Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಪಲೋಕಾಯುಕ್ತರ ಪದಚ್ಯುತಿಗೆ ಷಡ್ಯಂತ್ರ: ಕಾಂಗ್ರೆಸ್ ಸರಕಾರದ ‘ಭ್ರಷ್ಟರಿಗೆ ರಕ್ಷಣೆ, ದಕ್ಷರಿಗೆ ಶಿಕ್ಷೆ’ ನೀತಿ ಜಗಜ್ಜಾಹೀರು !

* ಶ್ರೀರಾಮ ದಿವಾಣ

# ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ, ತಮ್ಮದು ‘ಭ್ರಷ್ಟರನ್ನು ರಕ್ಷಿಸುವ ಮತ್ತು ದಕ್ಷರನ್ನು ಶಿಕ್ಷಿಸುವ’ ಸರಕಾರ ಎಂಬುದನ್ನು ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದ ರೀತಿಯಲ್ಲಿ ಮತ್ತೆ ಜಗಜ್ಜಾಹೀರುಪಡಿಸಿದೆ. ತನ್ನನ್ನು ತಾನೇ ಹೀಗೆ ಬೆತ್ತಲೆ ಮಾಡಿಕೊಳ್ಳಲು ಪರಮಭ್ರಷ್ಟ ಕಾಂಗ್ರೆಸ್ ಸರಕಾರ ಆಯ್ದುಕೊಂಡಿದ್ದು ಕರ್ನಾಟಕ ಘನತೆವೇತ್ತ ಉಪಲೋಕಾಯುಕ್ತರಾದ ಸುಭಾಷ್ ಬಿ.ಅಡಿ ಅವರ ಪದಚ್ಯುತಿ ಪ್ರಕ್ರಿಯೆಗೆ ರಹಸ್ಯವಾಗಿ ಚಾಲನೆ ನೀಡುವ ಮುಖಾಂತರ !

ಭ್ರಷ್ಠಾತೀಭ್ರಷ್ಟ ಸರಕಾರದ, ಆಡಳಿತಶಾಹಿಯ, ಬಂಡವಾಳಶಾಹಿಗಳ, ಉದ್ಯಮಿಗಳ, ಗುತ್ತಿಗೆದಾರರ ರಕ್ಷಕನಾಗುವ ಬದಲು, ಇವರಿಗೆಲ್ಲ ಸಿಂಹ ಸ್ವಪ್ನವಾಗುವಂತೆ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಿದ್ದ, ತನಿಖಾ ವರದಿಯನ್ನು ಸಿದ್ದಪಡಿಸುತ್ತಿದ್ದ ನ್ಯಾ.ಸುಭಾಷ್ ಬಿ.ಅಡಿ ಅವರನ್ನು ಕ್ಷುಲ್ಲಕ ಕಾರಣಕ್ಕೆ ಪದಚ್ಯುತಿಗೊಳಿಸಲು ಕಾಂಗ್ರೆಸ್ ಸರಕಾರ ಮುಂದಾಗಿರುವುದು ತೀವ್ರವಾಗಿ ಖಂಡನಾರ್ಹವಾದುದು. ಭ್ರಷ್ಟಚಾರವನ್ನು ವಿರೋಧಿಸುವ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಪಕ್ಷ ಬೇಧ ಮರೆತು ಸುಭಾಷ್ ಬಿ.ಅಡಿಯವರನ್ನು ಈ ಹೊತ್ತಿನಲ್ಲಿ ಬೆಂಬಲಿಸಬೇಕಾದುದು ಕಾಲದ ತುರ್ತು.

ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರಂತೆ, ಉಪಲೋಕಾಯುಕ್ತರಾದ ಸುಭಾಷ್ ಬಿ.ಅಡಿಯವರು ಪರಮಭ್ರಷ್ಟ ರಾಜ್ಯ ಸರಕಾರವನ್ನು ಪ್ರತಿನಿಧಿಸುವ ಯಾರೊಬ್ಬರನ್ನೂ ರಕ್ಷಿಸುವ ಹೇಸಿಗೆ ಕೆಲಸವನ್ನು ಇದುವೆರೆಗೂ ಮಾಡದಿರುವುದೇ ಅವರನ್ನು ಸರಕಾರ ಪದಚ್ಯುತಿ ಮಾಡಲು ಬೇಕಾದ ಹುನ್ನಾರ ನಡೆಸಲು ಕಾರಣವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ, ಸಚಿವರುಗಳ, ಉನ್ನತ ಅಧಿಕಾರಿಗಳ ಮೇಲಿನ ಗಂಭೀರ ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿಹಾಕಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಸಿದ್ಧರಾಮಯ್ಯ ಗೆದ್ದರಾಮಯ್ಯನಾಗಿ ಅಡಿಯವರ ಗುಣಗಾನ ಮಾಡಲು ಮುಂದಾಗುತ್ತಿದ್ದರು. ಆದರೆ, ಹೀಗಾಗದಿರುವುದು ನಿಜಕ್ಕೂ ರಾಜ್ಯ ಪಾಲಿಗೆ ಸಮಾಧಾನದ ವಿಷಯವಾಗಿದೆ.

