Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ದೈವ ಪ್ರಸಾದ ಕೈಯಲ್ಲಿ ಮುಟ್ಟದೆ ಅವಮಾನಿಸುತ್ತಿದ್ದ ವರ್ಗದಿಂದಲೇ ಇಂದು ದೈವಗಳ ಪ್ರತಿಷ್ಠೆ, ತುಳು ಜನರ ಸುಲಿಗೆ !

# ತುಳುನಾಡಿನ ಭೂತಾರಾಧನೆ ಒಂದು ರೀತಿ ಕೌತುಕಗಳ ಕಣಜ. ಅಲ್ಲಿ ಅಳೆದಷ್ಟು ಆಳಕ್ಕೆ ನಿಗೂಢತೆಗಳು ತೆರೆದುಕೊಳ್ಳುತ್ತದೆ. ಇದೊಂದು ಅದ್ಭುತ ಜಗತ್ತು. ಇಲ್ಲಿ ಹೆಜ್ಜೆ ಹೆಜ್ಜೆಗೆ ಮೈನವಿರೇಳಿಸುವ ಘಟನೆಗಳಿವೆ. ನಂಬಿಕೆ ಮತ್ತು ಆರಾಧನೆಗಳು ಸೇರಿ ಸೃಷ್ಟಿಸಿರುವ ಸಾವಿರಾರು ಕೌತಕಗಳು ಇಲ್ಲಿ ನಮ್ಮ ಮುಂದೆ ದುತ್ತನೆ ಬಂದು ನಿಂತು ಕೊಳ್ಳುತ್ತವೆ.

ಮಾನವ ಜೀವಿ ಅಸ್ತಿತ್ವಕ್ಕೆ ಬಂದು ಎಷ್ಟು ಕಾಲ ಸಂದಿರಬಹುದೋ, ಅಷ್ಟೇ ಪ್ರಾಚೀನವಾಗಿ ಈ ಭೂತಾರಾಧನೆಯೂ ಚಾಲ್ತಿಗೆ ಬಂದಿರಬಹುದು. ಈ ಭೂತಾರಾಧನೆಯ ಮೂಲ ಸತ್ವ ಅಡಗಿರುವುದು ಭಯದಲ್ಲಿ. ಆ ಭಯವೇ ಭಕ್ತಿಯ ಲೇಪನ ಹಚ್ಚಿಕೊಂಡು ಕಣ್ಣಿಗೆ ಕಾಣದ ಅಲೌಕಿಕ ಆಟವನ್ನು ಹೆಣೆಯುತ್ತದೆ.

ಎಲ್ಲಾ ಪ್ರಾಣಿಗಳಿಗಿರುವಂತೆ ಮಾನವನಿಗೂ ಪ್ರಾಣಭಯ ಅತಿಯಾಗಿ ಕಾಡುತ್ತಿತ್ತು. ಲಕ್ಷಾಂತರ ವರ್ಷಕ್ಕಿಂತ ಹಿಂದೆ ಮಾನವ ಮಾನ ಮುಚ್ಚಿಕೊಳ್ಳಲೂ ಅರಿತಿರದ ಕಾಲದಲ್ಲಿ ಆತನಿಗೆ ಅದ್ಭುತವಾಗಿ ಕಂಡ ಪ್ರತಿಯೊಂದು ಶಕ್ತಿಗಳಿಗೂ ಆತ ಹೆದರತೊಡಗಿದ. ಆತ ಆಗ ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ಬದುಕು ಸಾಗಿಸುತ್ತಿರಲಿಲ್ಲ.

