Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಐಟಿ ದಾಳಿಗೆ ಗುರಿಯಾದ ಗುತ್ತಿಗೆದಾರರ ಮಗಳ ಮದುವೆಯಲ್ಲಿ ಭಾಗಿಯಾಗಲು ಬಂದು ಸರಕಾರಿ ಯಂತ್ರ ದುರ್ಬಳಕೆ ಮಾಡಿದ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಯಾವುದೇ ಆಯೋಗಕ್ಕಾದರೂ ಎಷ್ಟು ಸೂಕ್ತ ?!

* ಶ್ರೀರಾಮ ದಿವಾಣ
# ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪದಚ್ಯುತಿಯಾಗುವುದನ್ನು ತಪ್ಪಿಸುವ ಯತ್ನವಾಗಿ ಅಂತಿಮ ಹಂತದಲ್ಲಿ ರಾಜೀನಾಮೆ ನೀಡಿದ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರಿಂದ ತೆರವಾದ ಘನತೆವೆತ್ತ ಕರ್ನಾಟಕ ಲೋಕಾಯುಕ್ತ ಸ್ಥಾನಕ್ಕೆ, ಪ್ರಸ್ತುತ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅವರನ್ನು ನೇಮಕ ಮಾಡಲು ರಾಜ್ಯ ಕಾಂಗ್ರೆಸ್ ಸರಕಾರ ಚಿಂತನೆ ನಡೆಸಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾಗುವ ಮೊದಲು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದವರು ಇದೇ ಎಸ್.ಆರ್.ನಾಯಕ್. ಇದೇ, ಎಸ್.ಆರ್. ನಾಯಕ್ ರವರನ್ನು, ಇದೀಗ ಕಾನೂನು ಆಯೋಗದಂಥ ಒಂದು ಪ್ರಮುಖ ಸ್ಥಾನದಲ್ಲಿರುವಾಗಲೇ ಬಹಳ ಮುಖ್ಯದ್ದಾದ ಕರ್ನಾಟಕ ಲೋಕಾಯುಕ್ತರನ್ನಾಗಿ ನೇಮಕ ಮಾಡುವ ಚಿಂತನೆಯನ್ನು ಸರಕಾರ ಮಾಡಿರುವುದನ್ನು ಗಮನಿಸಿದರೆ, ಪ್ರಸ್ತುತ ಯಾವುದೇ ಸ್ಥಾನ ಮಾನದಲ್ಲಿಲ್ಲದ ಬೇರೆ ಒಬ್ಬರೇ ಒಬ್ಬರು ಸಮರ್ಥ, ಅರ್ಹ, ಯೋಗ್ಯ, ದಕ್ಷ, ಪ್ರಾಮಾಣಿಕ ನ್ಯಾಯಮೂರ್ತಿಗಳೂ ರಾಜ್ಯದಲ್ಲಿ ಯಾರೂ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ.

g.s.jathege srn-1 2012 julyg.s.jathege srn july 2012

* ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿದ್ದಾಗ, 2012ರ ಜುಲೈ 22ರಂದು ಉಡುಪಿಯಲ್ಲಿ ನಡೆದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಕಾರ್ಯಕ್ರಮದಲ್ಲಿ ಜಿ.ಶಂಕರ್ ಜೊತೆ ಭಾಗವಹಿಸಿರುವುದು. 

ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿ ಬಂದಾಗ, ಅವರ ಮೂಗಿನ ನೇರಕ್ಕೇ ಅವರ ಮನೆ ಮತ್ತು ಲೋಕಾಯುಕ್ತರ ಕಚೇರಿಯೇ ಭ್ರಷ್ಟಾಚಾರದ ಕೇಂದ್ರ ಸ್ಥಾನವಾಗಿತ್ತು ಎಂಬ ವಿಚಾರ ಸ್ಪಷ್ಟವಾದ ಬಳಿಕವೂ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಅವರ ಪದಚ್ಯುತಿ ಪ್ರಕ್ರಿಯೆಗೆ ಮುಂದಾಗಲಿಲ್ಲ. ಬದಲಾಗಿ, ಅವರನ್ನು ರಕ್ಷಿಸುವ ಹೇಸಿಗೆ ಕೆಲಸವನ್ನು ನಾಚಿಕೆ ಇಲ್ಲದೆ ಮಾಡಿದ್ದು ಗುಟ್ಟಿನ ವಿಷಯವಾಗಿಯೇನೂ ಉಳಿದಿಲ್ಲ.

