Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಲೋಕಾಯುಕ್ತ ಪೊಲೀಸ್ ಕಚೇರಿಯಿಂದ ಮಾಹಿತಿ ಹಕ್ಕು ಕಾಯ್ದೆ ಕಡೆಗಣನೆ: ಮನವಿ ಬಳಿಕ ಕಾಟಾಚಾರದ ಫಲಕ ಅಳವಡಿಕೆ !

ಉಡುಪಿ: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಉಡುಪಿ ಡಿವೈಎಸ್ಪಿ ಕಚೇರಿಯಲ್ಲಿ ವರ್ಷಗಳ ಬಳಿಕ ಕೊನೆಗೂ ಮಾಹಿತಿ ಹಕ್ಕು ಅಧಿನಿಯಮ- 2005ರಂತೆ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರದ ಬಗ್ಗೆ ಮಾಹಿತಿ ಫಲಕ ಅಳವಡಿಸಲಾಗಿದೆ.

ಮಾಹಿತಿ ಹಕ್ಕು ಅಧಿನಿಯಮದ ಕಲಂ 4 (1) ಬಿ, 4 (2), 4 (3) ಮತ್ತು 4 (4)ರಂತೆ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳೂ 17 ಅಂಶಗಳನ್ನು ಒಳಗೊಂಡ ಮಾಹಿತಿ ಫಲಕಗಳನ್ನು ಕಚೇರಿಯ ಹೊರಗಡೆ ಶ್ರೀಸಾಮಾನ್ಯರಿಗೆ ಕಾಣುವಂತೆ ಸಾರ್ವಜನಿಕವಾಗಿ ಅಳವಡಿಸಬೇಕು ಮತ್ತು ಇವುಗಳನ್ನು ಪ್ರತೀ ವರ್ಷವೂ ನವೀಕರಿಸಬೇಕು ಎಂದಿದೆ.

ಆದರೆ, ಲೋಕಾಯುಕ್ತ ಪೊಲೀಸ್ ವಿಭಾಗದ ಉಡುಪಿ ಡಿವೈಎಸ್ಪಿ ಕಚೇರಿ ಇದುವರೆಗೂ ಇಂಥ ಮಾಹಿತಿ ಫಲಕವನ್ನು ಪ್ರದರ್ಶಿಸದೆ ಮಾಹಿತಿ ಹಕ್ಕು ಅಧಿನಿಯಮವನ್ನು ನಿರ್ಲಕ್ಷಿಸಿತ್ತು. ಈ ನಿರ್ಲಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ಆಗಸ್ಟ್ 28ರಂದು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿರುವ ಡಿವೈಎಸ್ಪಿ ನಾಗೇಶ್ ಶೆಟ್ಟಿಯವರಿಗೆ ಅಧಿನಿಯಮದ ಬಗ್ಗೆ ಗಮನಸೆಳೆದು ಮನವಿ ಸಲ್ಲಿಸಿದ್ದರು.

ಮನವಿ ಸಲ್ಲಿಸಿದ ಬಳಿಕದ ಬೆಳವಣಿಗೆಯಾಗಿ, ಇದೀಗ ಕಾಟಾಚಾರಕ್ಕೆ ಎಂಬಂತೆ ಕಚೇರಿಯ ಒಳಗಡೆ ನೋಟೀಸ್ ಬೋರ್ಡ್ ನ ಪಕ್ಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರದ ಬಗ್ಗೆ ಸಂಕ್ಷಿಪ್ತ ಮಾಹಿತಿಯಷ್ಟೇ ಇರುವ ಸಣ್ಣದೊಂದು ಫಲಕವನ್ನು ಅಳವಡಿಸಲಾಗಿದೆ. ಇದರಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರದ ಕಚೇರಿ ಬಗ್ಗೆ ಪೂರ್ಣ ವಿಳಾಸ ನೀಡದೆ ಮರೆಮಾಚಲಾಗಿದೆ.

