Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹದಿಹರೆಯ: ಮಕ್ಕಳಲ್ಲಿನ ಬದಲಾವಣೆ, ರಕ್ಷಕ-ಶಿಕ್ಷಕರ ಗೊಂದಲ ಇತ್ಯಾದಿ…

ಭಾಗ-1

# ಡಾ.ಶ್ರೀಗಣೇಶ್ ಅವರು ತಮ್ಮ ವ್ರತ್ತಿಯ ಏಕಾತನತೆಯನ್ನು ಮರೆಯಲು ಆಗಿಂದಾಗೆ ಶಾಲಾ – ಕಾಲೇಜುಗಳಲ್ಲಿ ಪೋಷಕರು, ಶಿಕ್ಷಕರನ್ನು ಉದ್ದೇಶಿಸಿ ಇಲ್ಲವೇ ವಿಧ್ಯಾರ್ಥಿಗಳನ್ನು ಕುರಿತು ಮಾತನಾಡುವುದು ಅಭ್ಯಾಸ ಮಾಡಿಕೊಂಡಿದ್ದರು. ಇಂತಹ ಒಂದು ಕಾರ್ಯಕ್ರಮಕ್ಕೆ ಕುಂದಾಪುರ ಹತ್ತಿರ ಯಡ್ತಾಡಿ ಎಂಬ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆಗೆ ಹೋದರು. ಅದು ಶಿಕ್ಷಕ – ರಕ್ಷಕ ಸಂಘದ ಸಭೆ.
ಸಭೆಯಲ್ಲಿ ಡಾ||ಶ್ರೀ ಗಣೇಶ್ ಅವರು ಹದಿಹರೆಯದ ಮಕ್ಕಳಲ್ಲಿರುವ ವೈಶಿಷ್ಟ್ಯಗಳು, ಅವರ ದೇಹ, ಮನಸ್ಸು ಮತ್ತು ಬೌದ್ಧಿಕ ಮೌಲ್ಯಗಳಲ್ಲಿ ಆಗುವ ಬದಲಾವಣೆಗಳನ್ನು ವಿವರವಾಗಿ ತಿಳಿಸಿದರು.

“ಹದಿನಾರರ ವಯಸ್ಸು, ಹುಚ್ಚು ಕೋಡಿ ಮನಸ್ಸು” ಎಂಬ ಡಾ|ವೆಂಕಟೇಶ ಮೂರ್ತಿಯವರ ಭಾವಗೀತೆಯ ಉಲ್ಲೇಖ ಮಾಡಿದರು. ತಾಯಿ – ತಂದೆ, ಗುರು – ಹಿರಿಯರನ್ನು ವಿರೋಧಿಸುವುದು, ಮಿತ್ರರಿಂದ ಪ್ರಭಾವಿತರಾಗುವುದು ಹಾಗೂ ಅವರು ಹೇಳಿದ ವಿಷಯಗಳನ್ನು “ಸರಿ-ತಪ್ಪು”ಯೋಚಿಸದೆ ಒಪ್ಪಿಬಿಡುವುದು, ಕುತೂಹಲ ಮತ್ತು ಪ್ರಯೋಗ ಮನೋಭಾವ ಇವರನ್ನೆಲ್ಲ ಮದ್ಯ, ಮೋಬೈಲ್, ಇಂಟರ್ ನೆಟ್ ನಂತಹ ವಿಷಯಗಳತ್ತ ಸೆಳೆಯುವುದು, ಅನ್ಯಲಿಂಗ ಆಕರ್ಷಣೆ, ಮಾಧ್ಯಮದ ಪ್ರಚೋದನೆ, ತಾವು ಸ್ವತಂತ್ರರು ಎಂಬ ಭಾವನೆ, ತನ್ನನ್ನು ಯಾರಾದರೂ ಗುರುತಿಸಲಿ ಎಂಬ ಯೋಚನೆ, ಟಿವಿ ಯಾ ಸಿನೆಮಾ ಯಾ ಕ್ರಿಕೆಟ್ ತಾರೆಯರ ಅನುಕರಣೆ ಸರ್ವೇಸಾಮಾನ್ಯ ಎಂಬುದಾಗಿ ಉದಾಹರಣೆ ಸಹಿತ ಹೇಳಿದರು.

vishwasa-1

ಹದಿ ಹರೆಯದರನ್ನು ಬೆಳಸುವಾಗ ಅವರನ್ನು ಮಿತ್ರರೊಂದಿಗೆ ಹೋಲಿಕೆ ಮಾಡುವುದು, ಅವರ ತಪ್ಪುಗಳನ್ನು ಕೆದಕುತ್ತಾ ಮೂದಲಿಸುವುದು, ಅವರಿಗೆ ಹೇಳುವುದೊಂದು ನಾವು ಮಾಡುವುದು ಇನ್ನೊಂದು ಮುಂತಾದವುಗಳನ್ನು ಹೆತ್ತವರು, ಶಿಕ್ಷಕರು ಮಾಡುವುದರಿಂದ ಮನೆಗಳಲ್ಲಿ, ಶಾಲೆಗಳಲ್ಲಿ ಮಕ್ಕಳ ಮತ್ತು ಹಿರಿಯರ ನಡುವೆ ಚಕಮಕಿ ನಡೆಯುತ್ತದೆ.

