Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಘವೇಶ್ವರ ಸ್ವಾಮೀಜಿ ಪ್ರಕರಣ: ಕೆಲವು ಪ್ರಶ್ನೆಗಳು !

# ಪ್ರತಿಷ್ಠಿತ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಗಾಯಕಿ ಶ್ರೀಮತಿ ಪ್ರೇಮಲತಾ ದಿವಾಕರ ಶಾಸ್ತ್ರೀ ಇವರ ಮೇಲೆ ಎಸಗಿದ ಸರಣಿ ಅತ್ಯಾಚಾರ ಕೃತ್ಯಗಳ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್)ಯನ್ನು ಬೆಂಗಳೂರು ನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ.ಮುದಿಗೌಡರ್ ಅವರು ವಿಚಾರಣೆಗೆ ಸ್ವೀಕರಿಸದೆ ವಜಾಗೊಳಿಸಿದ್ದಾರೆ.

ಪ್ರಕರಣದ ಸಂತ್ರಸ್ತೆ, ಸಂತ್ರಸ್ತೆಯ ಪರ ವಕೀಲರು, ಸಂತ್ರಸ್ತೆಯ ಪರ ಹೋರಾಟಗಾರರು, ಸಂಘಟನೆಗಳು ಹಾಗೂ ಸರಕಾರದ ಪರ ವಕೀಲರು; ಸೆಷನ್ಸ್ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸದೆ ವಜಾಗೊಳಿಸಿದ್ದರ ವಿರುದ್ಧ ಹೈಕೋಟರ್್ಗೆ ಮೇಲ್ಮನವಿ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ, ರಾಘವೇಶ್ವರ ಸ್ವಾಮೀಜಿಯ ಅಭಿಮಾನಿಗಳು ವಿಜಯೋತ್ಸವವನ್ನು ಆಚರಿಸಿದ್ದಾರೆ. ಕೆಲವರು ಸಾಮಾಜಿಕ ತಾಣಗಳ ಮುಖಾಂತರ ಅತ್ಯಾಚಾರಕ್ಕೆ ಸಮನಾದ ಅಸಹ್ಯ ಪದಗುಚ್ಛಗಳ ಮೂಲಕ, ಮತ್ತೆ ಪ್ರೇಮಲತಾರವರ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಿಜೆಪಿ ಪರಿವಾರ ಸಂಘಟನೆಗಳ ನಾಯಕರು ರಾಘವೇಶ್ವರ ಸ್ವಾಮೀಜಿಗೆ ಮತ್ತೆ ಅಧಿಕೃತ ಬೆಂಬಲ ಘೋಷಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು, ಸಾರ್ವಜನಿಕ ವಲಯದಲ್ಲಿ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಒಂದಷ್ಟು ಸಂಶಯಗಳು ಸೃಷ್ಟಿಯಾಗಲು ಕಾರಣವಾಗಿದೆ. ಎಲ್ಲವೂ ಚರ್ಚೆಗೆ ಯೋಗ್ಯವಾಗಿದೆ. ಚರ್ಚೆ ಮಾತ್ರವೇ ಸಂವಿಧಾನ, ಕಾನೂನು, ಕಾಯ್ದೆಗಳು, ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನು ಉಳಿಸಬಲ್ಲುದು, ಬೆಳೆಸಬಲ್ಲುದು, ಅಗತ್ಯವಿರುವಲ್ಲಿ ಸುಧಾರಣೆಗೆ, ಬದಲಾವಣೆಗೆ ನೆರವಾಗಬಲ್ಲುದು.

ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹಾಗೂ ಸಂತ್ರಸ್ತೆಯ ಪರವಾಗಿ ನ್ಯಾಯಯುತ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರಿಗೆ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ.ಮುದಿಗೌಡರ್ ಪ್ರಕರಣವನ್ನು ವಿಚಾರಣೆಗೇ ಸ್ವೀಕರಿಸದೆ ವಜಾಗೊಳಿಸಿದ್ದು ದೊಡ್ಡದಾದ ಆಘಾತವನ್ನೇನು ಉಂಟುಮಾಡಿಲ್ಲ. ಕಾರಣ, ಹೀಗೆನಾದರೂ ಆಗಬಹುದು ಎಂಬುದು ಅವರೆಲ್ಲರ ನಿರೀಕ್ಷೆಯೇ ಆಗಿತ್ತು. ನ್ಯಾಯಾಧೀಶರ ಮೇಲೆ ವಿಶ್ವಾಸ ಇಲ್ಲದ ಕಾರಣಕ್ಕೇನೇ, ಸಂತ್ರಸ್ತೆ ಪ್ರೇಮಲತಾರವರು ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಜಿ.ಬಿ.ಮುದಿಗೌರ್ ರವರನ್ನು ಹೊರತುಪಡಿಸಿದ ಬೇರೆ ಪೀಠಕ್ಕೆ ವರ್ಗಾಯಿಸಬೇಕು ಎಂದು ಈ ಹಿಂದೆಯೇ ಹೈಕೋರ್ಟ್ ನಲ್ಲಿ ಕೋರಿಕೊಂಡಿದ್ದರು. ಹೈಕೋರ್ಟ್ ನಲ್ಲಿ ಸಂತ್ರಸ್ತೆಯ ಈ ಮನವಿಗೆ ಸಕಾರಾತ್ಮಕವಾದ ಸ್ಪಂದನ ಲಭಿಸದಿದ್ದುದು ಹಳೆಯ ವಿಷಯವಷ್ಟೆ ಆಗಿದೆ.

ಅತ್ಯಾಚಾರ ಪ್ರಕರಣ ವಿಚಾರಣೆಗಾಗಿ ಯಾವ ನ್ಯಾಯ ಪೀಠದಲ್ಲಿತ್ತೋ, ಆ ನ್ಯಾಯ ಪೀಠದಿಂದ ತನಗೆ ನ್ಯಾಯ ಲಭಿಸಲಾರದು ಎಂದು ಸಂತ್ರಸ್ತೆ ಸ್ಪಷ್ಟವಾಗಿ ಭಾವಿಸಿದ್ದರೋ, ಅಂಥ ಪೀಠವೇ ಅತ್ಯಾಚಾರ ಪ್ರಕರಣವನ್ನು ವಿಚಾರಣೆಗೂ ಸ್ವೀಕರಿಸದೆ ವಜಾಗೊಳಿಸಿದ ಹಿನ್ನೆಲೆಯಲ್ಲಿ, ನ್ಯಾಯಪೀಠದ ಈ ಮಹತ್ವದ ನಿರ್ಧಾರವನ್ನು ಅನ್ಯಾಯವೆಂದೇ ಭಾವಿಸಬೇಕಾಗುತ್ತದೆ. ಹೀಗೆ ಭಾವಿಸುವುದು ಅಸಹಜವಾದುದೇನೂ ಅಲ್ಲ.

