Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವಿಶಿಷ್ಟ ವ್ಯಕ್ತಿತ್ವದ ಅಪರೂಪದ ಸಾಧಕ, ಪ್ರೊ.ಭವಾನಿ ಶಂಕರ್

# ಇವರು ವಿದ್ಯಾರ್ಥಿಗಳಿಂದ ದಿನಪತ್ರಿಕೆ, ಪುಸ್ತಕಗಳನ್ನು ಓದಿಸುತ್ತಾರೆ, ಕನ್ನಡ ಶಿಕ್ಷಕರಾಗಿದ್ದರೂ ಕಂಪ್ಯೂಟರ್ ಬಗ್ಗೆ ಪುಸ್ತಕ ಬರೆದಿದ್ದಾರೆ, ಇಂಟರ್ನೆಟ್, ನೆಟ್ವರ್ಕಿಂಗ್ ಬಗ್ಗೆ ಪಾಠ ಮಾಡುತ್ತಾರೆ, ವಿದ್ಯಾರ್ಥಿಗಳಿಂದಲೇ ಪುಸ್ತಕ ಬಿಡುಗಡೆ ಮಾಡಿಸುತ್ತಾರೆ, ಅನ್ಯಾಯ ಕಂಡಾಗ ಪ್ರತಿಭಟನೆಗಿಳಿಯುತ್ತಾರೆ, ಗಾಂಧಿ ಟೋಪಿ ಧರಿಸಿ ಪಾಠ ಮಾಡುತ್ತಾರೆ, ಕರಪತ್ರ ಮುದ್ರಿಸಿ ಹಂಚುತ್ತಾರೆ, ವೀಡಿಯೋ ತಂತ್ರಜ್ಞಾನ, ಕಾರ್ ಎಂಜಿನ್ ನಿರ್ವಹಣೆ ಬಗ್ಗೆ ತಿಳಿದುಕೊಂಡಿದ್ದಾರೆ. ಪದವಿ ಕಾಲೇಜಿನ ಪ್ರಾಧ್ಯಾಪಕರು ಹೀಗೂ ಇರುತ್ತಾರಾ ಎಂದು ಹೊಸದಾಗಿ ಕಾಲೇಜಿಗೆ ಸೇರಿದ್ದ ನಾವೆಲ್ಲ ಹುಬ್ಬೇರಿಸುವಂತೆ ಮಾಡಿದವರು ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಎನ್. ಭವಾನಿಶಂಕರ್ ಅವರು.

ಪದವಿ ಶಿಕ್ಷಣ ಪೂರ್ಣಗೊಳ್ಳುವಾಗ ವಿದ್ಯಾರ್ಥಿಗಳು ಜೀವನದ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವ ಪ್ರಜ್ಞಾವಂತರಾಗಿ ಹೊರಹೊಮ್ಮಬೇಕು ಎನ್ನುವ ಮಹದಾಸೆಯೊಂದಿಗೆ ಅವರಲ್ಲಿ ಸಮಾಜಮುಖಿ ಮನೋಭಾವ ಬೆಳೆಸಬೇಕೆನ್ನುವ ತೀವ್ರ ಹಂಬಲ ಹೊಂದಿರುವ ಪ್ರೊ. ಭವಾನಿಶಂಕರ್ ಅವರು, ಈಗ ವಯೋನಿವೃತ್ತರಾಗಿದ್ದು, ಉಡುಪಿಯಲ್ಲಿ ವಾಸವಾಗಿದ್ದಾರೆ.

ನಾನು ಬಿಎ ಪದವಿ ಶಿಕ್ಷಣಕ್ಕೆಂದು ಶಿರ್ವದ ಸಂತ ಮೇರಿ ಕಾಲೇಜಿಗೆ ಸೇರಿದ ಸಮಯ. ಪಿಯುಸಿ ವರೆಗೆ ನಡೆದುಕೊಂಡೇ ಶಾಲೆಗೆ ಹೋದ ನನಗೆ, ನಮ್ಮ ಹಳ್ಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿ ಪೇಟೆ ಎನಿಸಿಕೊಂಡ ಶಿರ್ವಕ್ಕೆ ಬಸ್ಸಿನಲ್ಲಿ ಹೋಗುವ ಸಂಭ್ರಮ. ಜತೆಗೇ ಪದವಿ ಶಿಕ್ಷಣ, ಪ್ರಾಧ್ಯಾಪಕರು, ಆಂಗ್ಲ ಭಾಷೆಯಲ್ಲಿ ಬೋಧನೆ, ಹೊಸ ಪರಿಸರ-ಹೊಸ ಪರಿಚಯದ ಬಗ್ಗೆ ಆತಂಕ. ಕಾಲೇಜಿನ ಆರಂಭದ ದಿನವಾದ್ದರಿಂದ ಪ್ರಥಮ ಬಿಎ ಕೊಠಡಿಯಲ್ಲಿ ತರಗತಿ ಅಧ್ಯಾಪಕರಾದ ಪ್ರೊ. ಮೊರಾಸ್ ಅವರು ಹಾಜರಿ ಕರೆಯುತ್ತ ನಮ್ಮ ಪರಿಚಯ ಮಾಡಿಸಿಕೊಂಡರು. ಬಳಿಕ ಕನ್ನಡ ಮತ್ತು ಹಿಂದಿ ಭಾಷೆ ಆಯ್ಕೆ ಮಾಡಿದ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಆಯಾ ಭಾಷೆಯ ಪಾಠಗಳು ನಡೆಯುವ ಕೊಠಡಿಗಳಿಗೆ ಕಳುಹಿಸಲಾಯಿತು.

ನಾವು ಅಲ್ಲಿಗೆ ತಲುಪುವ ಮೊದಲೇ ಗಂಭೀರ ಸ್ವಭಾವದ, ಹಿರಿಯ ಪ್ರಾಧ್ಯಾಪಕರೊಬ್ಬರು ಹಾಜರಿದ್ದರು. ನಮಗೆಲ್ಲ ಕುಳಿತುಕೊಳ್ಳಲು ಹೇಳಿ ಮೊದಲ ತರಗತಿಯಲ್ಲಿಯೇ ಪದವಿ ಶಿಕ್ಷಣದ ಸಂಪೂರ್ಣತೆ ನಿಮ್ಮ ಆಸಕ್ತಿಯನ್ನು ಅವಲಂಬಿಸಿದೆ ಎಂದು ನಮ್ಮೆಲ್ಲರ ಗಮನ ಸೆಳೆದರು. ಅವರೇ ಪ್ರೊ. ಭವಾನಿಶಂಕರ್.

ನನ್ನ ತರಗತಿಯಲ್ಲಿ ಇರುವ ನಿಯಮಗಳಿಷ್ಟು; ನೀವು ಪ್ರತಿನಿತ್ಯ ದಿನಪತ್ರಿಕೆ ಓದಿ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು, ವಾರಕ್ಕೊಂದು ಪುಸ್ತಕ ಓದಿ ಪ್ರಬಂಧ ಬರೆಯಬೇಕು ಮತ್ತು ಕಾಲೇಜಿನ ವಾರ್ಷಿಕ ಸಂಚಿಕೆಗೆ ಕಡ್ಡಾಯವಾಗಿ ಲೇಖನ ಬರೆಯಬೇಕು. ನಿಮ್ಮಲ್ಲಿ ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಲು ಓದು ಸಹಕಾರಿಯಾಗುತ್ತದೆ. ನಿಮ್ಮ ಅಭಿಪ್ರಾಯವನ್ನು ಅಭಿವ್ಯಕ್ತಪಡಿಸಲು ಬರವಣಿಗೆಯ ತರಬೇತಿ ಪೂರಕವಾಗುತ್ತದೆ. ನಿಮಗೆ ಬೇಕಾದ ಎಲ್ಲ ಮಾರ್ಗದರ್ಶನ ನೀಡುತ್ತೇನೆ. ಈ ಕೆಲಸಕ್ಕೆ ಇಂಟರ್ನಲ್ ಅಂಕಗಳಲ್ಲಿ 5 ಅಂಕಗಳನ್ನು ಮೀಸಲಿಟ್ಟಿದ್ದೇನೆ. ಸಂಜೆ 5ರ ವರೆಗೆ ನಾನು ಕಾಲೇಜಿನಲ್ಲಿ ಇದ್ದು ನಿಮ್ಮ ಸಹಾಯಕ್ಕೆ ಸಿದ್ಧನಿದ್ದೇನೆ ಎಂದರು.

ಗಂಭೀರ ಸ್ವಭಾವದವರು ಎನಿಸಿದ ಅಧ್ಯಾಪಕರು ಕೆಲವೇ ಕ್ಷಣಗಳಲ್ಲಿ ಆತ್ಮೀಯರಾದರು, ಕಲಿಸಬೇಕೆನ್ನುವ ಹುರುಪು ತುಂಬಿ ತುಳುಕಾಡುತ್ತಿದ್ದ ಅವರನ್ನು ಕಂಡಾಗ ಕಲಿಯಬೇಕೆಂಬ ಛಲ ನಮ್ಮೊಳಗಿನಿಂದ ಮೈಕೊಡವಿಕೊಂಡು ಎದ್ದಿತು. ಆರಂಭದಲ್ಲಿ ಕಡ್ಡಾಯವಾಗಿದ್ದವು, ಕ್ರಮೇಣ ಆಸಕ್ತಿಯ ವಿಷಯಗಳಾದವು. ಓದುವ, ಬರೆಯುವ ಅಭ್ಯಾಸ ಹವ್ಯಾಸವಾಗಿ ಬದಲಾಯಿತು. ಮೊದಲ ತರಗತಿಯಲ್ಲಿ ಸರ್, ”ನಿಮ್ಮ ಪಠ್ಯ ಪುಸ್ತಕ ಬರುವುದು ತಡವಾಗುತ್ತದೆ, ಎರಡು ಪಾಠಗಳ ಜೆರಾಕ್ಸ್ ನೀಡುತ್ತೇನೆ, ನೀವು ಪ್ರತಿಗಳನ್ನು ಮಾಡಿಕೊಳ್ಳಿ” ಎಂದಿದ್ದರು. ಮುದ್ರಣವಾಗದ ಪುಸ್ತಕದ ಜೆರಾಕ್ಸ್ ಇವರ ಬಳಿ ಹೇಗೆ ಬಂತು ಎಂದು ನಮಗೆ ಆಶ್ಚರ್ಯ. ಒಂದು ತಿಂಗಳ ಬಳಿಕ ಪುಸ್ತಕ ನಮ್ಮ ಕೈಸೇರಿದಾಗ ಇನ್ನೊಂದು ಅಚ್ಚರಿ ! ನಮ್ಮ ಕನ್ನಡ ಸರ್ ಅವರೇ, ಪಠ್ಯ ಪುಸ್ತಕದ ಸಂಪಾದಕರಾಗಿದ್ದರು. ನಮಗೆ ಬಹಳ ಹೆಮ್ಮೆಯೆನಿಸಿತು. ಬೇರೆ ಕಾಲೇಜಿಗೆ ಹೋಗುತ್ತಿದ್ದ ಸ್ನೇಹಿತರಿಗೆ ಕನ್ನಡ ಪುಸ್ತಕ ನಮ್ಮ ಸರ್ ಸಂಪಾದಿಸಿದ್ದು ಎಂದು ಹೇಳುವಾಗ ಬಹಳ ಖುಷಿಯಾಗುತ್ತಿತ್ತು. ಪ್ರೊ. ಭವಾನಿ ಶಂಕರ್ ಅವರು ಮಂಗಳೂರು ವಿವಿ ಕನ್ನಡ ಪಠ್ಯ ಪುಸ್ತಕ ಮಂಡಳಿ, ಪರೀಕ್ಷಾ ಮಂಡಳಿಯಲ್ಲಿದ್ದರು ಎನ್ನುವುದು ಉಲ್ಲೇಖಾರ್ಹ.

ವಿದ್ಯಾರ್ಥಿಗಳ ಲೇಖನಗಳನ್ನು ಪುಸ್ತಕವಾಗಿಸಿದರು

ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಬಗ್ಗೆ ಆಸಕ್ತಿ ಮೂಡಿಸಲು ಪ್ರೊ. ಭವಾನಿಶಂಕರ್ ಅವರು ಅಸೈನ್ ಮೆಂಟ್ ನೀಡುವ ವಿಶಿಷ್ಟ ವಿಧಾನ ಅನುಸರಿಸುತ್ತಿದ್ದರು. ಈ ಅಸೈನ್ ಮೆಂಟ್ ಹೆಸರಿಗಷ್ಟೇ ಬರೆದು ಒಪ್ಪಿಸಿದರೆ ಮುಗಿಯುತ್ತಿರಲಿಲ್ಲ. ವಿದ್ಯಾರ್ಥಿಗಳು ಅವರವರ ಊರಿನ ವಿಶೇಷತೆಗಳ ಬಗ್ಗೆ ಅಧ್ಯಯನ ಮಾಡಬೇಕಿತ್ತು. ಸಾಧಕರ ಪರಿಚಯ ಮಾಡಿಕೊಂಡು ಅವರ ಸಂದರ್ಶನ ಮಾಡಬೇಕಿತ್ತು. ಫೋಟೊ ಲೇಖನಗಳನ್ನು ತಯಾರಿಸಬೇಕಿತ್ತು. ನಾವು ಬರೆದ ಲೇಖನಗಳನ್ನು ಅವರು ತಿದ್ದಿ ಸರಿಪಡಿಸುತ್ತಿದ್ದರು. ತಾಳ್ಮೆಯಿಂದ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಈಗ ಸಮಾಜ ಕಾರ್ಯ, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮಾಡುವ ಫೀಲ್ಡ್ ವರ್ಕನ್ನು ನಾವು ಪದವಿ ಶಿಕ್ಷಣದ ಹಂತದಲ್ಲೇ ಮಾಡಿ ಮುಗಿಸಿದ್ದೆವು. ಇದಕ್ಕೆ ನಮ್ಮ ಕನ್ನಡ ಅಧ್ಯಾಪಕರು ಮಾರ್ಗದರ್ಶಕರಾಗಿದ್ದರು.  ನಾವು ಬರೆದ ಲೇಖನಗಳಿಗೆ ಸ್ಪಷ್ಟ ರೂಪ ನೀಡಿ ಅವುಗಳನ್ನು ಸಂಪಾದಿಸಿ ಅವರು ‘ಗ್ರಾಮ ಲೋಕ’ ಹೆಸರಿನ ಪುಸ್ತಕವಾಗಿ ಹೊರತಂದಿದ್ದರು.

ಕಂಪ್ಯೂಟರ್ ತಜ್ಞನಾದ ಕನ್ನಡ ಶಿಕ್ಷಕ

ಕನ್ನಡ ಪ್ರಧ್ಯಾಪಕರಾಗಿದ್ದರೂ ಹೊಸ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಹೊಂದಿದ್ದ ಅವರು, ಕಂಪ್ಯೂಟರ್ ಬಂದ ಹೊಸದರಲ್ಲಿ ತಮ್ಮ ಹಳೆ ವಿದ್ಯಾರ್ಥಿಯೋರ್ವರ ಸಹಕಾರದಿಂದ ಕಂಪ್ಯೂಟರ್ ಕಲಿತರು. ತಾವು ಕಲಿತ ಹೊಸ ವಿಚಾರವನ್ನು ತಮ್ಮ ಲಾಭಕ್ಕಷ್ಟೆ ಬಳಸದೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಸಿಕೊಟ್ಟರು. ತಲಸ್ಪರ್ಶಿ ಅಧ್ಯಯನದ ಮೂಲಕ ‘ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ’ ಎಂಬ ಪುಸ್ತಕ ಬರೆದರು. ಆ ಪುಸ್ತಕ ಮಿಂಚಿನ ವೇಗದಲ್ಲಿ ಮಾರಾಟವಾಗಿ ಹಲವು ಮರು ಮುದ್ರಣಗಳನ್ನು ಕಂಡಿದೆ. ಕಂಪ್ಯೂಟರ್ ನೆಟ್ವರ್ಕಿಂಗ್ ಬಗ್ಗೆ ಅವರು ಬರೆದ ಪುಸ್ತಕವನ್ನು ಬಿಸಿಎ ವಿದ್ಯಾರ್ಥಿಗಳೂ ಬಳಸುತ್ತಿದ್ದಾರೆ. ಅವರು ಬಿಎ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಗತಿಗಳನ್ನು ನಡೆಸುತ್ತಿದ್ದರು. ಕನ್ನಡ ಶಿಕ್ಷಕರಾದ ಅವರು ಕಂಪ್ಯೂಟರ್ ತಜ್ಞರೆನಿಸಿಕೊಂಡರು.

ಪುಸ್ತಕ ಬಿಡುಗಡೆ ಪ್ರಥಮ ಬಿಎ ವಿದ್ಯಾರ್ಥಿಯಿಂದ !

1982ರಿಂದ ಈ ವರೆಗೆ 80ಕ್ಕೂ ಹೆಚ್ಚು ಪುಸ್ತಕಗಳನ್ನು, ನೂರಾರು ಕವನಗಳನ್ನು, ಲೇಖನಗಳನ್ನು, ನುಡಿ ಚಿತ್ರಗಳನ್ನು, ವೀಡಿಯೊ ಕವನ, ಸಾಕ್ಷ್ಯ ಚಿತ್ರಗಳನ್ನು ರಚಿಸಿದ ಪ್ರೊ. ಭವಾನಿಶಂಕರ್ ಅವರು ಒಂದಿನಿತೂ ಹಮ್ಮು ತೋರದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿಯೇ ಬದುಕು ಸವೆಸಿದವರು.

ನಿಮ್ಮ ಜೀವನದಲ್ಲಿ ಬಹುಮುಖ್ಯ ವಿಷಯ ಯಾವುದು ಎಂದರೆ, ಅವರು ನೀಡುವ ಉತ್ತರ ”ವಿದ್ಯಾರ್ಥಿಗಳು”. ವಿದ್ಯಾರ್ಥಿಗಳನ್ನು ಸತ್ಪ್ರಜೆಗಳಾಗಿಸುವುದು ಅಧ್ಯಾಪಕರ ಜವಾಬ್ದಾರಿ ಎನ್ನುತ್ತಾರೆ ಅವರು.

ಪ್ರೊ. ಭವಾನಿ ಶಂಕರ್ ಅವರು ಲೇಖಕರಾಗಿದ್ದರೂ, ತಮ್ಮ ಪುಸ್ತಕದ ಕರಡು ಪ್ರತಿಯನ್ನು ಓದಲಿಕ್ಕೆ ಕೊಡುವುದು ವಿದ್ಯಾರ್ಥಿಗಳ ಬಳಿ. ವಿದ್ಯಾರ್ಥಿಗಳ ಅಭಿಪ್ರಾಯವೇ ಅವರಿಗೆ ಮುಖ್ಯ. ಅವರ ‘ಗೆಲ್ಲುವ ದಾರಿಗಳು’ ಎಂಬ ವ್ಯಕ್ತಿತ್ವ ವಿಕಸನದ ಸರಳ ಸೂತ್ರಗಳನ್ನು ವಿವರಿಸುವ ಪುಸ್ತಕವನ್ನು ಬಿಡುಗಡೆ ಮಾಡಿದ್ದು ಬಿಎ ಪದವಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಎಂದರೆ ನಂಬುತ್ತೀರಾ ? ನಂಬಲೇಬೇಕು. ಯಾಕೆಂದರೆ ಆ ಅದೃಷ್ಟವಂತ ನಾನೇ ! ದೊಡ್ಡ ದೊಡ್ಡ ವಿಧ್ವಾಂಸರ ಕೈಯಿಂದ ಪುಸ್ತಕ ಬಿಡುಗಡೆಗೊಳಿಸಿ ಪ್ರಚಾರಗಿಟ್ಟಿಸುವವರಿರುವಾಗ, ಪ್ರೊ. ಭವಾನಿ ಶಂಕರ್ ಅವರ ವಿದ್ಯಾರ್ಥಿ ಪ್ರೀತಿ ಮತ್ತು ಪ್ರಚಾರದಿಂದ ಅವರು ದೂರ ಉಳಿಯುತ್ತಿದ್ದ ರೀತಿ ಅನುಕರಣೀಯ.

bhavani shankar books

ಕಂಪ್ಯೂಟರ್ ಇಂಟರ್ ನೆಟ್ ನಲ್ಲಿ ಕನ್ನಡ ಕ್ರಾಂತಿ

ಕಂಪ್ಯೂಟರ್, ಇಂಟರ್ ನೆಟ್ ಪ್ರಧಾನ್ಯತೆ ಪಡೆಯುತ್ತಿದ್ದಂತೆ ಕನ್ನಡ ಪರ ಹೋರಾಟಗಾರರು ಕನ್ನಡ ಅಳಿಯಿತು, ಕನ್ನಡ ಉಳಿಸಿ ಎಂದು ಹೋರಾಟ ಆರಂಭಿಸಿದರು. ಆದರೆ ಪ್ರೊ. ಭವಾನಿ ಶಂಕರ್ ಅವರು ಕಂಪ್ಯೂಟರ್, ಇಂಟರ್ ಎಟ್ ಮೂಲಕ ಕನ್ನಡ ಬಳಸುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸಿದರು. ವೆಬ್ ಸೈಟು, ಬ್ಲಾಗುಗಳಲ್ಲಿ ಕನ್ನಡವನ್ನು ಜೀವಂತವಿರಿಸುವ ಪ್ರಯತ್ನ ಮಾಡಿದರು. ಕನ್ನಡ ಪುಸ್ತಕದಲ್ಲಿ ಕಂಪ್ಯೂಟರ್, ಇಂಟರ್ ನೆಟ್ ನಲ್ಲಿ ಕನ್ನಡ ಬಳಸುವುದು ಹೇಗೆ ಎನ್ನುವ ಬಗ್ಗೆ ಅಧ್ಯಾಯವನ್ನೇ ಅಳವಡಿಸಿದರು. ಕನ್ನಡ ಪಾಠದ ಅವಧಿಯಲ್ಲಿ ಇಂಟರ್ ನೆಟ್ ನಲ್ಲಿ ಕನ್ನಡ ಹುಲುಸಾಗಿರುವುದನ್ನು ತೋರಿಸಿದರು. ಯುನಿಕೋಡ್ ನಲ್ಲಿ ವಿದ್ಯಾರ್ಥಿಗಳು ತಮ್ಮ ಲೇಖನಗಳನ್ನು ಟೈಪ್ ಮಾಡಿ ಪ್ರಕಟಿಸಲು ಮಾರ್ಗದರ್ಶನ ನೀಡಿದರು. ನಾನೂ ಸೇರಿದಂತೆ ನನ್ನ ಸ್ನೇಹಿತರು ಕನ್ನಡದಲ್ಲಿ ಬ್ಲಾಗ್ ನ್ನು ಪ್ರಾರಂಭಿಸಿದೆವು.

ವಿಶಿಷ್ಟ ವ್ಯಕ್ತಿತ್ವ ವಿಕಸನ, ಸ್ಪೋಕನ್ ಇಂಗ್ಲಿಷ್ ತರಗತಿ

ಪ್ರೊ. ಭವಾನಿ ಶಂಕರ್ ಅವರ ವ್ಯಕ್ತಿತ್ವವೇ ವಿಶಿಷ್ಟ, ಆಕರ್ಷಣೀಯ. ಅವರು ಪ್ರತಿ ಶನಿವಾರ ನಡೆಸುತ್ತಿದ್ದ ವ್ಯಕ್ತಿತ್ವ ವಿಕಸನ ತರಗತಿಗಳಿಗೆ ವಿದ್ಯಾರ್ಥಿಗಳಾದ ನಾವೆಲ್ಲರೂ ಅಪಾರ ಆಸಕ್ತಿಯಿಂದ ಭಾಗವಹಿಸುತ್ತಿದ್ದೆವು. ಈ ತರಗತಿಯಲ್ಲಿ ಅವರು ಸಾಧಕರ ಕುರಿತ ವಿಡಿಯೊಗಳನ್ನು ತೋರಿಸುತ್ತಿದ್ದರು. ಜೀವನದಲ್ಲಿ ಗುರಿ, ಸಾಧಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಎಂದು ಅವರು ಹೇಳುತ್ತಿದ್ದರು. ಪ್ರಪಂಚವನ್ನು ನೋಡುವ ದೃಷ್ಟಿಕೋನ ಬದಲಾಯಿಸುವ ಮೊದಲು ನಮ್ಮನ್ನು ನಾವು ನೋಡಿಕೊಳ್ಳುವ ದೃಷ್ಟಿಕೋನ ಬದಲಾಗಬೇಕೆಂದು ಅವರು ಬಯಸಿದ್ದರು.

ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಅವರು, ವಿದ್ಯಾರ್ಥಿಗಳನ್ನು ಬಳಸಿಕೊಂಡು ಪರಿಸರ, ಜನರ ಸಮಸ್ಯೆಗಳು, ಸಾಧಕರ ಜೀವನದ ಬಗ್ಗೆ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸುತ್ತಿದ್ದರು. ಈ ಬಗ್ಗೆ ತನ್ನ ಮನೆಯಲ್ಲೇ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು ಎಂಬುದು ವಿಶೇಷ.

ಕನ್ನಡದ ವೀಡಿಯೊ ಕವನಗಳ ಆದ್ಯ ಪ್ರವರ್ತಕ

ಸಂಕ್ಷಿಪ್ತತೆ, ಕಲಾತ್ಮಕತೆ ಮತ್ತು ಭಾವ; ಕವನಗಳ ಮುಖ್ಯ ಲಕ್ಷಣ. ಈ ಲಕ್ಷಣಗಳಿದ್ದು ಅಕ್ಷರಗಳನ್ನು ಬಳಸದೆ ವೀಡಿಯೊಗಳಿಂದ ರಚಿತವಾದ ಕವನವೇ ವೀಡಿಯೊ ಕವನ. ಇಂಥ ಕವನಗಳನ್ನು ಕನ್ನಡದಲ್ಲಿ ಮೊದಲು ರಚಿಸಿದ್ದು ಪ್ರೊ. ಭವಾನಿ ಶಂಕರ್ ಅವರು. ಇದುವರೆಗೆ 60ಕ್ಕೂ ಹೆಚ್ಚು ವೀಡಿಯೊ ಕವನಗಳನ್ನು ರಚಿಸಿದ ಅವರ, ‘ಚಪ್ಪಲಿಗಳು’ ವಿಡಿಯೊ ಕವನದಲ್ಲಿ ಮನುಷ್ಯ ಪಾತ್ರಗಳಿದ್ದರೆ, ಶಿವ ಎಂಬ ಕೃತಿಯಲ್ಲಿ ಕೇವಲ ಸಮುದ್ರ ಇದೆ. ‘ನನ್ನ ಭಾರತ‘ ಎಂಬುದು ರಾಜಕಾರಣ ಮತ್ತು ಬಡತನದ ವಾಸ್ತವವನ್ನು ಅಸಂಗತ ತಂತ್ರದ ಮೂಲಕ ಹೇಳುವ ಕವನವಾಗಿದೆ.

ಗಾಂಧಿ ಟೋಪಿ ಧರಿಸಿ ಪಾಠ

ಜನಲೋಕಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರ ಆಂದೋಲನ ತಾರಕಕ್ಕೇರಿದ ಸಮಯ. ಎಲ್ಲೆಡೆ ಪ್ರತಿಭಟನೆ, ಮಸೂದೆ ಅಂಗೀಕಾರಕ್ಕೆ ಆಗ್ರಹ. ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಜನ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ. ಇದರ ನೇತೃತ್ವ ವಹಿಸಿದವರು ಪ್ರೊ. ಭವಾನಿ ಶಂಕರ್ ಅವರು. ಗಾಂಧೀಜಿಯವರು ತೋರಿಸಿದ ಅಹಿಂಸಾತ್ಮಕ ಪ್ರತಿಭಟನೆಯಿಂದ ಏನನ್ನೂ ಪಡೆಯಬಹುದು ಎಂಬ ಭರವಸೆಯನ್ನು ಬಿಸಿ ನೆತ್ತರಿನ ಯುವಕರಲ್ಲಿ ಮೂಡಿಸುವ ಉದ್ದೇಶದಿಂದ ಗಾಂಧಿ ಟೋಪಿ ಧರಿಸಿ ಭ್ರಷ್ಟಾಚಾರದ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸಿದರು. ಗಾಂಧಿ ಟೋಪಿ ಧರಿಸಿಯೇ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಮಸೂದೆ ಜಾರಿಯ ಅಗತ್ಯದ ಬಗ್ಗೆ ವಿವರಿಸಿದರು. ಅವರಿಂದ ಪ್ರಭಾವಿತರಾದ ನಮ್ಮ ತರಗತಿಯ 40 ವಿದ್ಯಾರ್ಥಿಗಳು, ಮಾರನೆಯ ದಿನ ಗಾಂಧಿ ಟೋಪಿ ಧರಿಸಿ ತರಗತಿಗೆ ಹಾಜರಾದರು. ಮಸೂದೆಯ ಮಹತ್ವದ ಬಗ್ಗೆ ಕಾಲೇಜಿನಲ್ಲಿ ಚರ್ಚೆಗಳನ್ನು ನಡೆಸಲಾಯಿತು. ಕರಪತ್ರಗಳನ್ನು ಹಂಚಲಾಯಿತು. ಇದಕ್ಕೆಲ್ಲ ಪ್ರೊ. ಭವಾನಿ ಶಂಕರ್ ಅವರೇ ಮುಂಚೂಣಿಯಲ್ಲಿದ್ದು ನಮ್ಮೆಲ್ಲರನ್ನು ಪ್ರೋತ್ಸಾಹಿಸಿದರು.

ಒಮ್ಮೆ ಅವರು ಜನಗಣತಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಅಧಿಕಾರಿಗಳು ಜನಗಣತಿಗೆ ಅಗತ್ಯವಾಗಿ ನೀಡಬೇಕಿದ್ದ ಸಾಮಗ್ರಿಗಳನ್ನು ಕೊಡಲು ವಿಳಂಬ ಮಾಡಿ ಸತಾಯಿಸುತ್ತಿದ್ದರು. ಆಗ ಅವರು ಎಲ್ಲರ ಸಮ್ಮುಖದಲ್ಲಿ ನೆಲದ ಮೇಲೆ ಕುಳಿತುಕೊಂಡು ಪ್ರತಿಭಟನೆ ನಡೆಸಿದರು. ಆರಂಭದಲ್ಲಿ ಒಬ್ಬಂಟಿಗರಾಗಿ ಪ್ರತಿಭಟಿಸಿದ ಅವರನ್ನು ಬಳಿಕ ಹಲವಾರು ಮಂದಿ ಸೇರಿಕೊಂಡರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉನ್ನತಾಧಿಕಾರಿ, ಅಗತ್ಯ ಸಾಮಗ್ರಿಗಳನ್ನು ಒದಗಿಸಿದರು. ಅನ್ಯಾಯದ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಅವರು ಸದಾ ಪ್ರೋತ್ಸಾಹಿಸುತ್ತಿದ್ದರು.

ಸಾಧನೆಯಲ್ಲಿ ಉತ್ತುಂಗಕ್ಕೇರಿದರೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಪ್ರೊ. ಭವಾನಿ ಶಂಕರ್ ಅವರು, 2015ರ ಜೂನ್ ತಿಂಗಳಾಂತ್ಯದಲ್ಲಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಸ್ಫೂರ್ತಿಯಾಗಿದ್ದವರು. ಸ್ವತಂತ್ರ ಚಿಂತನೆಗೆ, ನಿಷ್ಪಕ್ಷಪಾತ ಬರವಣಿಗೆಗೆ ಮಾರ್ಗದರ್ಶಕರಾಗಿದ್ದಾರೆ.

ashwin lawrence

– ಅಶ್ವಿನ್ ಲಾರೆನ್ಸ್

 

2 Comments

 1. ashwinbelle66@gmail.com'

  Ashwin Lawrence

  November 16, 2015 at 4:14 pm

  Thank You Diwana Sir for publishing my article on Bhavanishankar Sir

 2. ashwinbelle66@gmail.com'

  Ashwin Lawrence

  November 16, 2015 at 4:14 pm

  Thank You Diwana Sir for publishing my article on Bhavanishankar Sir.
  Ashwin Lawrence

Leave a Reply

Your email address will not be published. Required fields are marked *