Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಗಾಯತ್ರೀ ಸಾಧನೆ ಮತ್ತು ದೇವರು – ಭಾವಗಳ ಸಂಬಂಧ

# ಗಾಯತ್ರೀ ಸಾಧಕರು ಅತ್ಯಗತ್ಯವಾಗಿ ಅರಿಯಬೇಕಾದ ವಿಚಾರ – ದೇವರು ಮತ್ತು ಭಾವಗಳ ಸಂಬಂಧ.

ಪೂಜಾ ವಿಧಾನದಲ್ಲಿ ಪ್ರಧಾನವಾಗಿ ಸ್ತುತಿ, ಉಪಾಸಣೆ ಮತ್ತು ಧ್ಯಾನಗಳೆಂಬ 3 ವಿಧಗಳಿವೆ. ವ್ಯಕ್ತಿಗಳನ್ನಾಗಲೀ, ದೈವ-ದೇವರುಗಳನ್ನಾಗಲೀ, ಮಂತ್ರ, ಶ್ಲೋಕ, ಸಂಗೀತಗಳಿಂದ ಭಜಿಸುವ ಭಕ್ತ, ‘ಸ್ತುತಿ’ಯ ಮಟ್ಟದಲ್ಲಿ ವ್ಯವಹರಿಸುತ್ತಾನೆ – ಎಂದು ತಿಳಿಯಬಹುದು. ಶಾಸ್ತ್ರೋಕ್ತವಾದ ಮಂತ್ರ, ಶ್ಲೋಕಗಳನ್ನು ಶಾಸ್ತ್ರೀಯವಾಗಿಯೇ ಅರ್ಥೈಸಿಕೊಂಡು ಪ್ರಾರ್ಥಿಸುವ, ಅರ್ಚಿಸುವ ಸಾಧಕ ಉಪಾಸಣೆಯಲ್ಲಿ ನಿರತನೆಂದು ಹೇಳಬಹುದು. ಸ್ತುತಿ, ಉಪಾಸನೆಗಳಿಂದ ಮೇಲಿನ, ಧ್ಯಾನಾವಸ್ಥೆಗೆ ತಲುಪಬೇಕು – ಎಂದಿರುವ ಸಾಧಕ, ಭಾವದಿಂದ ದೇವರನ್ನು ಆವಾಹಿಸಿ ಪೂಜಿಸುತ್ತಾನೆ. ಹಾಗಿದ್ದರೆ ಸ್ತುತಿ, ಉಪಾಸನೆಗಳಿಂದ ಬೇರೆಯಾದ ‘ಭಾವ’ ಎಂದರೇನು ? ಭಾವದಿಂದ ಅರ್ಚಿಸುವುದು ಎಂದರೇನು ? ಅಂತಹ ಸಾಧಕ ಹೇಗಿರುತ್ತಾನೆ ? ಅವನ ಒಟ್ಟು ವ್ಯವಹಾರ ಹೇಗಿರುತ್ತದೆ ? ಇದನ್ನು ಒಂದು ಸುಭಾಷಿತದ ಮೂಲಕ ಹೀಗೆ ವಿವರಿಸಬಹುದು.

ನದೇವೋ ವಿದ್ಯತೇ ಕಾಷ್ಠೇ, ನ ಪಾಷಾಣೇ, ನ ಮೃಣ್ಮಯೇ
ಭಾವೇ ತು ವಿದ್ಯತೇ ದೇವೋ ಯಃ ಪಶ್ಯತೆ ಸಃ ಪಶ್ಯತಿ.

ಅರ್ಥಾತ್ – ದೇವರು ಕಟ್ಟಿಗೆ, ಶಿಲೆ ಅಥವಾ ಮಣ್ಣಿನ ಮೂರ್ತಿಗಳಲ್ಲಿಲ್ಲ. ದೇವರಿರುವುದು ಭಾವದಲ್ಲಿ. ಇದನ್ನು ಹೀಗೆಂದು ಯಾರು ತಿಳಿಯುವನೋ ಅವನೇ ಅರಿತವನು.

ಇದು ಅತ್ಯಂತ ಸರಳವಾದ ಆದರೆ ಅಷ್ಟೇ ಸಂಕೀರ್ಣವಾದ ವಿಚಾರವೆಂದು ಅದರ ಹಿಂದೆ ಅಲೆದ ಸಾಧಕನಷ್ಟೇ ಹೇಳಬಲ್ಲ. ನಾವು ಹೋಗುವ ದೇವಸ್ಥಾನಗಳಲ್ಲಿ ಅರ್ಚಕರು ಪೂಜಿಸಿದ, ಶೃಂಗಾರ ಮಾಡಿದ, ಕಟ್ಟಿಗೆಯ ಮಣ್ಣಿನ, ಶಿಲೆಯ ಮೂರ್ತಿಗಳನ್ನು ‘ಬಿಂಬಾರೂಪ’ದಲ್ಲಿ ಕಾಣುತ್ತೇವೆ, ಕೈ ಮುಗಿಯುತ್ತೇವೆ, ತೀರ್ಥ ಪ್ರಸಾದ ಸ್ವೀಕರಿಸಿ ಇತ್ತ ಬರುತ್ತೇವೆ.

ಆದರೆ ವಾಸ್ತವಿಕವಾಗಿ ಆ ‘ಬಿಂಬ’ – ದೇವರೇ ? ಆ ಮೂರ್ತಿಯಲ್ಲಿ ದೇವರಿರುವನೇ ? ಅದನ್ನು ನಾವು ಏಕೆ ನಮಿಸಬೇಕು ? ಭಯದಿಂದಲೇ ? ಒಂದು ಶಿಲೆ, ಕಟ್ಟಿಗೆ, ಮಣ್ಣು, ಲೋಹದ ಆಕೃತಿಯಲ್ಲಿ ಬೇಡಿಕೊಳ್ಳುವಂತಹದ್ದಾದರೂ ಏನಿದೆ ?

ಹಾಗಿದ್ದರೆ, ನಾವು ಆ ಮೂರ್ತಿಯನ್ನು ಹೇಗೆ ಕಾಣಬೇಕು ? ಹೇಗೆ ಗ್ರಹಿಸಬೇಕು ? ಹೇಗೆ ಪೂಜಿಸಬೇಕು ಹೇಗೆ ಸಶಬ್ದವಾಗಿ ಅಥವಾ ಮೌನವಾಗಿ ಅರ್ಚಿಸಬೇಕು ? ಇದಕ್ಕೆ ಉತ್ತರ ‘ಭಾವ’ದಿಂದ. ಹಾಗಿದ್ದರೆ ‘ಭಾವ’ ಎಂದರೇನು ? ‘ಭಾವ’ ಒಂದು ‘ಅನುಭವ’. ಅದನ್ನು ವ್ಯಕ್ತಪಡಿಸಲು ಶಬ್ದಗಳಿಲ್ಲ. ಹಸಿವು, ನಿದ್ದೆ, ಆಯಾಸ, ಛಳಿಗಳನ್ನು ಯಾವ ಶಬ್ದಗಳಿಂದ ಎಷ್ಟೇ ವಿವರಿಸಿದರೂ ವಾಸ್ತವಿಕವಾಗಿ ಅದು ಹಸಿವೆಯಾಗದು, ನಿದ್ದೆಯಾಗದು, ಆಯಾಸವಾಗದು, ಛಳಿಯಾಗದು. ಆದರೆ ಇವುಗಳನ್ನು ಒಂದೊಂದಾಗಿ ಅಥವಾ ಒಟ್ಟಾಗಿ ಅನುಭವಿಸಬಹುದು. ಶರೀರದ ಅಗತ್ಯಗಳಾದ ಇಂತಹ ಚಿಕ್ಕ ಪುಟ್ಟ ಅನುಭವಗಳನ್ನು ವ್ಯಕ್ತಪಡಿಸಲು ನಮ್ಮಲ್ಲಿ ಶಬ್ದಗಳಿಲ್ಲ ಎಂದ ಮೇಲೆ, ದೇವರು ಎನ್ನುವಂತಹ ಒಂದು ಮಹತ್ತನ್ನು, ಪರವಸ್ತುವನ್ನು ಯಾವ ಶಬ್ದಗಳಿಂದ ವರ್ಣಿಸಲಿ ? ಅದಕ್ಕೆ ಅಗತ್ಯವಾದ ‘ಭಾವ’ವನ್ನು ಹೇಗೆ ವಿವರಿಸಲಿ ?

ಗಾಯತ್ರೀ ಉಪಾಸಕರಿಗೆ, ಧ್ಯಾನಿಗಳಿಗೆ ಭಾವ-ಅತ್ಯಂತ ಮುಖ್ಯ.

– ‘ಮಹಾಮಂತ್ರ’ ಗ್ರಂಥದಿಂದ (ಹಿಂದಿ ಮೂಲ: ಮಹಾಮಹೋಪಾಧ್ಯಾಯ ಆಚಾರ್ಯ ‘ನವನೀತ’, ಕನ್ನಡಾನುವಾದ: ರಾಜಗೋಪಾಲ ಎಂ.)

Leave a Reply

Your email address will not be published. Required fields are marked *