Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪುಢಾರಿ, ಮಾಫಿಯಾಗಳಿಗೆ ಸಿಂಹಸ್ವಪ್ನವಾಗಿದ್ದ ಅಣ್ಣಾಮಲೈ ಐಪಿಎಸ್ ಕಳೆದುಕೊಳ್ಳಲು ಜನ ಸಿದ್ಧರಿಲ್ಲ !

# ಉಡುಪಿಯ ಹಿಂದಿನ ಡಿಸಿ ಎಸ್ಪಿಗಳನ್ನು ಅಂಗನವಾಡಿ ಮಕ್ಕಳ ಚಡ್ಡಿ ಬದಲಾಯಿಸಿದಂತೆ ಬದಲಾಯಿಸಿ ಎಸೆದ ಉಡುಪಿಯ ಪುಢಾರಿಗಳ ಕುತ್ತಿಗೆಯಲ್ಲಿ ಮೀನಿನ ಮುಳ್ಳಿನಂತೆ ಸಿಕ್ಕಿ ಬಿದ್ದವರು ಎಸ್ಪಿ ಅಣ್ಣಾಮಲೈ. ಅತ್ತ ಕಕ್ಕಲೂ ಆಗದೆ, ಇತ್ತ ನುಂಗಲೂ ಆಗದ ದಯಾನೀಯ ಸ್ಥಿತಿ ಇಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳದ್ದು.

ಈ ಮನುಷ್ಯ ಬಂದ ನಂತರ, ಇಲಾಖೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಕೈಕಾಲು ಹೊಡೆಯಲು ರಾಜಕರಣಿಗೂ ಅವಕಾಶ ಸಿಗುತ್ತಿಲ್ಲ. ಯಂಗ್ ಡೈನಾಮಿಕ್ ಆಫೀಸರ್ ಆಗಿರುವ ಅಣ್ಣಾಮಲೈ ಅವರ ಕಾರ್ಯವೈಖರಿ ಕಂಡು ಕೆಲವು ಮಾಫಿಯಾಗಳು ಬೆಚ್ಚಿ ಬೆವರಿದ್ದಂತೂ ಸತ್ಯ. ಹಲವಾರು ದಶಕಗಳಿಂದ ಜಿಲ್ಲೆಯಲ್ಲಿ ಆಳವಾಗಿ ಬೇರೂರಿ ಬಡ ಜನರ ರಕ್ತವನ್ನು ಹೀರಿ ಬ್ರಹ್ಮ ರಾಕ್ಷಸನಂತೆ ಬೆಳೆದಿದ್ದ ಮಟ್ಕಾ ದಂಧೆಗೆ ಅಣ್ಣಾಮಲೈ ಸಿಂಹಸ್ವಪ್ನವಾಗಿದ್ದರು.

ಹಿಂದಿನ ಪೊಲೀಸರು ಸುಮ್ಮನೆ ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವು ಮಟ್ಕಾ ಚೀಟಿ ಬರೆಯುವವರನ್ನು ಹಿಡಿದು ಒಂದೆರಡು ಸಾವಿರ ರೂಪಾಯಿ ದುಡ್ಡು ಮತ್ತು ಪೆನ್ನು ಪುಸ್ತಕ ಜಪ್ತಿ ಮಾಡಿ ತನ್ನ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದರು. ಆದರೆ ಯಾರೊಬ್ಬ ಅಧಿಕಾರಿಯೂ ಈ ದಂಧೆಯ ತಾಯಿ ಬೇರಿಗೆ ಕೈ ಹಾಕುವ ಪ್ರಯತ್ನ ಮಾಡಲೇ ಇಲ್ಲ. ಮೊತ್ತ ಮೊದಲ ಬಾರಿಗೆ ಅಣ್ಣಾಮಲೈ ಮಟ್ಕಾ ದಂಧೆಯ ರೂವಾರಿಯೊಬ್ಬನನ್ನ ಒದ್ದು ಒಳಗೆ ಹಾಕಿ ಮಟ್ಕಾ ದಂಧೆಯ ಬುಡಕ್ಕೆ ಕೊಡಲಿ ಏಟು ಹಾಕಿದ್ದರು.

