Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮನೆ ಬಿಟ್ಟವನ ಮನದ ಮಾತುಗಳು

ಅಂದು ಆಕೆ ಮಾಡಿದ
ಸಾರಿನಲ್ಲಿ ಉಪ್ಪು ಕಡಿಮೆಯಿತ್ತು
ಒಂದು ಕೂದಲು ಬಿದ್ದ ಮಾತ್ರಕ್ಕೆ
ಏರು ದನಿಯಲಿ ಗದರಿ
ವಾರದಲಿ ತರಕಾರಿ ಮೂರು ಸಲ
ಪನರಾವರ್ತಿಸಿದರೆ ಮನೆ ರಣರಂಗ

ಅಂದು ಆಕೆ ಒಗೆದ ಅಂಗಿಯ
ಒಂದು ಗುಂಡಿ ಉದುರಿದರೆ
ಆಕೆಯದು ಅಕ್ಷಮ್ಯ ಅಪರಾಧ
ಬಿಳಿ ಅಂಗಿಗೆ ಉಜಾಲ ಹಾಕಿದ್ದು
ಅತಿಯಾದರೆ ಮತ್ತೆ ಒಗಿಯಬೇಕು

ಅಂದು ಆಕೆ ಮನೆ ಗುಡಿಸಿದರೂ
ವಸ್ತುಗಳ ಅದೆಷ್ಟೇ ಜೋಡಿಸಿಟ್ಟರೂ
ಸರಿಯಾಗಿಲ್ಲವೆಂಬ ಆರೋಪ
ಇಟ್ಟ ವಸ್ತು ಸಿಗದಾದಾಗ
ಅವಳೇ ಸರ್ಚು ಇಂಜಿನ್ನು

ಇಂದು ಸಾರಿಗೆ ಉಪ್ಪು, ಖಾರ ಬೇಕಿಲ್ಲ
ಆಕೆ ಕೊಟ್ಟ ಉಪ್ಪಿನಕಾಯಿಯೂ ಅಮೃತ
ತಾನು ಕಷ್ಟಪಟ್ಟು ಮಾಡಿದ ಅಡುಗೆಗೆ
ಒಂದಲ್ಲ ಹತ್ತು ಕೂದಲು ಬಿದ್ದರೂ ಶ್ರೇಷ್ಟ
ವಾರಪೂರ್ತಿ ನಡೆಯುತ್ತೆ ತರಕಾರಿ

ಬಟ್ಟೆಯ ಒಗೆವಾಗ ಗುಂಡಿ ಕಳೆದರೂ
ಕೊಳೆಯನು ಕಳೆವಾಗ ಅಂಗಿ ಹರಿದರೂ
ಯಾವುದೂ ದೊಡ್ಡ ವಿಷಯವೇನಲ್ಲ
ಬಿಳಿ ಬಟ್ಟೆಗೆ ನೀಲಿ ಹೆಚ್ಚಾದರೆ
ಹೊಸ ಫ್ಯಾಷನ್ ಎಂದು ನಾಮಕರಣ

ತಾನಿರುವ ಜಾಗದಿ ವಸ್ತುಗಳು
ಚೆಲ್ಲಾಪಿಲ್ಲಿಯಾಗಿ ಬಿದ್ದಿರಬಹುದು
ರಾಶಿ ಕಸ ಬಿದ್ದರೂ, ಧೂಳು ಹೊದ್ದರೂ
ಕಸ ಗುಡಿಸಿದರೆ ಪೊರಕೆಗೆ ನೋವಾಗಬಹುದು

ಮನೆ ಗೆಲಸವೇನೆಂದು ಅರಿವಾಗಿದೆ
ಮನೆ ಬಿಟ್ಟ ದಿನದಿಂದ ಮನ ನೊಂದಿದೆ
ಆಕೆ ಅಮ್ಮನಾಗಿರಬಹುದು, ಹೆಂಡತಿ ಇರಬಹುದು
ಆಕೆಯ ಶ್ರಮದ ಬೆಲೆ ತಿಳಿಯುತ್ತಿದೆ
ಮನೆ ಬಿಟ್ಟ ನಂತರವೇ ಮನಮೆಚ್ಚಿದೆ ಅವಳಾ
ಆ ಹೆಣ್ಣು ಅದೆಷ್ಟು ಕರುಣಾಮಯಿ!

– ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ

Leave a Reply

Your email address will not be published. Required fields are marked *