Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ತಪ್ಪುಗಳ ಮಹಾಪೂರ: ಅನಿಶ್ಚಿತತೆಯಲ್ಲಿ ಹೊಸ ರೇಶನ್ ಕಾರ್ಡ್ ವಿತರಣೆ !

ಕಾಸರಗೋಡು: ವೈಜ್ಞಾನಿಕ ತಂತ್ರಜ್ಞಾನಗಳು ಅದೆಷ್ಟು ಅಭಿವೃದ್ದಿ ಹೊಂದಿದರೂ ಅದನ್ನು ಬಳಸುವುದರಲ್ಲಿ ಮತ್ತು ಸಮರ್ಪಕವಾಗಿ ಜ್ಯಾರಿಗೊಳಿಸುವಲ್ಲಿ ಸರಕಾರಿ ಯಂತ್ರಗಳು ಬಾರಿ ಬಾರಿಗೂ ಸೋಲುವುದು ಸಾಬೀತಾಗುತ್ತಿದ್ದು, ಇದೀಗ ಅಪೂರ್ಣ, ಅಸಮರ್ಪಕ ಅರ್ಜಿಗಳು, ಡಾಟಾ ಎಂಟ್ರಿ ಸಮಸ್ಯೆ, ತಪ್ಪು ಮಾಹಿತಿಗಳ ಮಹಾಪೂರದಿಂದಾಗಿ ರೇಶನ್ ಕಾರ್ಡ್ ವಿತರಣೆ ಅನಿಶ್ಚಿತತೆಯಲ್ಲಿ ತೊಳಲಾಡುತ್ತಿದೆ. ಕರಡು ರೇಶನ್ ಕಾರ್ಡ್ ಗಳಲ್ಲಿ ತಪ್ಪುಗಳ ಮಹಾಪೂರವೇ ಕಂಡು ಬಂದಿದ್ದು, ಇದನ್ನು ಸರಿಮಾಡಲು ಇನ್ನಷ್ಟು ಕಾಲಾವಕಾಶ ಅಗತ್ಯವಿದ್ದು, ಇನ್ನೂ ಆರು ತಿಂಗಳು ವಿಳಂಬವಾಗಬಹುದೆಂದು ನಿರೀಕ್ಷಿಸಲಾಗಿದೆ.

ರಾಜ್ಯದಲ್ಲಿ ಹೊಸ ರೇಶನ್ ಕಾರ್ಡ್ ಲಭಿಸಲು ಇನ್ನೂ ಆರು ತಿಂಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ರೇಶನ್ ಕಾರ್ಡ್ ಗಳ ನವೀಕರಣ ಪ್ರಕ್ರಿಯೆಗೆ ಎರಡು ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಆದರೆ ಇನ್ನೂ ಈ ಪ್ರಕ್ರಿಯೆ ಪೂರ್ತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ರೇಶನ್ ಕಾರ್ಡ್ ವಿತರಣೆ ವಿಳಂಬವಾಗುತ್ತಲೇ ಸಾಗಿದೆ. ರೇಶನ್ ಕಾರ್ಡ್ ತಯಾರಿಸುವ ಕೆಲಸಗಳನ್ನು ಅನುಭವರಹಿತ ಖಾಸಗಿ ಸಂಸ್ಥೆಗಳಿಗೆ ವಹಿಸಿ ಕೊಟ್ಟಿದ್ದು, ಅದು ತಯಾರಿಸಿದ ರೇಶನ್ ಕಾರ್ಡ್ ಗಳಲ್ಲಿ ಅನೇಕ ತಪ್ಪು ಮಾಹಿತಿಗಳು ಕಂಡು ಬಂದಿದೆ. ಈ ಬಗ್ಗೆ ವ್ಯಾಪಕ ದೂರುಗಳು ಲಭಿಸಿದೆ. ಈ ಹಿನ್ನೆಲೆಯಲ್ಲಿ ತಪ್ಪುಗಳನ್ನು ತಿದ್ದಿ ಸರಿಪಡಿಸಲು ನಾಗರಿಕ ಪೂರೈಕೆ ಇಲಾಖೆಗೆ ಹೆಚ್ಚು ಕಾಲಾವಕಾಶ ನೀಡಲಾಗಿತ್ತಾದರೂ ಶೇ.50 ರಷ್ಟು ರೇಶನ್ ಕಾರ್ಡ್ ಗಳ ತಪ್ಪು ತಿದ್ದುವಿಕೆ ಇನ್ನೂ ಪೂರ್ತಿಗೊಂಡಿಲ್ಲ. ಈ ಕಾರಣದಿಂದ ನೂತನ ರೇಶನ್ ಕಾರ್ಡ್ ಗ್ರಾಹಕರ ಕೈಗೆ ಸೇರಲು ಇನ್ನಷ್ಟು ವಿಳಂಬವಾಗಲಿದೆ.