ಪೊಲೀಸರು ಜನರ ರಕ್ಷಣೆಗೆ ಇರೋದಾದರೂ ಕೂಡ ಕೆಲವು ಅಧಿಕಾರಿಗಳ ಒರಟುತನದಿಂದಾಗಿ ಜನರು ಪೊಲೀಸರಿಗೇ ಅತಿ ಹೆಚ್ಚು ಹೆದರುವ ಸ್ಥಿತಿ ನಿರ್ಮಾಣ ಆಗಿತ್ತು. ಈ ಸಮಸ್ಯೆಯ ಸಮಾಧಾನಕ್ಕಾಗಿ ಇಲಾಖೆ ಕೆಲವು ವರ್ಷಗಳಿಂದ ವಿಶೇಷ ಮಹತ್ವ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ಎಸ್ಪಿ ಅಧಿಕಾರ ಸ್ವೀಕರಿಸುವಾಗ ಕೂಡ ಇಲಾಖೆಯನ್ನು ಜನಸ್ನೇಹಿ ಮಾಡುತ್ತೇವೆ ಎಂಬ ರೆಕಾರ್ಡೆಡ್ ಡೈಲಾಗು ಹೊಡೆಯುತ್ತಾರೆ. ಆದರೆ ಈ ಮಾತನ್ನು ಕೃತಿಗೆ ಇಳಿಸಿದ ಉಡುಪಿಯ ಮೊದಲ ಎಸ್ಪಿ ಅಣ್ಣಾ ಮಲೈ.

ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಇಲಾಖೆಯ ಮೇಲೆ ವಿಶ್ವಾಸ ಮೂಡುವಂತೆ ಮಾಡಿದವರು ಎಸ್ಪಿ ಅಣ್ಣಾಮಲೈ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾದ ಸಮಯದಲ್ಲಿ ಪ್ರತೀ ಶಾಲೆಗಳಲ್ಲಿ ದೂರು ಪೆಟ್ಟಿಗೆಗಳನ್ನು ಕಟ್ಟಿದರು. ಕಚೇರಿಗಳಿಗಷ್ಟೇ ಸೀಮಿತರಾಗಿ ಬ್ರಿಟೀಷರ ಕಾಲದ ಪಳೆಯುಳಿಕೆಗಳಂತೆ ಗೋಚರಿಸುತ್ತಿದ್ದ ಇತರ ಎಸ್ಪಿಗಳಿಗೂ ಸದಾ ಒಂದಿಲ್ಲೊಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರ ಮದ್ಯೆ ಕೆಲಸ ಮಾಡುವ ಅಣ್ಣಾಮಲೈ ಅವರಿಗೂ ಅಜಗಜಾಂತರವಿದೆ.

ಶೈಕ್ಷಣಿಕ ನಗರವಾದ ಮಣಿಪಾಲ ನಿಧಾನವಾಗಿ ಡ್ರಗ್ ಮಾಫಿಯಾಗಳ ಕೈಗೆ ಜಾರುತ್ತಿರುವುದನ್ನು ಗಮನಿಸಿದ ಅಣ್ಣಾಮಲೈ, ಮಣಿಪಾಲದ ಎಲ್ಲಾ ಪಬ್ಬು ಬಾರುಗಳ ಮೇಲೆ ಹದ್ದಿನ ಕಣ್ಣಿಟ್ಟರು. ಮುಂಜಾನೆವರೆಗೂ ಕುಡಿದು ಕುಣಿದು ಕುಪ್ಪಳಿಸಿ ಹಾರಾಡುತ್ತಾ ತೂರಾಡುತ್ತಾ ಕೊನೆಗೊಮ್ಮೆ ಯಾವುದೋ ಕಾಮುಕರ ಬಲೆಗೆ ಬಿದ್ದು ತನ್ನ ಎಲ್ಲವನ್ನೂ ಕಳೆದುಕೊಂಡ ಯುವತಿಯರ ಕತೆಗಳು ಮಣಿಪಾಲದಲ್ಲಿ ಬಹಳಷ್ಟಿದೆ.

