Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

MLC ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ನೀಡಿದ ಉತ್ತರಕ್ಕೆ ಆಕ್ಷೇಪ: ಸಚಿವ ಖಾದರ್ ವಿರುದ್ಧ ದೂರು

ಉಡುಪಿ: ಕರ್ನಾಟಕ ವಿಧಾನ ಪರಿಷತ್ತಿನಲ್ಲಿ 2014ರ ಡಿಸೆಂಬರ್ 15ರಂದು ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯರಾದ ಪಟೇಲ್ ಶಿವರಾಂ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 771ಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ನೀಡಿದ ಉತ್ತರಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಆವರು ಸ್ಪಷ್ಟ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ರಾಜ್ಯಪಾಲರಾದ ವಜುಭಾಯ್ ರುಡಾಭಾಯ್ ವಾಲಾ, ವಿಧಾನಸಬೆಯ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳಾದ ಡಿ.ಎಚ್.ಶಂಕರಮೂರ್ತಿಯವರಿಗೆ ಪತ್ರ ಬರೆದಿದ್ದಾರೆ.

v.r.vala

* ವಿ.ಆರ್.ವಾಲಾ

ಸಚಿವ ಯು.ಟಿ.ಖಾದರ್ ಅವರು ನೀಡಿದ ಉತ್ತರ; ಇಡೀ ಸದನದ ದಿಕ್ಕು ತಪ್ಪಿಸುವಂಥದ್ದು, ಮಾತ್ವರಲ್ಲ; ಸದನವನ್ನು ಮತ್ತು ರಾಜ್ಯದ ಜನತೆಯನ್ನು ವಂಚಿಸುವಂಥದ್ದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವ ಶ್ರೀರಾಮ ದಿವಾಣ ಅವರು, ಸದನದ ಮುಖಾಂತರ ಬಹುಕೋಟಿ ರಾಸಾಯನಿಕ ಹಗರಣವೆಂಬ ಗಂಭೀರ ಭ್ರಷ್ಟಾಚಾರ ಪ್ರಕರಣನ್ನು ಮುಚ್ಚಿ ಹಾಕಿದ ಬಗ್ಗೆ ಮತ್ತು ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರೆಲ್ಲರ ವಿರುದ್ಧವೂ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

kagodu

* ಕಾಗೋಡು ತಿಮ್ಮಪ್ಪ

ರಾಜ್ಯದ 19 ಜಿಲ್ಲೆಗಳಲ್ಲಿ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 22 ಬಗೆಯ ರಾಸಾಯನಿಕ ಖರೀದಿಯ ಅವ್ಯವಹಾರ ಕುರಿತು ಡಾ.ಕೆ.ಎಚ್.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿ ಸರಕಾರದ ಗಮನಕ್ಕೆ ಬಂದಿದೆಯೇ ಎಂಬ ಪಟೇಲ್ ಶಿವರಾಂರವರ ಪ್ರಶ್ನೆಗೆ ಪ್ರತಿಯಾಗಿ ಸಚಿವರ ಯು.ಟಿ.ಖಾದರ್ ಅವರು ಸ್ಪಷ್ಟವಾಗಿ ಮತ್ತು ಪೂರ್ಣವಾಗಿ ಉತ್ತರಿಸದೆ ಅಪೂರ್ಣ ಉತ್ತರ ನೀಡಿ ನುಣುಚಿಕೊಂಡಿದ್ದಾರೆ, ಸದಸ್ಯರಿಗೆ, ಸದನಕ್ಕೆ ಮತ್ತು ರಾಜ್ಯದ ಜನತೆಯನ್ನು ವಂಚಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

