Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ದೇಶದ ಅತ್ಯಂತ ಪೂಜನೀಯ ಕಲೆ, ಶಾಸ್ತ್ರೀಯ ಸಂಗೀತ: ಪಿ.ಎಸ್.ಸುನಾದ ವಯೋಲಿನ್ ರಂಗಪ್ರವೇಶದಲ್ಲಿ ರವೀಶ ತಂತ್ರಿ

ಮುಳ್ಳೇರಿಯ(ಕಾಸರಗೋಡು): ದೇಶದ ಅತ್ಯಂತ ಪೂಜನೀಯ ಕಲೆ ಶಾಸ್ತ್ರೀಯ ಸಂಗೀತ. ಸಂಗೀತ ಕ್ಷೇತ್ರದಲ್ಲಿ ಇದುವರೆಗೆ ಸಮರ್ಪಿಸಿಕೊಂಡ ಕಲಾವಿದರು ಯಾರೂ ಅದನ್ನು ಜೀವನ ನಿರ್ವಹಣೆಗಾಗಿ ಇರುವಂತಹುದು ಎಂದು ತಿಳಿದವರಲ್ಲ. ಬದಲಾಗಿ ಆ ಕ್ಷೇತ್ರಕ್ಕೆ ಸಮರ್ಪಿಸಿಕೊಂಡು ಕೃತಾರ್ಥತೆಯನ್ನು ಪಡೆದು ಇದರಿಂದ ಸಿಗುವಂತಹುದು ಏನಿದೆಯೋ ಅದನ್ನು ದೇವತಾ ಪ್ರಸಾದ ಎಂಬ ಭಾವನೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡವರು. ಪ್ರಸ್ತುತ ಎಲ್ಲಾ ಕ್ಷೇತ್ರಗಳು ವ್ಯಾಪಾರೀಕರಣವಾಗುತ್ತಾ ಇದ್ದು, ವಿದ್ಯಾ ಕ್ಷೇತ್ರವೂ ವ್ಯಾಪಾರೀಕರಣವಾಗುತ್ತಿರುವಾಗ ಒಂದಷ್ಟು ತನ್ನದೇ ಆದ ಅಗಾದ ಸಂಪತ್ತನ್ನು ಉಳಿಸಿಕೊಂಡು ಶಾಸ್ತ್ರೀಯ ಸಂಗೀತ ಕ್ಷೇತ್ರ ಮುಂದುವರಿಯುತ್ತಿರುವುದು ಸಂತಸದ ವಿಚಾರ. ಇದೇ ರೀತಿ ಕಲಾಗಾರನಾಗಬೇಕು ಎಂಬ ಪ್ರಯತ್ನ ಎಲ್ಲರೂ ಮಾಡಬಹುದು. ಆದರೆ ಪಾರಂಪರಿಕ ಅಂತಸತ್ತ್ವ ಇದ್ದರೆ ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಕೇವಲ ಕಲಾ ಆರಾಧಕರು, ಕಲಾ ಸಂಪತ್ತು ತುಂಬಿದವರು, ಕಲಾನೈಪುಣ್ಯವುಳ್ಳವರು ವೇದಿಕೆಯಲ್ಲಿ ಕಾಣಬೇಕಾಗಿಲ್ಲ. ಆದರೆ ಅವರ ಆಂತರಿಕವಾದ ತುಡಿತವೆಲ್ಲವನ್ನೂ ಕಲಾ ಪ್ರಪಂಚಕ್ಕೆ ಸಮರ್ಪಿಸಿಕೊಂಡ ಮಹಾನುಭಾವರೂ ನಮ್ಮ ಮಧ್ಯೆ ಇದ್ದಾರೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.

ಕುಂಟಾರು ಶ್ರೀ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ಪಿ.ಎಸ್.ಸುನಾದ ಕುಂಟಾರು ಇವರ ಗುರುವಂದನೆಯೊಂದಿಗೆ ವಯೊಲಿನ್ ರಂಗಪ್ರವೇಶ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡುತ್ತಿದ್ದರು.

ಬ್ರಹ್ಮಶ್ರೀ ವಾಸುದೇವ ತಂತ್ರಿ ಅವರು ದೀಪ ಜ್ವಲನೆ ಮಾಡಿದರು. ಈ ಸಂದರ್ಭದಲ್ಲಿ ಪಿ.ಎಸ್.ಸುನಾದ ಅವರು ಗುರುಗಳಾದ ವಯೊಲಿನ್ ವಿದ್ವಾನ್ ಗಣರಾಜ ಕಾರ್ಲೆ, ವಿದುಷಿ ಶಂಕರಿಮೂರ್ತಿ ಬಾಳಿಲ, ವಸಂತಿ ಟೀಚರ್, ಎಸ್.ಎಸ್.ವಿ.ಪ್ರಭಾ ಇವರಿಗೆ ಗುರುವಂದನೆ ಸಲ್ಲಿಸಿದರು. ನಂತರ ಎರಡೂವರೆ ಗಂಟೆಗಳ ಕಾಲ ಸುನಾದ ಅವರ ವಯೊಲಿನ್ ವಾದನ ನಡೆಯಿತು. ಮೃದಂಗದಲ್ಲಿ ವಿದ್ವಾನ್ ಅನಿಲ್ ಕುಮಾರ್ ವಡಗರ, ಘಟಂನಲ್ಲಿ ವಿದ್ವಾನ್ ಸಂತೋಷ್ ಕಣ್ಣೂರ್ ಸಹಕರಿಸಿದರು.

ಕಾರ್ಯಕ್ರಮದ ಕೊನೆಗೆ ಸಂಗೀತ ತಜ್ಞ ಸುಬ್ರಹ್ಮಣ್ಯ ಕೊಳತ್ತಾಯ ಪುತ್ತೂರು ಅಭಿಪ್ರಾಯ ವ್ಯಕ್ತಪಡಿಸಿದರು. ಜಯಪ್ರಕಾಶ್.ಎಚ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *