Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೇರಳ ಚುನಾವಣೆ: LDFಗೆ ಜಯಭೇರಿ, UDFಗೆ ಮುಖಭಂಗ, BJPಗೆ ಸಮಾಧಾನ !

ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನವೆಂಬರ್ 2 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದೆ.

ಮಂಜೇಶ್ವರ ತಾಲೂಕು ವ್ಯಾಪ್ತಿಯ ಮೀಂಜ, ವರ್ಕಾಡಿ, ಪೈವಳಿಕೆ, ಮಂಗಲ್ಪಾಡಿ, ಪುತ್ತಿಗೆ, ಮಂಜೇಶ್ವರ, ಎಣ್ಮಕಜೆ ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಪ್ರಕ್ರೀಯೆ ಬೆಳಿಗ್ಗೆ 8 ಗಂಟೆಗೆ ಕುಂಬಳೆ ಸರಕಾರಿ ಫ್ರೌಢಶಾಲೆಯಲ್ಲಿ ಆರಂಭಗೊಂಡಿತು. ಸಂಪೂರ್ಣ ಕಂಪ್ಯೂಟರೀಕೃತ ಮತ ಯಂತ್ರ ಹಾಗೂ ಎಣಿಕೆಗಳಿಂದ ಮಧ್ಯಾಹ್ನ 12ರ ವೇಳೆಗೆ ಬಹುತೇಕ ಮತ ಎಣಿಕೆ ಪೂರ್ತಿಗೊಂಡಿದ್ದು, ಗೆಲುವು ಗಳಿಸಿದ ಪಕ್ಷಗಳ ನೂರಾರು ಕಾರ್ಯಕರ್ತರು ಗೆಲುವಿನ ಸಂಭ್ರಮದ ಮೆರವಣಿಗೆ ನಡೆಸಿದರು.

ನಿರೀಕ್ಷೆ ಮೂಡಿಸಿದ್ದ ಈ ಚುನಾವಣೆ ಹಲವರ ಪಾಲಿಗೆ ನುಂಗಲಾರದ ತುಪ್ಪವಾಗಿ ಮಾರ್ಪಾಡುಗೊಂಡಿದೆ. ಪ್ರಮುಖವಾಗಿ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಪಕ್ಷದ ಜೆ.ಎಸ್ ಸೋಮಶೇಖರ್ (ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದರ್ಶಿ) ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲುರವರ ಪತ್ನಿ ಕುಂಬಳೆ ಬ್ಲಾಕ್ ಡಿವಿಶನ್ ನಿಂದ ಸ್ಪರ್ಧಿಸಿದ್ದ ಆಶ್ವಿನಿ ನಾಣಿತ್ತಿಲು ಹೀನಾಯವಾಗಿ ಸೋತಿದ್ದಾರೆ.

ಉಳಿದಂತೆ ಹಿಂದಿನ ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಪತ್ರಕರ್ತ ಹರ್ಷಾದ್ ವರ್ಕಾಡಿ ಅವರು ಜಿಲ್ಲಾ ಪಂಚಾಯತ್ ವರ್ಕಾಡಿ ಡಿವಿಷನ್ ನಿಂದ 2 ಸಾವಿರ ಮತಗಳಷ್ಟು ಅಂತರದಿಂದ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ವಿರುದ್ದ ಗೆಲುವು ಸಾಧಿಸಿದ್ದಾರೆ.

