Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಜನರಿಂದ ಆಯ್ಕೆಯಾದ ಶಾಸಕರ ‘ಬೆಲೆ’ಯನ್ನು ಜನರಲ್ಲಿ ಕೇಳದೆ ಶಾಸಕರೇ ನಾಚಿಕೆಯಿಲ್ಲದೆ ಹೆಚ್ಚಿಸಿಕೊಂಡರು !

* ಶ್ರೀರಾಮ ದಿವಾಣ

# ಜನರಿಂದ ಜನರಿಗಾಗಿ ಜನರೇ ಆಯ್ಕೆ ಮಾಡಿ ಕಳುಹಿಸಿದ ಜನ ಸೇವಕರು ಇದೀಗ ಜನರಲ್ಲಿ ಹೇಳದೆ, ಕೇಳದೆ ತಮಗೆ ತಾವೇ ಸ್ವಯಂ ಸ್ಪೂರ್ತಿಯಿಂದ ತಮ್ಮ ವೇತನವನ್ನು ದುಪ್ಪಟ್ಟುಗೊಳಿಸಿಕೊಂಡಿದ್ದಾರೆ. ತಮಗೇನೂ ಆಗಿಲ್ಲ, ತನಗೇನೂ ಗೊತ್ತೇ ಇಲ್ಲ, ತಮಗೇನೂ ಇಲ್ಲ ಎಂಬಂತೆ ಸುಭಗರಂತೆ ಮೌನ ವಹಿಸಿ ಅತೀ ಬುದ್ದಿವಂತಿಕೆ ಪ್ರದರ್ಶಿಸಿದ್ದಾರೆ. ಈ ಮೂಲಕ ನಕಲಿ ಜನಸೇವಕರೆನ್ನಿಸಿಕೊಂಡಿದ್ದಾರೆ.

ಶಾಸಕರು ಎಂಬ ಸ್ಥಾನ ಮಾನ ಪಡೆದುಕೊಂಡಿರುವ ಜನಪ್ರತಿನಿಧಿಗಳು ಈಗ ಜನಸೇವಕರಾಗಿ ಉಳಿದಿಲ್ಲ. ಇವರೆಲ್ಲರೂ, ಅಂದರೆ ಶಾಸಕರು ಎಂಬುದು ಪ್ರಸ್ತುತ ಬಹು ದೊಡ್ಡ ಉದ್ಯಮವಾಗಿ ಬದಲಾಗಿದೆ, ವ್ಯವಹಾರವಾಗಿ ಮಾರ್ಪಟ್ಟಿದೆ. ಯಾವುದೇ ಒಂದು ಸ್ಥಾನ ಅಥವಾ ಹುದ್ದೆ ಉದ್ಯೋಗವಾದಾಗ, ಸಂಬಂಧಿಸಿದ ಉದ್ಯೋಗಕ್ಕೆ ವೇತನ ಪಡೆದುಕೊಳ್ಳುವುದು, ಕೇಳುವುದು, ಆಗಾಗ ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳಲು ಮುಂದಾಗುವುದು ನಡೆಯುವಂಥದ್ದೇ. ಇಲ್ಲಿ ಆಗಿರುವುದು ಇದುವೇ.

ಶಾಸಕರೆಂಬ ಉದ್ಯಮ ಇಂದು ಬಹುಕೋಟಿ ಉದ್ಯಮವಾಗಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗಾಗಿ ಶಾಸಕರಾಗಲು ಹವಣಿಸುವವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಜನಪ್ರತಿನಿಧಿತ್ವ ಎನ್ನುವುದನ್ನು ಜನಸೇವೆಯ ಬದಲಾಗಿ ಒಂದು ಭಾರೀ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿಕೊಳ್ಳುವ ಮೂಲಕ ಲಾಭಕೋರ ದಂಧೆಯನ್ನಾಗಿ ಮಾಡಿಕೊಂಡ ಹಿನ್ನೆಲೆಯಲ್ಲಿಯೇ ರಾಜಕೀಯ ರಂಗವೇ ಇಂದು ವ್ಯವಹಾರ ಕ್ಷೇತ್ರವಾಗಿ, ಅವ್ಯವಹಾರದ ಕೇಂದ್ರವಾಗಿ ಮಾರ್ಪಟ್ಟಿದ್ದು, ಇದಕ್ಕಾಗಿಯೇ ದೊಡ್ಡ ಸಂಖ್ಯೆಯ ಜನರೂ ಇಂದು ಈ ಕ್ಷೇತ್ರದತ್ತ ತೀವ್ರ ಆಸಕ್ತರಾಗಿರುವುದನ್ನು ನೋಡಬಹುದು.

ನಮ್ಮ ಬಹುತೇಕ ಶಾಸಕರೂ ಕೋಟ್ಯಾಧಿಪತಿಗಳೇ. ಲಕ್ಷಾಧಿಪತಿಗಳಾಗಿದ್ವರೂ, ಶಾಸಕರಾದ ಬಳಿಕ ಕೋಟ್ಯಾಧಿಪತಿಗಳಾಗುವುದು ಸಹಜವಾಗಿಯೇ ನಡೆಯುವ ಪ್ರಕ್ರಿಯೆಯಂತಾಗಿ ಹೋಗಿದೆ. ಶಾಸಕರಾದ ನಂತರ ಇವರ ಹೆಸರಿನಲ್ಲಿಯೋ, ಬೇರೆಯವರ ಹೆಸರಿನಲ್ಲಿಯೋ ಕಂಪೆನಿಗಳನ್ನು ಆರಂಭಿಸುವಷ್ಟರ ಮಟ್ಟಿಗೆ ಇಲ್ಲಿ ಇವರಿಗೆ ಲಾಭವಾಗುತ್ತಿದೆ ಎಂದರೆ ಏನರ್ಥ ? ಶಾಸಕರಾದವರು ಯಾರೂ ಬಡವರಲ್ಲ. ಬಡವರಿಗೆ ಯಾವುದೇ ರಾಜಕೀಯ ಪಕ್ಷಗಳೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡುವುದೂ ಇಲ್ಲ. ಅಂದ ಮೇಲೆ ಈ ಕೋಟ್ಯಾಧಿಪತಿಗಳಿಗೇಕೆ ವೇತನ ? ಸಾಂಕೇತಿಕ ಗೌರವಧನ ಸಾಲದೇ ?