ತಪ್ಪು ತಿದ್ದಲು ನೂತನ ರೇಶನ್ ಕಾರ್ಡ್ ಗಳ ಮಾದರಿ ಈಗಾಗಲೇ ರೇಶನ್ ಅಂಗಡಿಗಳಿಗೆ ತಲುಪಿದ್ದು, ತಪ್ಪು ತಿದ್ದಿ ನೀಡಲು ನ.29 ಕೊನೇ ದಿನವಾಗಿತ್ತು. ಆದರೆ ತಪ್ಪು ತಿದ್ದಿ ಬಹುಸಂಖ್ಯೆಯ ಗ್ರಾಹಕರು ಇನ್ನೂ ನೀಡಿಲ್ಲವೆಂದು ಸ್ಥಳೀಯ ಅನೇಕ ರೇಶನ್ ಮಾರಾಟಗಾರರು ತಿಳಿಸಿದ್ದಾರೆ.
ಪ್ರಸ್ತುತ ಇರುವ ರೇಶನ್ ಕಾರ್ಡ್ ಗಳ ಕಾಲಾವಧಿ 2014 ಜುಲೈ 14 ರಂದು ಕೊನೆಗೊಂಡಿತ್ತು. ಈ ಕಾಲಾವಧಿಯೊಳಗೆ ಹೊಸ ರೇಶನ್ ಕಾರ್ಡ್ ಗಳ ವಿತರಣೆಯಾಗಬೇಕಿತ್ತು. ಆದರೆ ಈ ವರೆಗೆ ತಪ್ಪು ತಿದ್ದುವ ಕೆಲಸವೇ ಪೂರ್ತಿಯಾಗಿಲ್ಲ. ಈ ಕಾರಣದಿಂದ ರೇಶನ್ ಕಾರ್ಡ್ ಗಳಿಗಾಗಿ ನಾಗರೀಕರು ಇನ್ನೂ ಕಾಯಬೇಕು.

ಗೊಂದಲ: ಮಾದರಿ ರೇಶನ್ ಕಾರ್ಡ್ ಗಳಲ್ಲಿ ಸಾಕಷ್ಟು ತಪ್ಪುಗಳ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಗೊಂದಲದಿಂದಾಗಿ ನೂತನ ರೇಶನ್ ಕಾರ್ಡ್ ವಿತರಣೆ ಇನ್ನೂ ಅನಿಶ್ಚಿತತೆಯಲ್ಲಿದೆ. ಜುಲೈ ತಿಂಗಳ 1 ರಂದು ನೂತನ ರೇಶನ್ ಕಾರ್ಡ್ ಗಳನ್ನು ವಿತರಿಸಲಾಗುವುದೆಂದು ನಾಗರಿಕ ಪೂರೈಕೆ ಇಲಾಖೆ ಘೋಷಿಸಿತ್ತು. ಆದರೆ ರೇಶನ್ ಕಾರ್ಡ್ ತಯಾರಿಯಲ್ಲಿ ಎದುರಾಗಿರುವ ತಾಂತ್ರಿಕ ಲೋಪದೋಷಗಳಿಂದಾಗಿ ರೇಶನ್ ಕಾರ್ಡ್ ತಯಾರಿ ಪ್ರಕ್ರಿಯೆ ನಿಧಾನಗೊಂಡಿದ್ದು, ಸೆಪ್ಟಂಬರ್ ತಿಂಗಳಾರಂಭದಲ್ಲಿ ವಿತರಿಸಲು ಸಾಧ್ಯವಾಗಬಹುದೆಂಬ ನಿರೀಕ್ಷೆಯಲ್ಲಿ ಗ್ರಾಹಕರಿದ್ದರು. ಆದರೆ ಇನ್ನೂ ಗ್ರಾಹಕರ ನಿರೀಕ್ಷೆ ಈಡೇರಿಲ್ಲ.

ಆಹಾರ ಭದ್ರತೆ ಕಾಯ್ದೆಯಂತೆ ಸಂಪೂರ್ಣ ವಿವರಗಳನ್ನೊಳಗೊಂಡು ತಯಾರಿಸುವ ರೇಶನ್ ಕಾರ್ಡ್ ಗಳ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದರೂ, ತಾಂತ್ರಿಕ ಕಾರಣಗಳಿಂದ ಅಡ್ಡಿಯುಂಟಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಅಂತಿಮ ಹಂತದಲ್ಲಿ ಕಾರ್ಡ್ ಗಳ ಸ್ವರೂಪ ತೀರ್ಮಾನಿಸಬೇಕು. ನಿರೀಕ್ಷಿಗಿಂತಲೂ ನಿಧಾನಗತಿಯಲ್ಲಿ ನವೀಕರಣ ಕೆಲಸಗಳು ನಡೆಯುತ್ತಿರುವುದರಿಂದ ಕಾರ್ಡ್ ವಿತರಣೆಗೆ ವಿಳಂಬವಾಗುತ್ತಿದೆ.

ರಾಜ್ಯದಲ್ಲಿ 14,60,519 ಬಿಪಿಎಲ್ ಕಾರ್ಡ್ ಗಳೂ, 5,94,897 ಎ.ಎ.ವೈ. ಕಾರ್ಡ್ ಗಳ ಸಹಿತ 20,55,416 ಕಾರ್ಡುಗಳಿವೆ. ನೂತನ ರೇಶನ್ ಕಾರ್ಡ್ ಗಳಲ್ಲಿ ಬಿಪಿಎಲ್, ಎಎವೈ ಎಂಬ ವಿಭಾಗಗಳಿರುವುದಿಲ್ಲ. ಜೀವನ ಮಟ್ಟ ಅನುಸರಿಸಿ ಆದ್ಯತೆ, ಜನರಲ್ ಎಂಬ ವಿಭಾಗವನ್ನಾಗಿ ಮಾಡಲು ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆದಿದೆ.

ಕಳೆದ ಜುಲೈ 15 ರೊಳಗೆ ಡಾಟಾ ಎಂಟ್ರಿ ಪೂರ್ತಿಗೊಳಿಸಬೇಕೆಂದು ನಿರ್ದೇಶಿಸಲಾಗಿದ್ದರೂ, ಈ ಕಾಲಾವಧಿಯಲ್ಲಿ ಪ್ರಕ್ರಿಯೆ ಮುಗಿದಿರಲಿಲ್ಲ. ಉತ್ತರ ಕೇರಳದ ಜಿಲ್ಲೆಗಳಲ್ಲಂತೂ ಡಾಟಾ ಎಂಟ್ರಿ ಮತ್ತು ಮಾಹಿತಿ ಸಂಗ್ರಹ ಬಹಳಷ್ಟು ನಿಧಾನಗತಿಯಲ್ಲಿ ಸಾಗಿತ್ತು. ಜುಲೈ 31 ರೊಳಗೆ ಕಾರ್ಡ್ ನ ವಿವರಗಳನ್ನು ಸೋಶ್ಯಲ್ ಆಡಿಟ್ ಗೆ ಕಳುಹಿಸಬೇಕಾಗಿತ್ತು. ಅಲ್ಲೂ ವಿಳಂಬವಾಯಿತು.

