Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

SDMC ನಾಮನಿರ್ದೇಶನಗಳಲ್ಲಿ ಅಕ್ರಮ: ಸಚಿವ – ಶಾಸಕರ ಅಧಿಕ ಪ್ರಸಂಗ !

* ಶ್ರೀರಾಮ ದಿವಾಣ

# ಬೇಲಿಯೇ ಎದ್ದು ಹೋಲ ಮೇಯುವಂತೆ, ಕಾನೂನುಗಳನ್ನು ಮಾಡುವ ಜನಪ್ರತಿನಿಧಿಗಳೇ ಕಾನೂನುಗಳನ್ನು ಮುರಿದು ತಮಗೆ ಬೇಕು ಬೇಕಾದಂತೆ ಕಾನೂನುಗಳನ್ನು ದುರ್ಬಳಕೆ ಮಾಡಿ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಚಾರಕ್ಕೆ ಅವಕಾಶ ಮಾಡಿಕೊಡುವ ಬೆಳವಣಿಗೆಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹಚ್ಚುತ್ತಿದ್ದು, ಇದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC)ಗಳಿಗೆ ಸಂಬಂಧಿಸಿ ಸಚಿವರು ಹಾಗೂ ಶಾಸಕರು ಸರಕಾರೀ ಸುತ್ತೋಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರತೊಡಗಿವೆ. ಈ ಮುಖಾಂತರ ಭ್ರಷ್ಟ ಜನಪ್ರತಿನಿಧಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡಾ ಹೊಲಸು ಮತ್ತು ಹೇಸಿಗೆ ಹುಟ್ಟಿಸುವ ರೀತಿಯಲ್ಲಿ ಪಕ್ಷ ರಾಜಕಾರಣ ಮತ್ತು ಜಾತಿ ರಾಜಕಾರಣ ನಡೆಸಿರುವುದು ಬಹಿರಂಗಕ್ಕೆ ಬಂದಿದೆ.

ಪ್ರಾಥಮಿಕ ಶಾಲಾ ಎಸ್ ಡಿಎಂಸಿ ಬಗ್ಗೆ…

ಕನರ್ಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಂ.ಸಿ.ಪೂಣಚ್ಚ ಅವರು ಆದೇಶ ಸಂಖ್ಯೆ: ಇಡಿ1 ಪಿಬಿಎಸ್ 2001ರ 2001 ಆಗೋಸ್ತ್ 16ರ ಸರಕಾರೀ ಆದೇಶದ ಪ್ರಕಾರ, ರಾಜ್ಯದ ಪ್ರತಿಯೊಂದು ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಆಯಾ ಶಾಲೆಗಳ ನೋಂದಾಯಿತ ಪೋಷಕರ ಪಟ್ಟಿಯಿಂದ, ಸಂಬಂಧಿಸಿದ ವಿದಾನಸಭಾ ಕ್ಷೇತ್ರದ ಸದಸ್ಯರು ನಾಮ ನಿರ್ದೇಶನ ಮಾಡುವ ಒಂಭತ್ತು ಮಂದಿ ಪೋಷಕ ಪ್ರತಿನಿಧಿಗಳು ಸದಸ್ಯರಾಗುತ್ತಾರೆ ಮತ್ತು ಆ 9 ಮಂದಿ ಪೋಷಕ ಪ್ರತಿನಿಧಿ ಸದಸ್ಯರಲ್ಲಿ, ವಿಧಾನಸಭಾ ಸದಸ್ಯರು ಆಯ್ಕೆ ಮಾಡಿ ನಾಮ ನಿರ್ದೇಶನ ಮಾಡುವ ಒಬ್ಬರು ಅಧ್ಯಕ್ಷರಾಗುತ್ತಾರೆ.

ಪ್ರೌಢಶಾಲಾ ಎಸ್ ಡಿಎಂಸಿ ಬಗ್ಗೆ…

ರಾಜ್ಯದ ಪ್ರತಿಯೊಂದು ಸರಕಾರಿ ಪ್ರೌಢಶಾಲೆಗಳ ಹಾಗೂ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಸಂಬಂಧಿಸಿದ ವಿಧಾನಸಭಾ ಸದಸ್ಯರು ಅಧ್ಯಕ್ಷರಾಗಿರುತ್ತಾರೆ ಹಾಗೂ ಅವರಿಂದ ಆಯಾ ಪ್ರೌಢಶಾಲೆಯ ನೋಂದಾಯಿತ ಪೋಷಕರ ಪಟ್ಟಿಯಿಂದ ನಾಮನಿರ್ದೇಶನ ಮಾಡಲ್ಪಡುವ ಒಂಭತ್ತು ಮಂದಿ ಪೋಷಕರ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

ಶಾಲಾ ಮುಖ್ಯ ಶಿಕ್ಷಕರು ಅಥವಾ ಮುಖ್ಯ ಶಿಕ್ಷಕರ ಹೊಣೆ ಹೊತ್ತವರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಎಸ್ ಡಿಎಂಸಿ ಸಭೆ ಕರೆಯುವುದೇ ಇತ್ಯಾದಿಗಳು ಕರ್ತವ್ಯಗಳು ಸದಸ್ಯ ಕಾರ್ಯದರ್ಶಿಗಳದ್ದಾಗಿರುತ್ತದೆ.