ಆಹಾರ, ಜೀವ ರಕ್ಷಣೆ ಮತ್ತು ಸಂತಾನಾಭಿವೃದ್ಧಿ, ಇದೇ ಆತನ ಜೀವನದ ಚಟುವಟಿಕೆಗಳಾಗಿದ್ದವು. ಬಾನಿನಲ್ಲಿ ಸಿಡಿದು ಭಾರಿ ಸದ್ದಿನೊಂದಿಗೆ ಅಗಾಧ ಬೆಳಕು ಉಂಟು ಮಾಡುವ ಬೆಂಕಿಯುಂಡೆಯಂಥ ಸಿಡಿಲು. ಕೋರೆ ದಾಡೆ ಮಸೆಯುತ್ತಾ ಕೆದರಿದ ತಲೆಗೂದಲನ್ನು ಕುಲುಕುತ್ತಾ ಶರವೇಗದಲ್ಲಿ ದಾಳಿಮಾಡಿ ಕೊಂದು ಹಾಕಬಲ್ಲ ರಕ್ಕಸ ಗಾತ್ರದ ಕಾಡು ಹಂದಿಗಳು. ಏಕಾಏಕಿ ಮನುಷ್ಯನ ಮೇಲೆರಗಿ ಕ್ಷಣ ಮಾತ್ರದಲ್ಲಿ ಹರಿದು ಚಿಂದಿ ಮಾಡಬಲ್ಲ ಹಂಡೆ ಗಾತ್ರದ ತಲೆಯ ಚಂಡವ್ಯಾಘ್ರ. ಮನುಷ್ಯನಿಗೆ ಅರಿವಿಲ್ಲದಂತೆ ಆತನನ್ನು ಯಮಪುರಿಗೆ ಅಟ್ಟಬಲ್ಲ ಹೆಡೆ ಎತ್ತಿ ಬುಸುಗುಟ್ಟುವ ಸರ್ಪ. ಭಾರಿ ಕೊಂಬುಗಳನ್ನು ಹೊತ್ತು ಕಾಡನ್ನೇ ಅಡಿ ಮೇಲು ಮಾಡುವ ದೈತ್ಯ ಕಾಡುಕೋಣಗಳು. ಇದೆಲ್ಲವೂ ಮನುಷ್ಯನ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಿದ್ದವು. ಇಂದಿಗೂ ಮನುಷ್ಯನಲ್ಲಿ ಒಂದು ಗುಣವಿದೆ. ಅದೇನೆಂದರೆ ಒಬ್ಬನನ್ನು ಬಲದಿಂದ ಎದುರಿಸಲಾಗದಿದ್ದರೆ ಆತನಿಗೆ ಶರಣಾಗಿ ಆತನ ಸಾಮರ್ಥ್ಯವನ್ನು ಕೊಂಡಾಡಿ ನನ್ನನ್ನು ಬಿಟ್ಟು ಬಿಡು ಎಂದು ಅಂಗಲಾಚುವುದು. ಭೂತಾರಾಧನೆಯ ಮೂಲ ಆಶಯ ಇದೇ ಆಗಿದೆ.

nagaradhane

ಮಾನವ ಕುಲ ತನ್ನಲ್ಲಿರುವ ಕುತೂಹಲವನ್ನು ತಣಿಸುತ್ತಾ ತಣಿಸುತ್ತಾ ಒಂದಷ್ಟು ಹೊಸ ಪ್ರಯೋಗಗಳನ್ನು ಮಾಡತೊಡಗಿತು. ನಮಗೆ ಇಂದು ಯಕ್ ಶ್ಚಿತ್ ಅನಿಸುವ, ಆದರೆ ಆ ಕಾಲಕ್ಕೆ ಅಭೂತಪೂರ್ವವಾದ ಹಲವಾರು ಸಂಶೋಧನೆಗಳು ನಡೆದವು. ಮಾನವ ತನಗೆ ಬೇಕಾದ ವಸ್ತುಗಳನ್ನು ತಾನೇ ಬೆಳೆಯಲು ಪ್ರಾರಂಭಿಸಿದ. ಕೃಷಿ ಜೀವನ ಪ್ರಾರಂಭವಾಯಿತು. ಕಾಡು ಮೇಡುಗಳಲ್ಲಿ ಬದುಕುತ್ತಿದ್ದ ಮತ್ತು ಆಗಷ್ಟೇ ಭೂಮಿಯನ್ನು ಹಸನು ಮಾಡಿ ಕೃಷಿಗೆ ಕಾಲಿಡುತ್ತಿದ್ದ ಮಾನವನಿಗೆ ಈ ಎಲ್ಲಾ ಬಲಾಢ್ಯ ಶಕ್ತಿಗಳು ಸವಾಲು ಎಸೆದಿದ್ದವು.

ಸರಣಿ ಸಾವು ನೋವು ನಷ್ಟವನ್ನು ಅನುಭವಿಸಿದ ಮನುಷ್ಯ, ಈ ಶಕ್ತಿಗಳನ್ನು ಆರಾಧಿಸುವ ನಿರ್ಧಾರಕ್ಕೆ ಬಂದ. ಆ ಶಕ್ತಿಗಳೊಂದಿಗೆ ಭಾವನಾತ್ಮಕವಾಗಿ ಅನುಸಂಧಾನ ಮಾಡಿಕೊಳ್ಳಲು ಮುಂದಾದ. ಈ ಆರಾಧನಾ ಪದ್ದತಿಯೇ ನಾವು ಇಂದು ಕಾಣುತ್ತಿರುವ ಭೂತಾರಾಧನೆ. ಕೃಷಿಗೆ ಅತೀ ಹೆಚ್ಚು ಉಪಟಳವನ್ನು ನೀಡುವ ಹಂದಿ, ಇಲ್ಲಿ ಪಂಜುರ್ಲಿ ದೈವವಾಯಿತು. ಮನೆಯ ಹಟ್ಟಿಗೆ ನುಗ್ಗಿ ದನಗಳನ್ನು ಅಪಹರಿಸುವ ನರಭಕ್ಷಕ ಹುಲಿ ಇಲ್ಲಿ ಪಿಲಿಚಂಡಿ ಅಥವಾ ಪಿಲಿಭೂತವಾಯಿತು. ಯಾವುದೇ ಸಂದರ್ಭದಲ್ಲಿ ಮಾನವನ ಮೇಲೆ ಮಾರಣಾಂಕಿತ ದಾಳಿ ಮಾಡಬಲ್ಲ ಕನ್ನಡಿ ಹಾವು ಇಲ್ಲಿ ಗುಳಿಗ ಭೂತವಾಯಿತು. ಕೃಷಿಗೆ ಅತ್ಯಂತ ಅನಿವಾರ್ಯವಾದ ಕೋಣವನ್ನು ಇಲ್ಲಿ ಮೈಸಂದಾಯನ ರೂಪದಲ್ಲಿ ಆರಾಧಿಸಲಾಯಿತು. ನದಿಗಳಲ್ಲಿ ಅನಾಮತ್ತಾಗಿ ಮನುಷ್ಯನ್ನು ಕೊಂದು ತಿನ್ನುವ ಮೊಸಳೆ ಲೆಕ್ಕೆಸಿರಿ ದೈವವಾಯಿತು (ತುಳುವಿನಲ್ಲಿ ಮೊಸಳೆಗೆ ನಿಗಲೆ ಎಂದು ಕರೆಯುತ್ತಾರೆ). ವಿಷಪೂರಿತ ಘಟಸರ್ಪ ನಾಗನಾಗಿ ಆರಾಧಿಸಲ್ಪಟ್ಟ. ಒಟ್ಟಿನಲ್ಲಿ ಭಯವೇ ಈ ಭೂತಾರಾಧನೆಯ ಮೂಲ.

guliga

ಇದಲ್ಲದೆ, ಕೃಷಿಯನ್ನೇ ಅವಲಂಬಿಸಿದ್ದ ಇಲ್ಲಿನ ಮೂಲ ನಿವಾಸಿ ತುಳುವ ತನ್ನ ಕೃಷಿಯಲ್ಲಿ ಸಮೃದ್ಧಿ ದೊರಕಿಸಿಕೊಡುವಂತೆ ಇದೇ ಶಕ್ತಿಗಳಿಗೆ ಮೊರೆ ಹೋಗತೊಡಗಿದ. ತುಳುನಾಡಿಗೆ ವೈದಿಕ ದೇವತೆಗಳು ಮತ್ತು ದೇವಾಲಯ ಸಂಸ್ಕೃತಿ ಇನ್ನೂ ಪ್ರವೇಶಿಸಿರದ ಕಾಲದಲ್ಲಿ ಭೂತಾರಾಧನೆ ಒಂದು ಪ್ರಭುದ್ದವಾದ ಅಸ್ತಿತ್ವವನ್ನು ತುಳುನಾಡಿನಲ್ಲಿ ಹೊಂದಿತ್ತು. ಈ ಅಗೋಚರ ಭೂತಗಳ ಸಾಮಥ್ರ್ಯವನ್ನು ಹಾಡಿ ಹೊಗಳುವ ಬೀರ, ಪಾಡ್ದನಗಳ ರಚನೆಯಾಯಿತು. ಜಾನಪದರು ತಮ್ಮ ಬೇನೆ ಬೇಸರಗಳನ್ನು ಕಳೆಯಲು ಅಥವಾ ಕೃಷಿ ಕೆಲಸದ ಸಂದರ್ಭದಲ್ಲಿ ಹಾಡಲು ಇಂಥ ಹಲವಾರು ಜಾನಪದ ಗೀತೆಗಳನ್ನು ರಚಿಸಿದ್ದಾರೆ.

ಆದೆ ಬೀರ ಅಥವಾ ಪಾಡ್ದನಗಳು ಹಾಗಲ್ಲ. ಅವುಗಳಿಗೆ ಅದರದ್ದೇ ಆದ ಮಹತ್ವವಿದೆ. ಬೇಕಾಬಿಟ್ಟಿ ಎಲ್ಲಾ ಸಂದರ್ಭದಲ್ಲಿ ಯಾರು ಬೇಕಾದರೂ ಹಾಡುವಂತಿಲ್ಲ. ಅದೊಂದು ನಿರ್ಧಿಷ್ಟವಾದ ಸಮಯದಲ್ಲಿ ಹಾಡುವ ಪ್ರಾಸಬದ್ಧವಾದ ಅದ್ಭುತ ರಚನೆ. ಅದರ ಶಬ್ದ ಶಬ್ದಗಳಲ್ಲೂ ಒಂದು ರೀತಿ ಕಂಪನವಿರುತ್ತದೆ. ನಿಧಾನವಾಗಿ ವ್ಯಕ್ತಿಯೊಬ್ಬನೊಳಗೆ ಅವ್ಯಕ್ತ ಶಕ್ತಿಯೊಂದರ ಸಂಚಲನವನ್ನು ಮೂಡಿಸಬಲ್ಲ ಶಕ್ತಿ ಈ ಪಾಡ್ದನಗಳಿಗೆ ಇದೆ. ಈ ಪಾಡ್ದನ ಇಂದು ಕೇವಲ ಭೂತಾರಾಧಕರ ಬಾಯಲ್ಲಿ ಮಾತ್ರ ಉಳಿದುಕೊಂಡಿದೆ. ಆದರೆ ಒಂದಾನೊಂದು ಕಾಲದಲ್ಲಿ ತುಳುನಾಡಿನಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಈ ಪಾಡ್ದನಗಳನ್ನು ಆಸ್ಥೆಯಿಂದ ಕಲಿಯುತ್ತಿದ್ದರು.

ಭೂತ ಕಲಾವಿದ ಬೀರ ಹೇಳುವಾಗ ಎಲ್ಲಾದರೂ ಸ್ವಲ್ಪ ಎಡವಿದರೆ ಸಭೆಯ ಮದ್ಯದಿಂದ ಆಕ್ಷೇಪದ ದನಿಗಳು ಕೇಳಿ ಬರುತ್ತಿದ್ದವು. ಎಷ್ಟೋ ಸಂದರ್ಭದಲ್ಲಿ ದೈವ ನರ್ತಕನಿಂದ ತಪ್ಪು ಕಾಣಿಕೆ ಹಾಕಿಸಿದ ಉದಾಹರಣೆಗಳಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಪಾಡ್ದನ ಬಿಡಿ, ಸರಿಯಾಗಿ ದೈವದ ಹೆಸರೇ ನಮ್ಮ ಪೀಳಿಗೆಗೆ ತಿಳಿದಿಲ್ಲ. ದೈವ ನರ್ತಕರು ಈ ಪಾಡ್ದನಗಳಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿದ್ದು, ಪಾಡ್ದನಗಳ ಪೂರ್ಣ ಪಾಠವನ್ನು ಮಾಡದೆ ಮೊದಲ ಚರಣದಿಂದ ನೇರವಾಗಿ ಅಂತಿಮ ಚರಣಕ್ಕೆ ಜಂಪ್ ಹೊಡೆದು ಪಾಡ್ದನ ಹಾಡುವ ಶಾಸ್ತ್ರ ಮುಗಿಸಿ ಬಿಡುತ್ತಾನೆ.