dhs murty

* ಡಿ.ಎಚ್.ಶಂಕರಮೂರ್ತಿ

ಜಾಗೃತಕೋಶ ಎಂಬುದು ಅಧಿಕೃತ ಮತ್ತು ಜವಾಬ್ದಾರಿಯುತ ತನಿಖಾ ವಿಭಾಗ/ಸಂಸ್ಥೆಯಾಗಿದೆ. ಇಂಥ ಅಧಿಕೃತ ಮತ್ತು ಜವಾಬ್ದಾರಿಯುತ ತನಿಖೆಯ ಹೊಣೆಯನ್ನು ಹೊತ್ತಿರುವ ಸಂಸ್ಥೆಯ ಮುಖ್ಯಸ್ಥರಾದ ಡಾ.ಕೆ.ಎಚ್.ನರಸಿಂಹಮೂರ್ತ, ಮುಖ್ಯ ಜಾಗೃತಾಧಿಕಾರಿ ಇವರಿಗೆ ತನಿಖೆ ನಡೆಸಲು ನಿರ್ದೇಶನ ನೀಡಿದ ಬಳಿಕ ಮತ್ತು ಅವರು ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ, ತನಿಖಾ ವರದಿಯನ್ನು ಆಯುಕ್ತರಿಗೆ ಸಲ್ಲಿಸಿದ ನಂತರ ತನಿಖಾ ವರದಿಯ ಮೇಲೆ ಆಯುಕ್ತರು ಕೈಗೊಂಡ ಕ್ರಮದ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನೂ ಉತ್ತರದಲ್ಲಿ ಸಚಿವರು ನೀಡಿಲ್ಲ ಯಾಕೆ ? ಆಯುಕ್ತರು ಯಾಕಾಗಿ ಡಾ.ಕೆ.ಎಚ್.ನರಸಿಂಹಮೂರ್ತಿಯವರ ತನಿಖಾ ವರದಿಯನ್ನು ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಿಲ್ಲ ? ಮುಖ್ಯ ಜಾಗೃತಾಧಿಕಾರಿಯವರು ಸಲ್ಲಿಸಿದ ತನಿಖಾ ವರದಿಯನ್ನು ಆಯುಕ್ತರು, ಸಚಿವರು, ಸರಕಾರ ನಿರ್ಲಕ್ಷಿಸಿದ್ದೇಕೆ ? ಎಂದು ಪ್ರಶ್ನಿಸಿರುವ ಶ್ರೀರಾಮ ದಿವಾಣ, ಈ ಎಲ್ಲಾ ವಿಷಯಗಳ ಬಗ್ಗೆ ನಿಷ್ಪಕ್ಷಪಾತವಾದ ಮತ್ತು ಸಮಗ್ರವಾದ ತನಿಖೆ ನಡೆಸಲು ಆದೇಶಿಸಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ; ಮುಖ್ಯ ಜಾಗೃತಾಧಿಕಾರಿಯವರಾದ ಡಾ.ಕೆ.ಎಚ್.ನರಸಿಂಹಮೂರ್ತಿಯವರು 17.05.2013ರಂದು ಆಯುಕ್ತರಿಗೆ ಸಲ್ಲಿಸಿದ ತನಿಖಾ ವರದಿಯ ಆಧಾರದಲ್ಲಿ ಅವ್ಯವಹಾರ ನಡೆಸಿದವರ ವಿರುದ್ಧ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮಾತ್ರವಲ್ಲ; ಈ ಬಹುಕೋಟಿ ಅವ್ಯವಹಾರ ಪ್ರಕರಣದ ಬಗ್ಗೆ ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

