Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಕ್ಷಯ ತೃತೀಯಾ…

ಭಾಗ-1

# ಡಾ.ಶ್ರೀಗಣೇಶ್ ತನ್ನ ಛೇಂಬರ್ ನಲ್ಲಿ ಕುಳಿತಿದ್ದ ಹಾಗೆಯೇ ಪರಿಚಯಸ್ಥರು, ಸಮ-ವಯಸ್ಕರು ಆದ ವೆಂಕಟೇಶ್ ಮಕ್ಕಿಂತಾಯರು ಮತ್ತು ಹತ್ತಿರದ ವಿನಾಯಕ ದೇವಸ್ಥಾನದ ಭಟ್ಟರು ಸ್ವಲ್ಪ ಆತಂಕದಿಂದಲೇ ‘ಮನೋವಿಶ್ವಾಸ’ದ ಮೆಟ್ಟಿಲು ಏರುತ್ತಿರುವುದನ್ನು ಸಿ.ಸಿ.ಟಿವಿ ಯಲ್ಲಿ ನೋಡಿದರು.

ಮಕ್ಕಿಂತಾಯರು ಮತ್ತು ಶ್ರೀಗಣೇಶರು ಇಬ್ಬರೂ ಸಮಾನ ಮನಸ್ಕರಾಗಿದ್ದರು. ಕರ್ಮಯೋಗ ಸಿದ್ಧಾಂತ, ಭಾಗವತ, ವಿವೇಕಾನಂದರ ಕೃತಿಗಳು- ಇದರ ಬಗ್ಗೆ ಶ್ರೀಗಣೇಶರಿಗೆ ಹೆಚ್ಚಿನ ಆಸಕ್ತಿ ಮೂಡಲು ಮಕ್ಕಿಂತಾಯರೇ ಕಾರಣರಾಗಿದ್ದರು. ಎಂದೂ ಕೂಡ ಮಕ್ಕಿಂತಾಯರು ರಾತ್ರಿ ಎಂಟು ಘಂಟೆಯ ಮುಂಚೆ ಮನೋವಿಶ್ವಾಸಕ್ಕೆ ಬಂದವರಲ್ಲ. ಆದರೇ ಇಂದು ಫೋನ್ ಮಾಡದೇ, ಅವಸರವಸರವಾಗಿ ಬರುತ್ತಿದ್ದದ್ದನ್ನು ಕಂಡು ಡಾ.ಶ್ರೀಗಣೇಶ್ ಸ್ವಲ್ಪ ಆತಂಕಿತರಾದರು. ನೋಡುತ್ತಿದ್ದ ರೋಗಿಯ ತಪಾಸಣೆ ಮುಗಿದ ಕೂಡಲೇ, ಮಕ್ಕಿಂತಾಯರನ್ನು ಒಳಗೆ ಬಿಡಲು ಸೂಚಿಸಿದರು.
ಒಳಗೇ ಬಂದ ಮಕ್ಕಿಂತಾಯರು ಒಂದೇ ಸಮನೇ ಮಾತನಾಡಲಾರಂಭಿಸಿದರು…
ಡಾಕ್ಟರೇ, ನಾನು ನಿಮ್ಮಲ್ಲಿ ಹಣ ಕೇಳಲಂತೂ ಬಂದಿಲ್ಲ. ದಯವಿಟ್ಟು ಹಾಗೇ ಅಂದುಕೊಳ್ಳ ಬೇಡಿ. ಆದರೇ ಈ ಬಂಗಾರದ ಅಂಗಡಿಯವರು ಮತ್ತು ಪೇಪರ್ ನವರು ಸೇರಿ ನನ್ನಂತಹ ಬಡ ಮಧ್ಯಮ ವರ್ಗದವರನ್ನು ಮಾರವಾಡಿ ಅಂಗಡಿ ಮೆಟ್ಟಿಲು ಏರಿಸಿಯೇ ಬಿಡುತ್ತಾರೆ. ನಾನು ಹೇಳುವ ಎಲ್ಲಾ ಸಿದ್ಧಾಂತಗಳು ಇಂದೀಗೆ ತಿಲಾಂಜಲಿ ಹೇಳಬೇಕಾಗುತ್ತದೇ. ನಿಜವಾಗಿ ನನಗೇ ಏನು ಮಾಡಬೇಕೋ ತಿಳಿಯುತ್ತಿಲ್ಲ…
ಒಂದೇ ಸಮನೇ ಮಕ್ಕಿಂತಾಯರು ಮಾತನಾಡುತ್ತಲೇ ಇದ್ದರು. ಡಾ.ಶ್ರೀಗಣೇಶ್ ಅವಕ್ಕಾದರು. ಎಂದು ಕೂಡ ಮಕ್ಕಿಂತಾಯರು ಈ ರೀತಿ ಮಾತನಾಡಿದ್ದನ್ನು ಅವರು ನೋಡಿರಲಿಲ್ಲ. ಕಣ್ಣಲ್ಲಿ ನೀರೂ ಇತ್ತು. ವಿಷಯವೇನೆಂಬ ಪ್ರಸ್ತಾಪವು ಇಲ್ಲ. ಬಹಳ ಆತಂಕಿತರಾದಂತೇ ತೋರುತಿತ್ತು. ತಮ್ಮ ಪಕ್ಕದಲ್ಲೆ ಕೂತುಕೊಳ್ಳುವಂತೆ ಮಕ್ಕಿಂತಾಯರಿಗೆ ಸಲಹೆ ನೀಡಿದರು. ಏದುರುಸಿರು ಬಿಡುತ್ತಲೇ ಮಕ್ಕಿಂತಾಯರು ಮಾತು ಮುಂದುವರಿಸಿದರು…
ಸರ್, ಒಂದು ವಾರದಿಂದ ನಿದ್ರೆ ಬರುತ್ತಿಲ್ಲ. ಹೆದರಿಕೆ ಆಗುತ್ತಿದೆ. ಇನ್ನು ನನ್ನ ಜೀವನ ಹೇಗೋ ಎಂದು ಅನ್ನಿಸುತ್ತಿದೇ. ನನ್ನ ಆದಾಯ ನಿಮಗೇ ತಿಳಿದೇ ಇದೇ. ನನ್ನ ದೇವಸ್ಥಾನ ಮುಜರಾಯಿ ಇಲಾಖೆಯದಲ್ಲ. ನನಗೆ ಬರುವ ಸಂಬಳ ನಾಲ್ಕೂವರೇ ಸಾವಿರ. ದೇವರ ತಟ್ಟೆಯಲ್ಲಿ ಹಾಕಿದ ದಕ್ಷಿಣೆ ನಾನು ಎಂದು ತೆಗೆದುಕೊಳ್ಳುವವನಲ್ಲ. ಇನ್ನು ಕೆಲವು ಮನೆಗಳಿಗಳಿಗೆ ಪೂಜೆ ಪುರಸ್ಕಾರ ವಿಧಿಗಳಿಗೆ ಹೋಗುತ್ತೇನೆ. ಅಲ್ಲಿ ನನಗೆ ಸಿಗುವುದು ಕೇವಲ ತಿಂಗಳಿಗೆ ಒಂದರಿಂದ ಎರಡು ಸಾವಿರ. ಆದರೆ ಎಂದು ಕೂಡ ನಾನು ಹೆಚ್ಚು ಯೋಚಿಸಿದವನಲ್ಲ. ದೇವರೇ ನನ್ನನ್ನು ನೋಡಿಕೊಳ್ಳುತ್ತಾನೆ ಎಂದು ದೃಢವಾಗಿ ನಂಬಿದವನು.