ಪ್ರೇಮಲತಾರವರ ಮೇಲೆ ರಾಘವೇಶ್ವರ ಸ್ವಾಮೀಜಿ ಸರಣಿ ಅತ್ಯಾಚಾರ ಎಸಗಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದಂತೆ ಕಾಣುವುದಿಲ್ಲ. ಪ್ರಕರಣದ ವಿಚಾರಣೆ ನಡೆಸಲು ಬೇಕಾಗುವಷ್ಟು ಸೂಕ್ತವಾದ ಸಾಕ್ಷ್ಯಾಧಾರಗಳು ಸಿಐಡಿ ಅಧಿಕಾರಿಗಳು ಸಲ್ಲಿಸಿದ ದೋಷಾರೋಪಣಾ ಪಟ್ಟಿಯಲ್ಲಿ ಇಲ್ಲ. ಆದುದರಿಂದ ಪ್ರಕರಣವನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯಾಧೀಶರಾದ ಮುದಿಗೌಡರ್ ಅವರು ವಜಾಗೊಳಿಸಿದ ಆದೇಶದಲ್ಲಿ ಹೇಳಿಕೊಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇಷ್ಟಕ್ಕೇ, ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ ರಾಘವೇಶ್ವರ ಸ್ವಾಮೀಜಿಯ ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದು, ಆಚರಿಸುವುದು ಹಾಸ್ಯಾಸ್ಪದವೇ ಸರಿ. ಯಾರು ಬೇಕಾದರೂ, ಯಾವ ಕಾರಣಕ್ಕೆ ಬೇಕಾದರೂ ವಿಜಯೋತ್ಸವ ಆಚರಿಸಬಹುದು. ವಿಜಯೋತ್ಸವ ಆಚರಿಸಬಾರದು ಎಂದಲ್ಲ. ವಿಜಯೋತ್ಸವ ಆಚರಿಸುವುದು ಆಚರಿಸುವವರ ಹಕ್ಕು. ಕೊಲೆ, ವಂಚನೆ, ಅತ್ಯಾಚಾರ ಪ್ರಕರಣದ ಆರೋಪಿಗಳಾಗಿರುವವರನ್ನು ಸನ್ಮಾನಿಸಿದ, ಜನಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದ ಉದಾಹರಣೆಗಗಳೂ ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಇದ್ದೇ ಇದೆ. ಆರೋಪಿಗಳಿಗೆ ಬಿಡಿ, ಅಪರಾಧಿಗಳಿಗೂ ನಮ್ಮ ದೇಶದಲ್ಲಿ ಅಭಿಮಾನಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೋತ್ಸವವನ್ನು ಜನರು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲವೆನ್ನಬಹುದು.

ಸರಣಿ ಅತ್ಯಾಚಾರವೆಸಗಿದ ಹೀನಾತಿಹೀನ ಪ್ರಕರಣದ ಆರೋಪಿಯಾಗಿದ್ದ ರಾಘವೇಶ್ವರ ಸ್ವಾಮೀಜಿ, ಒಂದು ಪ್ರತಿಷ್ಟಿತ ಮಠದ, ಅದೂ ಶೇಷ್ಠ ಪರಂಪರೆ ಇರುವ ಮಠವೊಂದರ ಪೀಠಾಧಿಪತಿಯಾಗಿರುವವರು. ಆರೋಪಿಯಾಗಿರುವಾಗಲೂ ಅವರು ಅದೇ ಮಠದ ಪೀಠಾಧಿಪತಿಯಾಗಿ ಮುಂದುವರಿದವರು. ಆರೋಪ ಬಮದ ಬಳಿಕ ಅವರು ಪೀಠತ್ಯಾಗ ಮಾಡುತ್ತಿದ್ದರೆ ಅದು ಬೇರೆ ವಿಷಯ. ಆದರೆ ಇಲ್ಲಿ ಆರೋಪಿಯಾಗಿದ್ದವರು ಪೀಠತ್ಯಾಗ ಮಾಡದೆ ಅದೇ ಪೀಠದಲ್ಲಿ ಮಠಾಧಿಪತಿಯಾಗಿ ಮುಮದುವರಿದುಕೊಂಡು ಬಂದಿದ್ದಾರೆ. ಹೀಗಿರುವಾಗ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ.

ಯಾವಾಗ ಒಬ್ಬ ವ್ಯಕ್ತಿ ಎಲ್ಲಾ ರೀತಿಯಲ್ಲಿಯೂ ಶ್ರೀಮಂತವಾಗಿರುವ ಒಂದು ಮಠದ ಪೀಠಾಧಿಪತಿಯಾಗಿರುತ್ತಾನೋ, ಅಂಥವನು ಎಷ್ಟೇ ಗಂಭೀರ ಪ್ರಕರಣದ ಆರೋಪಿಯಾದರೂ, ಆತನನ್ನು ಆರಾಧಿಸುವ, ನಂಬುವ, ಲಾಭ ಪಡೆದ, ಮುಂದಕ್ಕೆ ಲಾಭ ನಿರೀಕ್ಷೆ ಮಾಡುವ ಅಭಿಮಾನಿ ವರ್ಗ ಆತನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಆತ ಅಂಥವನಲ್ಲ, ಆರೋಪವೇ ಸುಳ್ಳು ಎಂಬ ತಮ್ಮ ಅಂಧ ನಂಬಿಕೆಗೇ ಬಲವಾಗಿ ಜೋತುಬೀಳುತ್ತಾರೆ. ಅದೇ ತಮ್ಮ ಹಿಂದಿನ ಅಚಲ ನಂಬಿಕೆಯನ್ನೇ ಮುಂದುವರಿಸುತ್ತದೆ. ಮಾತ್ರವಲ್ಲ, ಅಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳದೆ, ಆರೋಪ ಮಾಡಿದವರ ಮೇಲೆ ಯಾವೆಲ್ಲಾ ರೀತಿಯಲ್ಲಿ ಆಕ್ರಮಣ ಮಾಡಲು ಸಾಧ್ಯವೋ, ಅಂಥ ಎಲ್ಲಾ ರೀತಿಯಲ್ಲೂ ಆಕ್ರಮಣವನ್ನೂ ನಡೆಸಿ ಜೀವಂತ ಮುಗಿಸಿಬಿಡುವ ಹೇಯ ಕೆಲಸವನ್ನೂ ಮಾಡುವುದಿದೆ. ಇದಕ್ಕೂ ಇಲ್ಲಿ ಸಾಕಷ್ಟು ಉದಾಹರಣೆಗಳು ಲಭ್ಯವಿವೆ.

ರಾಘವೇಶ್ವರ ಸ್ವಾಮೀಜಿಯನ್ನು ಯಾಕೆ ಬೆಂಬಲಿಸಬೇಕು ಎಂಬ ಬಗ್ಗೆ, ದ.ಕ.ಜಿಲ್ಲಾ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೀಡಿದ ಕಾರಣಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಒಬ್ಬೊಬ್ಬರು ಒಳ್ಳೆಯವರಾಗಿರುತ್ತಾರೆ ಮತ್ತು ಮತ್ತೆ ಕೆಲವರು ಇನ್ನು ಕೆಲವರಿಗ ಕೆಟ್ಟವರಾಗುತ್ತಾರೆ. ಆದರೆ, ಕೆಲವು ನಿರ್ಧಿಷ್ಟ ಕಾರಣಗಳ ಕಾರಣಕ್ಕೇ ಸತ್ಯ ಸುಳ್ಳಾಗಲಿಕ್ಕಾಗಲೀ, ಸುಳ್ಳು ಸತ್ಯವಾಗಲಿಕ್ಕಾಗಲೀ ಸಾಧ್ಯವಿಲ್ಲ.

ಆರೋಪಿತ ವ್ಯಕ್ತಿ ಯಾವುದಾದರೊಂದು ಜಾತಿಯ, ಮತ ಧರ್ಮದ, ತತ್ವದ ಪ್ರತಿಪಾದಕ, ಬೆಂಬಲಿಗ, ಪೋಷಕನಾದರೆ ಮುಗಿಯಿತು ಬಿಡಿ, ಮತ್ತೆ ಕೇಳುವುದೇ ಬೇಡ. ಅವರೆಲ್ಲರೂ ಅತ್ಯಂತ ವ್ಯವಸ್ಥಿತವಾಗಿಯೂ, ಬಹಿರಂಗವಾಗಿಯೂ ಆರೋಪಿಯಾದರೂ ಆತನಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ. ಆತನನ್ನು ಬಚಾವ್ ಮಾಡಲು ಎಲ್ಲೆಲ್ಲಿ, ಏನೆಲ್ಲ ಕಸರತ್ತು ಮಾಡಬಹುದೋ, ಪ್ರಭಾವ ಬೀರಬಹುದೋ, ಒತ್ತಡ ಹಾಕಬಹುದೋ ಅವುಗಳನ್ನೆಲ್ಲವನ್ನೂ ಅವರು ನಾಚಿಕೆ, ಹಿಂಜರಿಕೆ ಇಲ್ಲದೆ ಶಕ್ತಿಮೀರಿ ಮಾಡುತ್ತಾರೆ. ಇದಕ್ಕೆಲ್ಲ ಒಂದು ವಿಷಾದ ಮತ್ತು ಅನುಕಂಪ ವ್ಯಕ್ತಪಡಿಸುವುದನ್ನು ಬಿಟ್ಟರೆ ಬೇರೇನನ್ನೂ ಮಾಡಲು ಸಾಧ್ಯವಿಲ್ಲ.

