Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸ್ವರ ಮಾಧುರ್ಯದ ‘ಗಾನಯಾನ’

# ಸಂಗೀತಕ್ಕೆ ಮನ ಸೋಲದವರೇ ಇಲ್ಲ. ಅದರಲ್ಲೂ, ಹಳೆಯ ಚಿತ್ರಗೀತೆಗಳು ಎಂತಹ ಅರಸಿಕರನ್ನೂ ನಾದಲೋಕಕ್ಕೆ ಕೊಂಡೊಯ್ಯುತ್ತವೆ. ಹಳೆಯ ಮತ್ತು ಹೊಸ ಕನ್ನಡ ಚಿತ್ರಗೀತೆಗಳ ಮೂಲಕ ಕನ್ನಡ ನಾಡಿನ ಹಿರಿಮೆ-ಗರಿಮೆ ಹಾಗೂ ಸಂಸ್ಕೃತಿಯನ್ನು ಸಾರುವ ಸ್ವರ ಮಧುರ ‘ಗಾನ-ಯಾನ’ ಸುಮಧುರ ಕನ್ನಡ ಚಿತ್ರಗೀತೆಗಳ ಗಾನಯಾನ ಕಾರ್ಯಕ್ರಮ ಇತ್ತೀಚೆಗೆ ಕಟಪಾಡಿಯ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ತಂಡದ ಶ್ರೀಮತಿ ಲತಾ ಹಂಸಲೇಖ, ಉದಯೋನ್ಮುಖ ಗಾಯಕರಾದ ಮಂಜುನಾಥ, ವಿನೋದ್, ಕುಮಾರಿ ಅಲಕ ಸುಬ್ರಹ್ಮಣ್ಯ, ವೇದಶ್ರೀ, ಸಂತೋಷ್ ಇವರು 1930 ರಿಂದ 2000 ಇಸವಿಯ ವರೆಗಿನ ಕನ್ನಡದ ಸುಮಾರು 40 ಮಧುರ ಗೀತೆಗಳಿಗೆ ಸ್ವರ ಮಾಧುರ್ಯ ತುಂಬಿ ನೆರದಿದ್ದವರ ಮನರಂಜಿಸಿದರು.

gaanayaana-2

ಬೇಡರಕಣ್ಣಪ್ಪ ಚಿತ್ರದ ‘ಶಿವಪ್ಪ ಕಾಯೋ ತಂದೆ’ ಗೀತೆಯ ಮೂಲಕ ಪ್ರಾರಂಭವಾದ ಗಾಯನ ಕಾರ್ಯಕ್ರಮ, ‘ಅಪಾರ ಕೀರ್ತಿ ಮರೆವ ಕನ್ನಡ ನಾಡಿದು’, ಚಿನ್ನದಗೊಂಬೆ ಚಿತ್ರದ ‘ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ’, ಗೆಜ್ಜೆಪೂಜೆ ಚಿತ್ರದ ‘ಗಗನವು ಎಲ್ಲೋ ಭೂಮಿಯು ಎಲ್ಲೋ’, ಮೇಯರ್ ಮತ್ತಣ್ಣ ಚಿತ್ರದ ‘ಹಳ್ಳಿಯಾದರೇನು ಶಿವ’ ಸೀತಾ ಚಿತ್ರದ ‘ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ’, ಕಸ್ತೂರಿ ನಿವಾಸ ಚಿತ್ರದ ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ’, ಎರಡು ಕನಸು ಚಿತ್ರದ ‘ಎಂದೆಂದೂ ನಿನ್ನನು ಮರೆತು’, ಮಯೂರ ಚಿತ್ರದ ‘ಈ ಮೌನವ ತಾಳೆನು’, ಶಂಕರ್ ಗುರು ಚಿತ್ರದ ‘ಲವ್ ಮಿ ಆರ್ ಹೇಟ್ ಮಿ’, ಅನುರಾಗ ಬಂಧನ ಚಿತ್ರದ ‘ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ’, ಚಕ್ರವ್ಯೂಹ ಚಿತ್ರದ ‘ಚಳಿ ಚಳಿ ತಾಳೆನು’, ರಣಧೀರ ಚಿತ್ರದ ‘ಲೋಕವೇ ಹೇಳಿದ ಮಾತಿದು’, ‘ಈ ಭೂಮಿ ಬಣ್ಣದ ಬುಗುರಿ’, ಶಭ್ದವೇದಿ ಚಿತ್ರದ ‘ಆಹಾ ಪ್ರೇಮಾ ಕಾಶ್ಮೀರಾ’ ಗೀತೆಗಳು ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸಿತು.

ರಾಜ್ ಕುಮಾರ್ ಅವರು ಹಾಡಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಯೊಂದಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು. ಈ ಗೀತೆಗೆ ಕಲಾವಿದರು ಮತ್ತು ನೆರದಿದ್ದ ಪ್ರೇಕ್ಷಕರು ನೃತ್ಯ ಮಾಡಿದ್ದು ಕಾರ್ಯಕ್ರಮವನ್ನು ಜನ ಅಸ್ವಾದಿಸಿದ್ದಕ್ಕೆ ಸಾಕ್ಷಿಯಾಯಿತು.

gaanayaana-4

ಗೀತೆಗಳನ್ನು ಹಾಡುವ ಮುನ್ನ, ಗೀತೆ ಯಾವ ಚಲನಚಿತ್ರದ್ದು, ಚಿತ್ರದ ಕಥೆ, ಗೀತ ರಚನೆಕಾರರು, ಸಂಗೀತ ನಿರ್ದೇಶಕರು, ಗಾಯಕರು ಮತ್ತು ಗೀತೆ ರಚನೆಯ ಸಂದರ್ಭವನ್ನು ಪ್ರೇಕ್ಷಕರಿಗೆ ತಿಳಿಸುವುದರ ಮೂಲಕ ಗೀತೆಯನ್ನು ಮನ ಮುಟ್ಟುವಂತೆ ಹಾಡಲಾಯಿತು. ಕೆಲವು ಹಾಡುಗಳಿಗೆ ಇಡೀ ತಂಡ ನೃತ್ಯ ಮಾಡಿದ್ದು ಆಕರ್ಷಣೆಯಾಗಿತ್ತು. ಇದೇ ತಂಡದಲ್ಲಿ ಗುರುತಿಸಿಕೊಂಡಿರುವ ಸ್ಥಳೀಯ ಕಲಾವಿದ ಡಾ. ಅಭಿಷೇಕ್ ತಮ್ಮ ಗಾಯನದಿಂದ ಗಮನ ಸೆಳೆದರು.

gaanayaana-3
ಶ್ರೀಮತಿ ಲತಾ ಹಂಸಲೇಖ ಅವರ ಗಾಯನದಲ್ಲಿ ಮೂಡಿ ಬಂದ ಹಲವು ಮಾಧುರ್ಯಭರಿತ ಗೀತೆಗಳು ಪ್ರೇಕ್ಷಕರನ್ನು ರಂಜಿಸಿತು.
ರಾಜ್ಯದ ಮೈಸೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು, ಹಾಸನ, ಮಂಗಳೂರು, ಚಾಮರಾಜನಗರ ಸೇರಿದಂತೆ 13 ಜಿಲ್ಲೆಗಳಲ್ಲಿ ನಡೆದ ಈ ‘ಗಾನಯಾನ’ ಕಾರ್ಯಕ್ರಮ ಉಡುಪಿಯಲ್ಲಿ ಅಂತಿಮಗೊಂಡಿತು.

ತರುಣ್ ಕುಮಾರ್ ಮತ್ತು ಪ್ರಿಯಾಂಕ ತರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಚಿತ್ರಗೀತೆಗಳ ಮೂಲಕ ನಾಡಿನ ಹಿರಿಮೆಯನ್ನು ಮತ್ತು ಕನ್ನಡ ಚಿತ್ರರಂಗ ಸಾಗಿಬಂದ ಹಾದಿಯನ್ನು ಸಮರ್ಥವಾಗಿ ನಿರೂಪಿಸುವಲ್ಲಿ ‘ಗಾನಯಾನ’ ಕಾರ್ಯಕ್ರಮ ಯಶಸ್ವಿಯಾಯಿತು.

b.shivakumar

* ಬಿ.ಶಿವಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ.

Leave a Reply

Your email address will not be published. Required fields are marked *