Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಾಚಣಿಕೆ ತಯಾರಿಯಲ್ಲಿ ರಾಮಚಂದ್ರನ್ ಅವರದು ನಾಲ್ಕು ದಶಕಗಳ ಸಾಧನೆ !

# ತಲೆ ಗೂದಲಿಗೆ ಅಂದದ ಆಕಾರ ನೀಡುವ ಬಾಚಣಿಕೆ ತಯಾರಿಯು ತಮಿಳುನಾಡು ನಿವಾಸಿ ರಾಮಚಂದ್ರನ್ ಹಾಗೂ ಕಾಸರಗೋಡಿನ ಜನತೆಯ ಮಧ್ಯೆ ಅವಿನಾಭಾವ ನಂಟು ಬೆಳೆಸಿದೆ.

ಜಾನುವಾರುಗಳ ಕೋಡು, ಮರ, ಪ್ಲಾಸ್ಟಿಕ್ ಬಳಸಿ ಸುಂದರ ಆಕಾರದ ಹೇನಿನ ಬಾಚಣಿಕೆ, ತಲೆ ಗೂದಲಿನ ಸಂದಿಯಿಂದ ಹೇನನ್ನು ಸುಲಭವಾಗಿ ಹೊರ ತೆಗೆಯಬಲ್ಲ ಉದ್ದನೆಯ ಬಾಚಣಿಕೆ (ಒಯಿಪನೆ) ತಯಾರಿಯಲ್ಲಿ ರಾಮಚಂದ್ರನ್ ಅವರದು ಪಳಗಿದ ಕೈ.

40ವರ್ಷಕ್ಕೂ ಹಿಂದೆ ತಮಿಳುನಾಡಿನ ತಿರುನಲ್ವೇಲಿಯ ಕಾರ್ಪನೇರಿಯಿಂದ ಉದ್ಯೋಗ ಅರಸಿಕೊಂಡು ಬಂದಿದ್ದ ರಾಮಚಂದ್ರನ್, ಬಾಚಣಿಕೆ ತಯಾರಿ ಕಾಯಕವನ್ನು ಆಯ್ಕೆ ಮಾಡಿಕೊಂಡದ್ದರು. ಇದೀಗ 70ರ ಹರೆಯದಲ್ಲೂ ಬತ್ತದ ಉತ್ಸಾಹದೊಂದಿಗೆ ಕಾಯಕದಲ್ಲಿ ಮುಂದುವರಿಯುತ್ತಿದ್ದಾರೆ.

ಜಾನುವಾರುಗಳ ಕೋಡು ಬಳಸಿ ರಾಮಚಂದ್ರನ್ ತಯಾರಿಸುತ್ತಿದ್ದ ಹೇನಿನ ಬಾಚಣಿಕೆಗೆ ಎಲ್ಲಿಲ್ಲದ ಬೇಡಿಕೆ. ಅತಿ ನಾಜೂಕುತನದ ಕೆಲಸದ ಜತೆಗೆ, ಬಾಚಣಿಕೆಯ ಹಲ್ಲುಗಳ ಅಂತರ ಅತಿ ಸನಿಹವಿರುವುದರಿಂದ ಇವರು ತಯಾರಿಸಿದ ಬಾಚಣಿಕೆಗೆ ಇಂದಿಗೂ ಹೆಚ್ಚಿನ ಬೇಡಿಕೆಯಿದೆ.

ಕಾಸರಗೋಡಿನ ಹಳೆಯ ಕೋರ್ಟು ರಸ್ತೆ ಎಂದೇ ಖ್ಯಾತಿ ಹೊಂದಿದ್ದ ತಾಲೂಕು ಕಚೇರಿ ರಸ್ತೆಯ ಅಂಚಿಗೆ ಒಂದು ಕಾಲ ಘಟ್ಟದಲ್ಲಿ 15ಕ್ಕೂ ಹೆಚ್ಚು ಮಂದಿ ಪಾರಂಪರಿಕ ಶೈಲಿಯಲ್ಲಿ ಬಾಚಣಿಕೆ ತಯಾರಿ ಕೆಲಸದಲ್ಲಿ ನಿರತರಾಗಿದ್ದರೆ, ಇಂದು ರಾಮಚಂದ್ರನ್ ಒಬ್ಬರು ಮಾತ್ರ ಉಳಿದುಕೊಂಡಿದ್ದಾರೆ.

ಹೊಟ್ಟೆಪಾಡಿಗಾಗಿ ರಾಮಚಂದ್ರನ್ ನಗರದ ತಾಲೂಕು ಕಚೇರಿ ಎದುರು ಭಾಗದ ರಸ್ತೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾಯಕವಿದು. ಇದೀಗ ಜಾನುವಾರುಗಳ ಕೋಡು ಲಭ್ಯತೆ ಕಡಿಮೆಯಾಗಿರುವುದರಿಂದ ಮರ, ಪ್ಲಾಸ್ಟಿಕ್ ಬಾಚಣಿಕೆಗಳನ್ನು ಮಾತ್ರ ಇವರು ತಯಾರಿಸುತ್ತಿದ್ದಾರೆ.

‘ಹಳೆ ಕಾಲದ ಗ್ರಾಹಕರು ಇಂದಿಗೂ ಸಂಪಕರ್ಿಸುತ್ತಿದ್ದಾರೆ’

* ಆಧುನಿಕ ರೀತಿಯ ಬಾಚಣಿಕೆಗಳು ಇಂದು ಮಾರುಕಟ್ಟೆಯಲ್ಲಿ ಸ್ಪರ್ದಾತ್ಮಕ ದರದಲ್ಲಿ ಲಭ್ಯವಿರುವುದರಿಂದ, ಪಾರಂಪರಿಕ ರೀತಿಯ ಬಾಚಣಿಕೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದಾಗಿ ಸಹ ಕಾರ್ಮಿಕರೆಲ್ಲ ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಳಿ ವಯಸ್ಸಿನಲ್ಲಿ ಬೇರೆ ಕೆಲಸ ಮಾಡುವುದು ಅಸಾಧ್ಯವಾಗಿದೆ. ಜತೆಗೆ, ಹಳೆ ಕಾಲದ ಕೆಲವು ಗ್ರಾಹಕರು ಇಂದಿಗೂ ಬಾಚಣಿಕೆಗಾಗಿ ತನ್ನನ್ನು ಸಂಪರ್ಕಿಸುತ್ತಿರುವುದರಿಂದ ಇದೇ ಕೆಲಸದಲ್ಲಿ ಮುಂದುವರಿಯುತ್ತಿದ್ದೇನೆ.

– ರಾಮಚಂದ್ರನ್,
ಬಾಚಣಿಕೆ ತಯಾರಿ ಕಾರ್ಮಿಕ.

Leave a Reply

Your email address will not be published. Required fields are marked *