ಚುನಾವಣಾ ಅಭ್ಯರ್ಥಿಯೋರ್ವ ಚುನಾವಣೆ ಗೆಲ್ಲಲು ಹತ್ತಾರು ಕೋಟಿ ರು. ಖರ್ಚು ಮಾಡುತ್ತಾನೆ ಎಂದರೆ, ಇವರ ಮುಂದಿನ ಲಾಭಬಡುಕತನ ವನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಚುನಾವಣೆ ಗೆಲ್ಲಲು ಹತ್ತಾರು ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಶಾಸಕನಾಗುವವನಿಗೆ ಬಳಿಕ ಕುಳಿತದ್ದಕ್ಕೆ, ನಿಂತದ್ದಕ್ಕೆ, ಸಹಿ ಹಾಕಿದ್ದಕ್ಕೆ ಹೀಗೆ ಪ್ರತಿಯೊಂದಕ್ಕೂ ಹಣವೇ ಹಣ…

ಪ್ರತೀ ಕಾಮಗಾರಿಯಲ್ಲೂ ಪರ್ಸಂಟೇಜ್ ಕಮಿಷನ್ ಪಡೆದುಕೊಳ್ಳುವ ಜನಪ್ರತಿನಿಧಿ, ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ಕಡತಗಳಿಗೆ ಸಹಿ ಹಾಕುವ ಮೂಲಕವೂ ಲಕ್ಷಾಂತರ ರು. ಗಿಟ್ಟಿಸಿಕೊಳ್ಳುತ್ತಾನೆ. ಹೀಗೆ ಭ್ರಷ್ಟಾಚಾರದಲ್ಲಿಯೇ ಮುಳುಗೇಳುತ್ತಿರುವ, ಸ್ವಜನ ಪಕ್ಷಪಾತ, ಹೊಲಸು ರಾಜಕಾರಣದ ಬದುಕನ್ನೇ ಜೀವನವನ್ನಾಗಿ ಮಾಡಿಕೊಂಡಿರುವವರು ಇದೀಗ ತಮ್ಮ ವೇತನವನ್ನೂ ತಿಂಗಳೊಂದಕ್ಕೆ 1.40 ಲಕ್ಷ ರು. ಗೆ ಇಮ್ಮಡಿಗೊಳಿಸಿದ್ದಾರೆ ಎಂದರೆ, ಯಾವುದರಲ್ಲಿ ಮಂಗಳಾರತಿ ಎತ್ತಬೇಕೋ ಗೊತ್ತಾಗುತ್ತಿಲ್ಲ…

ಜನರಲ್ಲಿ ಹೇಳದೆ, ಕೇಳದೆ ತಮ್ಮ ವೇತನವನ್ನು ಇಮ್ಮಡಿಗೊಳಿಸುವ ಮೂಲಕ ಕರ್ನಾಟಕದ ಶಾಸಕರು ಇದ್ದ ಒಂದಿಷ್ಟು ತಮ್ಮ ಘನತೆ, ಗೌರವಗಳನ್ನು ಕಳೆದುಕೊಂಡಿದ್ದಾರೆ. ಎಲ್ಲದಕ್ಕೂ ಪರ-ವಿರೋಧ ಚರ್ಚೆ ನಡೆಸುವ, ಸಭಾತ್ಯಾಗ, ಸತ್ಯಾಗ್ರಹ, ಧರಣಿ, ಪ್ರತಿಭಟನೆ ನಡೆಸುವ ಶಾಸಕರು, ಪಕ್ಷ ಭೇದ ಮರೆತು ಇಲ್ಲಿ ಈ ವಿಷಯಕ್ಕೆ ಮಾತ್ರ ಕೈ ಬೆಸೆದುಕೊಂಡಿರುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ.

ಕಣ್ಣಿದ್ದೂ ಕುರುಡರಾಗಿರುವ, ಕಿವಿ ಇದ್ದೂ ಕಿವುಡರಾಗಿರುವ, ನಾಚಿಕೆಯಿಲ್ಲದ ನಮ್ಮ ಜನಪ್ರತಿನಿಧಿಗಳಿಗೆ ಜನರ ಜನರ ಧಿಕ್ಕಾರ ಖಂಡಿತಾ ಕೇಳಿಸಲಾರದು. ಆದರೆ, ಶಾಸಕಾಂಬವೆಂಬ ಪವಿತ್ರ ದೇವಾಲಯವನ್ನು ಭ್ರಷ್ಟಾಚಾರಕ್ಕೆ ಪರ್ಯಾಯ ಹೆಸರು ಎಂಬಷ್ಟರ ಮಟ್ಟಿಗೆ ತಂದು ನಿಲ್ಲಿಸಿದವರು ಯಾರು ಎಂಬ ಪ್ರತೀಯೊಬ್ಬನ ಪ್ರಶ್ನೆಗೆ ಉತ್ತರವಾಗಿ ಕುಖ್ಯಾತಿಯ ಕೀರ್ತಿ ಗಳಿಸುವುದು ಮಾತ್ರ ಹಾಲಿ ಶಾಸಕರು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

politicas-1

Leave a Reply

Your email address will not be published. Required fields are marked *