Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

1 ಮನವಿಗೆ ಸ್ಪಂದಿಸಲು ಬೇಕು 7 ತಿಂಗಳು: ಇದು ಕರ್ನಾಟಕ ಮಹಿಳಾ ಆಯೋಗದ ಸ್ಟೈಲು !

ಉಡುಪಿ: ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸಲ್ಲಿಸಿದ ದೂರೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಏಳು ತಿಂಗಳ ಸುಧೀರ್ಘ ಅವಧಿಯ ಬಳಿಕ ಪತ್ರದ ಮೂಲಕ ಸ್ಪಂದಿಸಿದೆ. ಈ ಸ್ಪಂದನ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು, ‘ಕ.ಬು’ ಗೆ ಮಾತ್ರ ಇದು ಪ್ರಯೋಜನಕಾರಿಯಾಗಿ ಪರಿಣಮಿಸಿದೆ.

ಉಡುಪಿ ತಾಲೂಕಿನ ತೊಟ್ಟಂನ ಬಾಡಿಗೆ ಕಟ್ಟಡದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ಸ್ಥಿತಿ ಶೋಚನೀಯವಾಗಿದೆ. ಇಲ್ಲಿ ಒಟ್ಟು 150ಕ್ಕೂ ಅಧಿಕ ಮಂದಿ ವಿದ್ಯಾರ್ಥಿನಿಯರಿದ್ದಾರೆ. ಆದರೆ, ಇವರೆಲ್ಲರೂ ಒಂದೇ ಒಂದು ಚಿಕ್ಕ ಹಾಲ್ ನಲ್ಲಿ ರಾತ್ರಿ ಮಲಗಬೇಕು, ಇಲ್ಲಿಯೇ ತಮ್ಮ ಬಟ್ಟೆ ಬರೆಗಳ ಬ್ಯಾಗ್ ಮತ್ತು ಕಾಲೇಜು ಪುಸ್ತಕಗಳ ಬ್ಯಾಗ್ ಇರಿಸಬೇಕು, ಓದಬೇಕು. ಇಷ್ಟು ದೊಡ್ಡ ಸಂಖ್ಯೆ ವಿದ್ಯಾರ್ಥಿನಿಯರಿಗೆ ಇರುವುದು ಕೇವಲ ಎರಡು ಶೌಚಾಲಯಗಳು ಮಾತ್ರ. ಅದೂ ಸಹ ಎಟಾಚ್ಡ್ ಬಾತ್ ರೂಮುಗಳ ಜೊತೆಗೆ. ಈ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿನಿಯರ ದಿನಚರಿ ಅಸಹನೀಯವಾಗಿದೆ ಎಂದು ಕರ್ನಾಟಕ ಜನಪರ ವೇದಿಕೆಯು 2014ರ ಆಗಸ್ಟ್ 14ರಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿತ್ತು.

ಈ ವಿದ್ಯಾರ್ಥಿನಿ ನಿಲಯದ ಬಳಿಯೇ ಬಾರ್ ಕಾರ್ಯ ನಿರ್ವಹಿಸುತ್ತಿತ್ತು. ಮಾತ್ರವಲ್ಲ, ಹಾಲ್ ನಲ್ಲಿ ಮಲಗಲು ಸ್ಥಳಾವಕಾಶ ಇಲ್ಲದ ಕಾರಣಕ್ಕೆ ವಿದ್ಯಾರ್ಥಿನಿಯರು ಕಟ್ಟಡದ ಹೊರಗಡೆಯ ತೆಂಗಿನ ತೋಟದ ಕಟ್ಟೆಯಲ್ಲಿ ಮಲಗಿ ನಿದ್ರಿಸಿ ರಾತ್ರಿಯನ್ನು ಕಳೆದುಕೊಳ್ಳುವಂಥ ಶೋಚನೀಯ ಮತ್ತು ದುರಂತಮಯ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಉಡುಪಿ ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರಿದ್ದರೂ, ಇಲ್ಲಿಗೊಬ್ಬರು ಶಾಸಕರಿದ್ದರೂ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿ ತುತರ್ು ಕ್ರಮಗಳನ್ನು ತೆಗೆದುಕೊಳ್ಳುವ ಆಸಕ್ತಿ ಮತ್ತು ಕಾಳಜಿಯನ್ನು ಇವರ್ಯಾರೂ ತೋರಿಸಿದ ಕಾರಣ ಹಾಗೂ ಈ ಬಗ್ಗೆ ಜಿಲ್ಲೆಯಲ್ಲಿಯೇ ಇರುವ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಭಂಡಾರಿಯವರಿಗೆ ಮೌಖಿಕವಾಗಿ ವಿಷಯ ತಿಳಿಸಿದರೂ, ಅವರು ಸಹ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಕರ್ನಾಟಕ ಜನಪರ ವೇದಿಕೆಯು ರಾಜ್ಯ ಮಹಿಳಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿತ್ತು.