ಸಂಜೆಯಾಗುತ್ತಿದ್ದಂತೆ ಪರ್ಲ್ ಸಿಟಿ ಮರ್ಲ್ ಸಿಟಿ ಆಗೋದನ್ನು ತಡೆಯಲು ಅಣ್ಣಾಮಲೈ ತೆಗೆದುಕೊಂಡ ನಿರ್ಧಾರಗಳು ಅದೇನು ಸಾಮಾನ್ಯದ್ದಲ್ಲ. ಲಿಕ್ಕರ್ ಮಾಫಿಯಾವನ್ನು ಎದುರು ಹಾಕಿಕೊಂಡು 10 ಗಂಟೆಗೆ ಎಲ್ಲಾ ಬಾರುಗಳು ತಮ್ಮ ಬೀಗ ಜಡಿದುಕೊಳ್ಳುವಂತೆ ಮಾಡಿದ್ದು ಈ ಸಿಂಗಂನ ಸಾಧನೆ. ಕರ್ನಾಟಕವನ್ನೇ ಹುಡಿ ಎಬ್ಬಿಸುವಷ್ಟು ಅಕ್ರಮ ಸ್ಪೋಟಕಗಳನ್ನು ಕಾರ್ಕಳ ಸಮೀಪದ ನಕ್ರೆ ಎಂಬಲ್ಲಿ ಇದೇ ಅಣ್ಣಾಮಲೈ ಪತ್ತೆ ಮಾಡಿದ್ದರು. ಟನ್ನು ಗಟ್ಟಲೆ ಅಮೋನಿಯಂ ನೈಟ್ರೆಟ್ ಅಕ್ರಮ ಶೇಖರಣೆ ಮಾಡಿಕೊಂಡಿದ್ದ ಬಿಜು ಎಂಬ ಕೇರಳದ ಖದೀಮನನ್ನು ಒದ್ದು ಒಳೆಗೆ ಹಾಕಿದ್ದು ಅಣ್ಣಾ ಮಲೈ ಅವರ ಮತ್ತೊಂದು ಸಾಧನೆ.

ಬೈಂದೂರಿನ ಹೆನಬೂರು ಎಂಬಲ್ಲಿ ನಡೆದ ಅಕ್ಷತಾ ದೇವಾಡಿಗ ಪ್ರಕರಣ, ಬೆಳ್ವೆಯಲ್ಲಿ ನಡೆದ ಸುಪ್ರಿತಾ ಪ್ರಕರಣ, ಇತ್ತೀಚೆಗೆ ಗುಮ್ಮೊಲದಲ್ಲಿ ನಡೆದ ಉಷಾ ಶೆಟ್ಟಿ ಹತ್ಯೆ ಮೊದಲಾದ ಹತ್ತು ಹಲವು ಪ್ರಕರಣಗಳಲ್ಲಿ ಸ್ವಯಂ ಆಸಕ್ತಿವಹಿಸಿ ದಾಖಲೆಯ ವೇಗದಲ್ಲಿ ಆರೋಪಿಗಳನ್ನು ಹಿಡಿದು ಕೊಡವಿದ ಅಣ್ಣಾಮಲೈ ಸಹಜವಾಗಿಯೇ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಗಂಗೊಳ್ಳಿ ಗಲಭೆ ನಡೆದ ಸಂದರ್ಭ ಅಣ್ಣಾ ಮಲೈ ವಿರುದ್ಧ ಘೋಷಣೆಗಳು ಮೊಳಗಿದವು. ಆದರೆ ಒಂದಿಷ್ಟು ದೃತಿಗೆಡದ ಎಸ್ಪಿಯವರು ಅತ್ಯಂತ ನಾಜೂಕಾಗಿ ಈ ಪ್ರಕರಣವನ್ನು ನಿಭಾಯಿಸಿದರು. ಕೋಮು ಗಲಭೆಯಿಂದ ಇಡೀ ದಕ್ಷಿಣ ಕನ್ನಡ ಜಿಲ್ಲೆಯೇ ತಲ್ಲಣಗೊಂಡರೂ ಉಡುಪಿಯಲ್ಲಿ ಮಾತ್ರ ಒಂದೇ ಒಂದು ಕೋಮು ಸಂಬಂಧಿತ ಘಟನೆಗಳು ನಡೆಯದಂತೆ ನೋಡಿಕೊಂಡ ಕೀರ್ತಿ ಅಣ್ಣಾ ಮಲೈ ಅವರಿಗೆ ಸಲ್ಲುತ್ತದೆ.

