Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಪ್ರತಾಪಚಂದ್ರ ಶೆಟ್ಟರಿಂದ ತೆರವಾಗುವ ಎಂಎಲ್ಸಿ ಸೀಟಿಗೆ ಯಾರು ?

ಉಡುಪಿ: ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾದ ಕಾಂಗ್ರೆಸ್ ನ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಯವರ ಅವಧಿ ಶೀಘ್ರವೇ ಕೊನೆಗೊಳ್ಳಲಿದ್ದು, ಚುನಾವಣಾ ಆಯೋಗ ತಿಂಗಳೊಳಗೆ ಮುಂದಿನ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಎರಡೂ ಪಕ್ಷಗಳಲ್ಲಿಯೂ ತೆರವಾಗುತ್ತಿರುವ ಸ್ಥಾನಗಳಿಗೆ ನೂತನ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಿರುಸು ಪಡೆದುಕೊಂಡಿದೆ.

ಕುಂದಾಪುರದ ಪ್ರತಾಪಚಂದ್ರ ಶೆಟ್ಟಿ ಹಾಗೂ ಕೋಟದ ಕೋಟ ಶ್ರೀನಿವಾಸ ಪೂಜಾರಿ ಅವರು, ಕರಾವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಾಗಿರುವ ಇವರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಮುಂದೆ ಯಾವ ಪಕ್ಷದಿಂದ ಯಾರು ಎಂಬುದು ಇದೀಗ ಸಹಜ ಕುತೂಹಲ ಮತ್ತು ಚರ್ಚೆಯಾಗಿದೆ.

ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ, ವಿವಿಧ ಹಂತದ ಪದಾಧಿಕಾರಿಯಾಗಿ ಪಕ್ಷದಲ್ಲಿ ಬೆಳೆದು ಬಂದು, ಪ್ರಸ್ತುತ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು, ಒಂದು ಅವಧಿಗೆ ಸಚಿವರಾಗಿದ್ದವರು. ಸಧ್ಯಕ್ಕೆ ಇವರಿಗೆ ಪರ್ಯಾಯ ಇಲ್ಲದೇ ಇರುವುದರಿಂದ, ಇವರನ್ನು ಕೈ ಬಿಟ್ಟು ಹೊಸಬರನ್ನು ಆಯ್ಕೆ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ರಾಜಕೀಯ ವಲಯದಲ್ಲಿ ಮತ್ತು ಪಕ್ಷದೊಳಗೆ ಅಭಿಪ್ರಾಯಪಡಲಾಗುತ್ತಿದೆ.

kota srinivas poojary mlc

* ಕೋಟ ಶ್ರೀನಿವಾಸ ಪೂಜಾರಿ

ಇವರ ಜೊತೆಗೆ, ಬಿಜೆಪಿಯಲ್ಲಿ ಇನ್ನಿಬ್ಬರ ಹೆಸರು ಸಣ್ಣ ಮಟ್ಟಿಗೆ ಚಾಲ್ತಿಯಲ್ಲಿದೆಯಾದರೂ, ಇವರಿಬ್ಬರಿಗೂ ಪಕ್ಷದೊಳಗೆ ಒಂದೊಂದು ನಕಾರಾತ್ಮಕ ಅಭಿಪ್ರಾಯಗಳಿರುವುದರಿಂದ ಇವರನ್ನು ಆಯ್ಕೆ ಮಾಡುವ ಸಂಭವ ಬಹಳ ಕಡಿಮೆ ಎನ್ನಲಾಗುತ್ತಿದೆ. ಇವರ ಪೈಕಿ, ಒಬ್ಬರನ್ನು ಪಕ್ಷದಲ್ಲಿ ಗುಂಪುಗಾರಿಕೆಗೆ ಕಾರಣರಾದವರು ಎಂದು ವ್ಯಾಖ್ಯಾನಿಸಲಾಗುತ್ತಿದೆಯಾದರೆ, ಇನ್ನೊಬ್ಬರನ್ನು ಕಾಂಗ್ರೆಸ್ ಪೋಷಕ ಗುತ್ತಿಗೆದಾರನ ಕೈಗೊಂಬೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ನಲ್ಲಿ ಮತ್ತೆ ಪ್ರತಾಪಚಂದ್ರ ಶೆಟ್ಟಿಯವರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೀಗ ಕ್ಷೀಣಗೊಂಡಿದೆ. ಪಕ್ಷದಲ್ಲಿಯೇ ಇವರನ್ನು ಬಹುತೇಕ ಯಾರೂ ಬೆಂಬಲಿಸದಿರುವುದು, ಕಾಂಗ್ರೆಸ್ ಪೋಷಕ ಉದ್ಯಮಿಯ ವಿರುದ್ಧ ಇವರು ಇತ್ತೀಚೆಗೆ ತಿರುಗಿ ಬಿದ್ದಿರುವುದು, ಕಾಂಗ್ರೆಸ್ ಪೋಷಕ ಉದ್ಯಮಿ ಇವರ ಆಯ್ಕೆಗೆ ವಿರುದ್ಧವಿರುವುದು ಇತ್ಯಾದಿ ಪಕ್ಷ ಇವರನ್ನು ಮತ್ತೆ ಆಯ್ಕೆ ಮಾಡದಿರಲು ಕಾರಣವಾಗಬಹುದು ಎನ್ನಲಾಗುತ್ತಿದೆ.

