Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಳಕೆದಾರರ ವೇದಿಕೆಗೆ ಬೀಗ ಜಡಿಯಲು ದಾಮೋದರ ಐತಾಳ ಯಾರು ?: ವಿಜಯ ಕರ್ನಾಟಕದಲ್ಲಿ ಏಕಪಕ್ಷೀಯ ಸುಳ್ಳು ವರದಿ !

* ಶ್ರೀರಾಮ ದಿವಾಣ

# ‘ವಿಜಯ ಕರ್ನಾಟಕ’ ದಿನ ಪತ್ರಿಕೆಯ 22.12.2015ರ ಸಂಚಿಕೆಯ ಪ್ರಾದೇಶಿಕ ಪುರವಣಿಯ 5ನೇ ಪುಟದಲ್ಲಿ ಪತ್ರಿಕೆಯ ಉಡುಪಿ ವರದಿಗಾರರಾದ ಎಸ್.ಜಿ.ಕುರ್ಯ ಅವರು ”ಉಡುಪಿ ಬಳಕೆದಾರರ ವೇದಿಕೆ ಸಂಚಾಲಕರ ಕಾರು ಜಪ್ತಿ !” ಎಂಬ ಬೈಲೈನ್ ವರದಿಯನ್ನು ಬರೆದಿದ್ದಾರೆ.

ವರದಿಯಲ್ಲಿ, ವೇದಿಕೆಯ ಸಂಚಾಲಕರಾದ ಕೆ.ದಾಮೋದರ ಐತಾಳರಿಗೆ ಅನ್ಯಾಯವಾಗಿದೆ ಎಂದು ಉದ್ಧೇಶಪೂರ್ವಕವಾಗಿ ಬಿಂಬಿಸಲಾಗಿದೆ. ಅವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆಂದೂ ಪ್ರಜ್ಞಾಪೂರ್ವಕವಾಗಿ ಬರೆದು ಅವರನ್ನು ಬೆಂಬಲಿಸಲಾಗಿದೆ. ಆರ್ ಟಿಐ ಕಾರ್ಯಕರ್ತರು ವೇದಿಕೆಯ ಕಾರ್ಯವೈಖರಿ ಬಗ್ಗೆ ಮಾಹಿತಿ ಕೇಳಿದ್ದಾರೆಂದೂ, ಕೋರ್ಟ್ ತಡೆಯಾಜ್ಞೆ ಇದ್ದರೂ ಕಾರು ಜಪ್ತಿ ಮಾಡಲಾಗಿದೆ ಎಂದೂ, ಕಳೆದ 3 ವರ್ಷಗಳಿಂದ ವೇದಿಕೆಗೆ ಯಾವುದೇ ಅನುದಾನವೂ ಸರಕಾರದಿಂದ ದೊರೆಯುತ್ತಿಲ್ಲವೆಂದೂ, ಅನುದಾನ ದೊರೆಯದ ಕಾರಣಕ್ಕೇ ಸಂಚಾಲಕ ಹುದ್ದೆಗೆ ರಾಜೀನಾಮೆ ನೀಡಿ ದಾಮೋದರ ಐತಾಳರು ಬಳಕೆದಾರರ ವೇದಿಕೆಗೆ ಬೀಗ ಜಡಿಯಲು ನಿರ್ಧರಿಸಿದ್ದಾರೆಂದೂ ಹಸಿ ಹಸಿ ಸುಳ್ಳುಗಳನ್ನೇ ಬರೆಯಲಾಗಿದೆ.

ವರದಿ ಜೊತೆಗೆ, ದಂಡ ವಸೂಲಿ ಆದೇಶ ಜಾರಿಗೆ ಹೈಕೋರ್ಟ್ ತಡೆಯಿದ್ದರೂ ಕಾರು ಜಪ್ತಿ ಮಾಡಲಾಗಿದೆಯೆಂದೂ, ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಿದ್ದೇವೆ ಎಂಬಿತ್ಯಾದಿಯಾಗಿ ದಾಮೋದರ ಐತಾಳರ ಸುಳ್ಳು, ದಾರಿ ತಪ್ಪಿಸುವ ಹೇಳಿಕೆಗಳನ್ನೂ ಪ್ರಕಟಿಸಿ ಪ್ರಚಾರ ನೀಡಲಾಗಿದೆ. ವರದಿ ಅಪೂರ್ಣವೂ, ಏಕಪಕ್ಷೀಯವೂ, ಪರಮ ಭ್ರಷ್ಟರೊಬ್ಬರ ಪರ ಅನುಕಂಪ ಸೃಷ್ಟಿಸುವ ಯತ್ನದ ಭಾಗವೂ ಆಗಿರುವುದರಿಂದ, ಕಳೆದ ಕೆಲವು ವರ್ಷಗಳಿಂದ udupibits.in ಸುದ್ಧಿ ಸಂಸ್ಥೆಯು ಬಳಕೆದಾರರ ವೇದಿಕೆಯನ್ನು, ಅದರ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳ ಸಹಿತ ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಎಸ್.ಜಿ.ಕುರ್ಯರ ವರದಿಯನ್ನು ವಿಮರ್ಶಿಸುವುದು ಅನಿವಾರ್ಯವಾಗಿದೆ.

