Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಟಿಪ್ಪು ಜಯಂತಿ: ಸಿಎಂ ಸಿದ್ಧರಾಮಯ್ಯರ ಅಸಹ್ಯ ಓಟ್ ಬ್ಯಾಂಕ್ ರಾಜಕಾರಣ !

* ಶ್ರೀರಾಮ ದಿವಾಣ

# ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪ್ರಭುತ್ವ, ಎಳ್ಳಿನಷ್ಟೂ ನಾಚಿಕೆ ಮಾನ ಮರ್ಯಾದೆ ಇಲ್ಲದೆ ಕೇವಲ ಓಟ್ ಬ್ಯಾಂಕ್ ಗಾಗಿ ಪ್ರಜೆಗಳ ಹೆಣಗಳ ಮೇಲೆ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಿ ಕೈತೊಳೆದುಕೊಂಡಿದೆ.

ಇದುವರೆಗಿನ ಯಾವ ಸರಕಾರವೂ ಟಿಪ್ಪು ಜಯಂತಿಯನ್ನು ಆಚರಿಸಿದ್ದಿಲ್ಲ. ಇದೊಂದು, ಮುಂದುವರಿಕೆಯ ಭಾಗವಷ್ಟೇ ಆಗಿರುತ್ತಿದ್ದರೆ; ಕಾಂಗ್ರೆಸ್ ಪ್ರಭುತ್ವನ್ನು ವಿಮರ್ಶಿಸುವ ಅನಿವಾರ್ಯತೆ ಸೃಷ್ಟಿಯಾಗತ್ತಿರಲಿಲ್ಲ. ಸರ್ವಾಧಿಕಾರಿ ಮನೋಭಾವದ ಸಿದ್ದರಾಮಯ್ಯ, ರಾಜ್ಯದಾದ್ಯಂತ ಹೊಸದಾಗಿ ಟಿಪ್ಪು ಜಯಂತಿಯನ್ನು ಆಚರಸಿದ್ದು ಮತ್ತು ಇದಕ್ಕಾಗಿ ರಾಜ್ಯದ ಪತ್ರಿಕೆಗಳಲ್ಲೆಲ್ಲಾ ಪುಟಗಟ್ಟಲೆ ಜಾಹೀರಾತು ಪ್ರಕಟಿಸುವ ಮುಖಾಂತರ ಹಾಗೂ ಕಾರ್ಯಕ್ರಮದ ಹೆಸರಲ್ಲಿ ಸರಕಾರೀ ಖಜಾನೆಯಿಂದ ಸಾರ್ವಜನಿಕರ ತೆರಿಗೆ ಹಣವನ್ನು ಕೋಟಿಗಳ ಲೆಕ್ಕದಲ್ಲಿ ದುಂದುವೆಚ್ಚ ಮಾಡಿರುವ ಕಾರಣ ಟೀಕಿಸುವ ಅಗತ್ಯ ಉದ್ಭವವಾಗಿದೆ.

ಸಿದ್ದರಾಮಯ್ಯರ ಟಿಪ್ಪು ಜಯಂತಿಯ ಹಿಂದೆ ನೂರಕ್ಕೆ ನೂರು ಓಟ್ ಬ್ಯಾಂಕ್ ರಾಜಕಾರಣವೇ ಅಡಗಿದೆ ಎನ್ನುವುದನ್ನು ತಿಳಿಯದಷ್ಟು ಮೂರ್ಖರಲ್ಲ ರಾಜ್ಯದ ಪ್ರಜೆಗಳು. ಅಷ್ಟು ಪ್ರಜ್ಞಾವಂತಿಕೆ ಕನ್ನಡಿಗರಲ್ಲಿ ಇದ್ದೇ ಇದೆ. ಕರ್ನಾಟಕದ ಮತದಾರರು ಮೂರ್ಖರೆಂದು ಸಿದ್ದರಾಮಯ್ಯ ತಿಳಿದಿದ್ದರೆ ಹಾಗೆ ತಿಳಿಯುವುದೇ ಒಂದು ಒಂದು ಶತಮುರ್ಖತನವಷ್ಟೇ.

siddaramaiah cm of karnataka

ಟಿಪ್ಪು ಸುಲ್ತಾನ್ ರವರ ಜಯಂತಿ ನವೆಂಬರ್ 20ಕ್ಕೇ ಹೊರತು, ನವೆಂಬರ್ 10ಕ್ಕೆ ಅಲ್ಲ. ಹಾಗಿದ್ದರೂ, ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯನವರ ಪ್ರಭುತ್ವ ದೀಪಾವಳಿಯ ಸಮಯದಲ್ಲಿ, ನವೆಂಬರ್ ಹತ್ತಕ್ಕೇ ಆಚರಿಸಿದ್ದೇಕೆ ಎಂಬ ಸಹಜ ಪ್ರಶ್ನೆಗೆ ಉತ್ತರವೇ, ನವೆಂಬರ್ 20ರ ಹೊತ್ತಿಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗಲಿದೆ ಎಂಬುದು. ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಬಳಿಕ ಟಿಪ್ಪು ಜಯಂತಿಯನ್ನು ಚುನಾವಣೆಗೆ ದುರ್ಬಳಕೆ ಮಾಡಿಕೊಳ್ಳಲು ಕಷ್ಟ ಸಾಧ್ಯವಾದ ಕಾರಣ, ಹಾಗೆ ಮಾಡುವುದರಿಂದ ಹೆಚ್ಚು ಓಟ್ ಬ್ಯಾಂಕ್ ಸೃಷ್ಟಿಸಲು ಸಾಧ್ಯವಿಲ್ಲದ ಕಾರಣ, ದೀಪಾವಳಿಯ ಸಮಯದಲ್ಲಿಯೇ ಟಿಪ್ಪು ಜಯಂತಿಯನ್ನು ಆಚರಸಿಸಬೇಕು ಮತ್ತು ಟಿಪ್ಪು ಜಯಂತಿಯ ಹೆಸರಲ್ಲಿ ಪರ ವಿರೋಧದ ನೆಪದಲ್ಲಿ ಹಿಂದೂ ಮುಸ್ಲೀಮರು ರಕ್ತದ ಮಾರಣ ಹೋಮ ನಡೆಸಲಿ, ಆ ಮಾರಣ ಹೋಮದ ಬೆಂಕಿಯಲ್ಲಿ ನಾವು ನಮ್ಮ ಮುಸ್ಲೀಂ ಓಟ್ ಬ್ಯಾಂಕ್ ನ್ನು ಭದ್ರಪಡಿಸಿಕೊಳ್ಳುವ ಎಂಬ ನೀತಿಗೆಟ್ಟ ಅಸಹ್ಯ ರಾಜಕಾರಣವನ್ನು ಸಿದ್ದರಾಮಯ್ಯನವರು ಒಂದಿನಿತೂ ಅಂಜಿಕೆಯಿಲ್ಲದೆ ಕಾರ್ಯರೂಪಕ್ಕಿಳಿಸಿದ್ದೇ ”ಟಿಪ್ಪು ಜಯಂತಿ” ಎಂಬ ಮುಸ್ಲೀಮರ ಓಲೈಕೆ ತಂತ್ರ.

ರಾಜ ಪ್ರಭುತ್ವದ ಸರ್ವಾಧಿಕಾರಿಯಾಗಿದ್ದ ಟಿಪ್ಪು ಸಉಲ್ತಾನ್, ಪ್ರಜಾಪ್ರಭುತ್ವದ ಮಾದರಿಯೇನೂ ಅಲ್ಲ. ತನ್ನ ಅಡಳಿತದ ಅವಧಿಯಲ್ಲಿ ಒಂದೆರಡು ಒಳ್ಳೆಯ ಕಾರ್ಯಕ್ರಮಗಳನ್ನು ಟಿಪ್ಪು ಸುಲ್ತಾನ್ ಜ್ಯಾರಿಗೊಳಿಸಿದ್ದನ್ನು ಒಪ್ಪಬಹುದಾದರೂ, ನಿರಾಕರಿಸಲು ಸಾಧ್ಯವಿಲ್ಲವಾದರೂ, ಆತ ಒಬ್ಬ ಮತಾಂಧನಾಗಿದ್ದ ಮತ್ತು ಜನಾಂಗೀಯ ಹಂತಕನಾಗಿದ್ದ ಎನ್ನುವುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ, ಸಾಧುವೂ ಅಲ್ಲ. ಇಂಥ ವಿವಾದ ಪುರುಷನ ಜಯಂತಿಯನ್ನು ಆಚರಿಸುವ ಅಗತ್ಯ ಸರಕಾರಕ್ಕಿರಲಿಲ್ಲ. ಆದರೆ, ಪರಮ ಭ್ರಷ್ಟ ಮತ್ತು ದುಷ್ಟ ರಾಜಕೀಯ ವ್ಯವಸ್ಥೆಗೆ ಇಂಥ ಕೆಲಸ ಅನಿವಾರ್ಯವೇ ಆಗಿದೆ. ಇಂಥ ಅಸಹ್ಯದ ರಾಜಕಾರಣ ನಡೆಸದೇ ಇದ್ದಲ್ಲಿ, ಇವರ ಅಸ್ತಿತ್ವ ಉಳಿಯುವುದಾದರೂ ಹೇಗೆ ? ಪಕ್ಷದ ಅಸ್ತಿತ್ವ, ಪರಮ ಭ್ರಷ್ಟರ ಅಧಿಕಾರ ಉಳಿಯಬೇಕಾದರೆ ಟಿಪ್ಪು ಜಯಂತಿ ಅನಿವಾರ್ಯವಾಗಿತ್ತು. ಸಿದ್ಧರಾಮಯ್ಯನವರು ಈ ಅನಿವಾರ್ಯತೆಯಿಂದಲೇ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಮುನ್ನ ಟಿಪ್ಪು ಜಯಂತಿಯನ್ನು ಆಚರಿಸಿ ಮುಸ್ಲೀಂ ಸಮುದಾಯನ್ನು ಭಾವನಾತ್ಮಕವಾಗಿ ಕೆರಳಿಸಿ, ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ಎಂಬ ಬುಟ್ಟಿಯೊಳಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಟಿಪ್ಪು ಜಯಂತಿ ಆಚರಿಸಿ ಎಂದು ಯಾವ ಸಂಘ ಸಂಸ್ಥೆಗಳೂ, ಸಂಘಟನೆಗಳೂ, ಸಾರ್ವಜನಿಕರೂ ರಾಜ್ಯದಾದ್ಯಂತ ಪ್ರತಿಭಟನೆ, ಧರಣಿ ಸತ್ಯಾಗ್ರಹ, ಜಾಥಾ ಇತ್ಯಾದಿಗಳನ್ನು ನಡೆಸಿದ್ದಿಲ್ಲ. ಜನರು ಕೇಳದೆ ಇದ್ದರೂ ಟಿಪ್ಪು ಜಯಂತಿಯನ್ನು ಘೋಷಿಸಿದ ಸಿದ್ಧರಾಮಯ್ಯನವರು, ಜನರ ನಿಜವಾದ ಬೇಡಿಕೆಗಳ ಕಡೆಗೆ ಕುರುಡಾಗಿರುವುದು ಮಾತ್ರ ಖಂಡನೀಯವೇ ಸರಿ.

ಟಿಪ್ಪು ಜಯಂತಿಯಿಂದ ಬಡ ಮುಸ್ಲೀಮ್ ಸಮುದಾಯಕ್ಕಾದ ಲಾಭವಾದರೂ ಏನು ? ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ನಿವೇಶನ ರಹಿತ ಬಡ ಮುಸ್ಲೀಮರಿಗೆ ಕನಿಷ್ಟ ಐದು ಸೆಂಟ್ಸ್ ಭೂಮಿ ಆದರೂ ಸಿಕ್ಕಿತಾ ? ಮಳೆಗೆ ಸೋರುತ್ತಿರುವ ಮನೆಯನ್ನು ದುರಸ್ತಿ ಪಡಿಸಲು ಬಿಡಿ ಕಾಸು ಆದರೂ ಸಿಕ್ಕಿತಾ ? ಶಿಕ್ಷಣಕ್ಕೇನಾದರೂ ಲಾಭವಾಯಿತಾ, ಆರೋಗ್ಯ ಸುಧಾರಣೆಗೇನಾದರೂ ಪ್ರಯೋಜನವಾಯಿತಾ ಎಂಬಿತ್ಯಾದಿ ಯಾವ ಪ್ರಶ್ನೆ ಕೇಳಿದರೂ ”ಇಲ್ಲ” ಎನ್ನುವುದೇ ಉತ್ತರ.

ರಾಜ್ಯದ ಬಡ ಜನರು ಈಗಲೂ ಹಸಿವೆಯಿಂದ ಸಾಯುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಕೊಟ್ಟು ಅವರು ಗೌರವದಿಂದ ಬಾಳಿ ಬದುಕಲು ಬೇಕಾದ ವ್ಯವಸ್ಥೆನ್ನು ರೂಪಿಸಲು ಸಿದ್ದರಾಮಯ್ಯ ಸರಕಾರಕ್ಕೆ ಇನ್ನೂ ಸಹ ಸಾಧ್ಯವಾಗಿಲ್ಲ. ಡೊನೇಷನ್ ಹಾವಳಿಯಿಂದ ಉನ್ನತ ಶಿಕ್ಷಣ ಪಡೆಯಲು ಬಡ ವಿದ್ಯಾವಂತರಿಗೆ ಈಗಲೂ ಸಾಧ್ಯವಾಗದಂಥ ಪರಿಸ್ಥಿತಿಯೇ ಇದೆ. ವಿದ್ಯಾರ್ಥಿನಿ ನಿಲಯದಲ್ಲಿ ಶೌಚಾಲಯಗಳಿಲ್ಲ. ಕುಡಿಯಲು ‘ಶುದ್ಧ’ ಬಿಡಿ, ‘ತ್ಯಾಜ್ಯ’ ನೀರು ಸಹ ಇಲ್ಲದಂಥ ಶೋಚನೀಯ ಸ್ಥಿತಿ ಇದೆ. ಮೊರಾರ್ಜಿ ದೇಸಾಯಿ ಶಾಲೆಗಳ ಶಿಕ್ಷಕರ ಸಹಿತ ಅನೇಕ ಸರಕಾರಿ ನೌಕರರಿಗೆ ವೇತನವನ್ನು, ಗೌರವ ಧನದ ಆಧಾರದಲ್ಲಿ ಸೇವೆ ಸಲ್ಲಿಸುವವರಿಗೆ ಗೌರವಧನವನ್ನು ಕಾಲಕಾಲಕ್ಕೆ ನೀಡುವ ಯೋಗ್ಯತೆಯೂ ಈ ಸರಕಾರಕ್ಕಿಲ್ಲವಾಗಿದೆ. ಪರಿಸ್ಥಿತಿ ಹೀಗಿದ್ದರೂ, ಕೊಟ್ಯಂತರ ರು. ವೆಚ್ಚ ಮಾಡಿ ಹೊಸದಾಗಿ ”ಟಿಪ್ಪು ಜಯಂತಿ” ಆಚರಿಸಲಾಯಿತು ಎಂದರೆ ಈ ಸರಕಾರಕ್ಕೆ ಉಗಿಯದೆ ಮತ್ತೇನು ಮಂಗಳಾರತಿ ಎತ್ತಬೇಕಾ ?

ರಾಜ್ಯ ಸರಕಾರದ ಮೂಗಿನ ನೇರಕ್ಕೇ ಭ್ರಷ್ಟಚಾರ ತಾಂಡವವಾಡುತ್ತಿದೆ. ಬಹುಕೋಟಿ ಹಗರಣಗಳು ಸರಣಿಯೋಪಾದಿಯಲ್ಲಿ ನಡೆದಿದೆ, ನಡೆಯುತ್ತಿದೆ. ಈ ಬಗ್ಗೆ ನಾಗರಿಕರು ನೀಡಿದ ಮನವಿಗಳನ್ನು ಓದಿ ಅಗತ್ಯ ಕ್ರಮ ತೆಗೆದುಕೊಳ್ಳುವ ಕನಿಷ್ಟ ಕರ್ತವ್ಯ ಪಾಲನೆಯನ್ನೂ ಮಾಡಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರ ಎಂಬ ಪ್ರಭುತ್ವ ತುರ್ತಾಗಿ ಏನು ಮಾಡಬೇಕೋ ಅದನ್ನು ಮಾಡುವುದು ಬಿಟ್ಟು, ಮಾಡಬಾರದ್ದನ್ನೇ ಮಾಡುತ್ತಿದೆ ಎಂಬುದಕ್ಕೆ ಟಿಪ್ಪು ಜಯಂತಿಯೇ ಒಂದು ಉದಾಹರಣೆ.

ಟಿಪ್ಪು ಜಯಂತಿಯ ಹೆಸರಲ್ಲಿ ಹೇಸಿಗೆ ರಾಜಕಾರಣ ನಡೆಸಿದ ಸಿದ್ದರಾಮಯ್ಯನವರು, ಇದೀಗ ಎಲ್ಲವನ್ನೂ ವಿರೋಧ ಪಕ್ಷದ ಮುಖಕ್ಕೆ ಒರೆಸುವ ಕೆಲಸ ಆರಂಭಿಸಿದೆ. ವಿರೋಧ ಪಕ್ಷ ತನ್ನ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿರಲೂಬಹುದು. ಅವರಿಗೂ ಬೇಕಾಗಿರುವುದು ಅದುವೆ. ಆದರೆ, ಜವಾಬ್ದಾರಿಯುತ ಸರಕಾರ, ರಾಜ ಪ್ರಭುತ್ವದ ಸರ್ವಾಧಿಕಾರಿಯಾಗಿದ್ದ, ಸಾವಿರಾರು ಜನರ ಜನಾಂಗೀಯ  ಹತ್ಯೆ ನಡೆಸಿದ ಮತಾಂಧ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಬೇಕಿತ್ತಾ ? ಖಂಡಿತಾ ಬೇಕಿರಲಿಲ್ಲ. ಮುಸ್ಲೀಮರನ್ನು ಓಲೈಸಿ ಓಟ್ ಬ್ಯಾಂಕ್ ಸೃಷ್ಟಿಸಲು ಟಿಪ್ಪು ಜಯಂತಿ ಆಚರಿಸಿದ ಸಿದ್ದರಾಮಯ್ಯರ ಪ್ರಭುತ್ವದ ಕೃತ್ಯ ಅಕ್ಷಮ್ಯ.

tippu-1tippu-2

 

Leave a Reply

Your email address will not be published. Required fields are marked *