ಮಜಗೆಯರಿಂದ ತೆರವಾದ ಉಪಲೋಕಾಯುಕ್ತ ಸ್ಥಾನಕ್ಕೆ ಭ್ರಷ್ಟಾಚಾರದ ಆರೋಪವನ್ನು ಹೊತ್ತ ಮತ್ತೊಬ್ಬ ನ್ಯಾಯಮೂರ್ತಿ ಮಂಜುನಾಥ್ ಅವರನ್ನು ನೇಮಿಸಲು ಮುಂದಾದುದು; ಪ್ರಾಮಾಣಿಕ, ದಕ್ಷ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರನ್ನು ಉಪ ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿ ಮಾಡಲು ಮುಂದಾಗಿರುವುದು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡಲು ಇದುವರೆಗೂ ಸಾಧ್ಯವಾಗದೇ ಇರುವುದು, ಕರ್ನಾಟಕ ಮಾಹಿತಿ ಆಯೋಗಕ್ಕೆ ಅಗತ್ಯವಿರುವಷ್ಟು ರಾಜ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡದೇ ಹಾಗೆಯೇ ಉಳಿಸಿಕೊಂಡಿರುವುದು ಇತ್ಯಾದಿಗಳು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಬೇಕಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆಯಲ್ಲದೆ ಬೇರೇನೂ ಅಲ್ಲ.

ಹೀಗಿರುವಾಗ, ಪ್ರಸ್ತುತ ಕಾನೂನು ಆಯೋಗದ ಅಧ್ಯಕ್ಷರ ಸ್ಥಾನದಲ್ಲಿರುವ ಎಸ್.ಆರ್.ನಾಯಕ್ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಕ ಮಾಡಲು ಸಿದ್ಧರಾಮಯ್ಯನವರು ಆಸಕ್ತರಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಸ್.ಆರ್.ನಾಯಕ್ ರವರ ಚಲನವಲನವನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಇವುಗಳೆಲ್ಲದರ ನಡುವೆ ಒಂದಕ್ಕೊಂದು ಸಂಬಂಧ ಇರುವುದು ಖಚಿತವಾಗುತ್ತದೆ. ಮಾತ್ರವಲ್ಲ, ಸಿದ್ಧರಾಮಯ್ಯನವರ ಭ್ರಷ್ಟಾಚಾರ ಪರ ನೀತಿ ಕಣ್ಣಿಗೆ ರಾಚುತ್ತದೆ.

ಉಡುಪಿಯಲ್ಲಿ ಬ್ರಾಹ್ಮಣ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿಯೇ ಉಡುಪಿ ಪ್ರವಾಸದ ದಿನಾಂಕ ನಿಗದಿಪಡಿಸಿಕೊಂಡಿದ್ದ ವೈ.ಭಾಸ್ಕರ ರಾವ್ ಅವರು, ಸರಕಾರೀ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದೇ ಸಂದರ್ಭದಲ್ಲಿ ಲೋಕಾಯುಕ್ತ ಇಲಾಖೆಯಡಿಯಲ್ಲಿ ಸಾರ್ವಜನಿಕ ವಿಚಾರಣೆ ಎಂಬ ಕಾರ್ಯಕ್ರಮವನ್ನು ನಿಗದಿಪಡಿಸಿದ್ದರು. ತನ್ನ ಅಧಿಕಾರವಧಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ತನಗೆ ಬೇಕಾದ ಭ್ರಷ್ಟರನ್ನು ರಕ್ಷಿಸಿದ್ದಷ್ಟೇ ಇವರ ಸಾಧನೆಯಾಗಿತ್ತು ಎನ್ನುವುದು ಈಗಾಗಲೇ ಬಹಿರಂಗಗೊಂಡ ಸತ್ಯವಾಗಿದೆ.

ಇದೇ ಹಾದಿಯಲ್ಲಿ ಎಸ್.ಆರ್.ನಾಯಕ್ ಅವರೂ ಸಾಗುತ್ತಿರುವುದು ಇದೀಗ ಕಂಡುಬರುತ್ತಿರುವುದರಿಂದ, ಇವರನ್ನು ಕರ್ನಾಟಕ ಲೋಕಾಯುಕ್ತದಂಥ ಅತ್ಯಂತ ಜವಾಬ್ದಾರಿಯುತ, ಘನತೆವೇತ್ತ, ಬಹಳ ಪ್ರಾಮುಖ್ಯತೆಯಿಂದ ಕೂಡಿದ ಸ್ಥಾನಕ್ಕೆ ನೇಮಕ ಮಾಡುವ ಸರಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸುವುದು, ವಿರೋಧ ಸೂಚಿಸುವುದು ಅನಿವಾರ್ಯವಾಗಿದೆ.

ಎಸ್.ಆರ್.ನಾಯಕ್ ರವರು ಇತ್ತೀಚೆಗೆ ಮೂರ್ನಾಲ್ಕು ದಿನಗಳ ಕಾಲ ಉಡುಪಿ ಸುತ್ತಮುತ್ತಲೇ ಇದ್ದರು. ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಇದ್ದುದರ ಬಗ್ಗೆ ಮಾಹಿತಿಗಳು ಲಭಿಸಿವೆ. ಕ್ಲಾಸ್ ಒನ್ ಗುತ್ತಿಗೆದಾರರಾದ ಜಿ.ಶಂಕರ್ ರವರ ಮಗಳ ಮದುವೆಯಲ್ಲಿ ಭಾಗಿಯಾದ ಬಳಿಕ ನಾಯಕ್ ರವರು ಉಡುಪಿಯಿಂದ ನಿರ್ಗಮಿಸಿದ್ದಾರೆ. ಶಂಕರ್ ಅವರು ಐಟಿ ದಾಳಿಗೆ ಗುರಿಯಾದ ಒಬ್ಬರು ಗುತ್ತಿಗೆದಾರ ಮತ್ತು ಇವರು ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಪರಮಾಪ್ತರು, ಇದೇ ಶಂಕರ್ ಗೆ ಇದೇ ಎಸ್.ಆರ್. ನಾಯಕ್ ಅವರು ಆಪ್ತರು ಎಂಬುದನ್ನು ಪರಿಗಣಿಸಿದರೆ ಬಹುತೇಕ ಸತ್ಯಾಂಶಗಳು ಗೋಚರವಾಗುತ್ತವೆ. ಇದಕ್ಕೆ ಭೂತ ಗನ್ನಡಿಯೇನೂ ಬೇಕಾಗಿಲ್ಲ. ಉಡುಪಿಗೆ ಆಗಮಿಸಿದ್ದನ್ನು ಸರಕಾರೀ ಲೆಕ್ಕದಲ್ಲಿ ತೋರಿಸುವ ಸಲುವಾಗಿಯೇ, ಸರಕಾರೀ ಯಂತ್ರವನ್ನು ದುರುಪಯೋಗಪಡಿಸುವ ಸಲುವಾಗಿಯೇ ಎರಡು ದಿನಗಳ ಹಿಂದೆ ಅವರು ಕಾರ್ಕಳ ಬಾರ್ ಅಸೋಸಿಯೇಶನಿನಲ್ಲಿ ಕಾರ್ಯಕ್ರಮವೊಂದನ್ನು ನಿಗದಿಪಡಿಸಿ ಭಾಗವಹಿಸಿ ಭಾಷಣ ಮಾಡಿದ್ದಾರೆ ಎಂಬ ಸತ್ಯವನ್ನು ಕಂಡುಕೊಳ್ಳಲು ವಿಶೇಷ ಪತ್ತೆದಾರಿಕೆಯ ಅವಶ್ಯಕತೆ ಖಂಡಿತಾ ಇಲ್ಲ.

s.r.nayk

* ಜಿ.ಶಂಕರ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿನವೇ ಕಾರ್ಕಳ ಬಾರ್ ಅಸೋಸಿಯೇಶನಿನಲ್ಲಿ ಎಸ್.ಆರ್. ನಾಯಕ್ ಅವರಿಗಾಗಿ ಕಾರ್ಯಕ್ರಮವೊಂದನ್ನು ನಡೆಸಲಾಯಿತು. ಕಾರ್ಯಕ್ರಮದ ಬ್ಯಾನರ್ ನಲ್ಲಿ ದಿನಾಂಕ ನಮೂದಿಸದಿರುವುದನ್ನು ಗಮನಿಸಬಹುದು !

ಎಸ್.ಆರ್. ನಾಯಕ್ ಉಡುಪಿಗೆ ಆಗಮಿಸುತ್ತಿರುವುದು ಇದೂ ಮೊದಲ ಸಲವೂ ಅಲ್ಲ. ಪದೇ ಪದೇ ಅವರು ಉಡುಪಿಗೆ ಬರುತ್ತಿದ್ದಾರೆ. ಇವರ ಪ್ರವಾಸದ ವಿವರಗಳನ್ನು ಪಡೆದುಕೊಂಡರೆ, ಉಡುಪಿಗೆ ಬಂದಷ್ಟು ಸಲ ಬೇರೆ ಜಿಲ್ಲೆಗೆ ಪ್ರವಾಸ ಹಮ್ಮಿಕೊಂಡಿರುವ ಸಾಧ್ಯತೆ ಕಡಿಮೆಯೇ. ಪ್ರತೀ ಸಲ ಉಡುಪಿಗೆ ಬಂದಾಗಲೂ ಈ ನಾಯಕ್ ರವರು ಎಲ್ಲೆಲ್ಲಿ ಇರುತ್ತಾರೆ, ಎಲ್ಲೆಲ್ಲಿ ಹೋಗುತ್ತಾರೆ, ಯಾರ್ಯಾರ ಜೊತೆಗೆ ಇರುತ್ತಾರೆ, ಯಾರನ್ನೆಲ್ಲಾ ಭೇಟಿ ಮಾಡುತ್ತಾರೆ, ಯಾರ ಜೊತೆಗೆಲ್ಲ ಮಾತುಕತೆ ನಡೆಸುತ್ತಾರೆ ಎಂಬಿತ್ಯಾದಿಗಳನ್ನು ಕೆಲ ಹಾಕಿದರೆ ಒಂದು ಕಳವಳಕ್ಕೀಡು ಮಾಡುವ ಕೆಲವು ಸತ್ಯಗಳು ಅನಾವರಣಗೊಳ್ಳಬಹುದು. ಈ ಮಾಹಿತಿಗಳನ್ನು ರಾಜ್ಯ ಸರಕಾರ, ತನ್ನದೇ ಅಧೀನದಲ್ಲಿರುವ ರಾಜ್ಯ ಗುಪ್ತಚರ ಇಲಾಖಾಧಿಕಾರಿಗಳಿಂದ ಕೇಳಿ ಪಡೆದುಕೊಳ್ಳಬಹುದು. ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದು ಇದಕ್ಕಿಮತಲೂ ಉತ್ತಮವಾದ ಕ್ರಮವಾದೀತು.

ಸರಕಾರೀ ಯಂತ್ರವನ್ನು ದುರ್ಬಳಕೆ ಮಾಡುವ, ಐಟಿ ದಾಳಿಗೆ ಗುರಿಯಾದ ಗುತ್ತಿಗೆದಾರನೊಬ್ಬನ ಜೊತೆಗೆ ಆಪ್ತ ಸಂಬಂಧ ಇರಿಸಿರುವ ವ್ಯಕ್ತಿಯೊಬ್ಬರನ್ನು ಕರ್ನಾಟಕ ಲೋಕಾಯುಕ್ತದಂಥ ಘನತೆವೇತ್ತ ಸಂಸ್ಥೆಗೆ ಲೋಕಾಯುಕ್ತರನ್ನಾಗಿ ನೇಮಕ ಮಾಡುವುದು ಎಷ್ಟು ಮಾತ್ರಕ್ಕೂ ಸಮರ್ಥನೀಯವಾಗಲಾರದು, ಆಗಬಾರದು.

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ, ಕರ್ನಾಟಕ ಲೋಕಾಯುಕ್ತದಂಥ ಒಂದು ಶ್ರೇಷ್ಠ ಸಂಸ್ಥೆಯನ್ನು ತನ್ನ ಮತ್ತು ತಮ್ಮವರ ರಕ್ಷಣಾ ಕವಚದಂತೆ, ಗುರಾಣಿಯಂತೆ ಬಳಕೆ ಮಾಡುವುದೇ ಮುಖ್ಯ ಗುರಿ ಎಂಬುದೇ ಆಗಿದ್ದ ಪಕ್ಷದಲ್ಲಿ ಅದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ನೇರವಾಗಿ ಕೇಳಿದಾಗಲೆಲ್ಲಾ ಕೇಳಿದಷ್ಟು ಹಣ ಕೊಡುವ ಪರಮ ಭ್ರಷ್ಟ ಒಬ್ಬರು ಗುತ್ತಿಗೆದಾರರನ್ನೇ ಲೋಕಾಯುಕ್ತರನ್ನಾಗಿಯೂ, ಉಗ್ರ ಪ್ರತಾಪಿಯನ್ನೇ ಒಂದನೇ ಉಪ ಲೋಕಾಯುಕ್ತರನ್ನಾಗಿಯೂ ನೇಮಕ ಮಾಡುವುದು ಒಳ್ಳೆಯದು. ಇದಕ್ಕಾಗಿಯೇ ಮುಖ್ಯಮಂತ್ರಿಗಳು ತಮ್ಮ ಅನುಕೂಲಕ್ಕೆ ಬೇಕಾದ ಹಾಗೆ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿಯನ್ನೂ ತರಬಹುದು, ತಂದರೆ ಆಶ್ಚರ್ಯವೂ ಇಲ್ಲ !

g.s.celebrates 60th birthdayg.s. 60th birthday-1

* ಕಳೆದ ತಿಂಗಳು ಉಡುಪಿಯಲ್ಲಿ ನಡೆದ ಗುತ್ತಿಗೆದಾರ ಜಿ.ಶಂಕರ್ ರವರ 60ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಶಂಕರ್ ಜೊತೆ ಭಾಗವಹಿಸಿದ ನ್ಯಾಯಮೂರ್ತಿ ಎಸ್.ಆರ್.ನಾಯಕ್ !

 

Leave a Reply

Your email address will not be published. Required fields are marked *