Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗೋಲ್ ಮಾಲ್ ಗೆ ತಡೆ: ರೆಡ್ ಕ್ರಾಸ್ ಸೊಸೈಟಿ ಮೊದಲ ಮಹಡಿ ನಿರ್ಮಾಣ ಕಾರ್ಯಕ್ಕೆ ಕೊನೆಗೂ ಚಾಲನೆ

ಉಡುಪಿ: ಉಡುಪಿಯ ಅಜ್ಜರಕಾಡು ಬಳಿಯ ನಾಯರ್ಕೆರೆಯಲ್ಲಿರುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲಾ ಶಾಖೆಯ ‘ರೆಡ್ ಕ್ರಾಸ್ ಭವನ’ದ ಮೊದಲ ಮಹಡಿಯ ಕಾಮಗಾರಿ ಕೊನೆಗೂ ಇದೀಗ ಆರಂಭಗೊಂಡಿದೆ.

ರೆಡ್ ಕ್ರಾಸ್ ಭವನ ನಿರ್ಮಿಸುವ ಸಲುವಾಗಿ ರಾಜ್ಯ ಸರಕಾರ, 2012-13ನೇ ಸಾಲಿನಲ್ಲಿ 6 ಲಕ್ಷ ರು. ಮತ್ತು 2013-14ನೇ ಸಾಲಿನಲ್ಲಿ 5 ಲಕ್ಷ ರು. ಗಳನ್ನು ಬಿಡುಗಡೆಗೊಳಿಸಿತ್ತು. ಆದರೆ, ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿಗಳಾದ ಬಸ್ರೂರು ರಾಜೀವ್ ಶೆಟ್ಟಿ ಹಾಗೂ ಅಧ್ಯಕ್ಷರಾದ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಟಿ.ರೇಜು ಅವರು ಮೊದಲ ಮಹಡಿ ನಿರ್ಮಿಸಲು ಮುಂದಾಗದೆ 11 ಲಕ್ಷ ರು.ಗಳನ್ನು ದುರುಪಯೋಗಪಡಿಸಲು ಮುಂದಾಗಿದ್ದರು.

ಎಂ.ಟಿ.ರೇಜು ಅವರು ವರ್ಗಾವಣೆಯಾಗಿ, ಉಡುಪಿ ಜಿಲ್ಲೆಗೆ ಡಾ.ಆರ್.ವಿಶಾಲ್ ಅವರು ನೂತನ ಜಿಲ್ಲಾಧಿಕಾರಿಯಾಗಿ ಬಂದ ಬಳಿಕ, ರೆಡ್ ಕ್ರಾಸ್ ಭವನದ ಮೊದಲ ಮಹಡಿಯ ಕಾಮಗಾರಿ ನಡೆಸದೆ ಇರುವುದರಿಂದ 11 ಲಕ್ಷ ರು. ಗೋಲ್ ಮಾಲ್ ಆಗುವ ಸಾಧ್ಯತೆ ಇದೆ ಎಂಬ ಬಗ್ಗೆ ದಾಖಲೆ ಸಹಿತ 30.11.2014ರಂದು udupits.in ತನಿಖಾ ವರದಿಯನ್ನು ಪ್ರಕಟಿಸಿತ್ತು.

ಆನಂತರದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿಗಳೂ, ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರೂ ಆದ ಡಾ.ವಿಶಾಲ್ ಅವರು ರೆಡ್ ಕ್ರಾಸ್ ಸೊಸೈಟಿಗೆ ಖುದ್ದು ಭೇಟಿ ನೀಡಿ ಸಮಗ್ರ ಕಡತಗಳನ್ನು ಪರಿಶೀಲನೆ ನಡೆಸಿ ಸಂಬಂಧಿಸಿದವರಿಗೆ ಬಿಸಿ ಮುಟ್ಟಿಸುವ ಯತ್ನ ನಡೆಸಿದ್ದರು. ಮಾತ್ರವಲ್ಲ; ರೆಡ್ ಕ್ರಾಸ್ ಭವನದ ಮೊದಲ ಮಹಡಿಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಮುಖಾಂತರ ಆಗಬಹುದಾದ ಗೋಲ್ ಮಾಲ್ ಗೆ ಕಡಿವಾಣ ಹಾಕಿದ್ದಾರೆ.