ಇಲ್ಲಿ ಪಾಡ್ದನವನ್ನು ಯಾಕೆ ಉಲ್ಲೇಖಿಸಿದೆ ಎಂದರೆ, ಪಾಡ್ದನದ ಜಾಡು ಹಿಡಿದು ಪ್ರಾಚೀನ ತುಳುನಾಡು ಮತ್ತು ಭೂತಾರಾಧನೆಯ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದರ ಹೊರತಾಗಿ ಬೇರೆ ಯಾವುದೇ ಆಧಾರಗಳು ನಮಗೆ ದೊರಕುವುದಿಲ್ಲ. ಸರಕಾರಿ ಕೈಫಿಯತ್ತುಗಳು, ತಾಮ್ರ ಪತ್ರಗಳು ಮತ್ತು ಶಿಲಾಶಾಸನಗಳ ಆಧಾರದಲ್ಲಿ ಭೂತಾರಾಧನೆಯನ್ನು ವಿಮರ್ಶಿಸಲು ಸಾಧ್ಯವಿಲ್ಲ. ಇವುಗಳ ಆಧಾರದಲ್ಲಿ ಆ ಸಂದರ್ಭದಲ್ಲಿ ಇದ್ದ ದೈವಾರಾಧನೆಯ ಸ್ಥಿತಿಗತಿಗಳನ್ನು ಅರಿಯಬಹುದು ಅಷ್ಟೆ.

maisandaya

ಜಾನಪದ ಲೋಕ ಎಂದೂ ಕೂಡ ಕೈ ಬರಹಗಳನ್ನು ಅವಲಂಬಿಸಿದ್ದಿಲ್ಲ. ಅದು ಕೇವಲ ಬಾಯಿಯಿಂದ ಬಾಯಿಗೆ ಒಂದು ಸಾಹಿತ್ಯ ಸಂಪತ್ತನ್ನು ವರ್ಗಾಯಿಸುತ್ತಾ ಬಂದಿದೆ. ಕೆಲವು ಜಾತಿ ಜನಾಂಗಗಳು ಈ ಸಾಹಿತ್ಯವನ್ನು ಇಂದಿಗೂ ಕಾಪಿಡುವ ಕಾರ್ಯದಲ್ಲಿ ನಿರತವಾಗಿವೆ. ಕುಡುಬಿ ಜನಾಂಗದವರು ಉಳಿಸಿಕೊಂಡು ಬಂದ ಹೋಳಿ ಹಾಡುಗಳು, ಜೋಗಿ ಜನಾಂಗದವರು ಉಳಿಸಿಕೊಂಡು ಬಂದ ದಾಸಯ್ಯನವರ ಹಾಡುಗಳು, ಲಾವಣಿಗಳು, ಗೀಗಿ ಹಾಡುಗಳು, ಇವೆಲ್ಲಾ ಯಾವುದೇ ಲಿಖಿತವಾದ ದಾಖಲೆಯನ್ನು ನಂಬಿಕೊಂಡು ಉಳಿದಿಲ್ಲ.

ಇದೇ ರೀತಿ ತುಳುನಾಡಿನ ಭೂತಾರಾಧನೆಯನ್ನು ಇಂದಿಗೂ ಉಳಿಸಿಬೆಳೆಸಿಕೊಂಡು ಬಂದವರು ನಲಿಕೆ, ಪಂಬದ, ಪರವ ಜನಾಂಗದವರು. ಇವರಿಗೆ ಎಲ್ಲಾ ಭೂತಗಳ ಪಾಡ್ದನವೂ ಬಾಯಿಪಾಠವಾಗಿರುತ್ತದೆ. ಪ್ರಾದೇಶಿಕವಾಗಿ ಒಂದಷ್ಟು ಭಿನ್ನತೆಗಳು ಕಂಡು ಬಂದರೂ, ಮೂಲಕತೆಗಳು ಒಂದೇ ಆಗಿರುತ್ತದೆ. ಈ ಪಾಡ್ದನಗಳಲ್ಲಿ ಭೂತದ ಹುಟ್ಟು ಮತ್ತು ಪ್ರಸಾರದ ಬಗ್ಗೆ ಸವಿವರವಾದ ಮಾಹಿತಿ ಇರುತ್ತದೆ. ಈ ಇಡೀ ಭೂತಾರಾಧನೆಯನ್ನು ಇತ್ತೀಚೆಗೆ ಕುಲಗೆಡಿಸ ಹೊರಟವರು ನಮ್ಮ ಊರಿನ ಅರ್ಚಕರುಗಳು ಮತ್ತು ಅವರನ್ನು ಕರೆಸಿ ಭೂತಾಲಯದ ಮೂಲ ಆಶಯಗಳನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವ ಇಂದಿನ ಆಧುನಿಕ ತುಳುವರು.