ಈ ಜಿಲ್ಲೆಯಲ್ಲಿ ಮರಳು ಮಾಫಿಯಾದ ಕಡೆಗೆ ಬೆರಳು ತೋರಿಸಲೂ ಜನ ಹೆದರುತ್ತಿದ್ದರು. ಆದರೆ ಈಗ ಬಹುತೇಕ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಿಂತೇ ಹೋಗಿದೆ. ಕೆಲವೊಂದು ಅಪವಾದಗಳಿರಬಹುದು. ಈ ಅಕ್ರಮಗಳಲ್ಲಿ ಎರಡನೆ ದರ್ಜೆಯ ರಾಜಕೀಯ ಪುಢಾರಿಗಳೇ ಹೆಚ್ಚಾಗಿ ತೊಡಗಿಸಿಕೊಂಡ ಕಾರಣ, ಎಸ್ಪಿ ಅವರ ಎತ್ತಂಗಡಿಗೆ ಸಹಜವಾಗಿಯೇ ಒತ್ತಡ ನಿರ್ಮಾಣವಾಗಿದೆ.

ಸಿಕ್ಕ ಸಿಕ್ಕವರ ಹಟ್ಟಿಗೆ ನುಗ್ಗಿ ದನ ಕದಿಯುವ ಗೋ ಕಳ್ಳರು ಮತ್ತು ಅಕ್ರಮ ಗೋ ಸಾಗಾಟಗಾರರನ್ನು ಕರೆದು ಪರೇಡ್ ನಡೆಸಿದ ಅಣ್ಣಾಮಲೈ, ಕಾನೂನು ಕೈಗೆತ್ತಿಕೊಳ್ಳದಂತೆ ಖಡಕ್ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದರೆ ನಿಮಗೆ ಬಂದೂಕಿನ ಮೂಲಕ ಉತ್ತರಿಸುತ್ತೇವೆ ಎನ್ನುವ ಸಂದೇಶವನ್ನೂ ರವಾನಿಸಿದರು.

