Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪುಸ್ತಕ ಲೋಕ: ‘ಸಾಧು ಹೃದಯ’ (ಮಾಜಿ ಜಗದ್ಗುರು ಶ್ರೀ ರಘುವಲ್ಲಭ ತೀರ್ಥರ ಜೀವನ ಚಿತ್ರಗಳು).

ಪುಸ್ತಕ: ಸಾಧು ಹೃದಯ (ಮಾಜಿ ಜಗದ್ಗುರು ಶ್ರೀ ರಘುವಲ್ಲಭ ತೀರ್ಥರ ಜೀವನ ಚಿತ್ರಗಳು).
ಲೇಖಕಿ: ಭಾರತಿ ಕಾಸರಗೋಡು, ‘ರಂಗಭಾರತಿ’, ಜಿ-5, ಶ್ರೀನಿಧಿ ಶೆಲ್ಟರ್ಸ್, ಸೈಟ್ ನಂ.1, ರವಿ ಹಿಲ್ ವ್ಯೂವ್ ಲೇಔಟ್, ಬನಶಂಕರಿ 3ನೇ ಸ್ಟೇಜ್, ಬೆಂಗಳೂರು – 85, e-mail: bharathikasaragod@gmail.com
ಪ್ರಕಾಶನ: ನ್ಯೂ ವೇವ್ ಬುಕ್ಸ್, ಒಂದನೇ ಮಹಡಿ, ಈ.ಎ.ಟಿ.ಸ್ಟ್ರೀಟ್, ಬಸವನಗುಡಿ, ಬೆಂಗಳೂರು – 560004.
ಮೊದಲ ಮುದ್ರಣ: 2014. ಪುಟಗಳು: 132 + 4., ಬೆಲೆ: 85 ರು.

# ಉಡುಪಿಯ ಪ್ರತಿಷ್ಠಿತ ಅಷ್ಠಮಠಗಳಲ್ಲಿ ಒಂದಾದ ಪಲಿಮಾರು ಮಠದ ಸ್ವಾಮೀಜಿಯಾಗಿ, ಎರಡು ಬಾರಿ ಪರ್ಯಾಯ ಪೀಠವನ್ನೇರಿ ಕೃಷ್ಣ ಪೂಜೆಯನ್ನೂ ನೆರವೇರಿಸಿದ ಶ್ರೀ ರಘುವಲ್ಲಭ ತೀರ್ಥರ ಜೀವನ ಚಿತ್ರವಿದು. ಕೃತಿಯಲ್ಲಿ ಒಟ್ಟು ಐದು ಅಧ್ಯಾಯಗಳಿವೆ. ಲಕ್ಷ್ಮೀಶ ಕಥನ, ಅಂತಃಕರಣ, ಲಕ್ಷ್ಮೀಶರ ಕೃತಿಗಳು: ಕಿರು ಪರಿಚಯ, ಸಂದರ್ಶನ ಮತ್ತು 2012 ಜನವರಿಯಲ್ಲಿ ಭಾರತಕ್ಕೆ ಬಂದಿದ್ದಾಗ ನಡುರಾತ್ರಿಯಲ್ಲಿ ಬರೆದ ಕವನಗಳು.

ಆದರ್ಶ ದಂಪತಿಯಾದ ಶ್ರೀನಿವಾಸ ಪೆಜತ್ತಾಯ – ಕುಮುದಾಬಾಯಿ ಇವರ ಪುತ್ರನಾದ ಲಕ್ಷ್ಮೀಶನ ಬಾಲ್ಯದ ದಿನಗಳು, ಹೆತ್ತವರ ಕಷ್ಟ, ನಷ್ಟ, ಸಂಕಟಗಳು, ಅಮ್ಮ ಕುಮುದಾಬಾಯಿಯವರ ಉದಾತ್ತ ವ್ಯಕ್ತಿತ್ವ, ಲಕ್ಷ್ಮೀಶ ಬಾಲ ಸನ್ಯಾಸಿಯಾದಾಗಿನ ಅನುಭವಗಳು, ಸುಧೀರ್ಘ 3 ದಶಕಗಳ ಕಾಲ ಸ್ವಾಮೀಜಿಯಾಗಿದ್ದ ಕಾಲದ ಗೊಂದಲಗಳು, ಸಾಹಿತ್ಯ ಪ್ರೇಮ ಇತ್ಯಾದಿಗಳು ಇಲ್ಲಿ ಪುಟಗಟ್ಟಿವೆ.

ಏನೊಂದೂ ಗೊತ್ತಿಲ್ಲದ ವಯಸ್ಸಿನಲ್ಲಿ ಬಾಲ ಸನ್ಯಾಸಿಯಾದ ಲಕ್ಷ್ಮೀಶ, ರಘುವಲ್ಲಭ ತೀರ್ಥರಾದ ಬಳಿಕ ತಾವು ಪ್ರೌಢವಾಸ್ಥೆಯಲ್ಲಿ ಅನುಭವಿಸಿದ ಒಳತೋಟಿಗಳ ಬಗ್ಗೆ ಇಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಅಂತಿಮವಾಗಿ ಪೀಠತ್ಯಾಗದಂಥ ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದೂ ಅಲ್ಲದೆ, ಸನ್ಯಾಸ ತ್ಯಾಗಗೈದು, ಗೃಹಸ್ಥರಾಗಿ ಕಂಡುಕೋಡ ದಾರಿಗಳ ಬಗ್ಗೆಯೂ ಇಲ್ಲಿ ವಿವರವಾದ ವಿವರಗಳಿವೆ.

ಉಡುಪಿ ಅಷ್ಠ ಮಠಗಳಲ್ಲಿಯೇ ಸ್ವಾಮೀಜಿಯೊಬ್ಬರು ಪೀಠತ್ಯಾಗ ಮಾಡಿದ್ದರೆ ಇದರಲ್ಲಿ ಮೊದಲಿಗರು ಇದೇ ರಘುವಲ್ಲಭ ತೀರ್ಥರು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಇವರ ನಂತರ ಇವರದೇ ದಾರಿಯನ್ನು ಅನುಸರಿಸಿದವರು ಶಿರೂರು ಮಠಾಧೀಶರಾಗಿದ್ದ ಶ್ರೀ ಆರ್ಯರು ಹಾಗೂ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಭೂಷಣರು.

ಜಗದ್ಗುರುವಾಗಿದ್ದರೂ, ಆಗಿದ್ದಾಗಲೂ, ಮಾಜಿಯಾದಾಗಲೂ ಸರಳ ಸಜ್ಜನಿಕೆ, ನಿರಹಂಕಾರ, ಪ್ರಾಮಾಣಿಕತೆ, ಸತ್ಯಸಂಧತೆ, ನಿಸ್ವಾರ್ಥ ಸೇವಾ ಮನೋಭಾವ ಇತ್ಯಾದಿ ಮಾದರಿ ವ್ಯಕ್ತಿತ್ವ ರಘುವಲ್ಲಭ ತೀರ್ಥ ಉರೂಫ್ ಎಸ್.ಲಕ್ಷ್ಮೀಶ ರಾವ್ ಅವರದಾಗಿದೆ ಎನ್ನುವುದಕ್ಕೆ ಈ ಕೃತಿಯಲ್ಲಿ ಬೇಕಾದಷ್ಟು ನಿದರ್ಶನಗಳು ಸಿಗುತ್ತವೆ. ಅವರ ಬಂಧು ಬಾಂಧವರ, ಆತ್ಮೀಯರ, ಒಡನಾಡಿಗಳ ಮಾತುಗಳೂ ಈ ಕೃತಿಯಲ್ಲಿ ಮೂಡಿಬಂದಿವೆ. ಇವರ ಪೈಕಿ ಬನ್ನಂಜೆ ಗೋವಿಂದಾಚಾರ್ಯರು, ಕುರಾಡಿ ಸೀತಾರಾಮ ಅಡಿಗರು, ಡಾ.ನಾ.ಮೊಗಸಾಲೆ, ಎಡನೀರು ಮಠಾಧೀಶರಾದ ಕೇಶವಾನಂದ ಭಾರತೀ ಸ್ವಾಮೀಜಿಗಳು ಮೊದಲಾದವರ ಮಾತುಗಳು ಮನೋಜ್ಞವಾಗಿವೆ.

ರಘುವಲ್ಲಭ ತೀರ್ಥರಿಗಿಂತ ಕಿರಿಯರಾದರೂ, ಗುರುವಾಗಿದ್ದ, ಗುರುವಾಗಿದ್ದರೂ ಆತ್ಮೀಯರಾಗಿದ್ದ ಬನ್ನಂಜೆ ಗೋವಿಂದಚಾರ್ಯರ ಮುನ್ನುಡಿ, ಡಾ.ಎನ್.ಮೊಗಸಾಲೆಯವರ ಹಿನ್ನುಡಿಗಳಿರುವ ‘ಸಾಧು ಹೃದಯ’ ಓದುತ್ತಾ ಹೋಗುವಾಗ, ಕಾವಿ ಕಳಚಿದರೂ, ಮಠಾಧೀಶರಾಗಿ ಉಳಿಯದೇ ಹೋದರೂ, ಎಸ್.ಲಕ್ಷ್ಮೀಶ ರಾವ್ ಒಬ್ಬರು ನಿಜವಾದ ಸ್ವಾಮೀಜಿ, ಸದ್ಗುರು ಎಂದು ಅನಿಸದೇ ಇರಲು ಸಾಧ್ಯವಿಲ್ಲ. ಜೊತೆಗೆ, ಅಮಾನವೀಯವಾದ ಬಾಲ ಸನ್ಯಾಸತ್ವ ಸರ್ವಾಥಾ ಸಾಧುವಲ್ಲ ಎಂದು ಸಾರುವುದು ಅನಿವಾರ್ಯ ಎಂಬ ಸ್ಪಷ್ಟತೆ ಮನದಲ್ಲಿ ಪಡಿಮೂಡುತ್ತದೆ.

ರಘುವಲ್ಲಭ ತೀರ್ಥರು ಬಾಲ ಸನ್ಯಾಸತ್ವವನ್ನು ವಿರೋಧಿಸಿದ್ದು ಮಾತ್ರವಲ್ಲ, ತಾವು ಪೀಠತ್ಯಾಗ ಮಾಡಲು ನಿರ್ಧರಿಸಿದ ಬಳಿಕ ತಮ್ಮ ುತ್ತರಾಧಿಕಾರಿಯನ್ನಾಗಿ ಭಂಡಾರಕೇರಿ ಮಠದ ವಿದ್ಯಾಮಾನ್ಯ ತೀರ್ಥರನ್ನು ಆಯ್ಕೆ ಮಾಡಿ ಪಲಿಮಾರು ಮಠದ ಪೀಠವನ್ನು ಅವರಿಗೆ ಹಸ್ತಾಂತರಿಸಿದ್ದು ಇತ್ಯಾದ ಅನೇಕ ವಿಚಾರಗಳನ್ನು ಗಮನಿಸಿದರೆ, ಅವರು ಯೋಚಿಸಿದಂತೆ ಮತ್ತು ನುಡಿದಂತೆ ನಡೆದಂತೆ ನಡೆದವರು ಎನ್ನುವುದು ಸ್ಪಷ್ಟವಾಗುತ್ತದೆ.

– ಶ್ರೀರಾಮ ದಿವಾಣ.

SAADHU HRUDAYA-2

Leave a Reply

Your email address will not be published. Required fields are marked *