ತುಳುನಾಡಿನ ಮೂಲನಿವಾಸಿಗಳು ಜಲ ಆರಾಧಕರು. ಇಲ್ಲಿನ ಜನ ದೈವೊಗು ಪೂ, ನೀರ್ ದೀಪುನಿ ಎನ್ನುತ್ತಾರೆ ಹೊರತು, ಧೂಪ ದೀಪ ಬೆಳಗುವ ಮಾತಾಡುವುದಿಲ್ಲ. ನಮ್ಮ ಮದುವೆಗಳಲ್ಲಿ ಧಾರೆ ಎರೆದುಕೊಡುವ ಪದ್ದತಿಗೆ ಇರುವ ಮಹತ್ವ ಲಾಜ ಹೋಮ ಮತ್ತು ಸಪ್ತಪದಿ ತುಳಿಯುವುದಕ್ಕಿಲ್ಲ. ವೈದಿಕ ಸಂಸ್ಕೃತಿಗಿಂತ ಭಿನ್ನವಾದ ಸಂಸ್ಕೃತಿ ತುಳುವರದ್ದು. ಪ್ರಾಚೀನ ಪಾಡ್ದನಗಳಲ್ಲಿ ಎಲ್ಲಿಯೂ ಕೂಡ ಬ್ರಾಹ್ಮಣರು ಬಂದು ಭೂತಗಳನ್ನು ನಂಬಿದ ಉದಾಹರಣೆ ಇಲ್ಲ.

“ಬಲ್ಯಾಯೆರೆನ ಬಲ್ಮೆಡ್ ದೈವ ತೋಜಿ ಬತ್ತ್ಂಡ್” ಎಂಬ ಉಲ್ಲೇಖ ತುಂಬಾ ಕಡೆ ಇದೆ. ಬ್ರಾಹ್ಮಣರು ಕೇವಲ ದೈವದ ಇರುವಿಕೆಯನ್ನು ತಿಳಿಸುತ್ತಿದ್ದರು. ಅದು ಕೂಡ ಕಳೆದ 5 ಶತಮಾನದ ನಂತರ ಈ ಬೆಳವಣಿಗೆ ಕಾಣಿಸಿಕೊಂಡಿದೆ. ಅದರ ಮೊದಲು ಯಾವುದೇ ಬ್ರಾಹ್ಮಣರ ಉಲ್ಲೇಖ ಪಾಡ್ದನಗಳಲ್ಲಿ ಕಂಡು ಬರುವುದಿಲ್ಲ. ಹಿಂದೆ ದೈವವನ್ನು ಶುದ್ದ ಮಾಡಲು ಈಗ ಬರುವಂತೆ ಹಿಂದೆ ಬ್ರಾಹ್ಮಣರು ಬಂದು ನವಕ ಕಲಶಾಭಿಷೇಕ ಮಾಡುತ್ತಿರಲಿಲ್ಲ. ಬದಲಾಗಿ ಶುದ್ಧದ ಮಡಿವಾಳ ಬಂದು ದೈವಕ್ಕೆ ಶುದ್ಧದ ಕ್ರಿಯೆಗಳನ್ನು ಮಾಡುತ್ತಿದ್ದ. ದೈವ ಪ್ರತಿಷ್ಟೆಗೆ ಈಗಿನಂತೆ ಐದಾರು ಹೋಮ ಇಟ್ಟು ಮಂಡಲ ಬರೆಯುವ ಕ್ರಮವೇ ಇರಲಿಲ್ಲ. ಕೆಲವು ದೈವಗಳಿಗೆ ಪಾರಂಪರಿಕವಾಗಿ ಬಂದ ಜಾತಿಯ ಚಾಕಿರಿಯವರು ಈ ಕೆಲಸವನ್ನು ಮಾಡುತ್ತಿದ್ದರು. ಉದಾಹರಣೆಗೆ ಕಲ್ಕಡನ ಪ್ರತಿಷ್ಟೆಗೆ ಮೂಲ್ಯ ಜನಾಂಗದವರೇ ಪ್ರಧಾನವಾಗಿತ್ತು. ಬಿಲ್ಲವ ಜನಾಂಗದವರು ಹೆಚ್ಚಿನ ದೈವಗಳ ಪ್ರತಿಷ್ಟೆ ನಡೆಸುತ್ತಿದ್ದರು. ರಾಜನ್ ದೈವಗಳ ಪ್ರತಿಷ್ಟೆಗೆ ಊರಿನ ಗುತ್ತಿನ ಗಡಿ ಹಿಡಿದವರೇ ಬಂದು ಮುಖಂಡತ್ವ ವಹಿಸಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ದೈವಗಳು ನೀಡುತ್ತಿದ್ದ ಪ್ರಸಾದವನ್ನೂ ಕೈಯಲ್ಲಿ ಮುಟ್ಟದೆ ಅವಮಾನಿಸುತ್ತಿದ್ದ ಬ್ರಾಹ್ಮಣ ವರ್ಗ, ಇಂದು ದೈವಗಳ ಪ್ರತಿಷ್ಠೆ ನಡೆಸುವ ನೆಪದಲ್ಲಿ ತುಳುವ ಜನರ ಸುಲಿಗೆಯಲ್ಲಿ ತೊಡಗಿದೆ.

ಪಾಡ್ದನಗಳಲ್ಲಿ ಭೂತಗಳನ್ನು ನಂಬದೆ ಉದ್ದಟತನ ತೋರಿ ಭೂತಗಳನ್ನು ಮಂತ್ರದಲ್ಲಿ ಭಂದಿಸಲು ಮುಂದಾಗಿ ಕೊನೆಗೆ ಪಡಬಾರದ ಪಾಡು ಪಟ್ಟು ಭೂತಗಳಿಗೆ ಶರಣಾದ ಕುಂಟಾರ ತಂತ್ರಿ, ಉಬಾರ ವಯಿಲಾರು, ಕುಕ್ಕೆಹಳ್ಳಿ ಉಡುಪರು ಹೀಗೆ ಹಲವಾರು ಜನರ ಕತೆಗಳಿವೆ. ಈ ಎಲ್ಲಾ ಬ್ರಾಹ್ಮಣ ಕುಟುಂಬಗಳು ನಂತರ ತಮ್ಮ ತಪ್ಪಿನ ಅರಿವಾಗಿ ದೈವಗಳ ಆರಾಧನೆಗೆ ಮುಂದಾದವು. ಅಂದು ಭೂತಾರಾಧನೆಯನ್ನು ಧಿಕ್ಕರಿಸಿದ ವೈದಿಕ ವರ್ಗ, ಇದೀಗ ಭೂತಗಳಿಗೆ ಒಂದೊಂದೇ ಕತೆ ಕಟ್ಟಿ ಭೂತಗಳನ್ನು ಪುರಾಣದ ಪಾತ್ರಗಳಾಗಿಸುವ ಪ್ರಯತ್ನದಲ್ಲಿ ತೊಡಗಿವೆ.