vishal ias

* ಡಾ.ಆರ್.ವಿಶಾಲ್, ಉಡುಪಿ ಜಿಲ್ಲಾಧಿಕಾರಿ

30.11.2014ರಂದು udupibits.in ನಲ್ಲಿ ಪ್ರಕಟವಾದ ವರದಿ

ಮೊದಲ ಮಹಡಿ ನಿರ್ಮಾಣದ ಹೆಸರಿನಲ್ಲಿ ರೆಡ್ ಕ್ರಾಸ್ ಸೊಸೈಟಿಯಿಂದ 11 ಲಕ್ಷ ರು. ಗೋಲ್ ಮಾಲ್ !
ತನಿಖಾ ವರದಿ: ಶ್ರೀರಾಮ ದಿವಾಣ.
ಉಡುಪಿ: ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯು ಉಡುಪಿಯ ಅಜ್ಜರಕಾಡು ಬಳಿಯ ನಾಯರ್ ಕೆರೆಯಲ್ಲಿರುವ ರೆಡ್ ಕ್ರಾಸ್ ಭವನದ ಮೊದಲ ಮಹಡಿ ನಿರ್ಮಿಸುವ ಹೆಸರಲ್ಲಿ ರಾಜ್ಯ ಸರಕಾರವು ಬಿಡುಗಡೆಗೊಳಿಸಿದ 11 ಲಕ್ಷ ರು. ಗಳ ಸಹಾಯಧನದಲ್ಲಿ ಮೊದಲ ಮಹಡಿಯನ್ನು ನಿರ್ಮಿಸುವ ಮೂಲಕ ಸದ್ವಿನಿಯೋಗ ಮಾಡದೆ ದುರುಪಯೋಗಪಡಿಸಿರುವುದು ತಡವಾಗಿ ಬೆಳಕಿಗೆಬಂದಿದೆ.

ರೆಡ್ ಕ್ರಾಸ್ ಸೊಸೈಟಿಯ ರಾಜ್ಯಾಧ್ಯಕ್ಷರೂ ಆಗಿರುವ ಕರ್ನಾಟಕ ರಾಜ್ಯಪಾಲರು 2010ರಲ್ಲಿ ಉಡುಪಿಯ ನೂತನ ರೆಡ್ ಕ್ರಾಸ್ ಭವನವನ್ನು ಉದ್ಘಾಟಿಸಿದ್ದರು. 2012-13ರಲ್ಲಿ ರೆಡ್ ಕ್ರಾಸ್ ಭವನದ ನೆಲ ಮಹಡಿಯ ಮೇಲೆ ಮೊದಲ ಮಹಡಿ ನಿರ್ಮಿಸುವ ಸಲುವಾಗಿ 36 ಲಕ್ಷ ರು.ಗಳನ್ನು ಸಹಾಯಧನವಾಗಿ ಮಂಜೂರು ಮಾಡಬೇಕು ಎಂದು ಕೋರಿ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿಗಳಾದ ಬಸ್ರೂರು ರಾಜೀವ್ ಶೆಟ್ಟಿಯವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ರೆಡ್ ಕ್ರಾಸ್ ಸೊಸೈಟಿಯ ಕೋರಿಕೆಯನ್ನು ಮನ್ನಿಸಿದ ಸರಕಾರ ಮೊದಲ ಹಂತವಾಗಿ 2012-2013ನೇ ಸಾಲಿನಲ್ಲಿ 6 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿತ್ತು. 2013-14ನೇ ಸಾಲಿನಲ್ಲಿ 5 ಲಕ್ಷ ರು.ಗಳನ್ನು ಸಹಾಯಧನವಾಗಿ ಬಿಡುಗಡೆಗೊಳಿಸಿದೆ.

redcross buliding

* ಸರಕಾರ 11 ಲಕ್ಷ ರು. ಬಿಡುಗಡೆಗೊಳಿಸಿದ್ದಕ್ಕೆ ಸಾಕ್ಷಿ

ಕಳೆದ ಎರಡು ವರ್ಷಗಳಲ್ಲಿ ಒಟ್ಟು 11 ಲಕ್ಷ ರು.ಗಳನ್ನು ಪಡೆದುಕೊಂಡಿರುವ ಉಡುಪಿ ರೆಡ್ ಕ್ರಾಸ್ ಸೊಸೈಟಿಯು ಇದುವರೆಗೂ ಮೊದಲ ಮಹಡಿಯನ್ನು ನಿರ್ಮಿಸದೆ ಆರ್ಥಿಕ ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ. 11 ಲಕ್ಷ ರು.ಗಳನ್ನು ಮಂಜೂರು ಮಾಡಿದ ಸರಕಾರದ ಉನ್ನತ ಅಧಿಕಾರಿಗಳಾಗಲೀ, ಈ ಅವಧಿಯಲ್ಲಿ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷರೂ ಆಗಿದ್ದ ಜಿಲ್ಲಾಧಿಕಾರಿಗಳಾದ ಡಾ.ಎಂ.ಟಿ.ರೇಜು ಅವರಾಗಲೀ ಈ ಬಗ್ಗೆ ಕನಿಷ್ಟ ಪರಿಶೀಲನೆಯನ್ನೂ ನಡೆಸದಿರುವುದು ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ.