dr.k.h.narasimhamurthy

* ಡಾ.ಕೆ.ಎಚ್.ನರಸಿಂಹಮೂರ್ತಿ

ಸರಕಾರಕ್ಕೆ ಭಾರೀ ಆರ್ಥಿಕ ನಷ್ಟ ಉಂಟು ಮಾಡಿದ ಒಂದು ಗಂಭೀರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸರಕಾರದ ಪ್ರಧಾನ ಕಾರ್ಯದರ್ಶಿಗಳು ಆಯುಕ್ತರಿಗೆ ನಿರ್ದೇಶನ ನೀಡಿದ ಬಳಿಕ, ಇದುವರೆಗೂ ಪ್ರಧಾನ ಕಾರ್ಯದರ್ಶಿಗಳು ಯಾಕಾಗಿ ತನಿಖಾ ವರದಿಯನ್ನು ಸಲ್ಲಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿಲ್ಲ ? ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರು ತನಿಖಾ ವರದಿ ಸಲ್ಲಿಸಿರುವಾಗ, ಈ ತನಿಖಾ ವರದಿಯನ್ನು ಪರಿಶೀಲನೆ ನಡೆಸದೆಯೇ, ನಿದೇರ್ಶಕರ ನಿರ್ದೇಶನದಂತೆ ಕೇವಲ ವೈದ್ಯಕೀಯ ಉಪ ನಿರ್ದೇಶಕರಾದ ಡಾ. ಕೆ.ಬಿ.ಈಶ್ವರಪ್ಪ ಅವರು ಸಲ್ಲಿಸಿದ ‘ನಕಲಿ’ ತನಿಖಾ ವರದಿಯನ್ನು ಮಾತ್ರ ಪರಿಶೀಲಿಸಿದ್ದೇಕೆ ? ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರು ನಡೆಸಿದ ತನಿಖಾ ವರದಿಯನ್ನು ಪರಿಶೀಲನೆ ನಡೆಸದೆ, ಕೇವಲ ಡಾ.ಕೆ.ಬಿ.ಈಶ್ವರಪ್ಪನವರು ಸಲ್ಲಿಸಿದ ‘ನಕಲಿ’ ತನಿಖಾ ವರದಿಯನ್ನು ಮಾತ್ರ ಪರಿಶೀಲಿಸಿದ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಬಹುಕೋಟಿ ಅವ್ಯವಹಾರ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು 21.06.2013ರಂದು ಆಯುಕ್ತರಿಗೆ ಪತ್ರ ಬರೆದುದೇಕೆ ? ಎಂದು ಪ್ರಶ್ನಿಸಿರುವ ಶ್ರೀರಾಮ ದಿವಾಣ, ಈ ವಿಚಾರಗಳ ಬಗ್ಗೆಯೂ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರು ಆಯುಕ್ತರಿಗೆ ಸಲ್ಲಿಸಿದ ತನಿಖಾ ವರದಿಯ ದೃಢೀಕೃತ ಯಥಾ ಪ್ರತಿಯನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ 2005ರಂತೆ ಅರ್ಜಿ ಸಲ್ಲಿಸಿದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರಿಗಳು ತನಿಖಾ ವರದಿಯನ್ನು ನೀಡಲು ನಿರಾಕರಿಸುವುದೇಕೇ ? ಡಾ.ಕೆ.ಎಚ್.ನರಸಿಂಹಮೂರ್ತಿಯವರು ಆಯುಕ್ತರಿಗೆ ಸಲ್ಲಿಸಿದ ತನಿಖಾ ವರದಿಯನ್ನು ಇಲಾಖೆ ಮುಚ್ಚಿಡುವುದೇಕೆ ? ಭ್ರಷ್ಟಚಾರ ರಹಿತ ಪಾರದರ್ಶಕ ಆಡಳಿತ ನೀಡುವುದಾಗಿ ಮತದಾರರಿಗೆ ವಚನ ನೀಡಿ, ಇದೀಗ ಬಹುಕೋಟಿ ಭ್ರಷ್ಟಾಚಾರದ ಪ್ರಕರಣವೊಂದರ ಬಗ್ಗೆ ಮುಖ್ಯ ಜಾಗೃತಾಧಿಕಾರಿಯವರು ಸಲ್ಲಿಸಿದ ತನಿಖಾ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಿದಾಗಲೂ ಕೊಡದೆ ಮುಚ್ಚಿಡುವುದು ವಂಚನೆಯಲ್ಲವೇ ?  ಎಂದು ಪ್ರಸ್ನಿಸಿರುವ ಶ್ರೀರಾಮ ದಿವಾಣ, ಹೀಗೆ ವಂಚನೆ ನಡೆಸಿದ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧವೂ ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಂತೆ ಡಾ.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿಯನ್ನು ಕೋರಿ ಅರ್ಜಿ ಸಲ್ಲಿಸಿದಾಗ ನೀಡಲು ನಿರಾಕರಿಸಿದ ಕಾರಣ; ತನಿಖಾ ವರದಿಯನ್ನು ನೀಡುವುದರಿಂದ, ‘ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ಥಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟುಮಾಡುವಂಥ ಮಾಹಿತಿ’ ಎಂಬುದಾಗಿದೆ. ಹಾಗಾದರೆ; ಡಾ.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿಯಲ್ಲಿ ಅಪರಾಧಿಗಳು ಎಂದು ಉಲ್ಲೇಖಿಸಲಾದವರನ್ನು ದಸ್ಥಗಿರಿ ಮಾಡಲು ಬೇಕಾದ ಕ್ರಮಗಳನ್ನು ಯಾಕೆ ಜರುಗಿಸಲಾಗಿಲ್ಲ ? ಹೀಗಿರುವಾಗ; ಡಾ.ನರಸಿಂಹಮೂರ್ತಿಯವರು ಆಯುಕ್ತರಿಗೆ ಸಲ್ಲಿಸಿದ ತನಿಖಾ ವರದಿಯನ್ನು ಪರಿಶೀಲನೆ ನಡೆಸದೆ ಮುಕ್ತಾಯಗೊಳಿಸಿರುವುದು ಮತ್ತು ಡಾ.ನರಸಿಂಹಮೂರ್ತಿಯವರ ತನಿಖಾ ವರದಿಯ ಬಗ್ಗೆ, ವಿಧಾನ ಪರಿಷತ್ತಿನ ಸದಸ್ಯರಾದ ಪಟೇಲ್ ಶಿವರಾಂ ಅವರು ಕೇಳಿದ ಪ್ರಶ್ನೆಗೆ ಸಚಿವರು ಸ್ಪಷ್ಟವಾಗಿ ಮತ್ತು ಸಮಗ್ರವಾಗಿ ಉತ್ತರಿಸದೆ ನುಣುಚಿಕೊಂಡಿರುವುದು ಹಾಗೂ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಉತ್ತರ ನೀಡಿರುವುದು, ಇದು ಬಹುಕೋಟಿ ಅವ್ಯವಹಾರವನ್ನು ಸದನದಲ್ಲಿ ಅಧಿಕೃತವಾಗಿ ಮುಚ್ಚಿಹಾಕಿದಂತಲ್ಲವೇ ? ಇದು; ಸಚಿವರು/ ಸರಕಾರ ಸದನವನ್ನು ದುರುಪಯೋಗ ಮಾಡಿಕೊಂಡತ್ತಲ್ಲವೇ ? ಇದು ಅಪರಾಧವಲ್ಲವೇ ? ಎಂದು ಪ್ರಶ್ನಿಸಿರುವ ಶ್ರೀರಾಮ ದಿವಾಣ, ಈ ನಿಟ್ಟಿನಲ್ಲಿಯೂ ಸಚಿವ ಖಾದರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