ಇಲಾಖೆಯಲ್ಲಿ ಎರಡು ವಿಧವಾದ ಅಧಿಕಾರಿಗಳಿದ್ದಾರೆ. ಒಬ್ಬರು ತಮ್ಮ ಸರ್ವಿಸ್ ಆಧಾರದಲ್ಲಿ ಭಡ್ತಿ ಪಡೆದುಕೊಂಡು ಮುಂದುವರೆಯುವ ಅಧಿಕಾರಿಗಳು. ಇವರು ಎಸ್ಪಿ ಆಗುವಾಗ ಇವರ ವಯಸ್ಸು ಕನಿಷ್ಟ 50 ದಾಟಿರುತ್ತದೆ. ಅಲ್ಲಿಯವರೆಗಿನ ತಮ್ಮ ಸೇವಾ ಅವಧಿಯಲ್ಲಿ ರಾಜಕಾರಣಿಗಳಿಂದ ಪುಟ್ಬಾಲ್ ಥರ ಊರಿಂದ ಊರಿಗೆ ಒದೆಸಿಕೊಂಡು ಅವರ ನಿಷ್ಠೆ ಪ್ರಾಮಾಣಿಕತೆ ಸ್ವಾಭಿಮಾನ ಎಲ್ಲವೂ ಬತ್ತಿ ಹೋಗಿರುತ್ತದೆ. ಭ್ರಷ್ಟ ವ್ಯವಸ್ಥೆಗೆ ಅವರು ಸರಿಹೊಂದುವಂತೆ ಅವರನ್ನು ನಮ್ಮ ಪುಢಾರಿಗಳು ಪರಿಪಕ್ವ ಮಾಡಿರುತ್ತಾರೆ.

ಆದರೆ ಐಪಿಎಸ್ ಪರೀಕ್ಷೆ ಬರೆದು ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಆಯ್ಕೆಯಾಗಿ ಬರುವ ಅಧಿಕಾರಿಗಳು ಈ ಭ್ರಷ್ಟ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೆ ತೊಡೆ ತಟ್ಟಿ ಕಾಳಗಕ್ಕೆ ಇಳಿಯುತ್ತಾರೆ. ಇವರಿಗೆ ರಾಜಕಾರಣಿಗಳ ಓಲೈಕೆಯಿಂದ ಆಗಬೇಕಾಗಿದ್ದೂ ಏನೂ ಇಲ್ಲ. ಸರಕಾರಿ ಕೆಲಸವೆಂದ ಮೇಲೆ ಎಲ್ಲಾ ಸಮಯದಲ್ಲೂ ಬ್ಯಾಗು ಸಿದ್ದವಾಗಿಟ್ಟುಕೊಳ್ಳಲೇ ಬೇಕು. ಈಗ ಈ ವರ್ಗಾವಣೆಯ ಗುಮಾನಿಯಿಂದ ಅಣ್ಣಾಮಲೈ ಕಂಗೆಟ್ಟಂತೆ ಕಾಣುತ್ತಿಲ್ಲ. ಯಾಕೆಂದರೆ ಇಂದಲ್ಲದಿದ್ದರೆ ನಾಳೆ ಅದು ಅಗಲೇಬೇಕು. ಆದರೆ ಉಡುಪಿಯ ಸಾಮಾನ್ಯ ಜನರು ಪ್ರಾಮಾಣಿಕ ಅಧಿಕಾರಿಯೊಬ್ಬನನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ವ್ಯವಸ್ಥೆ ಇನ್ನೂ ಬ್ರಿಟಿಷರ ಕಾಲದಂತೆ ನಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಪ್ರಜಾತಂತ್ರ. ಪ್ರಜೆಗಳ ಭಾವನೆಗೆ ಮನ್ನಣೆ ಸಿಗಲೇ ಬೇಕು.

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಮೋದ್ ಕುಮಾರ್ ಅವರ ಎತ್ತಂಗಡಿಗೆ ಮುಂದಾಗಿ ಕೆಲವರು ಅಂಡು ಸುಟ್ಟುಕೊಂಡಿದ್ದಾರೆ. ಇಲಾಖೆಯ ಅಧಿಕಾರಿಗಳನ್ನು ತಮ್ಮ ಮನೆಯ ಜೀತದಾಳುಗಳಂತೆ ನಡೆಸಿಕೊಳ್ಳುವ ಪುಢಾರಿಗಳಿಗೆ ಜನ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ.

ದುಡ್ಡು ಕೊಟ್ಟು ಡಾಕ್ಟರೇಟ್ ಗಳಿಸಿದ ಖದೀಮರ ತಂಡವೊಂದು ಉಡುಪಿ ಆಸುಪಾಸಿನಲ್ಲಿ ಕಾರ್ಯಾಚರಿಸುತ್ತಿದೆ. ಈ ತಂಡಕ್ಕೊಬ್ಬ ಗುರು ಕೂಡ ಇದ್ದಾನೆ. ಕೇಳಿದರೆ ಅಮೇರಿಕಾದ ವೈಟ್ ಹೌಸಿಗೆ ವಾಸ್ತು ನೋಡಿದ್ದು ನಾನೇ, ಚೀನಾದ ಮಹಾಗೋಡೆಗೆ ವಾಸ್ತು ಹೇಳಿದ್ದೇ ನನ್ನ ಮುತ್ತಜ್ಜ, ನನ್ನ ಅಪ್ಪನ ಕಾಲದಲ್ಲಿ ಕನ್ನಂಬಾಡಿ ಕಟ್ಟೆಗೆ ಕೆಸರು ಕಲ್ಲು ಹಾಕಿದ್ದು… ಹೀಗೆ ತನ್ನ ಭಟ್ಟಂಗಿಗಳ ಮೂಲಕ ಭಾರಿ ರೈಲುಗಳನ್ನೇ ಈ ಗುರೂಜಿಗಳು ಓಡಿಸಿದ್ದಾರೆ. ಈ ಗುರೂಜಿಗಳೇ ಈಗ ಪೊಲೀಸ್ ಇಲಾಖೆಯ ವಾಸ್ತು ಬದಲಾವಣೆಗೆ ಮುಂದಾಗಿರಬಹುದು ಎಂಬ ಗುಮಾನಿ ದಟ್ಟವಾಗಿ ಹಬ್ಬಿದೆ.

ಜಿಲ್ಲೆಗೆ ಅಣ್ಣಾಮಲೈ ಅವರು ಎಸ್ಪಿಯಾಗಿ ಬಂದ ತಕ್ಷಣ ತಿಂಗಳು ಗಟ್ಟಲೆ ಶುಭ ಕೋರಿ ಪತ್ರಿಕಾ ಜಾಹಿರಾತು, ಬ್ಯಾನರುಗಳನ್ನು ಅಳವಡಿಸಿದವರೇ ಈಗ ಅಣ್ಣಾಮಲೈ ಅವರನ್ನು ಉಡುಪಿಯಿಂದ ವರ್ಗಾವಣೆ ಮಾಡಲು ಒದ್ದಾಡುತ್ತಿದ್ದಾರೆ. ಬ್ಯಾನರು ಹಾಕಿದ ಮಾತ್ರಕ್ಕೆ ನಮ್ಮ ಎಲ್ಲಾ ಅಕ್ರಮಗಳ ಬಗ್ಗೆ ಕೈ ಕಟ್ಟಿ ಕುಳಿತುಕೊಳ್ಳುತ್ತಾರೆ ಎಂದು ಈ ಎಬಡಗಳು ಭಾವಿಸಿದ್ದರು.

ಏನೇ ಇರಲಿ, ಹೃತಿಕ್ ರೋಷನ್ ಬಂದರೂ ಮೂಸಿ ನೋಡದ ನಮ್ಮ ಕರಾವಳಿಯ ಕಾಲೇಜು ಯುವಕರು; ಅಣ್ಣಾಮಲೈ ಕಂಡ ತಕ್ಷಣ ಮುಗಿ ಬಿದ್ದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ ಎಂದರೆ ಈ ಅಧಿಕಾರಿಯಲ್ಲಿ ಏನೋ ಒಂದು ಖಾಸೀಯತ್ತು ಇದೆ.

annamalai k. ipsanna malai adhikara sveekara

One Comment

  1. rkamat51@gmail.com'

    K.Ravindra Kamath

    December 14, 2015 at 4:28 pm

    It is our aboundan duty to support and protect him so that law and order will get front seat.Also this will inspire more and more honest officers to work without fear.

Leave a Reply

Your email address will not be published. Required fields are marked *