Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ನಿಯಮಾವಳಿ, ಶಿಷ್ಠಾಚಾರ ಉಲ್ಲಂಘಿಸಿ ಡಿಎಚ್ಓ, ಡಿಎಸ್ ನೇಮಕ: ಸ್ಥಾಪಿತ ಹಿತಾಸಕ್ತಿಗಳ ಕೈವಾಡ !

ಉಡುಪಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿ (ಡಿಎಚ್ಓ)ಯನ್ನಾಗಿ ಡಾ.ರೋಹಿಣಿ ಎಂಬವರನ್ನು ಹಾಗೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿ ಡಾ.ಮಹೇಂದ್ರ ಎಂಬವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಸರಕಾರವೇ ರೂಪಿಸಿದ ನಿಯಮಾವಳಿ ಮತ್ತು ಶಿಷ್ಟಾಚಾರವನ್ನು ಸರಕಾರವೇ ಉಲ್ಲಂಘಿಸಿ ಈ ನೇಮಕಾತಿಗಳನ್ನು ಮಾಡಿರುವುದರಿಮದ ಬೇಲಿಯೇ ಎದ್ದು ಹೋಲ ಮೇಯ್ದಂತಾಗಿದೆ.

dist hospital udupi-1

* ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ.

ಡಿಎಚ್ ಓ ಆಗಿ ನಿಯುಕ್ತಿಗೊಂಡಿರುವ ಡಾ.ರೋಹಿಣಿ ಹಾಗೂ ಜಿಲ್ಲಾ ಸರ್ಜನ್ ಆಗಿ ನಿಯುಕ್ತಗೊಂಡಿರುವ ಡಾ.ಮಹೇಂದ್ರ ಎಂಬವರು ಇಬ್ಬರೂ ಕಿರಿಯ ವೈದ್ಯಾಧಿಕಾರಿಗಳಾಗಿದ್ದಾರೆ. ಸಂಬಂಧಿಸಿದ ಹುದ್ದೆಗಳಿಗೆ ನಿಯುಕ್ತಿಗೊಳ್ಳಬೇಕಾದರೆ ಆಗಬೇಕಾದಷ್ಟು ಸೇವಾ ಹಿರಿತನ ಇವರಿಗಿನ್ನೂ ಆಗಿಲ್ಲ. ಸೇವಾ ಹಿರಿತನ ಇರುವ ವೈದ್ಯಾಧಿಕಾರಿಗಳಿದ್ದರೂ ಇವರನ್ನೆಲ್ಲಾ ಬದಿಗೆ ಸರಿಸಿ, ಸೇವಾ ಹಿರಿತನ ಇಲ್ಲದ ವೈದ್ಯಾಧಿಕಾರಿಗಳನ್ನು ಜವಾಬ್ದಾರಿಯುತ ಮತ್ತು ಜಿಲ್ಲಾ ಮಟ್ಟದ ಉನ್ನತ ಉನ್ನತ ಸ್ಥಾನಗಳಿಗೆ ನಿಯುಕ್ತಿ ಮಾಡಿರುವುದು ಹಲವಾರು ಶಂಕೆಗಳಿಗೆ ಕಾರಣವಾಗಿದೆ.

dho office, 3.30 pm, 26.02

* ಉಡುಪಿ ಡಿಎಚ್ಓ ಕಚೇರಿ

ಡಾ.ರೋಹಿಣಿಯವರು ಸಾಲಿಗ್ರಾಮ- ಸಾಸ್ತಾನ ಕಡೆಯವರಾಗಿದ್ದು, ಇದುವರೆಗೆ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಯಾಗಿದ್ದವರು. ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯೇ ಇವರಿಗಿಂತ ಹಿರಿಯ ಅಧಿಕಾರಿಗಳು ಕೆಲವರು ಇದ್ದು, ಇವರನ್ನೆಲ್ಲ ಕಡೆಗಣಿಸಿ ಡಾ.ರೋಹಿಣಿಯವರನ್ನು ಡಿಎಚ್ ಓ ಆಗಿ ನಿಯುಕ್ತಿಗೊಳಿಸಿರುವುದರ ಹಿಂದೆ, ಖಾಸಗೀ ಸ್ಥಾಪಿತ ಹಿತಾಸಕ್ತಿ ಶಕ್ತಿಗಳು ಹಾಗೂ ‘ಭ್ರಷ್ಟಾಚಾರ ಮಾಡುವ ಅಗತ್ಯ ತನಗಿಲ್ಲ’ ಎಂದು ಹೇಳಿಕೊಳ್ಳುತ್ತಲೇ ಭ್ರಷ್ಟರನ್ನು ರಕ್ಷಿಸುತ್ತಾ ಅವರನ್ನು ಬೆಳೆಸುವುದನ್ನೇ ಕಾಯಕ ಮಾಡಿಕೊಂಡಿರುವ ಜನಪ್ರತಿನಿಧಿಯೊಬ್ಬರು ವಿಶೇಷ ಪರಿಶ್ರಮ ಪಟ್ಟಿದ್ದಾರೆನ್ನಲಾಗಿದ್ದು, ಇದು ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ.