balakedara vedike-3

* ವಿಜಯ ಕರ್ನಾಟಕದಲ್ಲಿ ಎಸ್.ಜಿ.ಕುರ್ಯ ಬರೆದ ವರದಿ.

ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರಾದ ಕಡಿಯಾಳಿ ದಾಮೋದರ ಐತಾಳರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿದೆ. ಬಳಕೆದಾರರ ವೇದಿಕೆಯ ಸಂಚಾಲಕರಾಗಿ ತಾನು ಮಾಡಿದ ಅನ್ಯಾಯ, ಗೋಲ್ ಮಾಲ್ ಗಳನ್ನು ಮುಚ್ಚಿ ಹಾಕುವ ಕೆಲಸವನ್ನಷ್ಟೇ ಕೆ.ದಾಮೋದರ ಐತಾಳರೀಗ ಮಾಡುತ್ತಿರುವುದಲ್ಲದೇ ಮತ್ತೇನೂ ಅಲ್ಲ.

ದಶಕದ ಕಾಲದಿಂದ ಸರಕಾರದಿಂದ ಲಕ್ಷಾಂತರ ರು. ಅನುದಾನ ಪಡೆಯುತ್ತಾ, ಪಡೆದುಕೊಂಡ ಹಣವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳದೆ, ಲೆಕ್ಕಪತ್ರಗಳನ್ನು ಸೂಕ್ತ ರೀತಿಯಲ್ಲಿ ಇರಿಸಿಕೊಳ್ಳದೆ, ಕನಿಷ್ಟ ಪಾರದರ್ಶಕತೆಯನ್ನು ಕಾಯ್ದುಕೊಳ್ಳದೆ ಸರಕಾರಕ್ಕೆ, ಜನರಿಗೆ ಅನ್ಯಾಯವೆಸಗುತ್ತಿರುವುದು ಇದೇ ದಾಮೋದರ ಐತಾಳರಾದ ಕಾರಣಕ್ಕೇ, ಇದೀಗ ಅವರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎನ್ನವುದು ಹಗಲಿನಷ್ಟೇ ಸತ್ಯವಾಗಿದೆ. ಇವುಗಳೆಲ್ಲ ವಿಜಯ ಕರ್ನಾಟಕ ವರದಿಗಾರರಾದ ಎಸ್.ಜಿ.ಕುರ್ಯರಿಗೆ ‘ನ್ಯಾಯ’ವೆಂದು ಕಂಡದ್ದು ಆಶ್ಚರ್ಯವೇ ಸರಿ.

ಆರ್ ಟಿಐ ಕಾರ್ಯಕರ್ತರಾದ ಮಣಿಪಾಲ ಲಕ್ಷ್ಮೀಂದ್ರನಗರದ ಕೆ.ಎಸ್. ಉಪಾಧ್ಯ ಅವರು ಬಳಕೆದಾರರ ವೇದಿಕೆಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು ಸತ್ಯವೇ ಆಗಿದೆ. ಸರಕಾರದಿಂದ ಪಡೆದ ಅನುದಾನವನ್ನು (ಇದು ಸಾರ್ವಜನಿಕರ ತೆರಿಗೆ ಹಣವೇ ಹೊರತು ದಾಮೋದರ ಐತಾಳರ ಪಿತ್ರಾರ್ಜಿತ ಹಣವಲ್ಲ) ಮಾಡಿದ ಕರ್ಚುಗಳ ಬಗ್ಗೆ ಲೆಕ್ಕಪತ್ರಗಳನ್ನು ಅವರು ಕೇಳಿದ್ದಾರೆ. ಅರ್ಜಿ ಸಲ್ಲಿಸಿ ಐದು ವರ್ಷಗಳೇ ಕಳೆದರೂ ಬಳಕೆದಾರರ ವೇದಿಕೆಯ ಸಂಚಾಲಕರೂ, ವೇದಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ದಾಮೋದರ ಐತಾಳರು ಲೆಕ್ಕಪತ್ರ ನೀಡದಿರುವುದು ಎಷ್ಟು ಸರಿ ಎನ್ನುವುದನ್ನು ಎಸ್.ಜಿ.ಕುರ್ಯ ಪ್ರಶ್ನಿಸದಿರುವುದು ಯಾಕೆಂದು ಗೊತ್ತಿಲ್ಲ.

