Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಬಿಜೆಪಿ ಕಾರ್ಯಕರ್ತನ ಕೊಲೆ: 8 ವರ್ಷ ಬಳಿಕ ಆರೋಪಿ ಬಂಧನ, ಧಾರವಾಡದ ಬಾಲಕಿ ನಾಪತ್ತೆ, ಯುವಕ ನೇಣಿಗೆ ಶರಣು, ರೈಲು ಡಿಕ್ಕಿ ಹೊಡೆದು ಮಹಿಳೆ ಮೃತ್ಯು

ಸಂದೀಪ್ ಕೊಲೆ: 8 ವರ್ಷ ಬಳಿಕ ಆರೋಪಿಯ ಬಂಧನ

ಕಾಸರಗೋಡು: ನಗರದ ಬೀಚ್ ರಸ್ತೆಯ ಅಚ್ಚಪ್ಪ ಶೆಟ್ಟಿ ಲೇನ್ ನಿವಾಸಿ, ಬಿಜೆಪಿ ಕಾರ್ಯಕರ್ತ ಕೆ.ಸಂದೀಪ್ (23) ಕೊಲೆ ಪ್ರಕರಣದ ಆರೋಪಿ, ಅಣಂಗೂರು ವಲಿಯವಳಪ್ ಸುಲ್ತಾನ್ ನಗರ ನಿವಾಸಿ ಪೂಚಕಣ್ಣನ್ ಸತ್ತಾರ್ ಯಾನೆ ಸತ್ತಾರ್ (41)ನನ್ನು ಎಂಟು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

2008ರ ಎಪ್ರಿಲ್ 14ರಂದು ರಾತ್ರಿ 7.30ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿ ಸಂದೀಪ್ ಅವರನ್ನು ತಂಡವೊಂದು ಕೊಲೆ ಮಾಡಿತ್ತು. ಪ್ರಕರಣದಲ್ಲಿ ಆರೋಪಿಯಾಗಿರುವ ಸತ್ತಾರ್ ಪೊಲೀಸರ ಕೈಗೆ ಸಿಗದೆ ಈ ವರೆಗೆ ತಲೆಮರೆಸಿಕೊಂಡಿದ್ದ. 3 ವರ್ಷ ಕಾಲ ಕಥಾರ್ ನಲ್ಲೂ, ಬಳಿಕ ಹೈದರಾಬಾದ್ ನಲ್ಲೂ ವಾಹನ ಚಾಲಕನಾಗಿ ದುಡಿಯುತ್ತಾ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಸಂಬಂಧಿಕರ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಊರಿಗೆ ಬಂದಿದ್ದ ಸಂದರ್ಭದಲ್ಲಿ ಸತ್ತಾರ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.

ರೈಲು ಢಿಕ್ಕಿ: ಮಹಿಳೆ ಮೃತ್ಯು

ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿಯ ಹಿಂಭಾಗ ರೈಲು ಢಿಕ್ಕಿ ಹೊಡೆದು, ಬೆದ್ರಡ್ಕ ಚೌಕಿ ನಿವಾಸಿ ದಿ|ಸಂಜೀವ ಅವರ ಪತ್ನಿ ಕಮಲ (65) ಮೃತರಾದರು.

ಯುವಕ ನೇಣಿಗೆ ಶರಣು

ಬದಿಯಡ್ಕ: ಮೂಲತಹ ಅಸ್ಸಾಂ ರಾಜ್ಯದ ಬಸ್ತೀಪುರ ನಿವಾಸಿ ಅಜೋಯಿ ರಾಮಚಾರಿ (22) ನೀರ್ಚಾಲು ಸಮೀಪದ ಮಾನ್ಯದಲ್ಲಿ ನೇಣು ಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಈತ ಇಲ್ಲಿ ಕೆಂಪು ಕಲ್ಲು ಕೋರೆ ಕಾರ್ಮಿಕನಾಗಿ ದುಡಿಯುತ್ತಿದ್ದು, ಕೃತ್ಯಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಢಿಕ್ಕಿ: ವೃದ್ಧನಿಗೆ ಗಂಭೀರ ಗಾಯ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ ಟಿಸಿ ಬಸ್ ಢಿಕ್ಕಿ ಹೊಡೆದು, ತಲಶ್ಶೇರಿ ಪಿಣರಾಯಿ ನಿವಾಸಿ ಬಾಲನ್ (70) ಗಂಭೀರ ಗಾಯಗೊಂಡಿದ್ದಾರೆ. ಕಾಲಿಗೆ ಗಂಭೀರ ಗಾಯಗೊಂಡಿರುವ ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ.

ಬಾಲಕಿ ನಾಪತ್ತೆ

ಕಾಸರಗೋಡು: ನಗರದ ಮೀನು ಮಾರುಕಟ್ಟೆ ಬಳಿಯ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಅರಣಿಕಟ್ಟೆ ಲಕ್ಷ್ಪೀಶ್ವರ ನಿವಾಸಿ ರಾಮಣ್ಣರವರ ಪುತ್ರಿ ಕು. ಶೋಭಾ (16) ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಎಪ್ರಿಲ್ 8ರಿಂದ ಈಕೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಕಾರು ಢಿಕ್ಕಿ: ವ್ಯಾಪಾರಿಗೆ ಗಾಯ

ಕುಂಬಳೆ: ಇಲ್ಲಿಗೆ ಸಮೀಪದ ದೇವಿನಗರದಲ್ಲಿ, ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ವ್ಯಾಪಾರಿ ಆರಿಕ್ಕಾಡಿ ನಿವಾಸಿ ಮೊಹಮ್ಮದ್ (52) ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಚೂರಿ ಇರಿತ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಹೂವಿನ ವ್ಯಾಪಾರಿ ನೆಲ್ಲಿಕುಂಜೆ ಲಲಿತ ಕಲಾಸದನ ಪರಿಸರದ ನಿವಾಸಿ ನಾರಾಯಣರವರ ಪುತ್ರ ಚಿನ್ನನ್ ಕೆ. (29) ಎಂಬವರಿಗೆ, ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುನವ್ವೀರ್ ಹಾಗೂ ಉಪ್ಪಳದ ಅಬೂಬಕ್ಕರ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *