Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಬೆಳ್ಳೆ ಗ್ರಾ.ಪಂ.ನಿಂದ ಕನ್ನಡದ ಕಗ್ಗೊಲೆ !

ಬೆಳ್ಳೆ: ಸುಶಿಕ್ಷಿತರ, ಪ್ರಾಜ್ಞರ ಊರು ಎಂದೇ ಖ್ಯಾತವಾಗಿರುವ ಮೂಡುಬೆಳ್ಳೆಯಲ್ಲಿ ಕರ್ನಾಟಕದ ಜೀವಾಳವಾದ ಕನ್ನಡ ಭಾಷೆಗೆ ಕಿಂಚಿತ್ತೂ ಬೆಲೆಯಿಲ್ಲ ಎಂಬುದು ಸರಿಸುಮಾರು 1 ವರ್ಷದ ಅವಧಿಯಲ್ಲಿ ಸಾಬೀತಾಗಿದೆ. ಬೆಳ್ಳೆ ಗ್ರಾ.ಪಂ. ಕನ್ನಡ ಪದಕೋಠಿಗೆ ದ್ವಂದ್ವಾರ್ಥದ ಪದವೊಂದನ್ನು ಸೇರಿಸಿದ್ದು ಇದರಿಂದ ಕನ್ನಡಕ್ಕೆ ತೀವ್ರ ಅಪಮಾನ ಮಾಡಲಾಗಿದೆ.

ಮೂಡುಬೆಳ್ಳೆ ಸಂತೆ ಮಾರುಕಟ್ಟೆಯಲ್ಲಿರುವ ಮೀನು ಮಾರುಕಟ್ಟೆಯನ್ನು ಪ್ರವೇಶ ಮಾಡುವಲ್ಲಿಯೇ ಗೋಡೆಯ ಮೇಲೆ ಕನ್ನಡದ ಕೊಲೆಗೈದು ರಕ್ತ ಚಿಮ್ಮಿದ್ದರೂ, ಸಮೀಪದಲ್ಲೇ ಇರುವ ಪಂಚಾಯತ್ ಕಾರ್ಯಾಲಯದಲ್ಲಿರುವ ಪಂಚಾಯತ್ ಅಧ್ಯಕ್ಷರಾದಿಯಾಗಿ ಸದಸ್ಯರು, ಪಿಡಿಒ ಮತ್ತು ಸಿಬಂದಿಗೆ ಬಿದ್ದೇ ಹೋಗಿಲ್ಲ ಎಂದರೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಾರುದ್ದ ಭಾಷಣ ಬಿಗಿಯುವ ಇವರ ಕನ್ನಡ ಕಾಳಜಿ ಪ್ರಶ್ನಾರ್ಹವೇ ಆಗಿದೆ.

ಗಮನಕ್ಕೆ ಬಾರದಿರಲು ಸಾಧ್ಯವೇ ಇಲ್ಲ

ಕಣ್ಣಿಗೆ ರಾಚುವಂತೆ ಬರೆಯಲಾಗಿರುವ ಉದ್ಯೋಗ ಖಾತರಿ ಯೋಜನೆ ಬಗೆಗಿನ ಬೆಳ್ಳೆ ಗ್ರಾ.ಪಂ. ಪ್ರಕಟಣೆಯಲ್ಲಿ ”ಹೆಣ್ಣು-ಗಂಡಿ ಸಮಾನ ಕೂಲಿ” ಎಂದು ತಪ್ಪಾಗಿ ಬರೆಯಲಾಗಿದೆ. ”ಗಂಡಿಗೆ” ಎಂದು ಆಗಬೇಕಿರುವುದನ್ನು ”ಗಂಡಿ” ಎಂದು ಬರೆಯಲಾಗಿದ್ದು, ಇದನ್ನು ಕಂಡುಕೊಳ್ಳಲು ಭಾಷಾ ವಿದ್ವಾಂಸರೇ ಆಗಬೇಕಿಲ್ಲ. ಜನಸಾಮಾನ್ಯರಿಗೂ ಇದು ತಪ್ಪು ಎಂದು ತಿಳಿದು ಬರುತ್ತದೆ. ಮೀನು ಮಾರುಕಟ್ಟೆ ಪ್ರವೇಶಿಸುವಲ್ಲಿಯೇ ಕನ್ನಡದ ಕೊಲೆಗೈದಿರುವುದರಿಂದ ಇದು ಯಾರ ಗಮನಕ್ಕೂ ಬಂದಿಲ್ಲ ಎಂದರೆ ಕನ್ನಡಾಭಿಮಾನಿಗಳು ಯಾರೂ ನಂಬುವುದಿಲ್ಲ.

ದ್ವಂದ್ವಾರ್ಥ

”ಗಂಡಿ” ಎಂದು ತಪ್ಪಾಗಿ ಬರೆದಿರುವುದು ಓದುವಾಗಲೇ ಅಸಹ್ಯ ಎನಿಸುತ್ತದೆ. ಕೆಲವು ಭಾಷೆಯಲ್ಲಿ ”ಗಂಡಿಗೆ” ದ್ವಂದ್ವಾರ್ಥವೂ ಇದೆ. ”ಹೆಣ್ಣು-ಗಂಡಿ” ಎಂದಿರುವುದು ಮತ್ತಷ್ಟು ಆಕ್ಷೇಪಾರ್ಹತೆ ಮತ್ತು ಅಶ್ಲೀಲತೆಗೂ ಕಾರಣವಾಗಿದೆ.

ಅಸಡ್ಡೆಯಿಂದ ಕೊಲೆ

ಕಣ್ಣೆದುರೇ ”ಗಂಡಿ” ಎಂದು ಬರೆದಿರುವುದನ್ನು ಪಂಚಾಯತ್ ಅಧ್ಯಕ್ಷರಾಧಿಯಾಗಿ ಘಟಾನುಘಟಿ ಸದಸ್ಯರು ಮತ್ತು ಅಧಿಕಾರಿಗಳು ಗಮನಿಸಿರಲೇ ಬೇಕು. ಆದರೆ ಇದನ್ನು ಕಂಡವರೇ ಅವರು, ”ಏ..ಗಂಡಿ ಎಂದು ಬರೆದಿದ್ದಾರೆ” ಎಂದು ಜೋರಾಗಿ ನಕ್ಕು, ಅಸಡ್ಡೆಯಿಂದ ವಿಷಯವನ್ನು ಬಿಟ್ಟು ಬಿಟ್ಟಿದ್ದಾರೆಯೇ ಹೊರತು, ಕನ್ನಡಕ್ಕೆ ಅಂಟಿದ ಕಳಂಕವನ್ನು ದೂರ ಮಾಡಲು ಪ್ರಯತ್ನಿಸಲೇ ಇಲ್ಲ ಎಂಬುದು ಬೇಸರದ ವಿಷಯ.

ಹಿಂದಿನ ಅಧ್ಯಕ್ಷರನ್ನು ಬೆಟ್ಟು ಮಾಡುವಂತಿಲ್ಲ

ಮಾರುಕಟ್ಟೆ ನವೀಕರಣ ಕಾಮಗಾರಿ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅವರ ಅಧಿಕಾರಾವಧಿಯಲ್ಲಿ ನಡೆದಿತ್ತು. ಈ ಸಂದರ್ಭ ಭಿತ್ತಿ ಬರಹವನ್ನು ಬರೆಯಲಾಗಿದೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಅಧ್ಯಕ್ಷೆ ರಂಜನಿ ಹೆಗ್ಡೆ ರಾಜೇಂದ್ರ ಶೆಟ್ಟಿಯವರನ್ನು ಬೆಟ್ಟು ಮಾಡಿ ನಿರಾಳರಾಗುವಂತಿಲ್ಲ. ಕನ್ನಡದ ನೆತ್ತರು ಹಿಂದಿನವರಂತೆ ತನಗೂ ತಾಗಿದೆ ಎಂಬುದನ್ನು ಅವರು ಮರೆಯಬಾರದು. ಸಣ್ಣ ವಿಷಯವನ್ನು ಪತ್ರಿಕೆ ದೊಡ್ಡದು ಮಾಡಿದೆ, ನನಗೆ ಈ ವಿಷಯಗಳಿಗೆಲ್ಲ ತಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಂಜನಿ ಹೆಗ್ಡೆಯವರು ಮೂಗು ಮುರಿಯುವಂತಿಲ್ಲ. ಸಣ್ಣ ವಿಷಯಗಳೇ ಮುಂದೆ ದೊಡ್ಡದಾಗುತ್ತವೆ. ಒಂದು ವೇಳೆ ಅವರು ನಿರ್ಲಕ್ಷ್ಯ ತೋರಿದರೆ ಮುಂದೆ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಈ ಅಳುಕು ಅವರನ್ನು ಕಾಡದೆ ಬಿಡದು. ಈ ಸುದ್ದಿಯನ್ನೂ ವಿಪಕ್ಷದವರು ತನ್ನನ್ನು ಕಾಡಲು ಪ್ರಯೋಗಿಸಿದ್ದಾರೆ ಎಂದು ಹಿಂದಿನಂತೆ ರಂಜನಿ ಹೆಗ್ಡೆಯವರು ಊಹಿಸಿದರೆ ಅದು ಮೂರ್ಖತನವಷ್ಟೆ.

ಅಧ್ಯಕ್ಷರು ಮೀನು ತಿನ್ನುತ್ತಾರೋ ಗೊತ್ತಿಲ್ಲ

ಹಿಂದಿನ ಅಧ್ಯಕ್ಷ ರಾಜೇಂದ್ರ ಶೆಟ್ಟಿಯವರು ಮೀನು ತಿನ್ನುತ್ತಾರೆ. ಹಾಗಾಗಿ ಮೀನು ಮಾರುಕಟ್ಟೆಗೆ ಬಂದಾಗ ಅವರಿಗೆ ಈ ತಪ್ಪು ಗಮನಕ್ಕೆ ಬಾರದೇ ಇರಲಿಕ್ಕಿಲ್ಲ. ಆದರೆ ಈಗಿನ ಅಧ್ಯಕ್ಷೆ ರಂಜನಿ ಹೆಗ್ಡೆ ಮೀನು ತಿನ್ನುತ್ತಾರೋ ಗೊತ್ತಿಲ್ಲ, ಆದರೆ ಪಂಚಾಯತ್ ಕಾರ್ಯಾಲಯಕ್ಕೆ ಹೋಗಿ ಬರುವಾಗಲಂತೂ ಅವರು ಈ ಕಡೆ ದೃಷ್ಟಿ ಹಾಯಿಸದೇ ಇರಲಿಕ್ಕಿಲ್ಲ.

ಪ್ರತಿ ಮಂಗಳವಾರ ಬೆಳ್ಳೆ ವಾರದ ಸಂತೆ. ನೂರಾರು ಗ್ರಾಮಸ್ಥರು, ವ್ಯಾಪಾರಿಗಳು ಸಂತೆಗೆ ಬರುತ್ತಾರೆ. ಇವರಿಗೆಲ್ಲರಿಗೂ ಬೆಳ್ಳೆ ಗ್ರಾ.ಪಂ. ಪ್ರಕಟಣೆಯಲ್ಲಿ ಕನ್ನಡದ ಕೊಲೆ ಮಾಡಿದ್ದನ್ನು ನೋಡುತ್ತಾರೆ. ಆದರೆ ಈ ವರೆಗೆ ಯಾರೂ ಈ ಬಗ್ಗೆ ಅಧಿಕೃತವಾಗಿ ಗ್ರಾ.ಪಂ.ಗೆ ದೂರು ನೀಡಿದ್ದು ವರದಿಯಾಗಿಲ್ಲ. ಅವರೂ ನಕ್ಕು ಸುಮ್ಮನಾದರೇ ಹೊರತು ಕನ್ನಡಕ್ಕಂಟಿದ ಮಸಿಯನ್ನು ತೊಳೆಯಲು ಪ್ರಯತ್ನಿಸಲೇ ಇಲ್ಲ ಎಂಬುದು ಆಘಾತಕಾರಿ.

ಸರಿಪಡಿಸಿ ಮಾನ ಉಳಿಸಿ

ಪ್ರತಿ ದಿನ ಹಲವಾರು ಮಂದಿ ಓಡಾಡುವ ಪ್ರದೇಶದಲ್ಲಿ ಕನ್ನಡವನ್ನು ನಿಂದಿಸಿದ್ದು, ಇದನ್ನು ತಕ್ಷಣ ಸರಿಪಡಿಸಬೇಕು ಎಂಬುದು ಕನ್ನಡಾಭಿಮಾನಿಗಳ ಆಗ್ರಹವಾಗಿದೆ. ಪಂಚಾಯತ್ ಅಧ್ಯಕ್ಷರು ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕೂಡಲೆ ಕ್ಷಮೆಯಾಚಿಸಬೇಕು ಮತ್ತು ತಪ್ಪು ತಿದ್ದೋಲೆಯನ್ನು ಪ್ರಕಟಿಸಬೇಕು. ಇದರಿಂದ ತಪ್ಪು ತಿದ್ದಿದಂತೆಯೂ ಆಗುತ್ತದೆ. ಜತೆಗೆ ಕನ್ನಡವನ್ನು ಅವಗಣಿಸಿದ್ದಕ್ಕೆ ಪ್ರಾಯಶ್ಚಿತ್ತವೂ ಮಾಡಿದಂತಾಗುತ್ತದೆ.

ರಾಜಕೀಯ ಬೇಡ

ರಾಜಕೀಯಕ್ಕೆ ಹಲವಾರು ವಿಷಯಗಳಿವೆ. ಆದರೆ ಕನ್ನಡದ ವಿಷಯದಲ್ಲಿ ಬೆಳ್ಳೆ ಗ್ರಾಪಂನ ಅಧಿಕೃತರು ರಾಜಕೀಯ ಮಾಡದೆ ತಪ್ಪನ್ನು ಒಪ್ಪಿಕೊಂಡು ಸರಿಪಡಿಸಬೇಕು. ಕನ್ನಡದ ವಿಷಯದಲ್ಲಿ ಮೊಂಡುತನ ತೋರದೆ ಕನ್ನಡವನ್ನು ರಕ್ಷಿಸಬೇಕು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಪಿಡಿಓ ಅವರಿಗೂ ಇದೆ.

ತ್ಯಾಜ್ಯ ಸಮಸ್ಯೆ

ಬೆಳ್ಳೆ ಮಾರುಕಟ್ಟೆ ಮತ್ತು ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚುತ್ತಿದೆ. ಅಲ್ಲಲ್ಲಿ ಪ್ಲಾಸ್ಟಿಕ್ ಚೀಲಗಳು, ಮತ್ತಿತರ ತ್ಯಾಜ್ಯಗಳು ಬಿದ್ದುಕೊಂಡಿರುವುದು ಸ್ವಚ್ಛ ಭಾರತ ಪರಿಕಲ್ಪನೆಯನ್ನು ಅವಗಣಣೆ ಮಾಡುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಬೆಳ್ಳೆ ಗ್ರಾ.ಪಂ. ಸಿಬಂದಿ ಶುಚಿತ್ವ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಂಬುದು ನೂರಕ್ಕೆ ನೂರು ಸತ್ಯ. ತ್ಯಾಜ್ಯ ವಿಲೇ ಸಮಸ್ಯೆಯಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಒದಗಿಸುವುದು ಅತ್ಯಗತ್ಯ

 

Leave a Reply

Your email address will not be published. Required fields are marked *