ಬಳಕೆದಾರರ ವೇದಿಕೆ ನಿರಂಕುಶ ಅಧಿಕಾರದ ಸಂಸ್ಥೆಯಲ್ಲ. ಸಾರ್ವಜನಿಕ ಸೇವೆ ಸಲ್ಲಿಸಬೇಕಾದ ಒಂದು ಸಂಸ್ಥೆ. ಸರಕಾರದ ಅನುದಾನದಿಂದ ನಡೆಯುತ್ತಿರುವ ಸಂಸ್ಥೆಯಾಗಿದೆ ಎನ್ನುವುದನ್ನು ಮೊತ್ತ ಮೊದಲು ಅರಿತುಕೊಳ್ಳಬೇಕಾಗಿದೆ. ಇಂಥ ಸಂಸ್ಥೆ ಪಾರದರ್ಶಕವಾಗಿರಬೇಕಾದುದೂ ಅತೀ ಅಗತ್ಯವಾಗಿದೆ. ಸಂಚಾಲಕರಾದ ದಾಮೋದರ ಐತಾಳರು ಪಾರದರ್ಶಕ ನೀತಿ ಅನುಸರಿಸದಿರುವುದು ಪ್ರಶ್ನಾರ್ಹವಾಗಿದ್ದು, ಈ ಬಗ್ಗೆ ಎಸ್.ಜಿ.ಕುರ್ಯರು ಗಮನ ಹರಿಸದಿರುವುದು ಐತಾಳರನ್ನು ರಕ್ಷಿಸುವುದಕ್ಕಾಗಿಯೇ ಇರಬಹುದು ಅನಿಸುತ್ತದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25 ಸಾವಿರ ರು.ಗಳಂತೆ ಒಟ್ಟು 50 ಸಾವಿರ ರು. ದಂಡ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದ ಹಿನ್ನೆಲೆಯಲ್ಲಿ ನಿಯಮ ಬದ್ಧವಾಗಿ ಕರ್ನಾಟಕ ಮಾಹಿತಿ ಆಯೋಗವು ಭೂ ಕಂದಾಯ ವಸೂಲಿಯಂತೆ ದಂಡ ವಸೂಲಿ ಮಾಡುವಂತೆ ಆದೇಶಿಸಿತ್ತು. ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಉಡುಪಿ ತಾಲೂಕು ತಹಶೀಲ್ದಾರರು ಸಹ ಇದೇ ರೀತಿಯ ಆದೇಶಗಳನ್ನು ಹೊರಡಿಸಿದ್ದರು. ದಾಮೋದರ ಐತಾಳರು ದಂಡ ವಿಧಿಸಿದ ಆಯೋಗದ ಆದೇಶದ ವಿರುದ್ಧ ಮಾತ್ರವೇ ಹೈಕೋರ್ಟ್ ಮೆಟ್ಟಿಲು ಹತ್ತಿ ತಡೆಯಾಜ್ಞೆ ತಂದಿದ್ದಾರೆಯೇ ಹೊರತು, ಆಯೋಗದ ಎರಡನೇ ಆದೇಶಕ್ಕಾಗಲೀ, ಜಿಲ್ಲಾಧಿಕಾರಿಗಳ ಆದೇಶಕ್ಕಾಗಲೀ, ತಹಶೀಲ್ದಾರರ ಆದೇಶಕ್ಕಾಗಲೀ ತಡೆಯಾಜ್ಞೆ ತಂದಿಲ್ಲ.

ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಕೇವಲ 6 ವಾರಗಳಿಗೆ ಮಾತ್ರ. 2015ರ ಎಪ್ರಿಲ್ 9ರಂದು ಕೋರ್ಟ್ ತಡಯಾಜ್ಞೆ ನೀಡಿದ್ದು, ಈ ತಡೆಯಾಜ್ಞೆ ಮೇ 25ಕ್ಕೆ ತನ್ನಿಂತಾನೇ ತೆರವುಗೊಂಡಿದೆ. ತೆರವುಗೊಂಡ ದಿನಾಂಕದ ಬಳಿಕವೂ, ಅಂದರೆ ಅಗೋಸ್ಟ್ 26ಕ್ಕೆ ಹೈಕೋರ್ಟ್ ನಲ್ಲಿ ಸಿಟ್ಟಿಂಗ್ ಇತ್ತು. ಆಗ ದಾಮೋದರ ಐತಾಳರು ತಡೆಯಾಜ್ಞೆಯನ್ನು ಮುಂದುವರಿಸುವಂತೆ ಕೇಳಿಕೊಳ್ಳಲು ಅವಕಾಶವಿತ್ತದರೂ ಅವರು ಹಾಗೆ ಕೇಳದಿರುವುದು ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಸಹಜವಾಗಿಯೇ ಉದ್ಭವಿಸುತ್ತದೆ. ಹೈಕೋರ್ಟ್ ತಡೆಯಾಜ್ಞೆ ಕೆಲವು ತಿಂಗಳುಗಳ ಹಿಂದೆಯೇ ತೆರವುಗೊಂಡಿರುವಾಗ, ತೆರವುಗೊಂಡಿಲ್ಲ ಎಂದು ಸುಳ್ಳು ಹೇಳಿರುವ ಕಾರಣ, ಅವರು ಆದಷ್ಟು ಬೇಗ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ನಲ್ಲಿ ದಾಖಲಿಸುವುದು ಮತ್ತು ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುವುದು ಸ್ವಾಗತಾರ್ಹವೇ ಆಗಿದೆ. ಈ ಕೆಲಸವನ್ನು ದಾಮೋದರ ಐತಾಳರು ಆದಷ್ಟಯ ಬೇಗನೇ ಮಾಡಲಿ. ಐತಾಳರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಬಗೆಗಿನ ವರದಿಯನ್ನೂ ಎಸ್.ಜಿ.ಕುರ್ಯರು ಬರೆದು ಪ್ರಚುರಪಡಿಸುವಂತಾಗಲಿ.

ಉಡುಪಿ ಸಂಚಾರಿ ಠಾಣೆಯ ಪೊಲೀಸ್ ಅಧಿಕಾರಿ ದಾಮೋದರ ಐತಾಳರ ಕಾರನ್ನು ಜಪ್ತಿ ಮಾಡಿದ್ದಾರೆಂದು ಎಸ್.ಜಿ.ಕುರ್ಯ ಬರೆದಿದ್ದಾರೆ. ಆದರೆ, ಎಸ್.ಜಿ.ಕುರ್ಯರು ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಎಸ್.ಮಧು ಅವರನ್ನು ಸಂಪರ್ಕಿಸಿ ಅವರ ಬೈಟ್ ನ್ನು ಪತ್ರಿಕಾ ವರದಿ ಜೊತೆಗೆ ದಾಖಲಿಸದಿರುವುದು ಸಹ ವರದಿಯ ಹಲವು ಲೋಪಗಳಲ್ಲಿ ಒಂದಾಗಿದೆ. ವರದಿ ಮಾಡುವ ಮೊದಲು ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದರೆ, ಕಾರು ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಚಾರ ಗೊತ್ತಾಗುತ್ತಿತ್ತು.

ತನ್ನ ಹೆಸರಲ್ಲಿರುವ ಕೆಎ 22 ಎನ್ 3013 ನಂಬ್ರದ ವ್ಯಾಗನರ್ ಕಾರನ್ನು ಸ್ವತಹಾ ಕೆ.ದಾಮೋದರ ಐತಾಳರೇ ಡಿಸೆಂಬರ್ 11ರ ಮದ್ಯಾಹ್ನ ಉಡುಪಿ ಸಂಚಾರ ಪೊಲೀಸ್ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಪೊಲೀಸರು ಈ ಬಗ್ಗೆ ಇದೇ ದಿನ ಮಧ್ಯಾಹ್ನ ಶಿವಳ್ಳಿ ಗ್ರಾಮ ಲೆಕ್ಕಾಧಿಕಾರಿ ಪ್ರಮೋದ, ಉಡುಪಿ ಹೋಬಳಿ ಕಂದಾಯ ನಿರೀಕ್ಷಕರಾದ ದೇವೇಂದ್ರ ನಾಯಕ್ ಹಾಗೂ ಬುಡ್ನಾರು ಅರವಿಂದ ಎಂಬವರ ಸಮಕ್ಷಮ ಮಹಜರು ನಡೆಸಿದ್ದಾರೆ. ಇದಕ್ಕೆ ಸ್ವತಹಾ ದಾಮೋದರ ಐತಾಳರೇ ಸಹಿ ಹಾಕಿದ್ದಾರೆ.

