Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕರ್ನಾಟಕದಿಂದ ಕೇರಳಕ್ಕೆ ವಿದ್ಯುತ್ !

ಕಾಸರಗೋಡು: ಕರ್ನಾಟಕದಿಂದ ಹೆಚ್ಚುವರಿ ವಿದ್ಯುತ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಟವರ್ ಗಳ ನಿರ್ಮಾಣ ಕಾರ್ಯ ಜಿಲ್ಲೆಯ ವಿವಿಧೆಡೆಗಳಲ್ಲಿ ಈ ತಿಂಗಳಲ್ಲಿ ಆರಂಭಗೊಳ್ಳಲಿದೆ. ಕರ್ನಾಟಕ ಭಾರೀ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆಯಾದರೂ; ಪ್ರಸ್ತುತ ಕರ್ನಾಟಕದಿಂದ 30 ಮೆಗಾವ್ಯಾಟ್ ವಿದ್ಯುತ್ ಕೇರಳಕ್ಕೆ ಸರಬರಾಜಾಗುತ್ತಿದೆ.

ತೌಡುಗೋಳಿ-ಮೈಲಾಟಿ 110 ಕೆ.ವಿ ವಿದ್ಯುತ್ ಲೈನ್ ನಿರ್ಮಾಣದ ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಿದ್ಯಾನಗರದಿಂದ ಸೀತಾಂಗೋಳಿ ವರೆಗಿನ ಎಂಟು ಕಿ.ಮೀ ದೂರದ ಟವರ್ ನಿರ್ಮಾಣ ಕಾರ್ಯದ 1.30 ಕೋಟಿ ರೂ. ಮೊತ್ತದ ಟೆಂಡರ್ ಈಗಾಗಲೇ ಪೂರ್ತಿಗೊಂಡಿದೆ. ಮೊದಲ ಹಂತದ ಕಾಮಗಾರಿ ಆರಂಭಗೊಂಡ ತಕ್ಷಣ ಎರಡನೇ ಹಂತದ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಎರಡನೇ ಹಂತದಲ್ಲಿ ಸೀತಾಂಗೋಳಿಯಿಂದ ಅಟ್ಟೆಗೋಳಿ ವರೆಗೆ 46 ಕಿ.ಮೀ ದೂರದ ವರೆಗೆ ಟವರ್ ನಿರ್ಮಾಣಗೊಳ್ಳಲಿದೆ.

ಮೊದಲ ಹಂತದಲ್ಲಿ ಎರಡು ಟೆಂಡರ್ಗಳು ಲಭಿಸಿದ್ದು, ಇದು ಯೋಜನಾ ಮೊತ್ತದಿಂದ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯುಚ್ಛಕ್ತಿ ಮಂಡಳಿಯ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು. ಅನಂತರ ಶೇ. 72ಕ್ಕಿಂತ ಹೆಚ್ಚಿನ ಯೋಜನಾ ಮೊತ್ತವನ್ನು ಅಂಗೀಕರಿಸುವ ಮೂಲಕ ಸ್ಥಗಿತಗೊಂಡಿದ್ದ ಕಾಮಗಾರಿ ಪ್ರಕ್ರಿಯೆ ಮುಂದುವರಿಸುವಂತಾಗಿದೆ. ಈಗಾಗಲೇ ತೌಡುಗೋಳಿ ವರೆಗೆ ರಾಜ್ಯ ವಿದ್ಯುತ್ ನಿಗಮದ ಹೈಟೆನ್ಶನ್ ವಿದ್ಯುತ್ ಟವರ್ಗಳು ದುರ್ಬಲ ಹಾಗೂ ಕಡಿಮೆ ಧಾರಣಾಶಕ್ತಿ ಹೊಂದಿದವುಗಳಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ರವಾನಿಸುವುದು ಕಷ್ಟಸಾಧ್ಯವಾಗುತ್ತಿದೆ. ಈ ವ್ಯಾಪ್ತಿಯಲ್ಲಿ 170 ಟವರ್ ಗಳಿದ್ದು, ಇವುಗಳಲ್ಲಿ ಬಹುತೇಕ 1965ನೇ ಇಸವಿಯಲ್ಲಿ ನಿರ್ಮಾಣಗೊಂಡವುಗಳಾಗಿದೆ.

ಕೆಎಸ್ಇಬಿಯ 35 ವರ್ಷಕ್ಕಿಂತ ಮೇಲ್ಪಟ್ಟ ಟವರ್ಗಳ ಮೂಲಕ ಹೆಚ್ಚು ಸಾಮಥ್ರ್ಯದ ವಿದ್ಯುತ್ ಸಾಗಾಟದ ಸಾಮಥ್ರ್ಯ ಕಳೆದುಕೊಂಡಿರುತ್ತದೆ. ಇದರಿಂದಾಗಿ ಕರ್ನಾಟಕದಿಂದ ಕೇರಳಕ್ಕೆ ಭರವಸೆ ನೀಡಿದ್ದ 30 ಮೆಗಾವ್ಯಾಟ್ ವಿದ್ಯುತ್ ಪಡೆದುಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಟವರ್ ಗಳ ಶಿಥಿಲಾವಸ್ಥೆ ಪರಿಗಣಿಸಿ 16 ಮೆಗಾವ್ಯಾಟ್ ವಿದ್ಯುತ್ ಮಾತ್ರ ಲಭ್ಯವಾಗುತ್ತಿದೆ.

ಹೊಸ ವಿದ್ಯುತ್ ಟವರ್ ಅಳವಡಿಸಿ ತಂತಿ ಎಳೆಯುವ ಅನುಬಂಧ ಕಾಮಗಾರಿಯಾಗಿ ಮಂಜೇಶ್ವರ ಹಾಗೂ ಕಾಸರಗೋಡು (ವಿದ್ಯಾನಗರ)ಸಬ್ ಸ್ಟೇಶನ್ಗಳಲ್ಲಿ ಬೇ ನಿರ್ಮಾಣ ಕಾರ್ಯ ಈಗಾಗಲೇ ಆರಂಭಿಸಲಾಗಿದೆ. ವಿದ್ಯುತ್ ದಾಟಿ ಬರುವ ಸ್ಥಳ ಮತ್ತು ಸಲಕರಣೆಗಳು ಬೇ ನಿರ್ಮಾಣದಲ್ಲಿರುವುದು. ಇದೂ ಒಳಗೊಂಡಂತೆ ಯೋಜನೆಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಐದು ಕೋಟಿ ರೂ. ಮಂಜೂರುಗೊಳಿಸಲಾಗಿತ್ತು.

* ಸಾಂದರ್ಭಿಕ ಚಿತ್ರ

Leave a Reply

Your email address will not be published. Required fields are marked *