Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಗುಂಡಿನ ದಾಳಿ ನಡೆಸಿ ಪ್ರಸಿದ್ಧ ಸಂಶೋಧಕ ಡಾ.ಕಲಬುರ್ಗಿ ಹತ್ಯೆ !

ಉಡುಪಿ: ವಿಶ್ರಾಂತ ಕುಲಪತಿ, ಹಿರಿಯ ಮತ್ತು ಪ್ರಸಿದ್ಧ ಸಂಶೋಧಕ ಧಾರವಾಡ ಜಿಲ್ಲೆಯ ಡಾ.ಎಂ.ಎಂ.ಕಲಬುರ್ಗಿಯವರ ಮೇಲೆ ಇಂದು ಬೆಳಿಗ್ಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಕಲಬುರ್ಗಿಯವರು ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ 8.30ರಿಂದ 9 ಗಂಟೆ ನಡುವೆ ಧಾರವಾಢ ಜಿಲ್ಲೆಯ ಕಲ್ಯಾಣ ನಗರದಲ್ಲಿರುವ ಡಾ.ಕಲಬುರ್ಗಿಯವರ ಮನೆಯೊಳಗೆ ಏಕಾಏಕಿ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಕಲಬುರ್ಗಿಯವರ ಮೇಲೆ ಗುಂಡು ಹಾರಿಸಿ ಬಂದಷ್ಟೇ ವೇಗವಾಗಿ ಸ್ಥಳದಿಂದ ಪರಾರಿಯಾದರು. ಅವರ ಪತ್ನಿ ಎದುರುಗಡೆಯೇ ಘಟನೆ ನಡೆದಿದೆ. ಗುಂಡಿನ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಕಲಬುರ್ಗಿಯವರನ್ನು ಕೂಡಲೇ ಜಿಲ್ಲಾ ಆಸ್ಪತ್ರಗೆ ಸಾಗಿಸಲಾಯಿತಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲಿ ಕಲಬುರ್ಗಿ ಕೊನೆಯುಸಿರೆಳೆದರು.

1938ರ ನವೆಂಬರ್ 28ರಂದು ಬಿಜಾಪುರ ಜಿಲ್ಲೆ ಸಿಂಧಗಿ ತಾಲೂಕಿನ ಗುಬ್ಬೆವಾಡದಲ್ಲಿ ಮಡಿವಾಳಪ್ಪ – ಗುರಮ್ಮ ದಂಪತಿಗಳ ಮಗನಾಗಿ ಜನಿಸಿದ ಎಂ.ಎಂ.ಕಲಬುರ್ಗಿಯವರು, ಶಾಸನ ಶಾಸ್ತ್ರ, ಸಾಹಿತ್ಯ, ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತು ಶಿಲ್ಪ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಅನನ್ಯವಾದ ಸಾಧನೆ ಮಾಡಿ ಪ್ರಸಿದ್ಧಿ ಪಡೆದವರು, ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾದವರು.

ಎರಡು ನಾಟಕ ಕೃತಿಗಳು ಮತ್ತು ಒಂದು ಕವನ ಸಂಕಲನನ್ನೂ ಪ್ರಕಟಿಸಿರುವ ಕಲಬುರ್ಗಿಯವರು ಕರ್ನಾಟಕ ವಿವಿಯಿಂದ 1960ರಲ್ಲಿ ಬಿ.ಎ., 1962ರಲ್ಲಿ ಎಂ.ಎ. ಪದವಿ ಪಡೆದರು. ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯೆ’ ಎಂಬ ಮಹಾ ಪ್ರಬಂಧಕ್ಕ ಪಿ.ಎಚ್.ಡಿ.ಪದವಿ ಪಡೆದವರು.

ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರಾಗಿ, ಕನ್ನಡ ವಿವಿಯ ಉಪಕುಲಪತಿಗಳಾಗಿದ್ದ ಡಾ.ಎಂ.ಎಂ.ಕಲಬುರ್ಗಿಯವರು ಕರ್ನಾಟಕ ಸರಕಾರ 15 ಸಂಪುಟಗಳಲ್ಲಿ ಪ್ರಕಟಿಸಿದ ‘ವಚನ ಸಾಹಿತ್ಯ ಸಂಪುಟ’ದ ಪ್ರಧಾನ ಸಂಪಾದಕರಾಗಿದ್ದರು. ‘ಸಮಗ್ರ ಕೀರ್ತನ ಸಂಪುಟ’ ಗಳ ಸಂಪಾದಕ ಮಂಡಳಿ ಸದಸ್ಯರಾಗಿದ್ದವರು.

ಇತ್ತೀಚೆಗೆ, ಕೆಲವೊಂದು ಕಾರಣಕ್ಕಾಗಿ ಕಲಬುರ್ಗಿಯವರು ವಿಶ್ವ ಹಿಂದೂ ಪರಿಷತ್ತು, ಬಜರಂಗದಳವೇ ಮುಂತಾದ ಸಂಘ ಪರಿವಾರದ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಡಾ.ಕಲಬುರ್ಗಿಯವರನ್ನು ಬಂಧಿಸುವಂತೆ ಆಗ್ರಹಿಸಿ ಸಂಘ ಪರಿವಾರದ ಸಂಘಟನೆಗಳು ಪ್ರತಿಭಟನೆಗಳನ್ನೂ ನಡೆಸಿದ್ದರು.

dr.m.m.kalburgi-1

Leave a Reply

Your email address will not be published. Required fields are marked *