Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಣ್ಣು ಸಾಗಿಸುವ ಟಿಪ್ಪರ್ ಆರ್ಭಟಕ್ಕೆ ಗಾಯಗೊಂಡ ಬೈಕ್ ಸವಾರ ಮೃತ್ಯು

ಮೂಡುಬೆಳ್ಳೆ: ಮೂಡುಬೆಳ್ಳೆ – ಉಡುಪಿ ರಸ್ತೆಯ ತೋಕೋಳಿ ಬಸ್ ನಿಲ್ದಾಣದ ಬಳಿ ಮಾರ್ಚ್ 20ರಂದು ಬೆಳಗ್ಗೆ ನವಯುಗ ಸಂಸ್ಥೆಗೆ ಸೇರಿದ ಮಣ್ಣು ಸಾಗಾಟ ಮಾಡುವ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಉಡುಪಿ ನಗರದ ಚಿನ್ನದಂಗಡಿ ನೌಕರ, ಕಾರ್ಕಳ ತಾಲೂಕಿನ ಪಳ್ಳಿ ನಿವಾಸಿ ರಾಜೇಶ್ ಆಚಾರ್ಯ (35) ಇಂದು ನಸುಕಿನ 2 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

tokoli bick-5

* ಅಪಘಾತದ ದೃಶ್ಯ

ಎಂದಿನಂತೆ ಶುಕ್ರವಾರವೂ ಉಡುಪಿಯ ಚಿನ್ನದಂಗಡಿಗೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತೋಕೋಳಿ ಬಸ್ ನಿಲ್ದಾಣದ ಸಮೀಪ ಜವರಾಯನಂತೆ ಮೇಲೆರಗಿದ ಟಪ್ಪರ್ನಿಂದ ಗಂಭೀರ ಗಾಯಗೊಂಡಿದ್ದ ರಾಜೇಶ್ ಅವರನ್ನು ಸ್ಥಳೀಯರು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದರು.

ಮೃತ ರಾಜೇಶ್ ಅವರು 27 ಜೂನ್ 2012ರಲ್ಲಿ ಸವಿತಾ ಅವರೊಂದಿಗೆ ವಿವಾಹವಾಗಿದ್ದರು. ಅವರಿಗೆ ಆಕಾಶ್ ಹೆಸರಿನ ಎಳೆಯ ಗಂಡು ಮಗು ಇದೆ. ಪತಿಯನ್ನು ಕಳೆದುಕೊಂಡ ಸವಿತಾ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ.

maduve dina rajesh-1maduve dina rajesh-2

* ಮದುವೆ ದಿನ ರಾಜೇಶ್ ಆಚಾರ್ಯ

ವೃದ್ಧ ತಂದೆ-ತಾಯಿ, ಪತ್ನಿಗೆ ಆಘಾತ

ಮೃತ ರಾಜೇಶ್ ಅವರು ಪಳ್ಳಿ ಬಾಬುರಾಯ ಆಚಾರ್ಯ – ಲಲಿತಾ ದಂಪತಿಯ ನಾಲ್ಕು ಮಂದಿ ಮಕ್ಕಳಲ್ಲಿ ಮೂರನೆಯವರು. ಅಣ್ಣ ಸದಾನಂದ ಆಚಾರ್ಯ ಅವರು ಪಳ್ಳಿ ಸಮೀಪ ಕೆಲಸ ಮಾಡುತ್ತಿದ್ದಾರೆ. ಅಕ್ಕ ಗೀತಾ ಮತ್ತು ತಂಗಿ ವನಿತಾ ಅವರು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ವೃದ್ಧ ತಂದೆ ತಾಯಿಯಯನ್ನು ನೋಡಿಕೊಳ್ಳುತ್ತ, ಅಣ್ಣನೊಂದಿಗೆ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದವರು ಇದೇ ರಾಜೇಶ್.