ಆ ಬಳಿಕ ಕಾರ್ಡ್ ಗಳ ಆದ್ಯತೆ ತೀರ್ಮಾನಿಸಲು ವಿವರಗಳನ್ನು ಆಯಾಯ ಸ್ಥಳೀಯಾಡಳಿತ ಸಂಸ್ಥೆಗಳು ನೀಡಬೇಕು. ಅಧ್ಯಕ್ಷರು, ಕಾರ್ಯದರ್ಶಿಗಳು, ಗ್ರಾಮಾಧಿಕಾರಿಗಳು, ಸಂಬಂಧಪಟ್ಟ ರೇಶನಿಂಗ್ ಇನ್ಸ್ ಪೆಕ್ಟರ್ ಎಂಬವರನ್ನೊಳಗೊಂಡ ಸಮಿತಿ ಮಾಹಿತಿಗಳ ಆಧಾರದಲ್ಲಿ ಆದ್ಯತೆ ಯಾದಿಯನ್ನು ತೀರ್ಮಾನಿಸಬೇಕು. ಪ್ರಥಮ ಆದ್ಯತೆ ಮತ್ತು ಜನರಲ್ ಎಂಬ ವಿಭಾಗದ ಮಾಹಿತಿ ಲಭಿಸಿದರೆ ಮಾತ್ರವೇ ನಾಗರಿಕ ಕಚೇರಿಯಿಂದ ರೇಶನ್ ಕಾರ್ಡ್ ಗಳು ಲಭಿಸಲು ಸಾಧ್ಯವಾಗುವುದು. ಸಿ.ಡಿಟ್, ಸಪ್ಲೈ ಇಲಾಖೆ, ಕುಟುಂಬಶ್ರೀ ಎಂಬೀ ಸರಕಾರಿ ಏಜೆನ್ಸಿಗಳಿಗೆ ಡಾಟಾ ಎಂಟ್ರಿ ಹೊಣೆಯನ್ನು ವಹಿಸಿಕೊಡಲಾಗಿತ್ತು. ನಾಗರಿಕ ವಿತರಣೆ ಇಲಾಖೆ ತಯಾರಿಸಿದ ಸಾಫ್ಟ್ ವೇರ್ ನೂತನ ಕಾರ್ಡ್ ತಯಾರಿಗೆ ಬಳಸಲಾಗುತ್ತಿದೆ.

ಕಾಸರಗೋಡು ಜಿಲ್ಲೆಯಲ್ಲೂ ಹೊಸ ರೇಶನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆಹಾರ ಮತ್ತು ನಾಗರಿಕಾ ಪೂರೈಕೆ ಇಲಾಖೆಯು ಆರಂಭದಲ್ಲಿ ವಹಿಸಿದ್ದ ನಿರ್ಲಕ್ಷ್ಯತನದಿಂದಾಗಿ ಈ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಇದೀಗ ಎಚ್ಚೆತ್ತುಕೊಂಡಿರುವ ಇಲಾಖೆಯು ಅಸಮರ್ಪಕ ಹಾಗೂ ಅಪೂರ್ಣವಾಗಿ ಭರ್ತಿಗೊಂಡಿರುವ ಅರ್ಜಿ ನಮೂನೆಗಳನ್ನು ಆಯಾ ರೇಶನ್ ಅಂಗಡಿಗಳಿಗೆ ವಾಪಸು ಕಳುಹಿಸಿ, ತಪ್ಪು ತಿದ್ದಲು ಗ್ರಾಹಕರಿಗೆ ನೀಡುತ್ತಿದೆ.

ಮಾತ್ರವಲ್ಲದೆ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡಿರುವ ಅರ್ಜಿಗಳನ್ನು ಮಾತ್ರ ಸ್ವೀಕರಿಸುವಂತೆ ಕೇರಳ ಸರಕಾರವು ನಾಗರಿಕಾ ಪೂರೈಕೆ ಇಲಾಖೆಗೆ ಸೂಚಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ 2.80 ಲಕ್ಷದಷ್ಟು ರೇಶನ್ ಕಾರ್ಡುಗಳಿವೆ. ಆದರೆ ಇದರಲ್ಲಿ ಇದುವರೆಗೆ ಡಾಟಾ ಎಂಟ್ರಿ ಪೂರ್ತಿಗೊಂಡು ಇಲಾಖೆ ಕೈಸೇರಿದ್ದರೂ ತಪ್ಪು ಮಾಹಿತಿಗಳಿಂದಾಗಿ ಇನ್ನೊಂದು ಸಮಸ್ಯೆಗೆ ಕಾರಣವಾಗಿದೆ.