ಡಿಎಚ್ ಓ ಆಗಿದ್ದ ಡಾ.ರಾಮಚಂದ್ರ ಬಾಯರಿಯವರು ಬೆಂಗಳೂರಿಗೆ ವರ್ಗಾವಣೆಗೊಂಡ ಬಳಿಕ ಅದುತನಕ ಕಾರ್ಯಕ್ರಮ ಅನುಷ್ಠಾನಾಧಿಕಾರಿಯಾಗಿದ್ದ ಡಾ.ಸುರೇಂದ್ರ ಚಿಂಬಾಲ್ಕರ್ ಎಂಬವರನ್ನು ಪ್ರಭಾರ ಡಿಎಚ್ ಓ ಆಗಿ ನಿಯುಕ್ತಿಗೊಳಿಸಲಾಗಿತ್ತು. ಡಾ.ಸುರೇಂದ್ರ ಚಿಂಬಾಲ್ಕರ್ ಇವರು ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಅಧಿಕಾರಿಗಳಲ್ಲಿ ಅತ್ಯಂತ ಹೆಚ್ಚು ಸೇವಾ ಹಿರಿತನ ಇರುವ ಅಧಿಕಾರಿಯಾಗಿದ್ದಾರೆ.

ಇದೀಗ ಪ್ರಭಾರ ಡಿಎಚ್ ಓ ಆಗಿದ್ದ ಇವರನ್ನು ಬದಲಾಯಿಸಿ ಡಾ.ರೋಹಿಣಿಯವರನ್ನು ನಿಯುಕ್ತಿ ಮಾಡಲಾಗಿದೆ. ಡಾ.ಸುರೇಂದ್ರ ಚಿಂಬಲ್ಕಾರ್ ಅವರು ಭ್ರಷ್ಟರಲ್ಲದಿರುವುದು, ಕಾನೂನು ಮೀರಿ ಹೋಗಲು ಆಸಕ್ತಿ ತೋರಿಸದಿರುವುದು, ರಾಜಕಾರಣಿಗಳನ್ನು ಓಲೈಸಲು ಮುಂದಾಗದಿರುವುದರಿಂದ, ಭ್ರಷ್ಟ ಶಕ್ತಿಗಳು ಇವರನ್ನು ಬದಲಾಯಿಸಿ ತಮಗೆ ಬೇಕಾದವರನ್ನು ನಿಯುಕ್ತಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಸರ್ಜನ್ ಆಗಿ ನೇಮಕಗೊಂಡಿರುವ ಡಾ.ಮಹೇಂದ್ರ ಅವರು ಉತ್ತರ ಕರ್ನಾಟಕ ಭಾಗದ ಪ್ರಭಾವೀ ಜನಪ್ರತಿನಿಧಿಯೋರ್ವರ ಹತ್ತಿರದ ಸಂಬಂಧಿ ಎನ್ನಲಾಗಿದೆ. ಇವರೂ ಸಹ ಸೇವಾ ಹಿರಿತನದಲ್ಲಿ ನಿಯಮಾವಳಿಗಿಂತ ಕಡಿಮೆ ಸೇವಾ ಹಿರಿತನ ಹೊಂದಿದವರಾಗಿದ್ದು, ಇವರಿಗಿಂತ ಅಧಿಕ ಸೇವಾ ಹಿರಿತನ ಹೊಂದಿರುವ ವೈದ್ಯಾಧಿಕಾರಿಗಳು ಉಡುಪಿ ಜಿಲ್ಲೆಯಲ್ಲಿ, ಜಿಲ್ಲಾಸ್ಪತ್ರೆಯಲ್ಲಿ ಬೇರೆಯವರು ಇದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಸರ್ಜನ್ ಆಗಿದ್ದ ಡಾ.ಆನಂದ ನಾಯಕ್ ನಿವೃತ್ತರಾದ ಬಳಿಕ ಅವರಿಂದ ತೆರವಾದ ಹುದ್ದೆಗೆ ಮೊದಲಿಗೆ ಹೆಂಗಸರ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ.ದಮಯಂತಿ ಅವರನ್ನು, ಬಳಿಕ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿ ಒಬ್ಬರಾದ ಡಾ.ಮಧುಸೂದನ ನಾಯಕ್ ಅವರನ್ನು ಪ್ರಭಾರ ಜಿಲ್ಲಾಸರ್ಜನ್ ಆಗಿ ನೇಮಕ ಮಾಡಲಾಗಿತ್ತು. ಇದೀಗ ಜಿಲ್ಲಾ ಸರ್ಜನ್ ಸ್ಥಾನಕ್ಕೆ ಸೂಕ್ತ ಅರ್ಹತೆ ಇರುವವರು ಇತರರು ಇದ್ದರೂ, ಸೇವಾ ಹಿರಿತನದಲ್ಲಿ ಕಡಿಮೆ ಸೇವಾ ಹಿರಿತನ ಹೊಂದಿರುವ ಡಾ.ಮಹೇಂದ್ರ ಅವರನ್ನು ನೇಮಕ ಮಾಡಿರುವುದರ ಬಗ್ಗೆಯೂ ಕೆಲವೊಂದು ಅನುಮಾನಗಳನ್ನು ಮುನ್ನೆಲೆಗೆ ತಂದಿದೆ.