ಪುತ್ತಿಗೆ ಗ್ರಾಮ ಪಂಚಾಯತ್ ನಲ್ಲಿ 14 ಸ್ಥಾನಗಳಲ್ಲಿ ಆಡಳಿತರೂಢ ಎಲ್ ಡಿಎಫ್ 10 ಸ್ಥಾನಗಳಿಸಿ ಅಧಿಕಾರ ಉಳಿಸಿಕೊಂಡಿದೆ. ಯುಡಿಎಫ್ 3 ಹಾಗೂ ಬಿಜೆಪಿ ಒಂದು ಸ್ಥಾನ ಗಳಿಸುವಲ್ಲಿ ತೃಪ್ತಪಟ್ಟುಕೊಂಡಿದೆ. ಮೀಂಜ ಗ್ರಾಮ ಪಂಚಾಯತ್ ನಲ್ಲಿ 15 ಸ್ಥಾನಗಳಲ್ಲಿ 7 ಯುಡಿಎಫ್, 5 ಬಿಜೆಪಿ, 3 ಎಲ್ ಡಿಎಫ್ ಗಳಿಸಿಕೊಂಡಿದೆ. ಪೈವಳಿಕೆ ಗ್ರಾಮ ಪಂಚಾಯತ್ ನ 19 ಸ್ಥಾನಗಳ ಪೈಕಿ 8 ಬಿಜೆಪಿ, 7 ಎಲ್ ಡಿಎಫ್, 4 ಯುಡಿಎಫ್ ಗಳಿಸಿಕೊಂಡಿದೆ. ವರ್ಕಾಡಿ ಗ್ರಾಮ ಪಂಚಾಯತ್ ನ 16 ಸ್ಥಾನಗಳಲ್ಲಿ ಯುಡಿಎಫ್ 7, ಎಲ್ ಡಿಎಫ್ 4, ಬಿಜೆಪಿ 3 ಹಾಗೂ ಸ್ವತಂತ್ರ ಅಭ್ಯರ್ಥಿಗಳು 2 ಸ್ಥಾನ ಗಳಿಸಿಕೊಂಡಿದ್ದಾರೆ. ಎಣ್ಮಕಜೆ ಗ್ರಾಮ ಪಂಚಾಯತ್ ನ 17 ಸ್ಥಾನಗಳಲ್ಲಿ 7 ಯುಡಿಎಫ್, 7 ಬಿಜೆಪಿ ಹಾಗೂ ಎಲ್ ಡಿಎಫ್ 3 ಸ್ಥಾನ ಗಳಿಸಿಕೊಂಡಿದ್ದು, ಬಿಜೆಪಿ ಹಾಗೂ ಯುಡಿಎಫ್ ಬಲಾಬಲ ಸಮಾನವಾಗಿರುವುದರಿಂದ ಗ್ರಾಮ ಪಂಚಾಯತ್ ಅಧಿಕಾರ ಅಸ್ಥಿರವಾಗಿದೆ.
ಮಂಗಲ್ಪಾಡಿ ಗ್ರಾಮ ಪಂಚಾಯತ್ ನ 23 ಸ್ಥಾನಗಳಲ್ಲಿ ಯುಡಿಎಫ್ 13, ಬಿಜೆಪಿ 6, ಎಲ್ ಡಿಎಫ್ 2, ಪಿಡಿಪಿ 1 ಹಾಗೂ ಎಸ್ ಡಿಪಿಐ 1 ಸ್ಥಾನ ಗಳಿಸಿಕೊಂಡಿದೆ. ಮಂಜೇಶ್ವರ ಗ್ರಾಮ ಪಂಚಾಯತ್ ನ 21 ಸ್ಥಾನಗಳಲ್ಲಿ ಯುಡಿಎಫ್ 12, ಬಿಜೆಪಿ 6, ಎಸ್ ಡಿಪಿಐ 1, ಪಿಡಿಪಿ 1 ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕುಂಬಳೆ ಗ್ರಾಮ ಪಂಚಾಯತ್ ನ 21 ಸ್ಥಾನಗಳ ಪೈಕಿ ಯುಡಿಎಫ್ 12, ಬಿಜೆಪಿ 7, ಎಲ್ ಡಿಎಫ್ 2 ಸ್ಥಾನಗಳಿಸಿಕೊಂಡಿದೆ.

ರಾಜ್ಯದಲ್ಲಿ ಎಲ್ ಡಿ ಎಫ್ (ಸಿಪಿಐಎಂ, ಸಿಪಿಐ ಮತ್ತು ಇತರ ಪಕ್ಷಗಳ ಮೈತ್ರಿ ಕೂಟ) ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎರಡನೇ ಸ್ಥಾನಗಳಿಸಿದೆ. ಪ್ರಸ್ತುತ ಕೇರಳ ರಾಜ್ಯದಲ್ಲಿ ಯುಡಿಎಫ್ ಆಡಳಿತ ನಡೆಸುತ್ತಿರುವುದರಿಂದ ಯುಡಿಎಫ್ ಗೆ ಈ ಫಲಿತಾಂಶ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಬಿಜೆಪಿ ಎರಡು ಬ್ಲಾಕ್ ಪಂಚಾಯತ್ ಗಳಲ್ಲಿ ಬಹುಮತ ಗಳಿಸಸುವ ಮುಖಾಂತರ ಒಂದು ಹೆಜ್ಜೆ ಮುಂದಿರಿಸಿದೆ.

Leave a Reply

Your email address will not be published. Required fields are marked *