ರಾಜ್ಯ ಮಹಿಳಾ ಆಯೋಗ ಕೂಡಾ ಸೂಕ್ತ ಕಾಲದಲ್ಲಿ ತುರ್ತಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂಥ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ, ಕೊನೆಗೆ ಕರ್ನಾಟಕ ಜನಪರ ವೇದಿಕೆಯ ಪ್ರಮುಖರು ವಿದ್ಯಾರ್ಥಿ ನಿಲಯವನ್ನು ಕೂಡಲೇ ಸ್ಥಳಾಂತರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ಆರಂಭಿಸಿತ್ತು. ಎರಡು ದಿನಗಳ ಕಾಲ ಸತ್ಯಾಗ್ರಹ ನಡೆಸಿದ ಪರಿಣಾಮವಾಗಿ ಜಿಲ್ಲಾಡಳಿತ ಅನಿವಾರ್ಯವಾಗಿ ಕೊನೆಗೆ ವಾರದ ಅಂತರದಲ್ಲಿ ವಿದ್ಯಾರ್ಥಿನಿ ನಿಲಯವನ್ನು ಸ್ಥಳಾಂತರ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ಅಪಾಯವನ್ನು ತಪ್ಪಿಸಿತ್ತು.

2014ರ ಆಗಸ್ಟ್ ಅಂತ್ಯದ ವೇಳೆಗೆ ಈ ಹಾಸ್ಟೆಲ್ ಪ್ರಕರಣ ಒಂದಷ್ಟು ಸುಖಾಂತ್ಯ ಕಂಡಿತ್ತು. ಆದರೆ, ಬರೋಬ್ಬರಿ ಏಳು ತಿಂಗಳ ಕಾಲ ನಿದ್ದೆಯಲ್ಲಿದ್ದಂತೆ ನಡೆದುಕೊಂಡ ರಾಜ್ಯ ಮಹಿಳಾ ಆಯೋಗ, ಇದೀಗ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡಿದೆ. ಈ ಎಚ್ಚರಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಕರ್ನಾಟಕ ಜನಪರ ವೇದಿಕೆಯು 2014ರ ಆಗಸ್ಟ್ 14ರಂದು ಸಲ್ಲಿಸಿದ ಮನವಿಗೆ ಇದೀಗ, 2015ರ ಮಾರ್ಚ್ 25ರಂದು ಸ್ಪಂದಿಸಿದ ಆಯೋಗದ ಕಾರ್ಯದರ್ಶಿಗಳು, ವೇದಿಕೆಯ ದೂರಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಿಗೆ ಹಾಗೂ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದು ಕೈತೊಳೆದುಕೊಂಡಿದೆ.

ಈಗ ತೊಟ್ಟಂನಲ್ಲಿ ಹಾಸ್ಟೆಲ್ ಇಲ್ಲ. ಅದು ಅಲ್ಲಿಂದ ಸ್ಥಳಾಂತರಗೊಂಡು ಏಳು ತಿಂಗಳುಗಳೇ ಕಳೆದಿವೆ. ಎಲ್ಲಾ ಮುಗಿದ ಬಳಿಕ ತೊಟ್ಟಂನಲ್ಲಿರುವ ಹಾಸ್ಟೆಲ್ ಕಟ್ಟಡಕ್ಕೆ ಇಲಾಖಾಧಿಕಾರಿಗಳು ಭೇಟಿ ನೀಡಬೇಕಂತೆ. ಇಂಥ ಆಮೆ ನಡಿಗೆಯ ಮಹಿಳಾ ಆಯೋಗದಿಂದ ರಾಜ್ಯದ ನೊಂದ, ಶೋಷಿತ, ದೌರ್ಜನ್ಯಕ್ಕೀಡಾದ ಮಹಿಳೆಯರು ನ್ಯಾಯ ನಿರೀಕ್ಷಿಸಲು ಸಾಧ್ಯವೇ ?

Leave a Reply

Your email address will not be published. Required fields are marked *