಚ್ಚಿಸಲಾಗಿದ್ದು, ಪುಸ್ತಕ ಪ್ರಶಸ್ತಿಯ ಮೊತ್ತವನ್ನು ರೂ 10,000 ದಿಂದ ರೂ. 50,000 ದವರೆಗೆ ಹೆಚ್ಚಿಸಲಾಗಿದೆ. ಯಕ್ಷಗಾನ ಕಲೆಗೆ ಪಾರ್ತಿಸುಬ್ಬ ಪ್ರಶಸ್ತಿ ನೀಡಿದಂತೆ, ಬಯಲಾಟ ಕಲೆಗೆ ಕೌಜಲಗಿ ನಿಂಗಮ್ಮರವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು. ಅಕಾಡೆಮಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಅಕಾಡೆಮಿಗಳಿಗೆ ರಾಜಕೀಯೇತರ ವ್ಯಕ್ತಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ತರಲಾಗಿದ್ದು, ವಿಕೇಂದ್ರಿಕರಣ ವ್ಯವಸ್ಥೆ, ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ ಹಾಗೂ ಕಲಾವಿದರ ಸಂಭಾವನೆಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದ್ದು, ಆ ಮೂಲಕ ಮಧ್ಯವರ್ತಿಗಳ ಕಾಟ ತಪ್ಪಿಸಿ, ಭ್ರಷ್ಟಾಚಾರ ನಿಯಂತ್ರಣಕ್ಕೆ ತಡೆಹಾಕಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

2012 ರ ಪಾರ್ತಿಸುಬ್ಬ ಪ್ರಶಸ್ತಿಯನ್ನು ಡಾ| ಶಿಮಂತೂರು ನಾರಾಯಣ ಶೆಟ್ಟಿ, 2013ರ ಪ್ರಶಸ್ತಿಯನ್ನು ಎಮ್. ಆರ್. ರಂಗನಾಥ ರಾವ್, 2014ರ ಪ್ರಶಸ್ತಿಯನ್ನು ಜಿ.ಎಸ್. ಭಟ್ಟ ಅವರಿಗೆ ಸಚಿವರು ಪ್ರದಾನ ಮಾಡಿದರು.

prashasti-3

2013ರ ವಾರ್ಷಿಕ ಗೌರವ ಪ್ರಶಸ್ತಿಯನ್ನು ಮಲ್ಪೆ ವಾಸುದೇವ ಸಾಮಗ, ಕಪ್ಪಕೆರೆ ಸುಬ್ರಾಯ ಭಾಗವತ, ಪ್ರೊ.ಎಸ್.ವಿ. ಉದಯಕುಮಾರ್ ಶೆಟ್ಟಿ, ಕೊಕ್ಕಡ್ತಿ ಕೃಷ್ಣಮೂರ್ತಿ, ಬಂಟ್ವಾಳ ಜಯರಾಮ ಆಚಾರ್ಯ, ಬಿ.ಎಮ್. ನಿಂಬಗಲ್ಲು ರುದ್ರಯ್ಯ, ನಾರಾಯಣ್ಣಪ್ಪ ಕಾರಿಗನೂರು, ಎ.ಎನ್. ಚೆನ್ನಬಸವಯ್ಯ, ಬಸವಲಿಂಗಪ್ಪ ಗುರುಬಸಪ್ಪ ವಿಭೂತೆ, ಈಶ್ವರಚಂದ್ರ ಬೆಟ್ಟಗೇರಿ ಅವರಿಗೆ ಪ್ರದಾನ ಮಾಡಲಾಯಿತು.

2014ರ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಉದ್ಯಾವರ ಜಯಕುಮಾರ, ಎಂ.ಎ. ನಾಯ್ಕ್, ಕೃಷ್ಣ ಭಂಡಾರಿ, ಮುದಕಪ್ಪ ಹನುಮಪ್ಪ ಹೊಸೂರ, ಸತ್ಯಕ್ಕ, ಸಣ್ಣ ಪಾಲಯ್ಯ, ನೆಲ್ಲಿಗೆರೆ ತಿಮ್ಮಪ್ಪಾಚಾರ್, ಮಹದೇವಪ್ಪ ಅವರಾಧಿ ಹಾಗೂ ಸಣ್ಣ ಬಸಣ್ಣ ಅವರಿಗೆ ಪ್ರದಾನ ಮಾಡಲಾಯಿತು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಬೆಳಗಲ್ಲು ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಪಿ ಸಾಧು, ಸದಸ್ಯರಾದ ವಸುಮತಿ ನಾಯರಿ, ಕಲಾ ವಿಮರ್ಶಕ ಹಾಗೂ ಹಿರಿಯ ಪತ್ರಕರ್ತ ಎ. ಈಶ್ವರಯ್ಯ ಉಪಸ್ಥಿತರಿದ್ದರು.

ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್ ಪ್ರಾಸ್ತವಿಕವಾಗಿ ಮಾತನಾಡಿದರು. ರಿಜಿಸ್ಟ್ರಾರ್ ಡಿ. ಆರ್. ಮೈಥಿಲಿ ಸ್ವಾಗತಿಸಿದರು. ಸದಸ್ಯರಾದ ಕೆ.ಎಮ್. ಶೇಖರ್ ನಿರೂಪಿಸಿದರು.

Leave a Reply

Your email address will not be published. Required fields are marked *