ತಟ್ಟೆಯ ದಕ್ಷಿಣೆ ದೇವರದ್ದು; ನನ್ನದಲ್ಲ ಎಂದು ಹೇಳುತ್ತಿದ್ದವನು. ಆದರೇ ಇಂದು ಇಂತಹ ಒಂದು ಪರಿಸ್ಥಿತಿ ನನಗೇ ಬರುತ್ತಿದೆ ಎಂದರೆ, ನನಗೆ ಏನು ಮಾಡಬೇಕು ತಿಳಿಯುತ್ತಿಲ್ಲ. ನನ್ನ ಹೆಂಡತಿ ಕಳೆದ ಇಪ್ಪತ್ತು ದಿನಗಳಿಂದ ನನ್ನ ಮೇಲೆ ಮುನಿಸಿಕೊಂಡಿದ್ದಾಳೆ. ಪಕ್ಕದ ಮನೆಯ ವಾಸು ಭಟ್ಟರು ಅಕ್ಷಯ ತೃತೀಯದಂದು ಒಂದು ಗೋಲ್ಡ್ ಕಾಯಿನ್ ಕೊಂಡು ಕೊಳ್ಳುತ್ತಾರಂತೆ. ಕಳೆದ ಹತ್ತು ವರ್ಷದಿಂದ ಚಾಚು ತಪ್ಪದೇ ಮಾಡುತ್ತಿದ್ದಾರಂತೆ. ಈಗ ನನ್ನ ಮೂರು ವರ್ಷದ ಹೆಣ್ಣು ಮಗು ಸೌಪರ್ಣಿಕಾಳಿಗಾಗಿ ನಾನು ಕೂಡ ಈ ಅಕ್ಷಯ ತೃತೀಯದಿಂದ ಹೀಗೇ ಮಾಡಬೇಕಂತೇ. ಒಂದು ವಾರದಿಂದ ಇದೇ ಚರ್ಚೆ. ಇಂದು ಅದು ತಾರಕಕ್ಕೆ ಏರಿದೇ.
akshaya tritiya-1
ನಿಮ್ಮಲ್ಲಿ ಒಂದು ವಾರದ ಹಿಂದೆಯೇ ಬರಬೇಕೆಂದಿದ್ದೆ. ಆದರೇ ಮನಸ್ಸು ಒಪ್ಪಲಿಲ್ಲ. ದಾಂಪತ್ಯದಲ್ಲಿ ಸಮಸ್ಯೆಗಳು ನಿರಂತರ. ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು ಎಂಬುದು ನನ್ನ ಅನಿಸಿಕೆ. ಮತ್ತೊಂದು ನಿಮ್ಮ ಗುಣ ನನಗೇ ತಿಳಿದದ್ದೇ. ನೀವು ಆ ಕೂಡಲೇ ನನಗೇ ಆ ಹಣವನ್ನು ಕೊಟ್ಟು ಬಿಡುತ್ತೀರಿ. ಆದ್ದರಿಂದ ನಾನು, ನಾನೇ ಪರಿಹಾರ ಹುಡುಕಲು ಪ್ರಯತ್ನಿಸಿದೇ. ಆದರೇ ಈಗ ಸಂಪೂರ್ಣವಾಗಿ ಸೋತಿದ್ದೇನೆ. ನಾಳೇ ಅಕ್ಷಯ ತೃತೀಯ. ಸಾಲ-ಸೋಲ ಮಾಡಿಯಾದರೂ Gold Coin ತೆಗೆದುಕೊಳ್ಳಬೇಕಂತೆ. ನೀವೇನಾದರು ಅವಳನ್ನು ಕರೆದು ಮಾತನಾಡಬಹುದೇ ? ನಿಮ್ಮ ಮಾತಿಗೆ ಸ್ವಲ್ಪವಾದರು ಬೆಲೆ ಕೊಟ್ಟಾಳು…
ಡಾ.ಶ್ರೀಗಣೇಶರಿಗೆ ಏನು ಮಾಡುವುದೆಂದು ತೋಚಲಿಲ್ಲ. ನಿಜ, ಅಕ್ಷಯ ತೃತೀಯ ಹಲವು ಮನೆಗಳಿಗೆ ಸಾಲ ತೃತೀಯವಾಗಿಯೇ ಪರಿಗಣಿಸಬಹುದು. ಅಕ್ಷಯ ತೃತೀಯದ ಪೌರಾಣಿಕ ಮಹತ್ವ ಹಾಗೂ ವೈಚಾರಿಕತೆಯ ಬಗ್ಗೆ ಮಕ್ಕಿಂತಾಯರಿಂದಲೇ ಹಲವು ವಿಷಯಗಳನ್ನು ತಿಳಿದಿದ್ದರು.
akshaya tritiya-3
1. ನಾಲ್ಕು ಯುಗಗಳಾದ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ ಸತ್ಯ ಅಥವಾ ಕೃತಯುಗ ಪ್ರಾರಂಭವಾಗಿದ್ದು ‘ಅಕ್ಷಯ ತೃತೀಯ’ ದಿನದಂದು.