ರಾಜೇಶ್ ಆಚಾರ್ಯರ ಸಾವಿನಿಂದ ವೃದ್ಧ ತಂದೆ-ತಾಯಿ ತೀವ್ರ ನೊಂದಿದ್ದಾರೆ. ಕೆಲಸಕ್ಕೆ ತೆರಳಿದ ಮಗ ಸಂಜೆ ಮನೆಗೆ ಬರುತ್ತಾನೆ ಎಂದು ಕಾಯುತ್ತಿದ್ದ ರಾಜೇಶ್ ತಂದೆ-ತಾಯಿಗೆ ಮಗನ ಅಪಘಾತದ ಸುದ್ದಿಯಿಂದ ಸಿಡಿಲು ಬಡಿದಂತಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿ ಶವವಾಗಿ ಮನೆಗೆ ಮರಳಿದ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಮಗನ ಮೃತದೇಹ ಕಂಡು ವೃದ್ಧ ತಂದೆ-ತಾಯಿ, ಹೆಂಡತಿ, ಸಂಬಂಧಿಕರು ದಿಕ್ಕೇ ತೋಚದಂತಾಗಿದ್ದು, ಆಘತಕ್ಕೆ ಒಳಗಾಗಿದ್ದಾರೆ. ಏನೂ ಅರಿಯದ ಪುಟ್ಟ ಮಗು ಆಕಾಶ್ ಏನು ಮಾಡಿದರು ಏಳದೆ ಇರುವ ಅಪ್ಪನನ್ನು ಕಂಡು ಅಳುತ್ತಿರುವ ದೃಶ್ಯ ಕರುಳುಕಿತ್ತು ಬರುವಂತಿತ್ತು.

rajesh maganondige

* ಮಗನೊಂದಿಗೆ ರಾಜೇಶ್

ಅಕ್ಕನ ಚಿಕಿತ್ಸೆಗೆ ನೆರವಾಗಿದ್ದರು. ಮೃತ ರಾಜೇಶ್ ಅವರು ಕೆಲವು ದಿನಗಳ ಹಿಂದೆ ಕಾಯಿಲೆ ಬಿದ್ದಿದ್ದ ಅಕ್ಕನ ಚಿಕಿತ್ಸೆಗೆ ಎರಡು ಲಕ್ಷ ರೂ. ನೀಡಿದ್ದರು.

ಹೆಲ್ಮೆಟ್ ಮರೆಯುತ್ತಿರಲಿಲ್ಲ

ಮೃತ ರಾಜೇಶ್ ಅವರು ಸಂಯಮದಿಂದ ವಾಹನ ಚಲಾಯಿಸುವುದ ಜತೆಗೆ, ಯಾವತ್ತೂ ಹೆಲ್ಮೆಟ್ ಧರಿಸಲು ಮರೆಯುತ್ತಿರಲಿಲ್ಲ. ಅಪಘಾತವಾದ ದಿನವೂ ಅವರು ಹೆಲ್ಮೆಟ್ ಧರಿಸಿಯೇ ನಿಯಮದಂತೆ ಎಡ ಬದಿಯಲ್ಲೇ ನಿಧಾನವಾಗಿ ಬೈಕ್ ಚಲಾಯಿಸುತ್ತಿದ್ದರು ಎಂದು ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಬರುತ್ತೇನೆ ಎಂದು ಕೈಯಾಡಿಸಿದ್ದರು

ರಾಜೇಶ್, ಬೆಳಗ್ಗೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅಣ್ಣನಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದಿದ್ದರು. ಗೆಳೆಯ ಸ್ಥಳೀಯ ಶಿಕ್ಷಣ ಸಂಸ್ಥೆಯೊಂದರ ಸ್ಕೂಲ್ ಬಸ್ ಚಾಲಕರೊಬ್ಬರಿಗೆ ಕೈಯಾಡಿಸಿ, ಹೆಲ್ಮೆಟ್ ಗ್ಲಾಸ್ ಸರಿಸಿ, ಮುಗುಳ್ನಗು ಬೀರಿ ಸಂಜೆ ಸಿಗೋಣ ಎಂದು ಹೇಳಿ ಹೊರಟಿದ್ದರು ಎಂದು ಸ್ಕೂಲ್ ಬಸ್ ಚಾಲಕರು ನೋವು ವ್ಯಕ್ತಪಡಿಸುತ್ತಾ ತಿಳಿಸಿದರು.

ಯುಗಾದಿ ಯುಗಾಂತ್ಯವಾಯಿತು

ಜನರು ಸಂಭ್ರಮದಿಂದ ಯುಗಾದಿ ಆಚರಿಸುವಾಗ ಪಳ್ಳಿಯ ಬಾಬುರಾಯ ಆಚಾರ್ಯರ ಮನೆಯಲ್ಲಿ ಶ್ಮಶಾನ ಮೌನ. ಆಸರೆಯಾಗಿದ್ದ ಮಗ ಯುಗದ ಆದಿಯಲ್ಲೇ ಅಂತ್ಯವಾಗಿ ಕಾಲದಲ್ಲಿ ಕಳೆದುಹೋದ ದುಃಖ ತಂದೆ-ತಾಯಿಗಾದರೆ, ಆಸೆ, ಕನಸುಗಳನ್ನು ಕಟ್ಟಿಕೊಂಡು ಗಂಡನ ಮನೆಗೆ ಬಂದಿದ್ದ ಸವಿತಾ ಜೀವನೋತ್ಸಾಹವನ್ನೇ ಕಳೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಅರಳಬೇಕಾದ ಮಗು ಆಕಾಶ್ ಮಾತನಾಡದ ಅಪ್ಪನನ್ನೇ ದಿಟ್ಟಿಸುತ್ತಿದೆ.