balakedara vedike-4balakedara vedike-5

* ಸ್ವತಹಾ ದಾಮೋದರ ಐತಾಳರೇ ತನ್ನ ಕಾರನ್ನು ಸಂಚಾರ ಪೊಲೀಸ್ ಠಾಣೆ ಮುಂದೆ ಹಾಜರುಪಡಿಸಿರುವುದಕ್ಕೆ ಮತ್ತು ಅವರೇ ಸಹಿ ಹಾಕಿರುವ ಪೊಲೀಸ್ ಮಹಜರು ಪ್ರತಿ.

ದಾಮೋದರ ಐತಾಳರು ಸಹಿ ಹಾಕಿದ್ದು ಸುಳ್ಳು ಎನ್ನುವುದಾದರೆ, ಈ ಬಗ್ಗೆ ಅತೀ ಶೀಘ್ರವಾಗಿ ಐತಾಳರು ಪೊಲೀಸ್ ಅಧಿಕಾರಿಗಳ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಮೊಕದ್ದಮೆ ದಾಖಲಿಸುವುದು ಕೂಡಾ ಅತೀ ಅಗತ್ಯವಾಗುತ್ತದೆ. ತನ್ನ ಕಾರನ್ನು ತಾನೇ ಸ್ವತಹಾ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರುಪಡಿಸಿದ ಮೇಲೆ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎನ್ನುವವರು ಮೂರ್ಖರೇ ಸರಿ. ದಾಮೋದರ ಐತಾಳರು ಪತ್ರಿಕಾ ವರದಿಗಾರ ಎಸ್.ಜಿ.ಕುರ್ಯರನ್ನು, ಆ ಮುಖಾಂತರ ಸಾವಿರಾರು ಪತ್ರಿಕಾ ಓದುಗರನ್ನು ಶತಮೂರ್ಖರನ್ನಾಗಿಸಿದ್ದಾರೆ ಎಂದಷ್ಟೇ ಇಲ್ಲಿ ಹೇಳಬಹುದಾಗಿದೆ.

ದಾಮೋದರ ಐತಾಳರು ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಮಾಹಿತಿ ನೀಡುವ ಯಾವುದಾದರೊಂದು ಪುಸ್ತಕವನ್ನು ಓದುತ್ತಿದ್ದರೆ, ”ನಾವು ಸರಕಾರಿ/ ಅರೆ ಸರಕಾರಿ ನೌಕರರಲ್ಲ, ಸಂಬಳ ಪಡೆಯುತ್ತಿಲ್ಲ, ಹೀಗಾಗಿ ನಾವು ಮಾಹಿತಿ ಅಧಿಕಾರಿಗಳಲ್ಲ” ಎಂಬ ಹೇಳಿಕೆ ನೀಡುತ್ತಿರಲಿಲ್ಲ. ಐತಾಳರು ಸಾರ್ವಜನಿಕರ ದಿಕ್ಕು ತಪ್ಪಿಸಲು ಮತ್ತು ಸಾರ್ವಜನಿಕರ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿಯ ಹೇಳಿಕೆಯನ್ನು ನೀಡಿರಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರ ತಿಳಿಯುವ ಹಕ್ಕನ್ನು ಮನ್ನಿಸುವ ಸಲುವಾಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊರಡಿಸಿದ ಸುತ್ತೋಲೆಯನ್ನು ಇಲ್ಲಿ ನೀಡಲಾಗಿದೆ. ಸರ್ವರೂ ಪರಾಂಬರಿಸಬಹುದು.

balakedara vedike-2

* ಮಾಹಿತಿ ಹಕ್ಕು ಕಾಯಿದೆ 2005ರಂತೆ ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರಾದ ದಾಮೋದರ ಐತಾಳರೇ ವೇದಿಕೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ಕರ್ನಾಟಕ ಮಾಹಿತಿ ಆಯೋಗ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಹೊರಡಿಸಿದ ಸುತ್ತೋಲೆ.