prathap

* ಪ್ರತಾಪಚಂದ್ರ ಶೆಟ್ಟಿ

ಕಾಂಗ್ರೆಸ್ ನಲ್ಲಿ ಪ್ರತಾಪಚಂದ್ರ ಶೆಟ್ಟಿಯವರಿಂದ ತೆರವಾಗುತ್ತಿರುವ ಸ್ಥಾನಕ್ಕೆ ಚಾಲ್ತಿಯಲ್ಲಿರುವ ಎರಡು ಪ್ರಮುಖ ಹೆಸರುಗಳೆಂದರೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಮಾಜಿ ಶಾಸಕ ಗೋಪಾಲ ಭಂಡಾರಿಯವರದು.

ಜಯಪ್ರಕಾಶ್ ಹೆಗ್ಡೆಯವರು ಕರಾವಳಿ ಭಾಗದ ದೊಡ್ಡ ಸಂಖ್ಯೆಯ ಮತ್ತು ಭಾರೀ ರಾಜಕೀಯ ಪ್ರಭಾವ ಹೊಂದಿರುವ ಬಂಟ ಸಮುದಾಯದವರಾದ ಕಾರಣ, ಪಕ್ಷದೊಳಗೆ ಒಂದು ವಿಭಾಗದ ಕಾರ್ಯಕರ್ತರು ಜಯಪ್ರಕಾಶ್ ಹೆಗ್ಡೆಯವರೇ ಎಂ ಎಲ್ ಸಿ ಅಭ್ಯರ್ಥಿಯಾಗಬೇಕು ಎಂದು ವಾದಿಸುತ್ತಿದ್ದಾರೆ.

jayaprakash

* ಜಯಪ್ರಕಾಶ್ ಹೆಗ್ಡೆ

ಆದರೆ, ಪಕ್ಷದೊಳಗೆ ಯಾವುದೇ ಗುಂಪುಗಳ, ವ್ಯಕ್ತಿಗಳ ಚೇಲಾಗಿರಿ ನಡೆಸದೇ ಇರುವ ಒಂದು ಪಕ್ಷ ನಿಷ್ಠ ಪ್ರಾಮಾಣಿಕ ಕಾರ್ಯಕರ್ತರ ಗುಂಪು ಮಾತ್ರ ಯಾವುದೇ ಪ್ರಬಲ ಜಾತಿಯ ಬೆಂಬಲವಿಲ್ಲದ ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ.ಗೋಪಾಲ ಭಂಡಾರಿಯವರ ಹೆಸರನ್ನು ಸೂಚಿಸುತ್ತಿದೆ.

ಭೂರಹಿತರ ಪರ ಹೋರಾಟಗಾರರಾಗಿ, ರೈತಪರ, ಕೂಲಿ ಕಾರ್ಮಿಕರ ಪರ ಚಳುವಳಿಗಾರಾಗಿ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾಗಿ, ತಳ ಮಟ್ಟದಿಂದಲೇ ಪಕ್ಷದ ಪ್ರಾಮಾಣಿಕ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಗೋಪಾಲ ಭಂಡಾರಿಯವರು, ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ಬೇಕಾದ ಎಲ್ಲಾ ರೀತಿಯ ಅರ್ಹತೆ ಮತ್ತು ಯೋಗ್ಯತೆ ಹೊಮದಿರುವವರು ಎನ್ನುವುದು ಪಕ್ಷದ ಒಂದು ವಲಯದ ಕಾರ್ಯಕರ್ತರ ಸ್ಪಷ್ಟ ನುಡಿ. ನಿಜವಾದ ಅರ್ಥದಲ್ಲಿಯೂ ಭಂಡಾರಿಯವರು ಒಬ್ಬ ಸರಳ, ಸಜ್ಜನ, ದಕ್ಷ ರಾಜಕಾರಣಿ ಎಂಬ ಹೆಸರಿಗೂ ಕಾರಣರಾದವರು. ಅಂತಿಮವಾಗಿ ಪಕ್ಷದ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ಒಬ್ಬರು ಅಭ್ಯರ್ಥಿ ಚುನಾವಣೆಯಲ್ಲಿ ವಿಜಯಿಗಳಾಗುವುದು ಖಚಿತವಾಗಿದ್ದು, ಎರಡೂ ಪಕ್ಷಗಳೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಹಸ ಪ್ರದರ್ಶಿಸುವ ಸಾದ್ಯತೆ ಇಲ್ಲವೆನ್ನಲಾಗಿದೆ.

gopal bhandary

* ಗೋಪಾಲ ಭಂಡಾರಿ

Leave a Reply

Your email address will not be published. Required fields are marked *