ಚಂದ್ರಕಾಂತ್ ಶೆಟ್ಟಿಗಾರ್ರಿಂದ ಸಹಾಯ ಹಸ್ತದ ಭರವಸೆ

ನಾಲ್ಕುಬೀದಿ ಮಾಂಗಲ್ಯ ಕಲ್ಯಾಣ ಮಂಟಪದ ಮಾಲಕ ಚಂದ್ರಕಾಂತ್ ಶೆಟ್ಟಿಗಾರ್ ಅವರು ನವಯುಗ ಟಿಪ್ಪರ್ ಸಂಸ್ಥೆಯಿಂದ ಮೃತ ರಾಜೇಶ್ ಕುಟುಂಬಕ್ಕೆ ಸಂಪೂರ್ಣ ನಷ್ಟ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಅಪಘಾತ ಸಂಭವಿಸಿದಾಗಲೂ ಅಪಾರ ಮುತುವರ್ಜಿ ಮತ್ತು ಮುಂದಾಳತ್ವ ವಹಿಸಿದ ಚಂದ್ರಕಾಂತ್ ಅವರು ಮೃತರ ಮನೆಗೂ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜೇಶ್ ಅವರ ಕುಟುಂಕ್ಕೆ ಸ್ಥಳೀಯರ ಮತ್ತು ಸಂಬಂಧಿಗಳ ಸಹಕಾರದೊಂದಿಗೆ ನವಯುಗ ಸಂಸ್ಥೆಯಿಂದ ಪರಿಹಾರ ದೊರಕಿಸಿ ಕೊಡುವ ಭರವಸೆಯನ್ನು ಅವರು ನೀಡಿದ್ದಾರೆ.

ಕಟ್ಟುನಿಟ್ಟಿನ ಕ್ರಮ ಅಗತ್ಯ

ಪೊಲೀಸರು ದ್ವಿಚಕ್ರ ಮತ್ತು ಲಘು ವಾಹನಗಳನ್ನು ತಡೆದು ನಿಲ್ಲಿಸಿ ದಾಖಲೆ ಕೇಳುತ್ತಾರೆ. ಆದರೆ ಈ ಟಿಪ್ಪರ್ ಸವಾರರು ಯಮದೂತನಂತೆ ಬಂದರೂ, ಹೊಯ್ಗೆ ಮಣ್ಣು, ಜಲ್ಲಿ, ಕ್ರಶರ್ ಹುಡಿ ಲೋಡ್ ಇದ್ದಾಗ ಟರ್ಪಾಲ್ ಹಾಕದೆ ಇದ್ದರೂ, ಚಾಲಕನಿಗೆ ಲೈಸನ್ಸ್ ಇಲ್ಲದಿದ್ದರೂ ಕಂಡೂ ಕಾಣದಂತೆ ಸುಮ್ಮನಿರುವುದು ದುರಂತ ಎಂಬ ಜನಾಕ್ರೋಶ ಈ ಸಂದರ್ಭದಲ್ಲಿ ವ್ಯಕ್ತವಾಗಿದೆ.

ಪೊಲೀಸರು ತಮ್ಮ ಕರ್ತವ್ಯವನ್ನು ಅರಿತು ಸ್ವೇಚ್ಛಾಚಾರದಿಂದ ಸಂಚರಿಸುವ ಟಿಪ್ಪರ್, ಘನ ವಾಹನಗಳನ್ನು ತಡೆದು ಕಠಿನ ಕ್ರಮ ಕೈಗೊಳ್ಳಬೇಕು. ರಾಜಕೀಯ ಪ್ರಭಾವಕ್ಕೆ, ಅಮಿಷಗಳಿಗೆ ಬಲಿಯಾಗದೆ ಎಲ್ಲರಿಗೂ ಸಮಾನವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಈ ಯಮ ಸ್ವರೂಪಿ ಟಿಪ್ಪರ್ ಗಳು ರಾಜೇಶ್ರಂತೆ ಇನ್ನಷ್ಟೂ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

rajesh mane

* ರಾಜೇಶ ಆಚಾರ್ಯರ ಮನೆ

Leave a Reply

Your email address will not be published. Required fields are marked *