ಮುಂಬಯಿಯಲ್ಲಿ ಹೆಂಡ ಮಾರಿ ದುಡ್ಡು ಮಾಡಿದ ಕೆಲವು ತುಳುವರು, ಪಾಪ ಪರಿಹಾರಕ್ಕಾಗಿ ಈ ವೈದಿಕರನ್ನು ತಲೆಯ ಮೇಲೆ ಹೊತ್ತು ಕೊಂಡರು. ಹುಳದ ಮಲದಿಂದ ಮಾಡಲಾದ ರೇಷ್ಮೆ ಜರಿಯುಟ್ಟು ಮಡಿ ಮಡಿ ಎನ್ನುತ್ತಾ ಉಳಿದ ಜಾತಿಯನ್ನು ತುಚ್ಚೀಕರಿಸುತ್ತಾ ನಮ್ಮ ದುಡ್ಡಿನಲ್ಲಿ ನಮಗೆ ಎರಡನೇ ಪಂಕ್ತಿಯಲ್ಲಿ ಊಟ ಹಾಕಿ ಅವಮಾನಿಸುತ್ತಾ ಮೆರೆಯುವ ಈ ಪರಾವಲಂಬಿ ಜೀವಿಗಳು ಭೂತಾಲಯವನ್ನು ಸಂಪೂರ್ಣವಾಗಿ ಕುಲಗೆಡಿಸಿ ಹಾಕಿ ಬಿಟ್ಟಿದ್ದಾರೆ.

ಪಂಜುರ್ಲಿ. ಇದು ತುಳುನಾಡಿನ ಅತ್ಯಂತ ಪ್ರಾಚೀನ ಶಕ್ತಿ. ಇದರ ಕತೆ ಹಲವಾರು ರೂಪದಲ್ಲಿ ತೆರೆದುಕೊಳ್ಳೂತ್ತದೆ. ಆಯನಾಡಿನ ಸೀಮೆಯ ರಾಯರ ಮಗಳು ಮಾಡಿದ ಮಣ್ಣಿನ ಹಂದಿಯ ಮೂರ್ತಿಗೆ ದೇವರು ಜೀವ ತುಂಬಿದ ಕತೆ ಒಂದು ಕಡೆ ಕೇಳಿ ಬಂದರೆ, ಇನ್ನೊಂದು ಪಾಡ್ದನದ ಪ್ರಕಾರ ಈಶ್ವರ ಬೇಟೆಯಾಡುವ ಸಂದರ್ಭದಲ್ಲಿ ಸಿಕ್ಕಿದ ಹಂದಿಯ ಮರಿಯೊಂದನ್ನು ಈಶ್ವರ ತನ್ನ ಅರಮನೆಗೆ ತಂದು ಸಾಕುತ್ತಾನೆ. ಆ ಹಂದಿ ಬಿರ್ಮನ ಬೈದನ ಗದ್ದೆಗೆ ಹೋಗಿ ರಂಪ ಮಾಡಿದ ಹಿನ್ನೆಲೆಯಲ್ಲಿ ಈಶ್ವರ ಆ ಹಂದಿಯನ್ನು ಕೊಂದು ಹಾಕುತ್ತಾನೆ. ಆ ಹಂದಿಯೇ ಪಂಜುರ್ಲಿ ದೈವವಾಗುತ್ತದೆ. ಈ ಹಂದಿ ಘಟ್ಟದಿಂದ ಇಳಿದು ಕೆಳಗೆ ಬಂದು ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುತ್ತದೆ. ಅಲ್ಲಿ ಕುಕ್ಕೆ ಲಿಂಗಕ್ಕೆ ತಲೆಬಾಗಿ ನಮಿಸುತ್ತದೆ(ಗಮನಿಸಿ ಕುಕ್ಕೆ ಸುಬ್ರಮಣ್ಯ ಅಲ್ಲ, ಕುಕ್ಕೆಲಿಂಗ. ಈಗ ಇದು ಹೊರಭಾಗದ ಸುತ್ತು ಪೌಳಿಯಲ್ಲಿ ಅನಾಥವಾಗಿ ಬಿದ್ದಿದೆ.). ಮುಂದೆ ಇದು ಮೂಡಾಯಿ ಕುಡುಮಕ್ಕೆ ಹೋಗುತ್ತದೆ. (ನಂತರದ ಕತೆ ಬಹಳ ಆಸಕ್ತಿ ದಾಯಕವಾಗಿದೆ ಮುಂದುವರೆಯುವುದು).

panjurli

One Comment

  1. ashwinbelle66@gmail.com'

    ashwin lawrence

    March 18, 2015 at 12:17 pm

    Very nice article…..keep it up!

Leave a Reply

Your email address will not be published. Required fields are marked *