Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಡವರ ಬಗ್ಗೆ ಅನುಕಂಪ ಯಾಕೆ ತೋರಬೇಕು ?

* ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ

# ಕೆಲವರ ವಾದಗಳನ್ನು ಕೇಳಿದ್ರೆ ವಿಚಿತ್ರ ಅನ್ನಿಸಿ ಬಿಡುತ್ತೆ. ಸರಕಾರ ಬಡವರನ್ನು ನೋಡಬೇಕು, ಬಡವರಿಗೆ ಆಹಾರ ಕೊಡಬೇಕು, ಸರಕಾರ ಅಲ್ಲಿಗೆ ಹೋಗುವ ಬದಲು ಆ ಹಣವನ್ನು ಬಡವರಿಗೆ ಕೊಡಬಹುದಿತ್ತು, ಇಲ್ಲಿಗೆ ಇಷ್ಟು ಹಣ ಕೊಡುವುದರ ಬದಲು ಬಡವರಿಗೆ ಇದು ಮಾಡಬಹುದಿತ್ತು ಎಂಬ ಒಕ್ಕಣೆಗಳು ಕೇಳಿ ಬರುವುದು ಸಾಮಾನ್ಯ. ಈಗಂತೂ ಸಾಮಾಜಿಕ ಜಾಲತಾಣಗಳ ಯುಗ. ಕೆಲವರು ಲೈಕ್ ಗಿಟ್ಟಿಸಲು ಬಡವರ ಚಿತ್ರ ಹಾಕಿಯೋ, ಕವನ ಬರೆದೋ, ಸರಕಾರವನ್ನು ದೂರಿಯೋ ತಮ್ಮನ್ನು ಗ್ರೇಟ್ ಎಂದು ಬಿಂಬಿಸಿಕೊಳ್ಳುತ್ತಾರೆ. ಕೆಲ ರಾಜಕೀಯ ಪಕ್ಷಕ್ಕಂತೂ ಬಡವರ ಬಗ್ಗೆ ಮಾತೇ ಮಾತು. ಗರೀಬಿ ಹಠಾವೋ ಎಂಬ ಘೋಷಣೆ ಮಾಡಿ ಇಷ್ಟು ವರ್ಷವಾದರೂ ಗರೀಬಿತನ ಹೋಗಿಲ್ಲ. ಆದರೂ ಅಜ್ಜ ನೆಟ್ಟ ಆಲದ ಮರಕ್ಕೆ ಸುತ್ತು ಬರುತ್ತಿದ್ದಾರೆ.

ಹೀಗೆಲ್ಲಾ ಬರೆದದ್ದು ನೋಡಿ ನೀವಂದುಕೊಂಡಿರಬಹುದು, ಇವನಿಗೆ ಬಡವರ ಬಗ್ಗೆ ಕೀಳು ಭಾವನೆ, ದುಡ್ಡಿನ ಅಹಂಕಾರ ಎಂದು. ಖಂಡಿತಾ ಇಲ್ಲ. ಒಮ್ಮೆ ನಮ್ಮ ಸಂಸ್ಥೆಯ ಮೆಸ್ ನೋರು ಕೊಟ್ಟ ಸಾರು, ಪಲ್ಯ ಹಿಡಿಸಲಿಲ್ಲವೆಂದು, ಅನ್ನಕ್ಕೆ ಉಪ್ಪು ಹಾಕಿ ಹಸಿಮೆಣಸಿನಕಾಯಿ ಕಚ್ಚಿ ಊಟ ಮಾಡತೊಡಗಿದೆ. ಜೊತೆಯಲ್ಲಿದ್ದವರು ಆಶ್ಚರ್ಯದಿಂದ ಕೇಳಿದರು, ಹೇಯ್ ಅದೇಗೆ ಊಟ ಮಾಡ್ತೀಯಾ ? ಆಗ ಅಂದೆ, ಬಾಲ್ಯದಲ್ಲಿ ಉಪ್ಪು ಮುಂಚಿ (ಉಪ್ಪು, ಮೆಣಸು, ಗಂಜಿ ತಿಳಿ ಮಿಶ್ರಣ)ಯಲ್ಲಿ ಊಟ ಮಾಡಿ ಅಭ್ಯಾಸ ಇದೆ. ಅಷ್ಟರ ಮಟ್ಟಿಗೆ ಬಡತನ ಇತ್ತು. ಆದರೆ ಇಂದು, ದೇವರ ದಯೆಯಿಂದ ಬಯಸಿದ್ದನ್ನು ತಿನ್ನುವ ಭಾಗ್ಯ ಇದೆ. ಹಾಗಂತ ಏರಿದ ಏಣಿಯನ್ನು ಮರೆಯೋಲ್ಲ ಎಂದಿದ್ದೆ. ಹೌದು, ಬಾಲ್ಯದಲ್ಲಿ ತೀರಾ ಬಡತನ ದಾಟಿ ಬಂದವ ನಾನು. ಬಾಲ್ಯದಿಂದ ವಯಸ್ಕನಾಗುವರೆಗೂ, so called ಬಡವರ ಪಕ್ಷವೇ ಅಧಿಕಾರದಲ್ಲಿತ್ತು. ಆದರೆ ಸರಕಾರದ ಕಡೆಯಿಂದ ಒಂದು ರೂಪಾಯಿಯೂ ನಮಗೆ ಸಿಕ್ಕಿಲ್ಲ. ಬಡತನ ಹಾಗೂ ಕಷ್ಟದಿಂದ ಮೇಲೆ ಬಂದಿದ್ದು. ಅಪ್ಪನ ದುಡಿಮೆ ಹಾಗೂ ನನ್ನ ೭ ವರ್ಷಗಳ ಈಚೆಗಿನ ದುಡಿಮೆಯಿಂದಷ್ಟೇ.

ನಾನು ಹೇಳ ಹೊರಟಿರುವುದೇನೆಂದರೆ, ಹುಟ್ಟಿನಿಂದಲೇ ಚಿನ್ನದ ಚಮಚದಲ್ಲಿ ಊಟ ಮಾಡಿ, ಬಡತನದ ಅನುಭವವಿಲ್ಲದೇ ಬಡವರ ಬಗ್ಗೆ ಹೇಳಿಕೆ ಕೊಟ್ಟು ಚಪ್ಪಾಳೆ ಗಿಟ್ಟಿಸುವ ನಾಯಕರನ್ನು ನಿರ್ಲಕ್ಷಿಸಬೇಕಾಗಿದೆ. ಯಾಕೆಂದರೆ ಬಡವನಿಗೆ ಬೇಕಾಗಿರುವುದು ಅನುಕಂಪದ ಮಾತುಗಳಲ್ಲ ಅಥವಾ ಉಚಿತ ಕೂಳೂ ಅಲ್ಲ. ಬದಲಿಗೆ ದುಡಿಯಲು ಕೆಲಸ. ಸರಕಾರ ಅದನ್ನು ವ್ಯವಸ್ಥೆ ಮಾಡಿದರೆ ಸಾಕು. ಅದು ಸ್ವ ಉದ್ಯಮಕ್ಕೆ ತರಬೇತಿ, ಸಾಲ ನೀಡುವುದರಿಂದಲೋ ಅಥವಾ ಉದ್ದಿಮೆದಾರರ ಬಂಡವಾಳ ಹೂಡಿಕೆಯಿಂದಲೋ ಎಂಬುದು ಸರಕಾರಕ್ಕೆ ಬಿಟ್ಟ ವಿಚಾರ.

ಸರಕಾರ ಯಾವಾಗಲೂ ಹೂಡಿಕೆಯ ಯೋಜನೆ ಮಾಡಬೇಕು. ಅಂದರೆ, ಒಬ್ಬ ಬಡವನಿಗೆ ನೂರು ರೂಪಾಯಿ ಕೊಟ್ಟು ಊಟ ಮಾಡು ಅನ್ನುವುದರ ಬದಲು,ನೂರು ರೂಪಾಯಿ (ಮೌಲ್ಯ ಉದಾಹರಣೆಯಷ್ಟೇ) ಕೊಟ್ಟು ನೀನೇನಾದರೂ ಉದ್ಯಮ ಪ್ರಾರಂಭಿಸು ಅಂತಾ ಪ್ರೇರಣೆ ನೀಡಬೇಕು. ಆಗ ಸರಕಾರ ಕೊಟ್ಟ ಹಣ ಸದ್ಬಳಕೆಯಾದಂತೆ. ಹೀಗೆ ಮುಂದುವರಿದರೆ ಮಾತ್ರ ದೇಶ ಬೇಗ ಮುಂದುವರಿಯುತ್ತದೆ. ಅಂತಹ ಯಾವುದೇ ಯೋಜನೆಗಳಿಲ್ಲದೆ ಸರಕಾರ ಉಚಿತವಾಗಿಯೇ ಎಲ್ಲವನ್ನೂ ಕೊಡುತ್ತಾ ಹೋದರೆ, ಬಡವ ಸಮಾಜಕ್ಕೆ ಹೊರೆಯಾಗುತ್ತಲೇ ಹೋಗುತ್ತಾನೆ.

ಕೆಲವೊಂದು ವಿಶೇಷ ಪ್ರಕರಣಗಳಿರುತ್ತವೆ. ಉದಾಹರಣೆಗೆ ದುಡಿಯುವರು ಯಾರೂ ಇಲ್ಲದೇ ಅನಾರೋಗ್ಯದಿಂದ ಅಶಕ್ತರಾದವರು ಅಥವಾ ವೃದ್ಧರು. ಇಂಥವರಿಗೆ ಸಂಘ ಸಂಸ್ಥೆಗಳು ಸಹಾಯ ಮಾಡುವುದೇ ಉತ್ತಮ. ಯಾಕೆಂದರೆ ನಮ್ಮ ಸರಕಾರಗಳು ಜಾತಿ, ಮತವನ್ನು ಮಾನದಂಡವಾಗಿಸಿರುವುದರಿಂದ ಇವರುಗಳಿಗೆ ಈಗಾಗಲೇ ಇರುವ ಸರಕಾರದ ಸವಲತ್ತುಗಳು ಕೆಲವೊಮ್ಮೆ ಪಡೆಯಲು ಅರ್ಹತೆ ಇರೋಲ್ಲ. ಇಂಥವರ ಕಷ್ಟಕ್ಕೆ ನೆರವಾದಾಗ ಸಿಗುವ ಆನಂದವೇ ಬೇರೆ. ಸಹಾಯ ಪಡೆದವರ ಕಣ್ಣಂಚಿನಲ್ಲಿ ಹರಿದು ಬರುವ ಆನಂದ ಭಾಷ್ಪ ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತೆ. ಇದು ನಮ್ಮ ಸಂಸ್ಥೆಯ ಮೂಲಕ ನನಗಾದ ಅನುಭವ.

ಬಡವರ ಬಗ್ಗೆ ಲೇಖನಗಳಲ್ಲಿ ಅನುಕಂಪ ತೋರಿಸುವ ಬದಲು, ನಮ್ಮ ಮನೆ ಪಕ್ಕದಲ್ಲಿರುವ ಅಥವಾ ಊರಿನ ಬಡವರಿಗೆ ಸೂಕ್ತ ಮಾರ್ಗದರ್ಶನ ನೀಡೋಣ ಅಥವಾ ಅವರು ವೃತ್ತಿಯಲ್ಲಿ ತೊಡಗುವಂತೆ ಸಹಾಯ ಮಾಡುವುದು ಉತ್ತಮ. ಅಶಕ್ತರಾದರೆ ಆರ್ಥಿಕ ಸಹಾಯದೆಡೆಗೆ ಗಮನಹರಿಸೋಣ. ನಮ್ಮ ನೆರೆಹೊರೆಯವರನ್ನು ಸದ್ಯಕ್ಕೆ ನೋಡಿಕೊಂಡರೆ ಸಾಕು. ಯಾಕೆಂದರೆ ಲೋಕದ ಸಮಸ್ಯೆಗೆಲ್ಲಾ ಸ್ಪಂದಿಸುವುದು ನಮಗಸಾಧ್ಯ. ಕೆಲವೊಮ್ಮೆ ಅನುಕೂಲತೆಯನ್ನೂ ನೋಡಿಕೊಳ್ಳಬೇಕಾಗುತ್ತೆ.

One Comment

  1. ramakolambe@gmail.com'

    rama kay

    March 8, 2016 at 1:23 pm

    this is the truth regarding govt policies

Leave a Reply

Your email address will not be published. Required fields are marked *