ರಾಜ್ಯದ ಭ್ರಷ್ಟಾತೀಭ್ರಷ್ಟ ಕಾಂಗ್ರೆಸ್ ಸರಕಾರದ ಹಿತಚಿಂತಕನಂತೆ ನಡೆದುಕೊಂಡು, ಕೈ ಕೊಳೆ ಮಾಡಿಸಿಕೊಂಡು ಸಿಕ್ಕಿಬಿದ್ದ ವೈ.ಭಾಸ್ಕರ ರಾವ್ ಅವರು ಪದಚ್ಯುತಿಯಾಗುವ ಹಂತದಲ್ಲಿ ಈ ಬೆಳವಣಿಗೆಯನ್ನು ಸಹಿಸಲಾಗದೆ ರಾಜ್ಯ ಸರಕಾರ ಪ್ರಾಮಾಣಿಕ ಮತ್ತು ದಕ್ಷರಾದ ಉಪಲೋಕಾಯುಕ್ತರ ವಿರುದ್ಧ ಷಡ್ಯಂತ್ರ ಹೆಣೆದಿರುವುದು ಅಕ್ಷಮ್ಯವಾಗಿದ್ದು, ಇದಕ್ಕೆ ರಾಜ್ಯದ ಪ್ರಜ್ಞಾವಂತ ಜನತೆ ತಕ್ಕ ಪಾಠ ಕಲಿಸುವುದಂತೂ ಖಚಿತ. ಅಷ್ಟರವರೆಗೆ ಈ ಸರಕಾರವನ್ನು ಸಹಿಸಿಕೊಳ್ಳಬೇಕಲ್ಲ ಎನ್ನುವುದು ಮಾತ್ರ ಪ್ರಸ್ತುತದ ಚಿಂತೆಯಾಗಿದೆ.

y.bhaskar rao karnataka lokayukta

* ವೈ.ಭಾಸ್ಕರ ರಾವ್

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪರಮಾಪ್ತನಾಗಿ, ಪಾರ್ಟಿ ಫಂಡಿಗೆ ಬಹುಕೋಟಿಗಳ ಲೆಕ್ಕದಲ್ಲಿ ಹಣ ಪಾವತಿಸುತ್ತಾ, ಸಿದ್ಧರಾಮಯ್ಯನವರು ಸಿಎಂ ಕುರ್ಚಿಯಿಂದ ಕೆಳಗಿಳಿಯದಂತೆ ಕಾಪಾಡಿಕೊಂಡು ಬಂದಿರುವ ರಾಜ್ಯದ ಪರಮಭ್ರಷ್ಟ ಮತ್ತು ಪರಮದುಷ್ಟ ಗುತ್ತಿಗೆದಾರನೊಬ್ಬನ ವಿರುದ್ಧ ಇದೇ ಉಪಲೋಕಾಯುಕ್ತರು ತನಿಖಾ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದ್ದು, ಈ ಭ್ರಷ್ಟ ಗುತ್ತಿಗೆದಾರನ ರಕ್ಷಣೆ ಮಾಡುವುದರ ಜೊತೆಗೆ ಸ್ವತಹಾ ತನ್ನ ಹಾಗೂ ತನ್ನವರ ರಕ್ಷಣೆಗಾಗಿ ಮುಖ್ಯಂತ್ರಿಯವರೇ ಸುಭಾಷ್ ಬಿ.ಅಡಿಯವರ ಪದಚ್ಯುತಿಗೆ ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪವೂ ಸಾರ್ವಜನಿಕ ವಲಯದಿಂದ ಈ ಮಧ್ಯೆ ಕೇಳಿಬಂದಿದೆ.

ಗೌರವಾನ್ವಿತ ಉಪಲೋಕಾಯುಕ್ತರಾದ ಸುಭಾಷ್ ಬಿ.ಅಡಿಯವರ ಪದಚ್ಯುತಿಗೆ ಕಾಂಗ್ರೆಸ್ ಸರಕಾರ ತನ್ನ ಪಕ್ಷದ ಶಾಸಕರ ಮುಖಾಂತರ ರಹಸ್ಯವಾಗಿ ಸಹಿ ಸಂಗ್ರಹಕ್ಕಿಳಿದ ವಿಷಯ ಬಹಿರಂಗವಾಗುತ್ತಲೇ ರಾಜ್ಯದಲ್ಲಿನ ಭ್ರಷ್ಟಾಚಾರ ವಿರೋಧಿ ಜನರು ಹಾಗೂ ಸಂಘಟನೆಗಳು ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಸುಭಾಷ್ ಬಿ.ಅಡಿಯವರಿಗೆ ನೈತಿಕ ಬೆಂಬಲ ನೀಡಿರುವುದು ಒಂದು ಒಳ್ಳೆಯ, ಸಕಾರಾತ್ಮಕ ಬೆಳವಣಿಗೆಯಾಗಿದೆ. ಈ ಬೆಳಕಿಂಡಿಯಲ್ಲಿ ರಾಜ್ಯದ ಸಮಸ್ತ ನಾಗರೀಕ ಸಮೂಹ ಯಾವುದೇ ಮುಲಾಜಿಲ್ಲದೆ ರಾಜ್ಯದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ನೀತಿಗೆದುರಾಗಿ ಬಲವಾದ, ದಿಟ್ಟತನದ ಧ್ವನಿಯನ್ನು ಎತ್ತಬೇಕಾಗಿದೆ.
siddaramaiah cm of karnataka

* ಸಿದ್ಧರಾಮಯ್ಯ

Leave a Reply

Your email address will not be published. Required fields are marked *