ಶಾಸಕ-ಸಚಿವರ ಅಧಿಕ ಪ್ರಸಂಗ !

ಸರಕಾರದ ಸುತ್ತೋಲೆ ಪ್ರಕಾರ, ಎಸ್ಡಿಎಂಸಿ ಸದಸ್ಯರಾಗಿ ನಾಮ ನಿರ್ದೇಶನಗೊಳ್ಳಲು ಹಾಗೆ ನಾಮ ನಿರ್ದೇಶನಗೊಳ್ಳುವವರು ಯಾವ ಶಾಲೆಗೆ ಶಾಲೆಗೆ ನಾಮ ನಿರ್ದೇಶನಗೊಳ್ಳುತ್ತಾರೋ ಆ ಶಾಲೆಯ ಪೋಷಕರ ಪಟ್ಟಿಯಲ್ಲಿ ಅವರ ಹೆಸರು ನೋಂದಾವಣೆಯಾಗಿರಬೇಕು. ಅಂದರೆ, ಆ ನಿರ್ಧಿಷ್ಟ ಶಾಲೆಯಲ್ಲಿ ಆ ಪೋಷಕನ ಅಥವಾ ಪೋಷಕಳ ಮಕ್ಕಳು ಆ ಶಾಲೆಯ ವಿದ್ಯಾರ್ಥಿ ಇಲ್ಲವೇ ವಿದ್ಯಾರ್ಥಿನಿಯಾಗಿರಬೇಕು.

ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷರು, ಶಾಸಕರು ನಾಮ ನಿರ್ದೇಶನ ಮಾಡುವ 9 ಮಂದಿ ಪೋಷಕ ಪ್ರತಿನಿಧಿಗಳ ಪೈಕಿ ಒಬ್ಬರು ಆಗಿರುತ್ತಾರೆ. ಮೊದಲು ನಾಮ ನಿರ್ದೇಶನ ಮಾಡಿದ 9 ಮಂದಿ ಪೋಷಕ ಪ್ರತಿನಿಧಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅವರನ್ನು ಶಾಸಕರೇ ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಬೇಕಾಗುತ್ತದೆ.

ಪ್ರೌಢಶಾಲಾ ಎಸ್ ಡಿಎಂಸಿಗೆ ಸ್ವತಹಾ ಶಾಸಕರೇ ಅಧ್ಯಕ್ಷರಾಗಿರುತ್ತಾರೆ ಮತ್ತು ಶಾಸಕರು ನಾಮ ನಿರ್ದೇಶನ ಮಾಡಿದ 9 ಮಂದಿ ಪೋಷಕ ಪ್ರತಿನಿಧಿಗಳೇ ಸದಸ್ಯರಾಗಿರುತ್ತಾರೆ.

ಎಲ್ಲೆಲ್ಲಾ ಅಧಿಕಾರ ಸ್ಥಾನಗಳಿವೆಯೋ, ಎಲ್ಲೆಲ್ಲಾ ಫಲಾನುಭವಿಗಳ ಆಯ್ಕೆ ಸಮಿತಿಗಳಿರುತ್ತವೋ ಅಲ್ಲೆಲ್ಲಾ ತಾವೇ ಇರಬೇಕು, ತಾವು ಹೇಳಿದ್ದೇ ಆಗಬೇಕು ಎನ್ನುವುದು ಈ ಶಾಸಕರ ಹಠ. ಕಾನೂನು, ನೀತಿ ನಿಯಮಾವಳಿ ರೂಪಿಸುವವರು ಇವರೇ ಆಗಿರುವ ಕಾರಣಕ್ಕೆ ಎಲ್ಲವೂ ಇವರ ಮೂಗಿನ ನೇರಕ್ಕೆ ನಡೆದು ಬಿಡುತ್ತದೆ ಕೂಡಾ.

ಇರಲಿ, ಇವರ ಮೂಗಿನ ನೇರಕ್ಕೇ ರೂಪಿಸಲಾದ ಕಾನೂನುಗಳು, ನೀತಿ ನಿಯಮಾವಳಿಗಳನ್ನಾದರೂ ಇವದರಾದರೂ ಪಾಲನೆ ಮಾಡಬೇಕಲ್ಲ ? ಇವರೇ ಪಾಲನೆ ಮಾಡುತ್ತಿಲ್ಲ. ಇಲ್ಲೂ ಇವರು ಅಧಿಕ ಪ್ರಸಂಗ ಮಾಡುತ್ತಾರೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಜಾತಿ ಮತ್ತು ಪಕ್ಷ ರಾಜಕಾರಣ ನಡೆಸುತ್ತಾರೆ ಎನ್ನುವುದೇ ನಾಗರೀಕ ಸಮುದಾಯದಲ್ಲಿ ಪ್ರಸ್ತುತ ಉಂಟಾಗಿರುವ ಆಕ್ರೋಶ.