udupi lokayukta office notic bord-1 copy

ಅಧಿನಿಯಮದ ಪ್ರಕಾರ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳೂ ತಮ್ಮ ಸಂಸ್ಥೆಯ ವಿವರಗಳು, ಕೆಲಸ, ಕರ್ತವ್ಯಗಳು, ಕಚೇರಿ ಅಧಿಕಾರಿಗಳ, ಉದ್ಯೋಗಿಗಳ ಸಾಮರ್ಥ್ಯ, ಕರ್ತವ್ಯಗಳು, ಪರಿಶೀಲನೆ, ಜವಾಬ್ದಾರಿಯ ಮಾಧ್ಯಮಗಳನ್ನೊಳಗೊಂಡಂತೆ ತೀರ್ಮಾನ ಕಥಗೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಲಾಗುವ ವಿಧಾನ, ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ತಾವೇ ರೂಪಿಸಿಕೊಂಡಿರುವ ಮಾನದಂಡಗಳು, ಕೆಲಸ ಕಾರ್ಯಗಳ ನಿರ್ವಹಣೆಗಾಗಿ ಬಳಸಲಾಗುವ ನಿಯಮಗಳು, ನಿಬಂಧನೆಗಳು, ಸೂಚನೆಗಳು, ದಾಖಲಾತಿಗಳು, ಅಧಿಕಾರಿಗಳು, ಉದ್ಯೋಗಿಗಳ ವಿವರಣಾ ಸೂಚಿ, ಅಧಿಕಾರಿ, ಉದ್ಯೋಗಿಗಳಿಗೆ ನೀಡಲಾಗುವ ತಿಂಗಳ ವೇತನದ ವಿವರಗಳು, ಇತರ ಭತ್ಯೆಗಳು, ಯೋಜನೆಗಳು, ಯೋಜನೆಗಳಿಗಾಗಿನ ಉದ್ಧೇಶಿತ ವೆಚ್ಚಗಳು, ಪಾವತಿಯಾಗಿರುವ ಮೊಬಲಗು, ಪ್ರತಿಯೊಂದು ಬಾಬಿಗೂ ನಿಗದಿಯಾದ ಬಜೆಟ್ ವಿವರಗಳು ಇತ್ಯಾದಿ ವಿವರಗಳ ಮಾಹಿತಿ ಫಲಕಗಳನ್ನು ಶ್ರೀಸಾಮಾನ್ಯರಿಗೆ ಕಾಣುವಂತೆ ಸಾರ್ವಜನಿಕವಾಗಿ ಅಳವಡಿಸಬೇಕಾಗಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಉಡುಪಿ ಡಿವೈಎಸ್ಪಿ ಕಚೇರಿ ಈಗಲೂ ಈ ರೀತಿಯ ಸಮಗ್ರ ವಿವರಗಳಿರುವ ಮಾಹಿತಿ ಫಲಕವನ್ನು ಅಳವಡಿಸದೆ ಮಾಹಿತಿ ಹಕ್ಕು ಅಧಿನಿಯಮವನ್ನು ಕಡೆಗಣಿಸಿದೆ. ಈ ಬಗ್ಗೆ ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ನೀಡಲು ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ನಿರ್ಧರಿಸಿದ್ದಾರೆ.

ಜಿಲ್ಲೆಯಲ್ಲಿನ ಅನೇಕ ಸಾರ್ವಜನಿಕ ಪ್ರಾಧಿಕಾರಗಳು ಸಹ ಮಾಹಿತಿ ಹಕ್ಕು ಅಧಿನಿಯಮದ ಕಲಂ 4 (1) ಬಿ, 4 (2), 4 (3) ಮತ್ತು 4 (4)ರಂತೆ ಮಾಹಿತಿ ಫಲಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸದೇ ಅಧಿನಿಯಮವನ್ನು ಮತ್ತು ಶ್ರೀಸಾಮಾನ್ಯರನ್ನು ಕಡೆಗಣಿಸುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತೀ ಸಾರ್ವಜನಿಕ ಪ್ರಾಧಿಕಾರಕ್ಕೂ ಪತ್ರ ಬರೆಯಲು ಮತ್ತು ಪತ್ರ ಬರೆದ ಬಳಿಕವೂ ಮಾಹಿತಿ ಫಲಕ ಅಳವಡಿಸದ ಸಾರ್ವಜನಿಕ ಪ್ರಾಧಿಕಾರದ ವಿರುದ್ಧ ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ನೀಡಲು ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ನಿರ್ಧರಿಸಿದ್ದಾರೆ.

udupi lokayukta police office copy

Leave a Reply

Your email address will not be published. Required fields are marked *