ಸಾಫ್ಟ್ ವೇರ್ ಸಮಸ್ಯೆ: ನೂತನ ರೇಶನಿಂಗ್ ವ್ಯವಸ್ಥೆಗಾಗಿ ಅಳವಡಿಸಿದ ಸಾಫ್ಟ್ ವೇರ್ ನಲ್ಲಿ ಉಂಟಾಗಿರುವ ಲೋಪದೋಷ ಹಾಗೂ ಭರ್ತಿಗೊಳಿಸಲಾದ ಅರ್ಜಿಯಲ್ಲಿನ ಮಾಹಿತಿಗಳು ಅಸಮರ್ಪಕತೆಯಿಂದಾಗಿ ಆರಂಭಿಕ ಹಂತದಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು.
ಅಸಮರ್ಪಕ ಮತ್ತು ಅಪೂರ್ಣ ಅರ್ಜಿಗಳನ್ನು ಸ್ವೀಕರಿಸುವುದಾಗಿ ಹೊಸ ರೇಶನ್ ಕಾರ್ಡ್ ಯೋಜನೆಯನ್ನು ಘೋಷಿಸಿದ ಸಂದರ್ಭ ಆಹಾರ ಹಾಗೂ ನಾಗರಿಕಾ ಪೂರೈಕೆ ಇಲಾಖೆ ಸಚಿವ ಅನೂಪ್ ಜೇಕಬ್ ಅವರು ತಿಳಿಸಿದ್ದರೂ, ಇಲಾಖಾ ಮಟ್ಟದ ವ್ಯವಸ್ಥೆಗಳಲ್ಲಿ ಅದು ಸಾಧ್ಯವಾಗುತ್ತಿಲ್ಲ. ಜತೆಗೆ ಸಾಫ್ಟ್ ವೇರ್ ನಲ್ಲಿ ಸಂಪೂರ್ಣ ವಿವರಗಳನ್ನು ಒದಗಿಸಿದಲ್ಲಿ ಮಾತ್ರವೇ ರೇಶನ್ ಕಾರ್ಡ್ ನ ಡಾಟಾ ಎಂಟ್ರಿ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ಕೊನೆಗೊಳ್ಳಬಹುದಾಗಿದೆ.

ಎರಡು ಸಂಸ್ಥೆಗಳಿಗೆ ಡಾಟಾ ಎಂಟ್ರಿ ಜವಾಬ್ದಾರಿ: ಕಾಞಂಗಾಡಿನ ಅಕ್ಷಯ ಕೇಂದ್ರ ಹಾಗೂ ಕಾಸರಗೋಡಿನ ಸಿ.ಡಿಟ್ ಸಂಸ್ಥೆಯು ಜಿಲ್ಲೆಯ ರೇಶನ್ ಕಾರ್ಡ್ ಗಳ ಡಾಟಾ ಎಂಟ್ರಿ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದವು. ನಾಗರಿಕಾ ಪೂರೈಕೆ ಇಲಾಖೆಯ ಅಧೀನದಲ್ಲಿ ಹೊಸದುರ್ಗ ತಾಲೂಕಿನಲ್ಲಿ 1,42,000ರಷ್ಟು ರೇಶನ್ ಕಾರ್ಡುಗಳಿದ್ದರೆ, ಕಾಸರಗೋಡು ತಾಲೂಕಿನಲ್ಲಿ 1,38,000 ರೇಶನ್ ಕಾರ್ಡುಗಳಿವೆ. ಮೇ 31ರೊಳಗಾಗಿ ಡಾಟಾ ಎಂಟ್ರಿ ಕಾರ್ಯವನ್ನು ಮುಕ್ತಾಯಗೊಳಿಸಬೇಕೆಂದು ರಾಜ್ಯ ಸರಕಾರವು ಆದೇಶ ಕೊಟ್ಟಿತ್ತು. ಆದರೆ ಡಾಟಾ ಎಂಟ್ರಿ ಪ್ರಕ್ರಿಯೆ ಈ ಕಾಲಾವಧಿಯಲ್ಲಿ ಪೂರ್ತಿಯಾಗಿರಲಿಲ್ಲ.