ವೇದಿಕೆಗೆ ಕಳೆದ 3 ವರ್ಷಗಳಿಂದ ಯಾವುದೇ ಅನುದಾನವೂ ದೊರೆಯುತ್ತಿಲ್ಲ ಎಂಬ ಹಸಿ ಹಸಿ ಸುಳ್ಳನ್ನು ವರದಿಗಾರ ಎಸ್.ಜಿ.ಕುರ್ಯ ಬರೆದಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರಾದ ಕೆ.ಎಸ್.ಉಪಾಧ್ಯರನ್ನೋ, ಆಹಾರ ನಾಗರಿಕ ಸರಬರಾಜು ಇಲಾಖಾಧಿಕಾರಿಗಳನ್ನೋ ಈ ನಿಟ್ಟಿನಲ್ಲಿ ವರದಿಗಾರ ಕುರ್ಯ ಕೇಳುತ್ತಿದ್ದರೆ ಸರಿಯಾದ ಉತ್ತರ, ಮಾಹಿತಿ ಖಂಡಿತಾ ಸಿಕ್ಕುತ್ತಿತ್ತು. ವಿಶೇಷ ಬೈಲೈನ್ ವರದಿ ಮಾಡುವ ಮೊದಲು ಈ ಕೆಲಸವನ್ನು ಮಾಡದೆ ಪರಮ ಭ್ರಷ್ಟ ದಾಮೋದರ ಐತಾಳರನ್ನು ರಕ್ಷಿಸುವ ಸಲುವಾಗಿ, ಅವರ ಮೇಲೆ ಸಾರ್ವಜನಿಕ ಅನುಕಂಪ ಮೂಡಿಸುವ ಸಲುವಾಗಿ ಏಕಪಕ್ಷೀಯ ವರದಿ ಮಾಡಿದ್ದೇ ಎಸ್.ಜಿ.ಕುರ್ಯರಿಗೆ ಈ ನಿಟ್ಟಿನಲ್ಲಿ ಸರಿಯಾದ ಮಾಹಿತಿ ಲಭಿಸದೆ ಸುಳ್ಳು ಮಾಹಿತಿ ಲಭಿಸಲು ಕಾರಣವಾಯಿತೆನ್ನಬಹುದು.

ವರದಿಗಾರರು ಬರೆದಿರುವ 3 ವರ್ಷಗಳಲ್ಲಿ 2015 ಅನ್ವಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ವರ್ಷ ಬಳಕೆದಾರರ ವೇದಿಕೆಗೆ ಶಾಲೆಗಳಲ್ಲಿ ಗ್ರಾಹಕ ಕ್ಲಬ್ ಗಳನ್ನು ರೂಪಿಸಲು ಸರಕಾರ ಅನುದಾನವನ್ನು ಬಿಡುಗಡೆಗೊಳಿಸಿದೆ. 2014ರಲ್ಲಿ ಮಾತ್ರ ಸರಕಾರ ವೇದಿಕೆಗೆ ಅನುದಾನ ಬಿಡುಗಡೆಗೊಳಿಸಿಲ್ಲ. 2014 ಹೊರತುಪಡಿಸಿ, 2013 ಸಹಿತ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಸರಕಾರ ಬಳಕೆದಾರರ ವೇದಿಕೆಗೆ ಅನುದಾನ ಒದಗಿಸಿದೆ. ದಾಖಲೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

balakedara vedike-1

* 2013ರಲ್ಲಿ ಒಂದು ಲಕ್ಷ ರು.ಗಳನ್ನು ಸರಕಾರೀ ಅನುದಾನವನ್ನು ಸ್ವತಹಾ ದಾಮೋದರ ಐತಾಳರೇ ಸಹಿ ಹಾಕಿ ಪಡೆದಿರುವುದಕ್ಕೆ ಸಾಕ್ಷಿ. 

ಕೊನೆಯದಾಗಿ ಒಂದು ಮಾತು. ಬಳಕೆದಾರರ ವೇದಿಕೆಯ ಸಂಚಾಲಕನ ಸ್ಥಾನಕ್ಕೆ ರಾಜೀನಾಮೆ ನೀಡುವ ದಾಮೋದರ ಐತಾಳರ ನಿರ್ಧಾರ ಅತ್ಯಂತ ಸೂಕ್ತವಾದುದೂ, ಸ್ವಾಗತಾರ್ಹವಾದುದೂ ಆಗಿದೆ. ಈ ನಿರ್ಧಾರವನ್ನು ದಾಮೋದರ ಐತಾಳರು ಸಾಕಷ್ಟು ತಡವಾಗಿ ತೆಗೆದುಕೊಂಡಿದ್ದಾರೆ. ಈ ಮೊದಲೇ ಈ ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಂಡು ರಾಜೀನಾಮೆ ನೀಡುತ್ತಿದ್ದರೆ, ಬಳಕೆದಾರರ ವೇದಿಕೆಯ ಘನತೆ, ಗೌರವವಗಳಾದರೂ ಉಳಿಯುತ್ತಿತ್ತು.