ಹದಿಹರೆಯದಲ್ಲಿ ಕೀಳರಿಮೆ, ಖಿನ್ನತೆ, ಆತ್ಮಹತ್ಯೆಯ ಆಲೋಚನೆ, ಸಾಮಾಜಿಕ ಆತಂಕ, ಗೀಳು ಮನೋರೋಗ ಮುಂತಾದ ಮನೋಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಾರೆ. ಹೆಚ್ಚಾಗಿ ಮಿತ್ರರ ಒತ್ತಡ,  ಮೋಜಿನ ಜೀವನ, ಒತ್ತಡ ನಿವಾರಣೆಯ ತಂತ್ರವೆಂದು ಹಲವರು ಮದ್ಯ ಮಾದಕ ವ್ಯಸನ ಇಲ್ಲವೇ ಇಂಟರ್ ನೆಟ್, ವಾಟ್ಸ್ ಅಪ್, ಫೆಸ್ ಬುಕ್  ಅತಿಯಾಗಿ ಉಪಯೋಗಿಸುವ ವ್ಯಸನಕ್ಕೆ ಬಲಿಯಾಗುತ್ತಾರೆ.

vishwasa-2

ಹಲವು ಮಕ್ಕಳು ಕಲಿಕಾ ತೊಂದರೆಯಿಂದ ಬಳಲುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಹುಟ್ಟುವಾಗಲೇ ನ್ಯೂನತೆಗಳಿಂದ ಮಿದುಳಿನ ನರಕೋಶಗಳಲ್ಲಿ ಯಾ ಮೇಲ್ಮೈಯಲ್ಲಿ  ಸಮಸ್ಯೆಗಳಿಂದ ಬರವಣಿಗೆ ಯಾ ಓದುವಿಕೆಯಲ್ಲಿ ಹಿಂದುಳಿಯುತ್ತಾರೆ. ಹದಿಹರೆಯದಲ್ಲಿ ಈ ಮಕ್ಕಳು  ಕೀಳರಿಮೆಯಿಂದಾಗಿ ತನ್ನ ಸಹಪಾಠಿಗಳೊಡನೆ ಜಗಳ, ಗುರು ಹಿರಿಯರಿಗೆ ಅವಿಧೇಯನಾಗುವುದು ಮುಂತಾದ ಕಾರಣಗಳಿಂದ ಭಾವನಾತ್ಮಕ ಸಮಸ್ಯೆಗಳಿಗೆ ಬಲಿಯಾಗಬಹುದು. ಈ ಎಲ್ಲಾ ವಿಷಯಗಳ ಬಗ್ಗೆ ಡಾ|ಶ್ರೀಗಣೇಶ್ ಅವರು ಮಾತನಾಡಿದ ನಂತರ ತಾಯಿ ತಂದೆಯರೊಂದಿಗೆ ಪ್ರಶ್ನೋತ್ತರ, ಸಂವಾದ ಕಾರ್ಯಕ್ರಮವನ್ನೂ ನಡೆಸಿದರು.

ಸ್ವತಃ ಪ್ರಾಧ್ಯಾಪಕಿಯಾಗಿದ್ದ ಶಶಿಕಲ ಟೀಚರ್ ಅವರು ವೈದ್ಯರನ್ನುದ್ದೇಶಿಸಿ ವೈವಿಧ್ಯಮಯ ಪ್ರಶ್ನೆಗಳನ್ನು ಕೇಳಿದರು. ಅವರ ಮೊದಲ ಪ್ರಶ್ನೆ ಮಕ್ಕಳ ಸ್ಕೂಲ್ ಬ್ಯಾಗ್ ನ ತೂಕ ಎಷ್ಟಿರಬೇಕು ?, ಹಾಗೆಯೇ ಒಂದು ಬೆಂಚಿನಲ್ಲಿ ಎಷ್ಟು  ಮಕ್ಕಳು ಕುಳಿತುಕೊಳ್ಳಬಹುದು ?, ಮಕ್ಕಳ ಮೇಲೆ ಶೋಷಣೆಯ ಸಾಧ್ಯತೆಯ ಬಗ್ಗೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ತಿಳಿಸಬೇಕು, ಗುಡ್ ಟಛ್ ಹಾಗು ಬ್ಯಾಡ್ ಟಛ್ ಬಗ್ಗೆ ಯಾವಾಗ ತಿಳಿಸಬೇಕು ?, ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಅವಧಿಗಳು ಎಷ್ಟಿರಬೇಕು ? ಹೀಗೆ ಒಂದೇ ಸಮನೆ ಪ್ರಶ್ನೆಗಳನ್ನು ಕೇಳಲಾರಂಭಿಸಿದರು…

vishwasa-3

(ಮುಂದುವರೆಯುವುದು)

ಚಿತ್ರಗಳು: ಸಾಂದರ್ಭಿಕ (ಅಂತರ್ಜಾಲದ ಸಂಗ್ರಹ)

@ ‘ಮನೋವಿಶ್ವಾಸ’ ಅಂಕಣಕಾರರಾದ ಡಾ.ಪಿ.ವಿ.ಭಂಡಾರಿಯವರು, ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಖ್ಯಾತ ಮನೋವೈದ್ಯರು. ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಕೊಡಮಾಡುವ ಪ್ರತಿಷ್ಠಿತ ‘ಸಂಯಮ’ ಪ್ರಶಸ್ತಿ ಪುರಸ್ಕೃತರು. ‘ಸ್ಕೂಲ್ ಫೋಬಿಯ’ (ಮಕ್ಕಳ ಸಮಸ್ಯೆಗಳ ಮನೋ ವೈಜ್ಞಾನಿಕ ವಿಶ್ಲೇಷಣೆ) ಡಾ.ಭಂಡಾರಿಯವರ ಪ್ರಕಟಿತ ಕೃತಿ.

Leave a Reply

Your email address will not be published. Required fields are marked *