pramod madhwaraj mla udupi photo

* ಪ್ರಮೋದ್ ಮಧ್ವರಾಜ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು.

ಡಿಎಚ್ಓ ಮತ್ತು ಜಿಲ್ಲಾ ಸರ್ಜನ್ ಸ್ಥಾನಗಳಿಗೆ ನೇಮಕಾತಿ ಮಾಡಲು ಅದರದ್ದೇ ಆದ ನಿಯಮಾಳಿ ಮತ್ತು ಶಿಷ್ಠಾಚಾರಗಳಿವೆ. ಇದೀಗ ರಾಜ್ಯ ಸರಕಾರವೇ ಇವುಗಳನ್ನು ಉಲ್ಲಂಘಿಸಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಅರ್ಹ, ಯೋಗ್ಯ, ಹಿರಿಯ ವೈದ್ಯಾಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವ ಪರಿಸ್ಥಿತಿಯಾಗಿದೆ. ಸರಕಾರವೇ ಸರಕಾರೀ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡಿರುವುದು ಪ್ರಸ್ತುತ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

sorake

* ವಿನಯ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಸಚಿವ ಯು.ಟಿ.ಖಾದರ್, ಉಡುಪಿ ಜಿಲ್ಲಾ ಉಸ್ತುವಾರೀ ಸಚಿವರಾದ ವಿನಯ ಕುಮಾರ್ ಸೊರಕೆ, ಜಿಲ್ಲಾ ಕೇಂದ್ರವಾದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್ ಇವರುಗಳ ಸಹಮತ, ಒಪ್ಪಿಗೆ, ಶಿಫಾರಸು ಇಲ್ಲದೆ ಈ ನೇಮಕಾತಿ ಆಗಲು ಸಾಧ್ಯವಿಲ್ಲ ಎನ್ನಲಾಗಿದ್ದು, ಈ ನೇಮಕದಲ್ಲಿ ತೆರೆಮರೆಯಲ್ಲಿ ಏನು ನಡೆದಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ. ಈ ರಹಸ್ಯ ನಿಗೂಢವಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚು ಎನ್ನಬಹುದು.

cm of karnataka

* ಸಿದ್ಧರಾಮಯ್ಯ, ಮುಖ್ಯಮಂತ್ರಿಗಳು.

Leave a Reply

Your email address will not be published. Required fields are marked *