ಕೆಲವು ಸಚಿವರು ಹಾಗೂ ಶಾಸಕರು, ಕಾನೂನಿನಂತೆ ಸ್ವತಹಾ ತಾವೇ ಅಧ್ಯಕ್ಷರಾಗಿರುವ ಬದಲು ತಮ್ಮ ಚೇಲಾಗಳನ್ನೋ, ತಮಗೆ ಬೇಕಾದ ಜಾತಿಯ, ರಾಜಕೀಯ ಪಕ್ಷದ ಪುಢಾರಿಯನ್ನೋ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿಬಿಡುತ್ತಾರೆ. ಕೆಲವು ಬಾರಿ, ಕೆಲವು ಕಡೆಗಳಲ್ಲಿ ಹೀಗೆ ನಾಮ ನಿರ್ದೇಶನ ಮಾಡಲ್ಪಡುವ ಅಧ್ಯಕ್ಷರು, ಸದಸ್ಯರು ಸಂಬಂಧಿಸಿದ ಶಾಲೆಗಳಲ್ಲಿ ಪೋಷಕರಾಗಿ ನೋಂದಾವಣೆ ಗೊಂಡವರೇ ಆಗಿರುವುದಿಲ್ಲ. ಕಾರಣ, ಇವರ ಮಕ್ಕಳು ಸಂಬಂಧಿಸಿದ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿ/ ವಿದ್ಯಾರ್ಥಿನಿಯಾಗಿರುವುದಿಲ್ಲ.

ಚಮಚಾಗಿರಿ, ಚೇಲಾಗಿರಿ, ಜೀತ ಮಾಡಿಕೊಂಡಿರುವವರಾದರೇ ಸಾಕು. ಇದೇ ಮಾನದಂಡದಲ್ಲಿ ಶಾಸಕರು ಹಾಗೂ ಸಚಿವರಾದವರು ಶಾಲೆಗಳ ಎಸ್ ಡಿಎಂಸಿಗಳಿಗೆ ತಮಗೆ ಬೇಕಾದವರನ್ನು, ತಮ್ಮ ಬಂಟರನ್ನು ನಾಮನಿರ್ದೇಶನ ಮಾಡಿ ಸುಭಗತನ ಪ್ರದರ್ಶಿಸುತ್ತಾರೆ. ಬಳಿಕ ಇವರ ಹೆಗಲ ಮೇಲೆ ಬಂದೂಕು ಇರಿಸಿ ಗುಂಡು ಹಾರಿಸುವಂತೆ ಭ್ರಷ್ಟಚಾರಕ್ಕೂ ಅವಕಾಶ ಮಾಡಿಕೊಡುತ್ತಾರೆ, ಧ್ವೇಷ ಸಾಧನೆಯನ್ನೂ ಮಾಡುತ್ತಾರೆ.

ಇಂಥ ಹತ್ತು ಹಲವು ಪ್ರಕರಣಗಳು ಉಡುಪಿ ಜಿಲ್ಲೆಯ ಸಹಿತ ರಾಜ್ಯದ ವಿವಿಧೆಡೆಗಳ ಶಾಲೆಗಳಲ್ಲಿ ನಡೆಯುತ್ತಿದ್ದು, ಹಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಅಲ್ಲಲ್ಲಿ ಒಂದೊಂದು ಪ್ರಕರಣಗಳಷ್ಟೇ ಬಹಿರಂಗಕ್ಕೆ ಬರುತ್ತವೆ. ಇವುಗಳೆಲ್ಲ ಬೇಲಿಯೇ ಎದ್ದು ಹೋಲ ಮೇಯುವಂಥ ಪ್ರಕರಣಗಳಾಗಿರುವುದರಿಂದ, ಪ್ರಜೆಗಳೇ ಜನಪ್ರತಿನಿಧಿಗಳ ಇಂಥ ಅಧಿಕ ಪ್ರಸಂಗಗಳ ವಿರುದ್ಧ ಧ್ವನಿ ಎತ್ತುವುದು ಅನಿವಾರ್ಯವಾಗಿದೆ. ಜನಪ್ರತಿನಿಧಿಗಳ ಇಂಥ ಅಧಿಕ ಪ್ರಸಂಗಗಳ ಬಗ್ಗೆ ನಾಗರಿಕರು ಪುರಾವೆ ಸಹಿತ ವಿವರವಾದ ಮಾಹಿತಿಗಳನ್ನು ನೀಡಿದರೆ, udupibits.in (ಶ್ರೀರಾಮ ದಿವಾಣ, ಸಂಪಾದಕರು, ಮೊಬೈಲ್: 9164341889) ನಾಗರಿಕರ ಬಹಿರಂಗ ಮಾಧ್ಯಮ ಧ್ವನಿಯಾಗಲಿದೆ.

Leave a Reply

Your email address will not be published. Required fields are marked *