Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹಿರಿಯಡ್ಕ ಪಿಎಸ್ಐ ರಫೀಕ್ ರಿಂದ ಮತ್ತೆ ದಲಿತ ದೌರ್ಜನ್ಯ: ಎಸ್ಪಿ ಅಣ್ಣಾಮಲೈ ಪಕ್ಷಪಾತವೇ ಪೊಲೀಸ್ ಅತಿರೇಕಕ್ಕೆ ಕಾರಣ !

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಫೀಕ್ ಮತ್ತೆ ದಲಿತ ದೌರ್ಜನ್ಯ ನಡೆಸಿದ್ದು, ಹಲ್ಲೆಗೊಳಗಾದ ಯುವಕ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾನೆ.

ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿ ಐತುರವರ ಪುತ್ರ, ಕಾರ್ಕಳ ಕಾಬೆಟ್ಟು ಎಂಪಿಎಂ ಕಾಲೇಜಿನ ಬಿಕಾಂ ವಿದ್ಯಾರ್ಥಿ ಸುದರ್ಶನ್ (18) ಹಿರಿಯಡ್ಕ ಪಿಎಸ್ಐ ಎಂ.ರಫೀಕ್ ರವರಿಂದ ಹಲ್ಲೆಗೆ ಒಳಗಾದವನಾಗಿದ್ದಾನೆ.

ಫೆಬ್ರವರಿ 22ರಂದು ಸಂಜೆ ಗಂಟೆ 6.10ಕ್ಕೆ ಹಿರಿಯಡ್ಕ ಸಮೀಪದ ಗುಡ್ಡೆಯಂಗಡಿ ಜಂಕ್ಷನ್ ಬಳಿ ಪೊಲೀಸ್ ಜೀಪಿನಲ್ಲಿ ಬಂದು ಬೈಕ್ ನ್ನು ತಡೆದು ನಿಲ್ಲಿಸಿದ ಸಬ್ ಇನ್ಸ್ ಪೆಕ್ಟರ್ ರಫೀಕ್ ಹಾಗೂ ಸಿಬ್ಬಂದಿ ಇಬ್ಬರೂ ಸುದರ್ಶನ್ ಮೇಲೆ ಹಲ್ಲೆ ನಡೆಸಿದರೆನ್ನಲಾಗಿದೆ. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದುದೇ ಪೊಲೀಸರು ಬೈಕ್ ನ್ನು ತಡೆದು ನಿಲ್ಲಿಸಲು ಕಾರಣವೆನ್ನಲಾಗಿದೆ.

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಕ್ಕೆ ಮತ್ತು ಪರವಾನಿಗೆ ಇಲ್ಲದೇ ಬೈಕ್ ಚಾಲನೆ ಮಾಡಿರುವುದೇ ಇತ್ಯಾದಿ ಎಲ್ಲದಕ್ಕೂ ಕಾನೂನು ಪ್ರಕಾರವಾಗಿ ದಂಡ ವಿಧಿಸುವ ಹಕ್ಕು ಪೊಲೀಸ್ ಅಧಿಕಾರಿಗಿದೆಯೇ ಹೊರತು ಹಲ್ಲೆ ನಡೆಸುವ ಅಧಿಕಾರ ಇಲ್ಲವಾದರೂ, ಇಲ್ಲಿ ಸಬ್ ಇನ್ಸ್ ಪೆಕ್ಟರ್ ರಫೀಕ್ ಅವರು ಸುದರ್ಶನ್ ಮೇಲೆ ಹಲ್ಲೆ ನಡೆಸಲು ಯುವಕ ಪರಿಶೀಷ್ಟ ಜಾತಿಯವನಾಗಿದ್ದುದೇ ಕಾರಣವೆಂದು ದೂರಲಾಗಿದೆ.

ಹಲ್ಲೆ ನಡೆಸುವ ಸಂದರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ರಫೀಕ್ ಅವರು ಸುದರ್ಶನ್ ಅವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದುದಲ್ಲದೆ, ದಲಿತ ಜಾತಿ ನಿಂದನೆಯನ್ನೂ ಮಾಡಿದ್ದಾರೆಂದು ಆರೋಪಿಸಲಾಗಿದೆ.

sudarshan

* ಸುದರ್ಶನ್

ದಲಿತ ದೌರ್ಜನ್ಯಕ್ಕೆ ಎಸ್ಪಿ ಅಣ್ಣಾಮಲೈ ಪ್ರೋತ್ಸಾಹ !

ಹಿರಿಯಡ್ಕ ಪಿಎಸ್ಐ ಎಂ.ರಫಿಕ್ ಅವರು ದಲಿತ ದೌರ್ಜನ್ಯ ನಡೆಸುತ್ತಿರುವುದು ಕಳೆದ 3 ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಫೆಬ್ರವರಿ 20ರಂದು ರಫೀಕ್ ನಡೆಸಿದ ದಲಿತ ದೌರ್ಜನ್ಯವನ್ನು ಎಎಸ್ಪಿ ಅಣ್ಣಾಮಲೈ ಅವರು ಬೆಂಬಲಿಸಿ ಪ್ರೋತ್ಸಾಹಿಸಿದ್ದೇ ಮತ್ತೆ ರಫೀಕ್ ಅವರು ದಲಿತ ದೌರ್ಜನ್ಯ ನಡೆಸಲು ಕಾರಣವಾಯಿತು. ಮೊದಲ ಸಲವೇ ದಲಿತ ದೌರ್ಜನ್ಯದ ವಿರುದ್ಧ ಪೊಲೀಸ್ ಪಕ್ಷಪಾತಿಯಾಗಿ ಎಸ್ಪಿ ಅಣ್ಣಾಮಲೈ ಅವರು ವರ್ತಿಸದೇ ಇರುತ್ತಿದ್ದರೆ, ಎರಡನೇ ಬಾರಿ ಪಿಎಸ್ಐ ರಫೀಕ್ ದಲಿತ ದೌರ್ಜನ್ಯ ನಡೆಸುವ ಮುಖಾಂತರ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ ಎಂದು ಸ್ಥಳೀಯ ದಲಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 20ರಂದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಸಮಯದಲ್ಲಿ ಬೊಮ್ಮರಬೆಟ್ಟು ಗ್ರಾಮದ ಮುಂಡಾಜೆ ಶಾಲೆಯ ಬಳಿ ಸೇರಿದ್ದ ಸಣ್ಣ ಗುಂಪೊಂದನ್ನು ಚದುರಿಸಲು ಪಿಎಸ್ಐ ರಫೀಕ್ ಹಾಗೂ ಸಿಬ್ಬಂದಿಗಳು ಅನಗತ್ಯವಾಗಿ ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್ ಸಂದರ್ಭದಲ್ಲಿ ಕೆಲವು ಮಂದಿ ಯುವಕರು ಸ್ಥಳದಿಂದ ಓಟಕಿತ್ತಿದ್ದು, ಈ ಸಮಯದಲ್ಲಿ ಅಲ್ಲೇ ಸಮೀಪದಲ್ಲಿಯೇ ಇದ್ದ ಸದಾನಂದ ಶೆಟ್ಟಿ ಎಂಬವರ ಮನೆಯ ಆವರಣದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಪಂಗಡ (ಕೊರಗ)ದ ಕಿರಣ (18) ಎಂಬಾತನಿಗೂ ರಫೀಕ್ ಅವರು ಹಲ್ಲೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದರು.

ಬೊಮ್ಮರಬೆಟ್ಟು ಗ್ರಾಮದ ಕೋಟ್ನಕಟ್ಟೆ ಕೆಇಬಿ ಬಳಿಯ ನಿವಾಸಿ ರಘುರವರ ಪುತ್ರನಾದ ಕಿರಣ್, ಅಂದು ಸದಾನಂದ ಶೆಟ್ಟಿಯವರ ಮನೆ ಆವರಣದೊಳಗೆ ಕೂಲಿ ಕೆಲಸ ಮಾಡುತ್ತಿದ್ದು; ಸಹಜವಾಗಿಯೇ ಆವರಣದೊಳಗಡೆಯೇ ನಿಂತುಕೊಂಡು ಪೊಲೀಸರು ಗುಂಪು ಚದುರಿಸುತ್ತಿದ್ದುದನ್ನು ನೋಡುತ್ತಾ ನಿಂತಿದ್ದು, ಪೊಲೀಸರು ಗುಂಪು ಸೇರಿಕೊಂಡಿದ್ದವರನ್ನು ಚದುರಿಸುವ ಬದಲಾಗಿ ಮನೆಯ ಆವರಣದೊಳಗೆ ನಿಂತುಕೊಂಡಿದ್ದ ಕಿರಣ್ ಮೇಲೆ ಲಾಠಿ ಮತ್ತು ಕೈನಿಂದ ಹಲ್ಲೆ ನಡೆಸಿದ ಘಟನೆ ನಡೆದಿತ್ತು.

kiran

* ಕಿರಣ್

ಗಾಯಾಳು ಕಿರಣ್, ಅದೇ ದಿನ ರಾತ್ರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ದಲಿತರು ಎಸ್ಪಿ ಅಣ್ಣಾಮಲೈ ಅವರನ್ನು ಭೇಟಿಯಾಗಿ ದಲಿತ ದೌರ್ಜನ್ಯದ ವಿರುದ್ಧ ದೂರಿಕೊಂಡಿದ್ದರು. ಆಗ ಎಸ್ಪಿ ಅಣ್ಣಾಮಲೈ ಅವರು ಅನ್ಯಾಯದ ವಿರುದ್ಧ ಕ್ರಮ ಕೈ ತೆಗೆದುಕೊಳ್ಳುವ ಮಾತನಾಡುವ ಬದಲು, ”ಲಾಠಿ ಚಾರ್ಜ್ ಮಾಡಲು ತಾನೇ ತಿಳಿಸಿದ್ದು, ಪಿಎಸ್ಐ ರಫೀಕ್ ವಿರುದ್ಧ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲಾರೆ” ಎಂದು ತಿಳಿಸಿ ಸರ್ವಾಧಿಕಾರಿ ಮನೋಭಾವದಿಂದ ವರ್ತಿಸಿ ಪೊಲೀಸ್ ಪಕ್ಷಪಾತ ಮೆರೆದಿದ್ದರು.

ಫೆ.20ರಂದು ಪಿಎಸ್ಐ ರಫೀಕ್ ಅವರ ಅತಿರೇಕದ ವರ್ತನೆಯನ್ನು ಬೆಂಬಲಿಸಿದ ಎಸ್ಪಿ ಅಣ್ಣಾಮಲೈ ಅವರು ಪೊಲೀಸ್ ಪಕ್ಷಪಾತದಿಂದ ನಡೆದುಕೊಂಡಿದ್ದನ್ನು, ಅಮಾಯಕ ದಲಿತರ ಮೇಲೆ ದೌರ್ಜನ್ಯ ನಡೆಸಲು ತನಗೆ ನೀಡಿದ ಪರವಾನಿಗೆ ಎಂದು ರಫೀಕ್ ತಿಳಿದುಕೊಂಡಿದ್ದೇ ದಲಿತ ದೌರ್ಜನ್ಯದ ಸರಣಿ ಮುಂದುವರಿಸಲು ಕಾರಣವಾಯಿತೆಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *