Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಅರ್ಜಿದಾರನಿಗೆ ಅಪೂರ್ಣ ಮಾಹಿತಿ ನೀಡಿ ಕಾಯಿದೆ ಉಲ್ಲಂಘನೆ !

ಅಪರೂಪದ ತೊಗಲುಗೊಂಬೆ

# ಪರದೆಯ ಮೇಲೆ ಗೊಂಬೆಗಳನ್ನು ಚಲಿಸುತ್ತಾ, ಚಲನೆಗೆ ಅನುಗುಣವಾಗಿ ಮಾತನಾಡುವ , ಹಾಡುವ, ಸಂದೇಶ ಸಾರುವ ತೊಗಲುಗೊಂಬೆಯಾಟ ಒಂದು ಅಚ್ಚರಿಯ ಕಲಾ ಪ್ರದರ್ಶನ. ನೋಡುಗರಿಗೆ ಒಂದು ಕ್ಷಣ ಕಿನ್ನರ ಲೋಕಕ್ಕೆ ಪ್ರವೇಶಸಿದ ಅನುಭವ ತರುತ್ತದೆ.

ಬಿಳಿ ಪರದೆಯನ್ನು ಕಟ್ಟಿ ಅದರ ಹಿಂದೆ ವಿದ್ಯುತ್ ಬಲ್ಬ್ ಅಳವಡಿಸಿ , ಪರದೆಯ ಹಿಂದಿನಿಂದ ನೆರಳು ಬೆಳಕಿನಲ್ಲಿ ಗೊಂಬೆಯಾಟ ಪ್ರದರ್ಶಿಸಲಾಗುತ್ತದೆ. ಗೊಂಬೆಗಳನ್ನು ಸಂಭಾಷಣೆಗೆ ತಕ್ಕಂತೆ ಆಡಿಸುವ ಕೈಚಳಕ ಮತ್ತು ಅಷ್ಟೇ ಚುಟುಕಾದ ಸಂಭಾಷಣೆ ಮತ್ತು ಸಂಗೀತ, ಮಕ್ಕಳಿಂದ ಹಿಡಿದು ಮುದುಕರ ವರೆಗೂ ಎಲ್ಲರ ಗಮನ ಸೆಳೆಯುತ್ತದೆ. ಈ ಪ್ರದರ್ಶನದ ಮೂಲಕ ಸಾರುವ ಸಂದೇಶ ನೋಡುಗರ ಮನಮುಟ್ಟುವುದರಲ್ಲಿ ಸಂದೇಹವೇ ಇಲ್ಲ.

thogalugombe-3

ತಮ್ಮ ಹಿರಿಯ ತಲೆಮಾರಿನಿಂದ ವಂಶ ಪಾರಂಪರ್ಯವಾಗಿ ಬಂದ ಈ ಕಲೆಯನ್ನು ಮುಂದುವರೆಸಿಕೊಂಡು ಬಂದಿರುವ ಚಿಕ್ಕಮಗಳೂರು ತಾಲೂಕಿನ ಅಂಬಳೆ ಗ್ರಾಮದ ವೃತ್ತಿಪರ ಕಲಾವಿದ ದೇವರಾಜು ಅವರು ಶ್ರೀ ರೇಣುಕಾ ಮಾತೆ ತೊಗಲು ಗೊಂಬೆ ಕಲಾತಂಡದ ಮೂಲಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಸಹ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ.

ಪೌರಾಣಿಕ ಪ್ರಸಂಗಗಳಿಗೆ ಮತ್ತು ಸಾಮಾಜಿಕ ಸಾಮಾಸ್ಯೆಗಳ ಕುರಿತು ಸಂದೇಶ ಸಾರಲು ಪ್ರತ್ಯೇಕ ಗೊಂಬೆಗಳನ್ನು ಸಿದ್ದಪಡಿಸಿಕೊಂಡಿರುವ ಇವರು, ಪ್ರೇಕ್ಷಕರ ಇಚ್ಚೆಯಂತೆ ಪ್ರದರ್ಶನ ನೀಡುತ್ತಾರೆ.

thogalugombe-4

ಹಿಂದೆ ಇವರ ಪೂರ್ವಜರು ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಗೊಂಬೆಯಾಟದಲ್ಲಿ ಪ್ರದರ್ಶಿಸುತ್ತಿದ್ದರು. ಪ್ರಸ್ತುತ, ದೇವರಾಜ್ ಅವರು ಸರಕಾರದ ವಿವಿಧ ಇಲಾಖೆಗಳ ನೆರವಿನೊಂದಿಗೆ ಸಾಮಾಜಿಕ ಸಮಸ್ಯೆಗಳ ಮತ್ತು ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಪ್ರದರ್ಶನ ನೀಡುತ್ತಿದ್ದಾರೆ.

ಇದೀಗ ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ಗ್ರಾಮ ಸಂಪರ್ಕ’ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ ವಿವಿಧೆಡೆಗಳಲ್ಲಿ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಪ್ರದರ್ಶನ ನೀಡುತ್ತಿದ್ದಾರೆ.

thogalugombe-5

ಗೊಂಬೆ ತಯಾರಿ ಹೇಗೆ ?

ಹಿಂದಿನ ಕಾಲದಲ್ಲಿ ಜಿಂಕೆಯ ಚರ್ಮದಿಂದ ಗೊಂಬೆಗಳನ್ನು ತಯಾರಿಸಲಾಗುತ್ತಿತ್ತು. ಈಗ ಆಡಿನ ಚರ್ಮದಿಂದ ಗೊಂಬೆಗಳನ್ನು ತಯಾರಿಸಲಾಗುತ್ತಿದೆ. ಆಡಿನ ಚರ್ಮವನ್ನು ನೆರಳಿನಲ್ಲಿ ಒಣಗಿಸಿ, ನಂತರ ಅದನ್ನು ಎಳೆದು ಕಟ್ಟಿ, ಒಣಗಿಸಿ, ಚರ್ಮವನ್ನು ಬಿಳಿ ಬಣ್ಣಕ್ಕೆ ಬರುವಂತೆ ಮಾಡುತ್ತಾರೆ. ನಂತರ ಅದರ ಮೇಲೆ ಅಗತ್ಯವಿರುವ ವಿವಿಧ ಚಿತ್ರಗಳನ್ನು ಬಿಡಿಸಿ, ಕತ್ತರಿಸಿ, ಬಣ್ಣಗಳನ್ನು ಹಚ್ಚಿ ರೂಪ ನೀಡಲಾಗುತ್ತದೆ. ಈ ಕಾರ್ಯದಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದ ಹೆಗ್ಗಳಿಕೆ ಇವರದ್ದು.

ಇವರಲ್ಲಿ ಸುಮಾರು 4000 ಪೌರಾಣಿಕ ಗೊಂಬೆಗಳು ಮತ್ತು 1000 ಸಾಮಾಜಿಕ ಪ್ರಸಂಗಗಳಿಗೆ ಅಗತ್ಯವಿರುವ ಗೊಂಬೆಗಳಿವೆ. ಗೊಂಬೆಗಳನ್ನು ತಾವೇ ತಯಾರಿಸುವ ಇವರು, ಅಗತ್ಯವಿದ್ದಲ್ಲಿ ಆಂದ್ರ ಪ್ರದೇಶದಲ್ಲಿರುವ ಕಾರ್ಖಾನೆಯಿಂದ ಗೊಂಬೆಗಳನ್ನು ತರಿಸಿಕೊಳ್ಳುತ್ತಾರೆ.

thogalugombe-6thogalugombe-7

ಸುಮಾರು 25 ವರ್ಷಗಳಿಂದ ರಾಜ್ಯಾದ್ಯಂತ ಸಾವಿರಾರು ಪ್ರದರ್ಶನ ನೀಡಿರುವ ಇವರ ತಂಡ, ಸ್ತ್ರೀ ಗೊಂಬೆಗಳಿಗೆ ಸ್ತ್ರೀಯರಿಂದಲೇ ಧ್ವನಿ ನೀಡುತ್ತಿದ್ದು, ಇದರಲ್ಲಿ ದೇವರಾಜು ಅವರ ಪತ್ನಿ ಶ್ರೀಮತಿ ಶೋಭಾರವರು ತಮ್ಮ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಪ್ರಸಂಗಗಳಿಗೆ ಅಗತ್ಯ ಸಂಭಾಷಣೆ ಮತ್ತು ಹಾಡುಗಳನ್ನು ಇವರೇ ರಚಿಸುತ್ತಾರೆ. ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ಪ್ರದರ್ಶನಗಳಲ್ಲಿ ಸಂಬಂಧಿಸಿದ ಇಲಾಖೆಗಳು ನೀಡುವ ಸಂಭಾಷಣೆಯನ್ನೇ ಬಳಸಿಕೊಳ್ಳುತ್ತಾರೆ.

ಇದುವರೆಗೂ ಹಲವು ಮಂದಿ ಆಸಕ್ತರಿಗೆ ತರಬೇತಿ ನೀಡಿರುವ ಇವರು, ತೊಗಲುಬೊಂಬೆ ಕಲೆಯ ಬೆಳವಣಿಗೆಯ ಉದ್ದೇಶದಿಂದ ಆಸಕ್ತರಿಗೆ ಉಚಿತ ತರಭೇತಿಯನ್ನು ನೀಡುತ್ತಿದ್ದಾರೆ.

ಇಡೀ ರಾಜ್ಯದಲ್ಲಿ ಕೇವಲ 3 ಮಂದಿ ಮಾತ್ರ ಈ ಅಪರೂಪದ ತೊಗಲುಗೊಂಬೆ ತಂಡಗಳನ್ನು ಮುನ್ನಡೆಸುತ್ತಿದ್ದು, ಅದರಲ್ಲಿ ಇವರೂ ಒಬ್ಬರು. ರಾಜ್ಯದ ಯಾವುದೇ ಭಾಗದಲ್ಲಿ ಪ್ರದರ್ಶಕರು ಯಾವುದೇ ಸಮಯದಲ್ಲಿ ಕರೆದರೂ ಕಲಾ ಪ್ರದರ್ಶನಕ್ಕೆ ಸಿದ್ಧವಿರುವ ದೇವರಾಜ್ ಅವರ ಸಂಪರ್ಕ ಸಂಖ್ಯೆ: 9741765096.

b.shivakumar

– ಬಿ. ಶಿವಕುಮಾರ್, ವಾರ್ತಾ ಇಲಾಖೆ, ಉಡುಪಿ.

Leave a Reply

Your email address will not be published. Required fields are marked *