ರಾಘವೇಶ್ವರ ಭಾರತಿ ಸ್ವಾಮೀಜಿಯ ಮೇಲಿನ ಸರಣಿ ಅತ್ಯಾಚಾರ ಪ್ರಕರಣವನ್ನು ವಿಚಾರಣೆಗೇ ಸ್ವೀಕರಿಸದೆ ವಜಾಗೊಳಿಸಿದ ನ್ಯಾಯಾಧೀಶರಾದ ಮುದಿಗೌಡರ್ ಅವರು ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆಂದರೆ, ಸಾಕ್ಷ್ಯಾಧಾರದ ಕೊರತೆ ಎಂಬುದನ್ನು. ಪ್ರಕರಣ ವಿಚಾರಣೆಗೆ ಒಳಗಾದ ಬಳಿಕ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಆರೋಪಿ ಖುಲಾಸೆ/ಆರೋಪ ಮುಕ್ತನಾಗುವುದು ಇದ್ದೇ ಇರುತ್ತದೆ. ಹೀಗಿರುವಾಗ ವಿಚಾರಣೆಯನ್ನೇ ಕೈಬಿಟ್ಟು ಪ್ರಕರಣವನ್ನೇ ವಜಾಗೊಳಿಸಿದ್ದು ಎಷ್ಟು ಸರಿ ಎನ್ನುವುದು ಇಲ್ಲಿ ಗಂಭೀರವಾದ ಪ್ರಶ್ನೆ, ಚರ್ಚೆಯ ಮುಖ್ಯ ವಿಷಯ.

ನ್ಯಾಯಾಲಯ ವಿಚಾರಣೆಗೇ ಯೋಗ್ಯವಲ್ಲ, ಅರ್ಹವಲ್ಲ, ನ್ಯಾಯಾಲಯದ ವಿಚಾರಣೆಗೇ ಬೇಕಾದಷ್ಟು ಸಹ ಸಾಕ್ಷ್ಯಾಧಾರಗಳೇ ಲಭ್ಯವಿರಲಿಲ್ಲ ಎನ್ನುವುದೇ ನಿಜವಾದರೆ, ಅಂಥ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ತನಿಖಾಧಿಕಾರಿಗಳಾದ ಸಿಐಡಿ ಇಲಾಖೆಯ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ‘ಬಿ’ ಅಂತಿಮ ವರದಿ ಸಲ್ಲಿಸುವ ಬದಲು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದೇಕೆ ? ಸಿಐಡಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದೇ ಇಲ್ಲಿ ತಪ್ಪಾಗುತ್ತದೆ. ಚಾರ್ಜ್ ಶೀಟ್ ಸಲ್ಲಿಸಿದ್ದೇ ಅನಗತ್ಯವಾಗಿತ್ತು ಎಂದಾದರೆ, ನ್ಯಾಯಾಧೀಶರಾದ ಮುದಿಗೌಡರ್ ಚಾರ್ಜ್ ಶೀಟ್ ಸಲ್ಲಸಿದ ಸಿಐಡಿ ತನಿಖಾಧಿಕಾರಿಗೆ ಛಿಮಾರಿಯನ್ನಾದರೂ ಹಾಕಬಹುದಿತ್ತು. ದಂಡ ವಿಧಿಸಬೇಕಾಗಿತ್ತು. ಅಥವಾ, ಇನ್ನೊಮ್ಮೆ ಪ್ರಕರಣದ ಮರು ತನಿಖೆ ನಡೆಸಿ, ಸೂಕ್ತ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿಕೊಂಡು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿ ಎಂದೂ ಆದೇಶಿಸಬಹುದಿತ್ತು. ಆದರೆ, ಇದಾವುದನ್ನೂ ಬೆಂಗಳೂರು ನಗರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮುದಿಗೌಡರ್ ಅವರು ಮಾಡಿದ ಹಾಗೆ ಕಾಣುವುದಿಲ್ಲ.

ಈ ಮಹತ್ವದ ಪ್ರಕರಣವನ್ನು ವಜಾಗೊಳಿಸಿದ ಮಹತ್ವದ ಬೆಳವಣಿಗೆಯ ಜೊತೆಗೆ, ಇಂಥ ಅನೇಕ ಗಂಭೀರ ಪ್ರಶ್ನೆಗಳು ನ್ಯಾಯ ವ್ಯವಸ್ಥೆಯಲ್ಲಿ ಕಾಡತೊಡಗುತ್ತವೆ. ಇಂಥ ಗಂಭೀರ ಪ್ರಶ್ನೆಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸಬಲ್ಲ ರೀತಿಯಲ್ಲಿ ನ್ಯಾಯ ತಜ್ಞರು ಯೋಚಿಸಬೇಕಾಗಿರುವುದು, ಸಮಾಧಾನಕರ ಮತ್ತು ನ್ಯಾಯೋಚಿತ ಹೆಜ್ಜೆಗಳನ್ನು ಇಡಬೇಕಾಗಿರುವುದು ಅತ್ಯವಶ್ಯ, ಅನಿವಾರ್ಯ ಮತ್ತು ಕಾಲದ ತುರ್ತು ಕೂಡಾ ಆಗಿದೆ.

ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯ ಮೇಲೆ, ರಾಮಚಂದ್ರಾಪುರ ಮಠದ ರಾಮಕಥಾ ಕಾರ್ಯಕ್ರಮದ ಖಾಯಂ ಗಾಯಕಿಯೇ ಆಗಿದ್ದ ಶ್ರೀಮತಿ ಪ್ರೇಮಲತಾ ಅವರು ನೀಡಿದ ಸರಣಿ ಅತ್ಯಾಚಾರ ಪ್ರಕರಣ ಮಾತ್ರವಲ್ಲ, ಇನ್ನೂ ಒಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಎರಡನೇ ಅತ್ಯಾಚಾರ ಪ್ರಕರಣದ ತನಿಖೆಯನ್ನು ಇನ್ನೂ ಸಿಐಡಿ ತನಿಖಾಧಿಕಾರಿಗಳು ಮುಗಿಸಿಲ್ಲ. ಈಗ ತನಿಖಾ ಹಂತದಲ್ಲೇ ಇರುವ ಎರಡನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸುತ್ತಾರೋ, ಚಾರ್ಜ್ ಶೀಟ್ (ದೋಷಾರೋಪಣಾ ಪಟ್ಟಿ) ಸಲ್ಲಿಸುತ್ತಾರೋ, ಸಿಐಡಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದಲ್ಲಿ ಆಗ ನ್ಯಾಯಾಧೀಶರು ಅದನ್ನೂ ಸಹ ವಿಚಾರಣೆಗೇ ಸ್ವೀಕರಿಸದೆ ವಜಾಗೊಳಿಸುತ್ತಾರೋ, ಅಲ್ಲಾ ವಿಚಾರಣೆಗೆ ಸ್ವೀಕರಿಸಿ ಬಳಿಕ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಆರೋಪಿಯನ್ನು ಖುಲಸೆಗೊಳಿಸುತ್ತಾರೋ, ಅಥವಾ ಆರೋಪಿಯ ಮೇಲಿನ ಆರೋಪಗಳು ಸಾಬೀತಾಗಿ ಅಪರಾಧಿ ಎಂದು ಘೋಷಿಸಿ ಶಿಕ್ಷೆ ನೀಡುತ್ತಾರೋ ಎಂಬಿತ್ಯಾದಿ ಹತ್ತು ಹಲವಾರು ಪ್ರಶ್ನೆಗಳ ಉತ್ತರಗಳಿಗಾಗಿ ಕಾದು ನೋಡಬೇಕಷ್ಟೆ.

Leave a Reply

Your email address will not be published. Required fields are marked *