2. ವೇದವ್ಯಾಸರು ಮಹಾಭಾರತವನ್ನು ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯಕನಾಗಿ ಗಣೇಶನು ನೆರವಾಗಿದ್ದು ಅಕ್ಷಯ ತೃತೀಯ ದಿನದಂದು.
3. ಭಗೀರಥನ ಪ್ರಯತ್ನದಿಂದ ಗಂಗಾವತರಣವಾಗಿದ್ದು (ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದದ್ದು) ಅಕ್ಷಯ ತೃತೀಯ ದಿನದಂದು.
4. ದಶಾವತಾರಗಳಲ್ಲಿ ಒಂದಾದ ‘ಪರಶುರಾಮಾವತಾರ’ ಪ್ರಾರಂಭವಾಗಿದ್ದು (ಹುಟ್ಟಿದ ದಿನ) ಅಕ್ಷಯ ತೃತೀಯ ದಿನದಂದು.
5. ಸಂಪತ್ತಿನ ಒಡೆಯ ಮತ್ತು ಯಕ್ಷರ ರಾಜ ‘ಕುಬೇರ’ನಿಗೆ ನಿಧಿ/ಸಂಪತ್ತು ದೊರೆತದ್ದು ಅಕ್ಷಯ ತೃತೀಯ ದಿನದಂದು.
6. ಕುಚೇಲನಿಗೆ ಗೆಳೆಯ ಶ್ರೀಕೃಷ್ಣನಿಂದ ಅನುಗ್ರಹ ಪ್ರಾಪ್ತಿಯಾಗಿದ್ದು ಅಕ್ಷಯ ತೃತೀಯ ದಿನದಂದು.
7. ಅಮೃತ ಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುತ್ತಿದ್ದ ವೇಳೆ ‘ಲಕ್ಷ್ಮೀ’ ಹುಟ್ಟಿದ್ದು ಅಕ್ಷಯ ತೃತೀಯ ದಿನದಂದು.
8. ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದ ವೇಳೆ ಶ್ರೀಕೃಷ್ಣನು ಆಕೆಯ ಮಾನವನ್ನು (ಸೀರೆಯನ್ನು ನೀಡುವುದರ ಮೂಲಕ) ಕಾಪಾಡಿದ್ದು ಅಕ್ಷಯ ತೃತೀಯ ದಿನದಂದು.
ಎಲ್ಲಿಯೂ ಕೂಡ ಬಂಗಾರವೇ ಪ್ರಮುಖವೆಂದು ಯಾವುದೇ ಶಾಸ್ತ್ರಗಳಲ್ಲಿ ಹೇಳಲಾಗಿಲ್ಲ ಎಂದು ಮಕ್ಕಿಂತಾಯರೇ ಹಲವು ಬಾರಿ ತಿಳಿಸಿದ್ದರು.
akshaya tritiya-2
@ ‘ಮನೋವಿಶ್ವಾಸ’ ಅಂಕಣಕಾರರಾದ ಡಾ.ಪಿ.ವಿ.ಭಂಡಾರಿಯವರು, ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಖ್ಯಾತ ಮನೋವೈದ್ಯರು, ಸಂಪನ್ಮೂಲ ವ್ಯಕ್ತಿಗಳು, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಕೊಡಮಾಡುವ ಪ್ರತಿಷ್ಠಿತ ‘ಸಂಯಮ’ ಪ್ರಶಸ್ತಿ ಪುರಸ್ಕೃತರು.

Leave a Reply

Your email address will not be published. Required fields are marked *