ಬಾಲಕಿಯ ಅಪಹರಿಸಿ ವಿವಾಹವಾದ ಪ್ರಕರಣ: ಆರೋಪಿಗಳಿಗೆ ಶಿಕ್ಷೆ
- Updated: January 14, 2016

ಉಡುಪಿ: ಬಾಲಕಿಯನ್ನು ಅಪಹರಿಸಿ, ವಿವಾಹವಾಗಿ ಬಾಲ್ಯ ವಿವಾಹ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣದ ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಧೀಸರಾದ ಶಿವಶಂಕರ ಬಿ. ಅಮರಣ್ಣನವರ್ ಅವರು ಇಂದು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಉಡುಪಿ ತಾಲೂಕು ಆರೂರು ಗ್ರಾಮದ ಆರೂರು ಕ್ರಾಸ್ ನಿವಾಸಿ ನರಸಿಂಹ ಶೇರೆಗಾರ್ ರವರ ಪುತ್ರ ಸುದರ್ಶನ್ ಕಿರಣ (28) ಹಾಗೂ ಅಪ್ರಾಪ್ತೆಯನ್ನು ವಿವಾಹವಾಗಲು ಸಹಕರಿಸಿದ ಉಡುಪಿ ತಾಲೂಕು ಬ್ರಹ್ಮಾವರ ನಿವಾಸಿ ಕೊರಗ ಹಾಂಡಾರವರ ಪುತ್ರ ಗುರುರಾಜ ಹಾಂಡ (26) ಎಂಬವರು ಶಿಕ್ಷೆಗೆ ಒಳಗಾದವರು.
ಪ್ರಕರಣದ 1ನೇ ಆರೋಪಿ ಸುದರ್ಶನ್ ಕಿರಣನಿಗೆ 3 ವರ್ಷ ಶಿಕ್ಷೆ ಮತ್ತು 3 ಸಾವಿರ ರು. ದಂಡ ವಿಧಿಸಲಾಗಿದೆ. 2ನೇ ಆರೋಪಿ ಗುರುರಾಜ ಹಾಂಡನಿಗೆ 2 ವರ್ಷ ಶಿಕ್ಷೆ ಮತ್ತು 2 ಸಾವಿರ ರು. ದಂಡ ವಿಧಿಸಲಾಗಿದೆ. ದಂಡದ ಒಟ್ಟು ಮೊತ್ತವಾದ 5 ಸಾವಿರ ರು.ಗಳನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ. ಮಾತ್ರವಲ್ಲ, ಅಪ್ರಾಪ್ತೆಯನ್ನು ವಿವಾಹವಾಗುವುದಕ್ಕಾಗಿ ನಕಲಿ ದಾಖಲೆ ಸೃಷ್ಟಿಸುವ ಸಲುವಾಗಿ ಸುದರ್ಶನ್ ಕಿರಣನಿಂದ ಗುರುರಾಜ ಹಾಂಡ ಪಡೆದುಕೊಂಡಿದ್ದ 20 ಸಾವಿರ ರು.ಗಳನ್ನು ಪ್ರಕರಣದ ತನಿಖೆಯ ಸಂದರ್ಭದಲ್ಲಿ ಪೊಲೀಸರು ಜಪ್ತಿ ಮಾಡಿಕೊಮಡಿದ್ದು, ಈ ಹಣವನ್ನು ಸರಕಾರಕ್ಕೆ ಮೊಟ್ಟುಗೋಲು ಹಾಕಿಕೊಳ್ಳುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ.
2010ರ ಅಗೋಸ್ಟ್ 2ರಂದು ವಿವಾಹವಾಗುವ ಸಲುವಾಗಿ ಆರೋಪಿಗಳು ಬಾಲಕಿಯನ್ನು ಭಯದ ನೆರಳಲ್ಲಿ ಅಪಹರಿಸಿ, ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಇದಕ್ಕಾಗಿ ಬಾಲಕಿ ವಯಸ್ಕಳು ಎಂಬಂತೆ ವೈದ್ಯಾಧಿಕಾರಿಯಿಂದ ಸುಳ್ಳು ದಾಖಲೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆರೋಪಿ ಸುದರ್ಶನ್ ಕಿರಣ, ಬಾಲಕಿಯನ್ನು ಬೇರೆ ಬೇರೆ ಕಡೆಗಳಿಗೆ ಒಯ್ದು ಲೈಂಗಿಕ ಅಪರಾಧವೆಸಗಿದ್ದನು. ವಿವಾಹ ನೋಂದಣಿಗಾಗಿ ಆರೋಪಿಗಳು ಬೇರೆಯವರ ಸುಳ್ಳು ಸಹಿಗಳನ್ನು ಮಾಡಿಸಿದ್ದರು.
ಈ ಬಗ್ಗೆ, ಅಂದಿನ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಜಿ.ಕೃಷ್ಣಮೂರ್ತಿ ಅವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 465, 471, 366, 376ರ ಜೊತೆಗೆ 34 ಮತ್ತು ಬಾಲ್ಯ ವಿವಾಹ ನೋಂದಣಿ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಅಪ್ರಾಪ್ತೆಗೆ ‘ವಯಸ್ಕ’ಳೆಂದು ಸುಳ್ಳು ದಾಖಲೆ ನೀಡಿದ ವೈದ್ಯಾಧಿಕಾರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆಯೇ, ಇಲ್ಲವೇ ಎಂಬುದು ತಿಳಿದುಬಂದಿಲ್ಲ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ಅವರು ವಾದಿಸಿದ್ದರು.