ಬಳಕೆದಾರರ ವೇದಿಕೆಯನ್ನು ಪ.ನಾರಾಯಣ ರಾವ್ ಹಾಗೂ ಇತರರು ಸ್ಥಾಪಿಸಿದ್ದೇ ಹೊರತು ದಾಮೋದರ ಐತಾಳರಲ್ಲ. ಪ.ನಾರಾಯಣ ರಾವ್ ಅವರಿಗೆ ವೇದಿಕೆಯನ್ನು ಟ್ರಸ್ಟ್ ಮಾಡುವ ಉದ್ಧೇಶವೇ ಇರಲಿಲ್ಲ. ಅವರ ಆಶಯಕ್ಕೆ ವಿರುದ್ಧವಾಗಿ ಮತ್ತು ದುರುದ್ಧೇಶದಿಂದಲೇ ದಾಮೋದರ ಐತಾಳರು ವೇದಿಕೆಯನ್ನು ಇಂಡಿಯನ್ ಟ್ರಸ್ಟ್ ಶಿಪ್ಟ್ ಆಕ್ಟ್ ನಲ್ಲಿ ನೋಂದಣಿ ಮಾಡಿಕೊಂಡು ಬಳಕೆದಾರರ ವೇದಿಕೆಯನ್ನು ತನ್ನ ಹಾಗೂ ತನಗೆ ಬೇಕಾದ ಕೆಲವೇ ಕೆಲವು ಜನರ ಪಿತ್ರಾರ್ಜಿತ ಸೊತ್ತಿನಂತೆ ಮಾಡಿರುವುದು ಅಕ್ಷಮ್ಯವೇ ಆಗಿದೆ. ಬಳಕೆದಾರರ ವೇದಿಕೆಯಂಥ ಸಂಸ್ಥೆಗಳು ಆಸಕ್ತ ಸಾರ್ವಜನಿಕರನ್ನು ಸದಸ್ಯರನ್ನಾಗಿ ಸ್ವೀಕರಿಸಿಕೊಂಡು, ಗ್ರಾಹಕ ಚಳುವಳಿಯಲ್ಲಿ ಅವರನ್ನು ತೊಡಗಿಸಿಕೊಳ್ಳುವಂಥ ಸಂಸ್ಥೆಯಾಗಬೇಕೇ ಹೊರತು ಒಬ್ಬ ಪರಮಭ್ರಷ್ಟ ವ್ಯಕ್ತಿಯ ಖಾಸಗೀ ಸೊತ್ತಿನಂತಿರಬಾರದು, ಆಗಬಾರದು.

