Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪಡುಬಿದ್ರಿ ಎಸ್ ಡಿಎಂಸಿಗೆ ಅಕ್ರಮ ನೇಮಕ: ಸ್ವಜನ ಪಕ್ಷಪಾತ ಮೆರೆದ ಸಚಿವ ಸೊರಕೆ !

ಉಡುಪಿ: ಉಡುಪಿ ತಾಲೂಕಿನ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಡುಬಿದ್ರಿಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ ಡಿಎಂಸಿ)ಗೆ ಶಾಲಾ ಪೋಷಕರ ಪಟ್ಟಿಯಲ್ಲಿ ನೋಂದಣಿಯಾಗದ ವ್ಯಕ್ತಿಯೊಬ್ಬರನ್ನು ನಿಯುಕ್ತಿ ಮಾಡುವ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಸ್ಥಳೀಯ ಶಾಸಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಕಾರೀ ನೀತಿ ನಿಯಮಾವಳಿಗಳನ್ನು ಸಾರಾ ಸಗಟು ಉಲ್ಲಂಘನೆ ಮಾಡಿರುವುದು ತಡವಾಗಿ ಬಹಿರಂಗಕ್ಕೆ ಬಂದಿದೆ.

ವೈ.ಸುಕುಮಾರ್ ಎಂಬವರು ಪಡುಬಿದ್ರಿ ಸರಕಾರಿ ಹೈಸ್ಕೂಲಿನ ಎಸ್ಡಿಎಂಸಿ ಅಧ್ಯಕ್ಷರಾಗಿದ್ದಾರೆ. ಇವರ ಹೆಸರು ಶಾಲಾ ಪೋಷಕರ ಪಟ್ಟಿಯಲ್ಲಿ ನೋಂದಣಿಯಾಗಿಲ್ಲ. ಕಾರಣ, ಇವರ ಸ್ವಂತ ಮಕ್ಕಳಾಗಲೀ, ಇವರು ಪೋಷಿಸುತ್ತಿರುವ ಮಕ್ಕಳಾಗಲೀ ಈ ಶಾಲೆಯಲ್ಲಿ ಕಲಿಯುತ್ತಿಲ್ಲ. ಆಶ್ಚರ್ಯವೆಂದರೆ, ಎಸ್ ಡಿಎಂಸಿ ಅಧ್ಯಕ್ಷರಾಗಿ ನೇಮಕಗೊಂಡ ವೈ.ಸುಕುಮಾರ್ ಇವರ ವಿಳಾಸವೇ ಶಿಕ್ಷಣ ಇಲಾಖೆಯಲ್ಲಿ ಲಭ್ಯವಿಲ್ಲದೇ ಇರುವುದು.

ಸರಕಾರದ ಆದೇಶ ಸಂ.ಇಡಿ1 ಪಿಬಿಎಸ್ 2001ರ ಪ್ರಕಾರ, ಸರಕಾರಿ ಹೈಸ್ಕೂಲಿನ ಎಸ್ಡಿಎಂಸಿಗೆ ಸ್ಥಳೀಯ ಶಾಸಕರು ಅಧ್ಯಕ್ಷರು ಹಾಗೂ ಅಧ್ಯಕ್ಷರಿಂದ ಅಂದರೆ ಶಾಸಕರಿಂದ ನಾಮನಿರ್ದೇಶನ ಮಾಡಲ್ಪಡುವ 9 ಮಂದಿ ಪೋಷಕರು ಸದಸ್ಯರಾಗಿರುತ್ತಾರೆ. ಶಾಲಾ ಪೋಷಕರ ಪಟ್ಟಿಯಲ್ಲಿ ನೋಂದಾವಣೆಗೊಂಡಿರುವವರಲ್ಲಿ ಯಾರಾದರೂ 9 ಮಂದಿ ಪೋಷಕರನ್ನು ಶಾಸಕರು ನಾಮನಿರ್ದೇಶನ ಮಾಡಬಹುದಾಗಿದೆಯೇ ಹೊರತು, ನಮ್ಮ ಜಾತಿಯವನು, ನಮ್ಮ ಪಕ್ಷದವನು, ಪಾರ್ಟಿ ಫಂಡಿಗೆ ಹಣ ಕೊಟ್ಟವನು, ನನ್ನ ಚುನಾವಣೆ ಖರ್ಚಿಗೆ ಹಣ ಕೊಟ್ಟವನು ಎಂಬಿತ್ಯಾದಿ ಯಾವುದೇ ಮಾನದಂಡದಲ್ಲಿ ಯಾರು ಯಾರನ್ನಾದರೂ ಎಸ್ ಡಿಎಂಸಿ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲು ಶಾಸಕರಿಗೆ ಇಲ್ಲಿ ಅವಕಾಶವಿಲ್ಲ, ಅಧಿಕಾರವೂ ಇಲ್ಲ.

ಸರಕಾರೀ ನೀತಿ ನಿಯಮಾವಳಿ ಹೀಗಿರುವಾಗ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯದ ನಗರಾಭಿವೃದ್ಧಿ ಸಚಿವರೂ ಆದ ಕಾಪು ವಿಧಾನಸಭಾ ಕ್ಷೇತ್ರದ ಸದಸ್ಯರಾದ ವಿನಯ ಕುಮಾರ್ ಸೊರಕೆಯವರು ತಮ್ಮ ಜಾತಿ ಭಾಂದವರೂ, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರೂ ಆಗಿರುವ ವೈ.ಸುಕುಮಾರ್ ಅವರನ್ನು ಎಸ್ ಡಿಎಂಸಿ ಅದ್ಯಕ್ಷರನ್ನಾಗಿ ಹೇಗೆ ನಾಮನಿರ್ದೇಶನ ಮಾಡಿದರು ಮತ್ತು ಈ ಅಕ್ರಮ, ನಿಯಮ ಬಾಹಿರ ನಾಮನಿರ್ದೇಶನವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳಾದರೂ ಹೇಗೆ ಒಪ್ಪಿಕೊಂಡರು ಎಂಬುದು ಪ್ರಶ್ನೆಯಾಗಿದೆ, ಅನುಮಾನಕ್ಕೆ ಕಾರಣವಾಗಿದೆ.

ವೈ.ಸುಕುಮಾರ ಅವರ ಹೆಸರು ಪಡುಬಿದ್ರಿ ಸರಕಾರಿ ಹೈಸ್ಕೂಲಿನ ಪೋಷಕರ ಪಟ್ಟಿಯಲ್ಲಿ ನೋಂದಣಿಯಾಗದ ಕಾರಣಕ್ಕೇ, ಶಾಲಾ           ಎಸ್ ಡಿಎಂಸಿ ಸದಸ್ಯರ ಹೆಸರು ಮತ್ತು ವಿಳಾಸಗಳನ್ನು ಶಾಲಾ ಪದ ನಿಮಿತ್ತ ಕಾರ್ಯದರ್ಶಿಯಾದ ಶಾಲಾ ಹಿರಿಯ ಸಹ ಶಿಕ್ಷಕಿ ಶ್ರೀಮತಿ ಸಂಧ್ಯಾ ಸರಸ್ವತಿಯವರು ಶಿಕ್ಷಣ ಇಲಾಖೆಗೆ ಸಲ್ಲಿಸಿರಲಿಲ್ಲ ಮತ್ತು ಇಲಾಖೆಯಿಂದ ಅಧಿಕೃತವಾಗಿ ಈ ಸಮಿತಿಗೆ ಅನುಮೋದನೆ ಪಡೆದುಕೊಂಡಿಲ್ಲ ಎನ್ನುವುದು ಖಚಿತವಾಗಿದೆ. ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ಹೆಸರು ಮತ್ತು ವಿಳಾಸ ಪಟ್ಟಿಯಲ್ಲಿ ವೈ.ಸುಕುಮಾರ್ ಅವರ ವಿಳಾಸವನ್ನು ನಮೂದಿಸದೆ ಕೇವಲ ಹೆಸರು ಮಾತ್ರ ನೀಡಿ ಇಲಾಖೆಯನ್ನು ವಂಚಿಸಿರುವುದು ದೃಢಪಟ್ಟಿದೆ. ಪರಿಣಾಮವಾಗಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪಡುಬಿದ್ರಿ ಸರಕಾರಿ ಹೈಸ್ಕೂಲಿನ 9 ಮಂದಿ ಎಸ್ ಡಿಎಂಸಿ ಸದಸ್ಯರ ಪಟ್ಟಿಯೇ ಲಭ್ಯವಿಲ್ಲದಂತಾಗುಇರುವುದು ದುರಂತವೇ ಸರಿ.

ಸರಕಾರೀ ಆದೇಶದ ಪ್ರಕಾರ, ಎಸ್ ಡಿಎಂಸಿಯಲ್ಲಿ ಗೌರವಾಧ್ಯಕ್ಷ ಎಂಬ ಹುದ್ದೆ ಸೃಷ್ಟಿಸಲು ಅವಕಾಶವೇ ಇಲ್ಲ. ಆದರೆ, ಪಡುಬಿದ್ರಿ ಸರಕಾರಿ ಹೈಸ್ಕೂಲಿನಲ್ಲಿ ಗೌರವಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಲಾಗಿದೆ. ಅಧ್ಯಕ್ಷರಾಗಿರಬೇಕಾದ ಶಾಸಕ ವಿನಯ ಕುಮಾರ್ ಸೊರಕೆಯವರು ಇಲ್ಲಿ ಗೌರವಾಧ್ಯಕ್ಷರಾಗಿದ್ದಾರೆ. ಸೊರಕೆಯವರು ಇಲ್ಲಿ ಕಾನೂನು ಬಾಹಿರವಾಗಿ ತಮ್ಮ ಜಾತಿಯ, ತಮ್ಮ ಪಕ್ಷದ ವೈ.ಸುಕುಮಾರ್ ಅವರನ್ನು ಅಕ್ರಮವಾಗಿ ಅಧ್ಯಕ್ಷರನ್ನಾಗಿ ಮಾಡಿ, ತಾವು ಸ್ವಯಂಘೋಷಿತ ಗೌರವಾಧ್ಯಕ್ಷರಾಗಿ ನಿಯುಕ್ತಿಯಾಗಿರುವುದು ಸ್ಪಷ್ಟವಾಗುತ್ತದೆ.

ಕಾನೂನು, ನೀತಿ ನಿಯಮಾವಳಿಗಳನ್ನು ರಚಿಸುವ ಜವಾಬ್ದಾರಿಯಯುತ ಜನಪ್ರತಿನಿಧಿಗಳೇ ಕಾನೂನುಗಳನ್ನು ಸಾರಾ ಸಗಟು ಮುರಿಯುವುದು ಮತ್ತು ಕಾನೂನು ಪಾಲನೆ ಮಾಡಬೇಕಾದ ಮತ್ತು ಜ್ಯಾರಿಗೊಳಿಸಬೇಕಾದ ಸರಕಾರಿ ಅಧಿಕಾರಿಗಳೇ ಇವುಗಳನ್ನು ಪಾಲನೆ ಮಾಡದೆ ಕಡೆಗಣಿಸುವುದು ಅಕ್ರಮವನ್ನು ಪ್ರೋತ್ಸಾಹಿಸುವ ಪ್ರಕ್ರಿಯೆ ರಾಜಾರೋಷವಾಗಿ ನಡೆಯುತ್ತಿರುವುದು ವ್ಯವಸ್ಥೆಯ ಅವ್ಯವಸ್ತೆಗೆ ಮತ್ತು ಪ್ರಭುತ್ವದ ದುರಂತಕ್ಕೆ ಸಾಕ್ಷಿಯಾಗಿದೆ.

y.sukumar

* ವೈ.ಸುಕುಮಾರ್

Leave a Reply

Your email address will not be published. Required fields are marked *