ಸಿಬ್ಬಂದಿಗಳಿಗೆ ಸಮರ್ಪಕ ಮಾಹಿತಿ ಇಲ್ಲ: ರೇಶನ್ ಕಾರ್ಡುಗಳ ಡಾಟಾ ಎಂಟ್ರಿ ವ್ಯವಸ್ಥೆಯ ಅಂಗವಾಗಿ ಸಂಬಂಧಪಟ್ಟ ಸಿಬ್ಬಂದಿಗಳಿಗೆ ಸರಿಯಾದ ವಿಧಾನದ ತರಬೇತಿ ಮತ್ತು ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಇಲಾಖೆಯ ನೇತೃತ್ವದಲ್ಲಿ ಸಿಬ್ಬಂದಿಗಳನ್ನು ಈ ಕಾರ್ಯಕ್ಕಾಗಿ ನೇಮಕ ಮಾಡಲಾಗಿದ್ದರೂ, ಯಾವ ರೀತಿಯಲ್ಲಿ ಕೆಲಸ ಮಾಡಿ ಮುಗಿಸಬೇಕು ಎಂಬ ವಿಷಯದಲ್ಲಿ ಗೊಂದಲ ಮುಂದುವರಿದಿದೆ.

ಮತ್ತೊಂದೆಡೆ ಡಾಟಾ ಎಂಟ್ರಿ ನಿರತ ಸಿಬ್ಬಂದಿಗಳಿಗೆ ಕನಿಷ್ಠ ಮೊತ್ತವನ್ನು ವೇತನವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಡಾಟಾ ಎಂಟ್ರಿ ಕಾರ್ಯಕ್ಕೆ ಅವರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇನ್ನೊಂದೆಡೆ ಸಾಫ್ಟ್ ವೇರ್ ತಕರಾರು ಮತ್ತು ಅರ್ಜಿಗಳ ಅಪೂರ್ಣ ಹಾಗೂ ಅಸಮರ್ಪಕ ಮಾಹಿತಿಯಿಂದಾಗಿ ಕಾರ್ಡ್ ತಯಾರಿ ಪ್ರಕ್ರಿಯೆ ವಿಳಂಬಗೊಂಡಿದೆ.

ಭಾಷೆಗಳ ಅವಾಂತರ: ಇದೀಗ ನೀಡಲಾಗಿರುವ ಮಾದರಿ ರೇಶನ್ ಕಾರ್ಡ್ ತಪ್ಪು ತಿದ್ದುವ ಹಲವು ಪ್ರತಿಗಳಲ್ಲಿ ತಮಿಳು ಭಾಷೆಯ ಪದಗಳೂ ಸೇರಿಕೊಂಡಿರುವುದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ. ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಮಲೆಯಾಳದ ಜೊತೆಗೆ ಭರ್ತಿಗೊಳಿಸಬೇಕಾದ ಮಾಹಿತಿಗಳು ಕನ್ನಡದಲ್ಲೂ ಲಭ್ಯವಿರುತ್ತದೆ. ಆದರೆ ಕಾಸರಗೋಡಿನ ಬಹುತೇಕ ಗ್ರಾಹಕರಿಗೆ ನೀಡಲಾದ ಪ್ರತಿಯಲ್ಲಿ ಮಲೆಯಾಳ ಹಾಗೂ ತಮಿಳು ಭಾಷೆಗಳು ಮುದ್ರಿತವಾಗಿರುವುದು ರೇಶನ್ ಕಾರ್ಡ್ ಸಕಾಲದಲ್ಲಿ ಕೈಸೇರದೆಂಬ ಗುಹಾನಿಗೆ ಪುಷ್ಠಿಯೊದಗಿಸಿದೆ.

Leave a Reply

Your email address will not be published. Required fields are marked *