ತಪ್ಪು ಮಾಡಿರುವುದು ದಾಮೋದರ ಐತಾಳರು. ಅದಕ್ಕಾಗಿ ಆಯೋಗ ಹಾಗೂ ಜಿಲ್ಲಾಡಳಿತ ಐತಾಳರ ಕಾರು ಜಪ್ತಿಗೆ ಆದೇಶಿಸಿದೆಯಷ್ಟೆ. ದಾಮೋದರ ಐತಾಳರು ಮಾಡಿದ ತಪ್ಪಿಗೆ ಬಳಕೆದಾರರ ವೇದಿಕೆಯಲ್ಲಿರುವ ಇತರ 14 ಮಂದಿ ಟ್ರಸ್ಟಿಗಳು ಹೊಣೆಯಲ್ಲ. ಟ್ರಸ್ಟಿಯಲ್ಲಿ ಒಟ್ಟು 15 ಮಂದಿ ಇದ್ದು, ಬಳಕೆದಾರರ ವೇದಿಕೆ ದಾಮೋದರ ಐತಾಳರ ಪಿತ್ರಾರ್ಜಿತ ಸಂಸ್ಥೆಯಾಗಲೀ, ಸ್ವಾರ್ಜಿತ ಸಂಸ್ಥೆಯಾಗಲೀ ಅಲ್ಲ. ಹಾಗಾಗಿ ಐತಾಳರು ಸಂಸ್ಥೆಯ ಸಂಚಾಲಕನ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಉಳಿದ 14 ಮಂದಿ ಸಂಸ್ಥೆಯನ್ನು ಮುಂದುವರಿಸಬಲ್ಲರು. ಮಾತ್ರವಲ್ಲ, ಉಡುಪಿಯಲ್ಲಿ ಗ್ರಾಹಕರ ಪರ ಅಪಾರ ಕಾಳಜಿ ಮತ್ತು ಆಸಕ್ತಿ ಇರುವ ಬೇಕಾದಷ್ಟು ಮಂದಿ ಪ್ರಜ್ಞಾವಂತರು, ತಿಳುವಳಿಕೆಯುಳ್ಳವರು ಇದ್ದು, ಬಳಕೆದಾರರ ವೇದಿಕೆಯು ಈ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಕರೆದಲ್ಲಿ ಮತ್ತು ವೇದಿಕೆಯ ಸದಸ್ಯರಾಗಲು ಮುಕ್ತ ಅವಕಾಶ ನೀಡಿದಲ್ಲಿ ಆಸಕ್ತರು ಸಭೆಗೆ ಬಂದು ವೇದಿಕೆಯನ್ನು ಸೇರಿಕೊಳ್ಳುವರು ಮತ್ತು ಕಳೆದುಕೊಂಡ ಘನತೆ ಮತ್ತು ಗೌರವಗಳನ್ನು ಮತ್ತೆ ದೊರಕಿಸಿಕೊಡುವರು ಎನ್ನುವದರಲ್ಲಿ ಯಾವುದೇ ಅನುಮಾನ ಬೇಡ.

ಇನ್ನಾದರೂ ಬಳಕೆದಾರರ ವೇದಿಕೆ ಒಬ್ಬ ವ್ಯಕ್ತಿಯ ಸೊತ್ತಾಗದಂತೆ ನೋಡಿಕೊಳ್ಳಬೇಕಾಗಿದೆ. ಒಂದು ಸಂಸ್ಥೆ ಒಬ್ಬ ವ್ಯಕ್ತಿಯ ಅಥವಾ ಒಂದು ಗುಂಪಿನ ಸೊತ್ತಾಗಬಾರದು ಎಂದಿದ್ದರೆ ಕೂಡಲೇ ಬಳಕೆದಾರರ ವೇದಿಕೆಯ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಿ ಸಾರ್ವಜನಿಕರಿಗೂ ಸದಸ್ಯರಾಗಲು ಅವಕಾಶ ಮಾಡಿಕೊಟ್ಟು, ಗ್ರಾಹಕ ಪರ ಕಾಳಜಿ ಹೊಂದಿರುವ ಇನ್ನಿತರರೂ ಬಳಕೆದಾರರ ವೇದಿಕೆಗೆ ಸೇರ್ಪಡೆಯಾಗುವಂತೆ ಮಾಡಬೇಕಾಗಿದೆ. ಹೀಗೆ ಮಾಡುವುದರಿಂದ ಬಳಕೆದಾರರ ವೇದಿಕೆಯ ಸ್ಥಾಪಕರಾದ ಪ.ನಾರಾಯಣ ರಾವ್ ಹಾಗೂ ಇತರರ ಸದಾಶಯವನ್ನು ಎತ್ತಿಹಿಡಿದಂತಾಗುತ್ತದೆ. ಉಡುಪಿಯಲ್ಲಿ ತನ್ನ ಹೊರತು ಗ್ರಾಹಕ ಪರ ಕಾಳಜಿ ಇರುವವರು, ಪ್ರಜ್ಞಾವಂತರು ಇನ್ನಾರೂ ಇಲ್ಲ, ಉಡುಪಿ ಒಂದು ಮರುಭೂಮಿ ಎಂಬ ಶತಮೂರ್ಖತನದ ಮನೋಭಾವವನ್ನು ಇನ್ನಾದರೂ ಕಡಿಯಾಳಿ ದಾಮೋದರ ಐತಾಳರು ಬಿಟ್ಟುಬಿಡುವುದು ಒಳ್ಳೆಯದು.

damodar aithalara car japthi

* ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿರುವ ದಾಮೋದರ ಐತಾಳರ ವ್ಯಾಗನರ್ ಕಾರು.

Leave a Reply

Your email address will not be published. Required fields are marked *