Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಕನಕರ ಭಕ್ತಿಗೆ ಕೃಷ್ಣ ವಿಗ್ರಹ ತಿರುಗಿತೆನ್ನುವುದು ಅಸಂಬದ್ಧ ವಾದ, ವಾದಿರಾಜರ ಕಾಲದ ಷಡ್ಯಂತ್ರ: ಡಾ.ಮಯ್ಯ

ಉಡುಪಿ: ಕನಕದಾಸರ ಭಜನೆಗೆ, ಭಕ್ತಿಗೆ ಉಡುಪಿ ಕೃಷ್ಣನ ವಿಗ್ರಹ ತಿರುಗಿತು ಎನ್ನುವುದನ್ನು ವಿಚಾರವಾದ ಒಪ್ಪುವುದಿಲ್ಲ. ಇದೊಂದು ಅಸಂಬದ್ಧ ವಾದವಲ್ಲದೇ ಬೇರೇನೂ ಅಲ್ಲ. ದೇವರೇ ಇಲ್ಲ ಎಂದ ಮೇಲೆ, ವಿಗ್ರಹ ತಿರುಗುವುದು ಸಾಧ್ಯವಿಲ್ಲ. ಕನಕರು ಉಡುಪಿಗೆ ಬಂದಿದ್ದರು ಎನ್ನುವುದಕ್ಕೇ ಐತಿಹಾಸಿಕ ಸಾಕ್ಷ್ಯ ಇದುವರೆಗೆ ಲಭ್ಯವಾಗಿಲ್ಲ. ಆ ಕಾಲದಲ್ಲಿ ಇದ್ದ ವಾದಿರಾಜರು ಮತಾಂತರದಲ್ಲಿ ತೊಡಗಿದ್ದರು. ಕನಕದಾಸರು ಬಹಳ ಪ್ರಸಿದ್ದಿ ಪಡೆದಿದ್ದರು. ಈ ಪ್ರಸಿದ್ದಿಯನ್ನು ಬಳಸಿಕೊಂಡು ಮಧ್ವತತ್ವವನ್ನು ಪ್ರಚುರಪಡಿಸಲು ಹೆಣೆದ ಷಡ್ಯಂತ್ರವೇ ಕನಕನ ಭಕ್ತಿಗೆ ಕೃಷ್ಣ ವಿಗ್ರಹ ತಿರುಗಿದ್ದು ಮತ್ತು ಗೋಡೆ ಬಿರುಕು ಬಿಟ್ಟಿದ್ದು ಎಂದು ಹಿರಿಯ ವಿಚಾರವಾದಿ ಡಾ.ಭಾಸ್ಕರ ಮಯ್ಯ ಹೇಳಿದರು. ಮಧ್ವಚಾರ್ಯರನ್ನು ತಲೆಯ ಮೇಲೆ ಹೊತ್ತು ತಿರುಗಾಡಿದವರನ್ನು ಇದೀಗ ಸಮಾಜ ಸುಧಾರಕರೆಂದೂ ಕೊಂಡಾಡುವುದು ಮತ್ತು ಇವರ ಹೆಸರಲ್ಲಿ ವಿಶ್ವ ವಿದ್ಯಾನಿಲಯಗಳಲ್ಲಿ ಪೀಠ ಸ್ಥಾಪನೆ ಮಾಡುವುದರ ಬಗ್ಗೆ ಮಯ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಬ್ಯಾಂಕಿನ ಜಗನ್ನಾಥ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಇಂದ್ರಾಳಿಯ ‘ನೂತನ ಪಬ್ಲಿಕೇಶನ್ಸ್’ ಪ್ರಕಟಿಸಿದ ಹಿರಿಯ ಸಾಹಿತಿ ಗೋಪಾಲ ಬಿ.ಶೆಟ್ಟಿಯವರು ಸಂಪಾದಿಸಿದ ‘ಮಿಥ್ಯೆಯೊಳಗಿನ ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪುಸ್ತಕವನ್ನು ಪರಿಚಯಿಸುತ್ತಾ, ಪುಸ್ತಕದಲ್ಲಿರುವ ಡಾ.ಸಿ.ಎಸ್.ದ್ವಾರಕಾನಾಥ್ ಅವರ ಲೇಖನವನ್ನು ಉಲ್ಲೇಖಿಸುತ್ತಾ ಡಾ.ಮಯ್ಯ ಮಾತನಾಡುತ್ತಿದ್ದರು.

ಭಗವದ್ಗೀತೆಯನ್ನು ಬೆಂಕಿ ಹಾಕಿ ಸುಡಬೇಕು ಎಂಬಿತ್ಯಾದಿ ಕೆಲವು ವಿಚಾರವಾದಿಗಳ ಮಾತುಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಡಾ.ಭಾಸ್ಕರ ಮಯ್ಯ ಅವರು,  ”ವಿಚಾರವಾದಿಗಳು ಭಾಷೆಯನ್ನು ಬಳಸುವಾಗ ಗೌರವದಿಂದ, ಘನತೆಯಿಂದ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಖ್ಯಾತ ವಿಚಾರವಾದಿಗಳೂ, ಲೇಖಕರೂ ಆದ ಹಾಸನದ ಜ.ಹೊ.ನಾರಾಯಣ ಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು. ಬಡಗಬೆಟ್ಟು ಬ್ಯಾಂಕಿನ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿ ಇಂದ್ರಾಳಿ, ಹಿರಿಯ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ಹಾಗೂ ಖ್ಯಾತ ಕವಯತ್ರಿ ಮತ್ತು ಅಂಕಣಬರಹಗಾರ್ತಿ ಶ್ರೀಮತಿ ಜ್ಯೋತಿ ಗುರುಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಅಲೆವೂರು ಶೇಖರ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಗೋಪಾಲ ಬಿ.ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕು.ಮಾನಸ ಭಂಡಾರ್ಕರ್ ಹಾಗೂ ಕು.ಕೀರ್ತನಾ ಭಂಡಾರ್ಕರ್ ಆಶಯ ಗೀತೆ ಹಾಡಿದರು.

 

Leave a Reply

Your email address will not be published. Required fields are marked *