Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಕಾಸರಗೋಡು: ಹೆಚ್ಚುತ್ತಿರುವ ವೋಲ್ಟೇಜ್ ಸಮಸ್ಯೆ- ಕೃಷಿಕರು, ವಿದ್ಯಾರ್ಥಿಗಳಿಗೆ ಸಂಕಷ್ಟ !

ಕಾಸರಗೋಡು: ಜಿಲ್ಲೆಯಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಕಾಡುತ್ತಿದ್ದು, ಜಿಲ್ಲೆಯಾದ್ಯಂತ ವ್ಯಾಪಾರಿಗಳು, ಕೈಗಾರಿಕಾ ಸಂಸ್ಥೆಗಳು ಸಮಸ್ಯೆ ಎದುರಿಸುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವೋಲ್ಟೇಜ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಚಿಮಿಣಿ ಬುಡ್ಡಿಯ ಮೊರೆಹೋಗಬೇಕಾದ ಅನಿವಾರ್ಯತೆಯಿದೆ. ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ ಶಾಲಾ ಪರೀಕ್ಷೆ ನಡೆದುಬರುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ವಿದ್ಯಾರ್ಥಿಗಳನ್ನು ಕಂಗೆಡಿಸಿದೆ. ಹಗಲು, ರಾತ್ರಿ ವೋಲ್ಟೇಜ್ ಸಮಸ್ಯೆ ಕಾಡುತ್ತಿರುವುದರಿಂದ ವಿದ್ಯುತ್ ನಾಮ ಮಾತ್ರಕ್ಕೆ ಸೀಮಿತವಾಗಿದೆ.

ಬಿರು ಬಿಸಿಲಿನಿಂದಾಗಿ ನಾಡಿನಾದ್ಯಂತ ವಿದ್ಯುತ್ ಬಳಕೆಯಲ್ಲಿ ಗಣನೀಯ ಏರಿಕೆಯುಂಟಾಗಿದೆ. ಜತೆಗೆ ವಿದ್ಯುತ್ ಲೈನ್ ಹಾಗೂ ಹಳೆ ಕಾಲದ ಉಪಕರಣಗಳಿಂದ ಕಾಣಿಸಿಕೊಳ್ಳುವ ಸಮಸ್ಯೆಗಳಿಂದಲೂ ವಿದ್ಯುತ್ ವಿತರಣೆಗೆ ತೊಡಕುಂಟಾಗುತ್ತಿದೆ. ಶಿಥಿಲಗೊಂಡ ವಿದ್ಯುತ್ ತಂತಿಗಳಲ್ಲಿ ಧಾರಣಾ ಶಕ್ತಿ ಕಡಿಮೆಯಾಗಿರುವುದರಿಂದ, ವೋಲ್ಟೇಜ್ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗುತ್ತಿರುವುದಾಗಿ ಕೆಎಸ್ಇಬಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಮನೆ, ಸಂಸ್ಥೆಗಳಿಗೆ ಹಾಗೂ ಇತರ ಬಳಕೆಗೆ 220ರಿಂದ 250 ವೋಲ್ಟ್ ವರೆಗೆ ಲಭಿಸುತ್ತಿದ್ದ ವಿದ್ಯುತ್ 180 ವೋಲ್ಟ್ಗೆ ಇಳಿಕೆಯಾಗಿದೆ. ಕಿರು ಉದ್ದಿಮೆಗಳಿಗೆ, ವ್ಯಾಪಾರಿಗಳಿಗೆ, ಬ್ಯಾಂಕ್ ಸಹಿತ ಇತರ ಕಚೇರಿಗಳಿಗೂ ಅಗತ್ಯ ಪ್ರಮಾಣದ ವಿದ್ಯುತ್ ಲಭ್ಯವಾಗುತ್ತಿಲ್ಲ. ಇನ್ನು ಕೆಲವು ಕಚೇರಿಗಳಲ್ಲಿ ಯುಪಿಎಸ್ ಚಾರ್ಜ್ ಮಾಡುವಷ್ಟೂ ವಿದ್ಯುತ್ ಲಭ್ಯವಾಗುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಬಹುತೇಕ ಖಾಸಗಿ ಹಾಗೂ ಸರಕಾರಿ ಕಚೇರಿಗಳಲ್ಲಿ ಜನರೇಟರ್ ಮೂಲಕ ವಿದ್ಯುತ್ ಪಡೆದುಕೊಳ್ಳುವುದು ಅನಿವಾರ್ಯವಾಗುತ್ತಿದೆ.

ಕಚೇರಿ ಹಾಗೂ ಮನೆಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತಿರುವುದರಿಂದ ಸಹಜವಾಗಿ ವಿದ್ಯುತ್ ಬಳಕೆಯಲ್ಲಿ ಏರಿಕೆಯುಂಟಾಗಿದೆ. ಬಹುತೇಕ ಕಡೆ ಇದರಿಂದ ವಿದ್ಯುತ್ ಕೊರತೆ ಕಂಡುಬರುತ್ತಿರುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ.

ಕೃಷಿಕರು ತೋಟಕ್ಕೆ ನೀರು ಹಾಯಿಸಲು ಪಂಪು ಚಾಲನೆಗಾಗಿ ವೋಲ್ಟೇಜ್ ಲಭಿಸಲು ತಡರಾತ್ರಿ ವರೆಗೆ ಕಾದುಕುಳಿತುಕೊಳ್ಳಬೇಕಾದ ಅನಿವಾರ್ಯತೆಯಿದೆ. ಸಾರ್ವಜನಿಕ ಕುಡಿಯುವ ನೀರಿನ ಪೂರೈಕೆಗೂ ವೋಲ್ಟೇಜ್ ಸಮಸ್ಯೆ ತೊಡಕಾಗಿ ಪರಿಣಮಿಸುತ್ತಿದೆ.

ಕಾಸರಗೋಡು ಅಭಿವೃದ್ಧಿಗಾಗಿ ನಿಯೋಜಿಸಲಾಗಿದ್ದ ಡಾ. ಪ್ರಭಾಕರನ್ ಆಯೋಗ ಜಿಲ್ಲೆಯ ವಿದ್ಯುತ್ ಕೊರತೆ ನಿವಾರಿಸುವ ನಿಟ್ಟಿನಲ್ಲಿ 25 ಕೋಟಿ ರೂ. ಮಂಜೂರು ಮಾಡಿದ್ದರೂ, ಇದರ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ತೌಡುಗೋಳಿಯಿಂದ ಮೈಲಾಟಿ ವರೆಗೆ 11ಕೆವಿ ಪ್ರಸರಣ ವಿದ್ಯುತ್ ಲೈನನ್ನು ದ್ವಿಪಥಗೊಳಿಸುವುದರ ಜತೆಗೆ, ಶಿಥಿಲಗೊಂಡ ಗೋಪುರಗಳನ್ನು ಬದಲಾಯಿಸುವ ಯೋಜನೆ ಇದಾಗಿದೆ.
ತೌಡುಗೋಳಿ-ಮೈಲಾಟಿ ವಿದ್ಯುತ್ ಲೈನ್ ಅಭಿವೃದ್ಧಿಗೊಳಿಸುವ ಕಾರ್ಯ ಪೂರ್ತಿಗೊಂಡಾಗ ಕಾಸರಗೋಡು ಜಿಲ್ಲೆಯ ವಿದ್ಯುತ್ ಸಮಸ್ಯೆಗೆ ಅಲ್ಪಮಟ್ಟಿನ ಪರಿಹಾರ ಲಭಿಸಲು ಸಾಧ್ಯ ಎಂಬುದು ಅಧಿಕಾರಿಗಳ ಆಶಯ.

‘ಟ್ರಾನ್ಸ್ ಫಾರ್ಮರ್ ಕಾರ್ಯಕ್ಷಮತೆ ಹೆಚ್ಚಿಸಬೇಕು’

* ವಿದ್ಯುತ್ ವೋಲ್ಟೇಜ್ ಕೊರತೆ ಸಣ್ಣ ಉದ್ದಿಮೆದಾರರಿಗೆ ನಿರಂತರ ಸಮಸ್ಯೆ ತಂದೊಡ್ಡುತ್ತಿದೆ. ವೋಲ್ಟೇಜ್ ಸಮಸ್ಯೆಯಿಂದ ಬಹುತೇಕ ಸಂಸ್ಥೆಗಳಲ್ಲಿ ಹಗಲು ಕೆಲಸ ಮಾಡಲಾಗದ ನಿರ್ಮಾಣವಾಗಿದೆ. ಟ್ರಾನ್ಸ್ಫಾರ್ಮರ್ಗಳ ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ ಕೈಗಾರಿಕಾ ಪ್ರಾಂಗಣಗಳಿಗೆ ಪ್ರತ್ಯೇಕ ಫೀಡರ್ ಮೂಲಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಜತೆಗೆ ವಿದ್ಯುತ್ ಇಲಾಖೆ ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಗ್ರಾಹಕರ ಸಭೆ ನಡೆಸಿ ದೂರು ಆಲಿಸಲು ಕ್ರಮ ಕೈಗೊಳ್ಳಬೇಕು

– ರಾಜಾರಾಮ ಎಸ್. ಪೆರ್ಲ
ಉಪಾಧ್ಯಕ್ಷರು, ಕೇರಳ ಸಣ್ಣ ಉದ್ದಿಮೆದಾರರ ಸಂಘಟನೆ, ಕಾಸರಗೋಡು.

Leave a Reply

Your email address will not be published. Required fields are marked *