2012-13ನೇ ಸಾಲಿನಲ್ಲಿ ಸರಕಾರ ಬಿಡುಗಡೆಗೊಳಿಸಿದ 5 ಲಕ್ಷ ರು. ಮತ್ತು 2013-14ನೇ ಸಾಲಿನಲ್ಲಿ ಬಿಡುಗಡೆಗೊಳಿಸಿದ 6 ಲಕ್ಷ ರು. ಗಳನ್ನು ಉಪಯೋಗಿಸಿಕೊಂಡು ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿಯಾಗಿರುವ ಬಸ್ರೂರು ರಾಜೀವ್ ಶೆಟ್ಟಿಯವರ ನೇತೃತ್ವದ ಸಮಿತಿಯು ಇದುವರೆಗೂ ಯಾಕಾಗಿ ಕಟ್ಟಡ ನಿರ್ಮಿಸುವ ಕನಿಷ್ಟ ಕೆಲಸಕ್ಕೆ ಕೈಹಾಕಿಲ್ಲ, ಮೊದಲ ಮಹಡಿ ನಿರ್ಮಿಸಲೆಂದು ಸರಕಾರ ಬಿಡುಗಡೆಗೊಳಿಸಿದ 11 ಲಕ್ಷ ರು.ಗಳನ್ನು ಬಸ್ರೂರು ರಾಜೀವ್ ಶೆಟ್ಟಿಯವರು ಸೊಸೈಟಿಯ ಅಧಿಕೃತ ಉಳಿತಾಯ ಖಾತೆಯಲ್ಲಿಯೇ ತೆಗೆದಿರಿಸಿದ್ದಾರಾ ? ಇಲ್ಲವೇ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿರುವ ಉಳಿತಾಯ ಖಾತೆಯಲ್ಲಿರಿಸಿ ಅದರಿಂದ ಬರುವ ಬಡ್ಡಿ ಹಣವನ್ನು ಸ್ವಂತ ಕೆಲಸಕ್ಕೆ ಬಳಕೆ ಮಾಡಿಕೊಂಡು ಗೋಲ್ ಮಾಲ್ ನಡೆಸುತ್ತಿದ್ದಾರಾ ಎಂಬಿತ್ಯಾದಿ ಸಹಜ ಪ್ರಶ್ನೆಗಳು ಈಗ ಉಂಟಾಗಿದ್ದು, ಇಲ್ಲೂ ಹಲವು ಶಂಕೆಗಳನ್ನು ಹುಟ್ಟುಹಾಕಿದೆ.

redcross bhavan udupi copy

* 2014ರ ನವೆಂಬರ್ ನಲ್ಲಿ ಉಡುಪಿ ರೆಡ್ ಕ್ರಾಸ್ ಭವನ

2013-14ನೇ ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನೂ ಉಳಿದಿರುವುದು ಕೇವಲ ನಾಲ್ಕೇ ನಾಲ್ಕು ತಿಂಗಳು. ಈ ನಾಲ್ಕು ತಿಂಗಳ ಅವಧಿಯಲ್ಲಿ, ರಾಜ್ಯ ಸರಕಾರ ತನ್ನ ಖಜಾನೆಯಿಂದ ಬಿಡುಗಡೆಗೊಳಿಸಿದ ಸಾರ್ವಜನಿಕರ ತೆರಿಗೆ ಹಣವನ್ನು ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯು ರೆಡ್ ಕ್ರಾಸ್ ಭವನದ ನೆಲ ಮಹಡಿಯ ಮೇಲೆ ಮೊದಲ ಮಹಡಿಯನ್ನು ನಿರ್ಮಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಕಾರಣ, ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿಗಳಾದ ಬಸ್ರೂರು ರಾಜೀವ್ ಶೆಟ್ಟಿಯವರು ಈಗಾಗಲೇ ರೆಡ್ ಕ್ರಾಸ್ ಸೊಸೈಟಿಯ ಹೆಸರಿನಲ್ಲಿ ಅಂಬ್ಯೂಲೆನ್ಸ್ ಹಗರಣದ ಸಹಿತ ಇತರ ಅನೇಕ ಹಗರಣಗಳನ್ನು ನಡೆಸಿರುವುದು ಬಯಲಾಗಿದ್ದು, ಮೊದಲ ಮಹಡಿಯ ನಿರ್ಮಾಣ ಪ್ರಕ್ರಿಯೆಯೂ ಈ ಹಗರಣಗಳ ಸರಣಿ ಸಾಲಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯೇ ಹೆಚ್ಚು ಎಂಬ ಅನುಮಾನ ಮೂಡುವಂತಿದೆ.

dr.m.te.reju iasbasrur rajeev shetty

* ಡಾ.ಎಂ.ಟಿ.ರೇಜು, ಐಎಎಸ್                              * ಬಸ್ರೂರು ರಾಜೀವ್ ಶೆಟ್ಟಿ

Leave a Reply

Your email address will not be published. Required fields are marked *