Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಿದ್ದು ಭಾಗ್ಯ : ಜನತೆಯ ದೌರ್ಭಾಗ್ಯ !

# ಭ್ರಷ್ಟಾಚಾರದ ವಿರುದ್ದ ತೊಡೆ ತಟ್ಟಿ, ಪಂಚೆ ಎತ್ತಿಕಟ್ಟಿ, ಪಾದಯಾತ್ರೆ ಮಾಡಿ, ಸದನಲ್ಲಿ ನಿದ್ರೆ ಮಾಡಿ ಅತ್ಯದ್ಭುತ ನಾಟಕ ಆಡಿದ ಪಕ್ಷ ಹಾಗೂ ಅದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಸರಕಾರ, ಇದೀಗ ಭ್ರಷ್ಟಾಚಾರದ ನಿಯಂತ್ರಣದ ಬಗ್ಗೆ ಬದ್ದತೆಯೇ ಇಲ್ಲದ ದುರುಳ ಭ್ರಷ್ಟ ರಾಜ್ಯ ಸರಕಾರವಾಗಿರುವುದು ಕಾಲದ ಮಹಿಮೆ.

ದೊಡ್ದ ಗುತ್ತಿಗೆದಾರರೊಬ್ಬರ ಹಾಗೂ ಹಲವು ಇತರ ಪ್ರಮುಖ ಸರಕಾರದಲ್ಲಿರುವವರ ವಿರುದ್ದ ಲೋಕಾಯುಕ್ತ ತನಿಖೆ ನಡೆಸುತ್ತಿದ್ದ ಹಾಗೆ, ಉಪ ಲೋಕಾಯುಕ್ತರನ್ನೆ ಪದಚ್ಯುತಿ ನಡೆಸಲು ಹೊರಟು ಉಗ್ರ ಪ್ರತಾಪ ತೋರಿ ಉತ್ತರನ ಪೌರುಷ ವಲೆಯ ಮುಂದೆ ಎಂಬಂತಾಗಿ ಕುಳಿತರೆ, ಮಾಜಿ ಲೋಕಾಯುಕ್ತರ ಪದಚ್ಯುತಿ ಮಾಡಬೇಕೆಂದು ಇಡೀ ರಾಜ್ಯವೇ ಒಕ್ಕೊರಲಿನಿಂದ ಕೇಳಿದರು ಚಕಾರವೆತ್ತದೆ ಇನ್ನೇನು ಬೇರೆ ಮಾರ್ಗವೇ ಇಲ್ಲಾ ಎನ್ನುವಾಗ ಪದಚ್ಯುತಿಗೆ ತನ್ನ ಬೆಂಬಲ ಸೂಚಿಸುತ್ತದೆ. ಉಪ ಲೋಕಾಯುಕ್ತ ಹುದ್ದೆಗೆ ಎಲ್ಲರಿಗೂ ಬೇಡವಾದ ಒಂದು ಹೆಸರನ್ನು 3 ಬಾರಿ ರಾಜ್ಯಪಾಲರಲ್ಲಿ ಕಳಿಸುತ್ತದೆ.

ಈಗ ಗುರುತರ ಆರೋಪವನ್ನು ಹೊಂದಿರುವ ಹಾಗೂ ಗುತ್ತಿಗೆದಾರರೊಬ್ಬರಿಕೆ ಆತ್ಮೀಯರಾಗಿರುವವರನ್ನು (ಆತ್ಮೀಯ ಗುತ್ತಿಗೆದಾರರ ವಿರುದ್ದವೇ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿರುವುದು ವಿಪರ್ಯಾಸ) ಮಾಜಿ ಲೋಕಾಯುಕ್ತರ ಹಾಗೂ ಭ್ರಷ್ಟಾಚಾರ ಹೋರಾಟಗಾರರ ವಿರೋಧದ ನಡುವೆಯೂ (ಇದೆ ಹೋರಾಟಗಾರರ ಹೋರಾಟ ಮತ್ತು ಮಾಜಿ ಲೋಕಾಯುಕ್ತರ ತನಿಖಾ ವರದಿ ಸರಕಾರದ ಪದಗ್ರಹಣಕ್ಕೆ ಬಂಡವಾಳವಾಗಿತ್ತು) ಭಾರಿ ಪ್ರಯತ್ನ ಮಾಡುತ್ತಿದೆ.

ಇದರೊಂದಿಗೆ, ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಸೂಚಿಸಿರುವ ನಿಶ್ಕಳಂಕ ನಿವೃತ್ತ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಸೇನ್ ಅವರ ಅಸಮ್ಮತಿ ಪತ್ರ ಸರಕಾರದ ಅಡಳಿತ ಮತ್ತು ಲೊಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ತನ್ನೆಲ್ಲ ಪ್ರಯತ್ನಕ್ಕೆ ಹಿಡಿದ ಕೈ ಕನ್ನಡಿ. ನ್ಯಾಯಮೂರ್ತಿ ಸೇನ್ ಅವರು ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಾದೀಶರಾಗಿದ್ದಾಗ ಡಿ.ವಿ. ಸದಾನಂದ ಗೌಡರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಉಪ ಲೋಕಾಯುಕ್ತರೊಬ್ಬರ ನೇಮಕಾತಿಯನ್ನು ವಿರೋಧಿಸಿ, ಕೆಲವೇ ತಿಂಗಳುಗಳಲ್ಲಿ ಆ ಉಪ ಲೋಕಾಯುಕ್ತರು ನಿರ್ಗಮಿಸಿದ್ದು ಇತಿಹಾಸ.

ನ್ಯಾಯಮೂರ್ತಿ ಸೆನ್ ಅವರ ಅಸಮ್ಮತಿ ಸರಕಾರಕ್ಕೆ ಹೊಸ ಸೌಭಾಗ್ಯ, ಹಾಗೆಯೇ ಜನತೆಯ ದೌರ್ಭಾಗ್ಯ. ಅದೇನೇ ಇರಲಿ, ಹಿರಿಯ ಹೊರಾಟಗಾರ ಹಿರೇಮಠ ಹೇಳಿದಂತೆ; ಯಾರು ಬೇಕಾದರೂ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರಾಗಬಹುದು. ಆದರೆ, ಯಾರು ಬೇಕಾದರೂ ಕರ್ನಾಟಕ ಲೋಕಾಯುಕ್ತರಾಗಲು ಸಾಧ್ಯ ಇಲ್ಲ. ನ್ಯಾಯಮೂರ್ತಿ ವೆಂಕಟಾಚಲಯ್ಯ ಹಾಗೂ ಸಂತೋಷ್ ಹೆಗ್ಡೆಯವರ ಸಾರಥ್ಯ, ಮಧುಕರ ಶೆಟ್ಟಿ, ಡಾ. ಮಹೇಶ್, ಸೋನಿಯಾ ನಾರಂಗ್ ಇತರ ದಕ್ಷ ಅಧಿಕಾರಿಗಳು, ಹಿರೇಮಠ, ಕೌಂಡಿಲ್ಯರಂತಹ ಹೋರಾಟಗಾರರು ಹಾಗೂ ಕೆಲವು ಪತ್ರಕರ್ತರು ಲೋಕಾಯುಕ್ತ ಸಂಸ್ಥೆಯನ್ನು ಇನ್ನೂ ಪವಿತ್ರವಾಗಿರಿಸಿದ್ದಾರೆ. ಅದನ್ನು ಅಪವಿತ್ರಗೊಳಿಸಲು ಬಲು ದೊಡ್ಡ ಯುದ್ದ ಮಾಡಬೇಕು.

– ಪ್ರಭಾಕರ್, ಉಡುಪಿ.

Leave a Reply

Your email address will not be published. Required fields are marked *