patel shivaram

* ಪಟೇಲ್ ಶಿವರಾಂ

ಅವ್ಯವಹಾರ ನಡೆದ ಬಗ್ಗೆ ನಿಷ್ಪಕ್ಷಪಾತ ತನಿಖಾ ವರದಿ ಸಲ್ಲಿಸಿದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರನ್ನು ತನಿಖಾ ವರದಿ ಸಲ್ಲಿಸಿದ ಬೆನ್ನಿಗೆ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ವರ್ಗಾವಣೆಗೊಳಿಸಿರುವುದು ಯಾವ ಉದ್ಧೇಶಕ್ಕೆ ? ಎಂದೂ ಪತ್ರದಲ್ಲಿ ಶ್ರೀರಾಮ ದಿವಾಣ ಕೇಳಿದ್ದಾರೆ.

ರಾಸಾಯನಿಕ ಖರೀದಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾಗಿದ್ದ ಡಾ.ಶರತ್ ಕುಮಾರ್ ರಾವ್ ಜೆ. ಅವರು. ಈ ದೂರಿನ ಮೇಲೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿಲ್ಲ ಎಂದು, ಮಾಹಿತಿ ಹಕ್ಕು ಕಾಯ್ದೆಯಂತೆ ಅರ್ಜಿ ಸಲ್ಲಿಸಿದಾಗ, ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಲಿಖಿತ ಮಾಹಿತಿ ನೀಡಿರುತ್ತಾರೆ. ಹಾಗಾದರೆ, ಸಚಿವರು ಪಟೇಲ್ ಶಿವರಾಂರವರ ಪ್ರಶ್ನೆಗೆ ಸದನದಲ್ಲಿ ನೀಡಿದ ಉತ್ತರದಲ್ಲಿ, ಪ್ರಧಾನ ಕಾರ್ಯದರ್ಶಿಗಳು ಅವ್ಯವಹಾರದ ತನಿಖೆ ನಡೆಸಲು 23.03.2013ರಂದು ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿರುವುದು ಸುಳ್ಳು ಮತ್ತು ತಪ್ಪು ಉತ್ತರ ಎಂಬುದು ಸ್ಪಷ್ಟವಾಗುತ್ತದೆ. ಸದನಕ್ಕೆ ಹೀಗೆ ತಪ್ಪು ಮತ್ತು ಸುಳ್ಳು ಉತ್ತರ ನೀಡಲು ಕಾನೂನಿನಲ್ಲಿ ಸಚಿವರಿಗೆ ಅವಕಾಶ/ಅಧಿಕಾರವಿದೆಯೇ ? ಇಲ್ಲವೆಂದಾದರೆ, ತಪ್ಪು ಮತ್ತು ಸುಳ್ಳು ಉತ್ತರ ನೀಡಿ ಸದನವನ್ನು ವಂಚಿಸಿದ ಸಚಿವರ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಜರುಗಿಸಬೇಕು ಎಂದು ದಿವಾಣ ಆಗ್ರಹಿಸಿದ್ದಾರೆ.

dr.sharath kumar rao j. copy

* ಡಾ.ಶರತ್ ಕುಮಾರ್ ರಾವ್

ಮಾಹಿತಿ ಹಕ್ಕು ಅರ್ಜಿ ಮುಖಾಂತರ ದೂರು ಮತ್ತು ತನಿಖೆಗೆ ಆದೇಶ ಮಾಡಿದ ಬಗ್ಗೆ ಮಾಹಿತಿ ಕೇಳಿದಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸರಕಾರದ ಅಧೀನ ಕಾರ್ಯದರ್ಶಿ ಶಿವಣ್ಣ ಅವರು 10.03.2014ರಂದು ನೀಡಿದ ಮಾಹಿತಿಯಲ್ಲಿ, ‘ದೂರು ಸ್ವೀಕೃತವಾಗಿಲ್ಲ ಹಾಗೂ ಕಾರಣ, ಡಾ.ಕೆ.ಬಿ.ಈಶ್ವರಪ್ಪನವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿಲ್ಲ” ಎಂಬುದಾಗಿ ಸ್ಪಷ್ಟಪಡಿಸಿರುತ್ತಾರೆ. ತನಿಖೆ ನಡೆಸಲು ನಿರ್ದೇಶನ ನೀಡಲಾಗಿಲ್ಲ ಎಂದು ಸರಕಾರದ ಪ್ರಧಾನ ಕಾರ್ಯದರ್ಶಿ ಕಚೇರಿಯ ಜವಾಬ್ದಾರಿಯುತ ಅಧಿಕಾರಿಗಳು ಲಿಖಿತ ಮಾಹಿತಿ ನೀಡಿರುವಾಗ, ಅಮೇಲೆ ಹಳೆಯ ದಿನಾಂಕ ನಮೂದಿಸಿ ಭ್ರಷ್ಟರನ್ನು ರಕ್ಷಣೆ ಮಾಡುವ ಸಲುವಾಗಿ ತನಿಖೆ ನಡೆಸಲು ನಿರ್ದೇಶಕರಿಗೆ ನಿರ್ದೇಶನ ನೀಡುವಂಥ ದಾಖಲೆಯನ್ನು ಬಳಿಕ ತಯಾರಿಸಲಾಯಿತೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಶ್ರೀರಾಮ ದಿವಾಣ ಒತ್ತಾಯಿಸಿದ್ದಾರೆ.

ಸದನವನ್ನು ವಂಚಿಸಿದ ಸಚಿವ ಯು.ಟಿ.ಖಾದರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರು ಇಲಾಖಾ ಆಯುಕ್ತರಿಗೆ ಸಲ್ಲಿಸಿದ ತನಿಖಾ ವರದಿಯನ್ನು ಮುಚ್ಚಿಟ್ಟಿರುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಡಾ.ನರಸಿಂಹಮೂರ್ತಿಯವರ ತನಿಖಾ ವರದಿಯ ಆಧಾರದಲ್ಲಿ ಅವ್ಯವಹಾರದಲ್ಲಿ ಭಾಗಿಗಳಾಗಿ ಸರಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಈ ಹಗರಣದ ಬಗ್ಗೆ ಇನ್ನಷ್ಟೂ ಉನ್ನತ ಮಟ್ಟದ ಅಧಿಕಾರಿಗಳು ಶಾಮೀಲಾಗಿರುವುದರಿಂದ ವಿಸ್ತೃತ, ಸಮಗ್ರ ತನಿಖೆ ನಡೆಸುವರೇ ಉನ್ನತ ಮಟ್ಟದ ತನಿಖೆಗೆ ನಿರ್ದೇಶನ ನೀಡಬೇಕಾಗಿ ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ರಾಜ್ಯಪಾಲರು, ವಿಧಾನಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *